ಹಾರ್ಮುಜ್ ಜಲಸಂಧಿಯ ಮೂಲಕ ೧೦ ತೈಲ ಹಡಗುಗಳ ಸಂಚಾರಕ್ಕೆ ಇರಾನ್ ಅನುಮತಿ !

  • ಇರಾನ್ ಜೊತೆಗಿನ ಮಾತುಕತೆ ಸರಿಯಾದ ಹಾದಿಯಲ್ಲಿದೆ: ಟ್ರಂಪ್

  • ಪಾಕಿಸ್ತಾನದ ಧ್ವಜವಿದ್ದ ಹಡಗುಗಳನ್ನು ಹೋಗಲು ಬಿಡಲಾಗಿದೆ ಎಂದು ಟ್ರಂಪ್ ಹೇಳಿಕೆ

  • ಇರಾನ್‌ನ ಇಂಧನ ಯೋಜನೆಗಳ ಮೇಲಿನ ದಾಳಿಯನ್ನು ಏಪ್ರಿಲ್ ೬ ರವರೆಗೆ ಟ್ರಂಪ್ ಮುಂದೂಡಿಕೆ

ನವದೆಹಲಿ – ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಇಂಧನ ಯೋಜನೆಗಳ ಮೇಲಿನ ದಾಳಿಯನ್ನು ಏಪ್ರಿಲ್ ೬ ರವರೆಗೆ ಮುಂದೂಡುವುದಾಗಿ ಘೋಷಿಸಿದರು. ಇರಾನ್‌ನ ಕೋರಿಕೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ; ಆದರೆ ಇರಾನ್‌ ಪರವಾಗಿ ಯಾರು ಈ ಮನವಿ ಮಾಡಿದರೆಂದು ಟ್ರಂಪ್ ತಿಳಿಸಿಲ್ಲ. ಆದರೆ ಇರಾನ್‌ನಿಂದ ದೊರೆತ ಉಡುಗೊರೆಯೊಂದನ್ನು ಟ್ರಂಪ್ ಬಹಿರಂಗಪಡಿಸಿದ್ದಾರೆ. ಮಾತುಕತೆಯ ಮೇಲಿನ ನಂಬಿಕೆಯನ್ನು ತೋರಿಸಲು, ಹಾರ್ಮುಜ್ ಜಲಸಂಧಿಯ ಮೂಲಕ ೮ ದೊಡ್ಡ ತೈಲ ಹಡಗುಗಳನ್ನು ಹಾದುಹೋಗಲು ಇರಾನ್ ಅನುಮತಿಸಿದೆ ಎಂದು ಅವರು ಹೇಳಿದರು. ಅದರ ನಂತರ ಇರಾನ್ ಒಂದು ವಿಚಾರಕ್ಕಾಗಿ ಕ್ಷಮೆಯಾಚಿಸಿತು ಮತ್ತು ಇನ್ನೂ ೨ ಹಡಗುಗಳನ್ನು ಹೋಗಲು ಅವಕಾಶ ಮಾಡಿಕೊಟ್ಟಿತು. ಈ ಹಡಗುಗಳ ಮೇಲೆ ಪಾಕಿಸ್ತಾನದ ಧ್ವಜಗಳು ಹಾರಾಡುತ್ತಿದ್ದವು. ಈ ಕ್ರಮವು ಮಾತುಕತೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ ಎಂದು ಅಮೆರಿಕಾಗೆ ಮನವರಿಕೆ ಮಾಡಿಕೊಟ್ಟಿದೆ.

ಇರಾನ್ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸದಿದ್ದರೆ ದಾಳಿಗಳು ಮುಂದುವರಿಯುತ್ತವೆ !

ತನ್ನ ಪರಮಾಣು ಕಾರ್ಯಕ್ರಮವನ್ನು ಶಾಶ್ವತವಾಗಿ ಕೈಬಿಡುವಂತೆ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. ಹಾಗೆ ಮಾಡದಿದ್ದರೆ ಅಮೆರಿಕದ ಸೇನಾ ಕಾರ್ಯಾಚರಣೆ ಮುಂದುವರಿಯಲಿದೆ. ಇರಾನ್‌ಗೆ ಹೊಸ ಮಾರ್ಗವನ್ನು ಆಯ್ಕೆ ಮಾಡಲು ಅವಕಾಶವಿದೆ; ಆದರೆ ಹಾಗೆ ಮಾಡದಿದ್ದರೆ, ಅಮೆರಿಕ ಅತಿದೊಡ್ಡ ಬೆದರಿಕೆ ಹಾಕಲಿದೆ. ಅಮೆರಿಕ ಪ್ರಸ್ತುತ ಯಾವುದೇ ಅಡೆತಡೆಯಿಲ್ಲದೆ ಇರಾನ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ ಮತ್ತು ಅಗತ್ಯವಿದ್ದರೆ ಈ ದಾಳಿಯನ್ನು ತೀವ್ರಗೊಳಿಸುತ್ತದೆ. ಒಪ್ಪಂದ ಮಾಡಿಕೊಳ್ಳಲು ಇರಾನ್‌ಗಿರುವ ಸಮಯ ವೇಗವಾಗಿ ಮುಗಿಯುತ್ತಿದೆ ಮತ್ತು ನಿರ್ಧಾರ ತೆಗೆದುಕೊಳ್ಳುವುದು ಸಂಪೂರ್ಣವಾಗಿ ಇರಾನ್ ಮೇಲೆ ಅವಲಂಬಿತವಾಗಿದೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ಒಂದೇ ದಿನದಲ್ಲಿ ಬಗೆಹರಿಯಿತು ! – ಟ್ರಂಪ್ ಮತ್ತೆ ದಾವೆ

ಇತರ ದೇಶಗಳ ಯುದ್ಧಗಳನ್ನು ನಿಲ್ಲಿಸುವ ಟ್ರಂಪ್, ತಾವೇ ಪ್ರಾರಂಭಿಸಿದ ಯುದ್ಧದಿಂದ ತಮಗಾಗುತ್ತಿರುವ ಅಪಾರ ನಷ್ಟ ಮತ್ತು ಜಗತ್ತಿನಾದ್ಯಂತ ಅಪಹಾಸ್ಯಕ್ಕೀಡಾಗುತ್ತಿದ್ದರೂ ಯುದ್ಧ ನಿಲ್ಲಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ !

“ನಾನು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ಒಂದೇ ದಿನದಲ್ಲಿ ಪರಿಹರಿಸಿದ್ದೇನೆ, ಇಲ್ಲದಿದ್ದರೆ ೧ ಕೋಟಿ ಜನರು ಬಲಿಯಾಗುತ್ತಿದ್ದರು. ಈ ಸಂಘರ್ಷವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಎರಡು ದೇಶಗಳ ನಡುವೆ ನಡೆಯುತ್ತಿತ್ತು ಮತ್ತು ಭಾರಿ ಪ್ರಾಣಹಾನಿ ಮತ್ತು ಆಸ್ತಿ-ಪಾಸ್ತಿ ನಷ್ಟವಾಗುತ್ತಿತ್ತು. ಪಾಕಿಸ್ತಾನದ ಪ್ರಧಾನಮಂತ್ರಿಯವರೂ ಕೂಡ ನನ್ನ ಪಾತ್ರವನ್ನು ಗಮನಿಸಿದ್ದಾರೆ ಮತ್ತು ನನ್ನಿಂದಾಗಿ ದೊಡ್ಡ ಬಿಕ್ಕಟ್ಟು ತಪ್ಪಿದೆ ಎಂದು ಟ್ರಂಪ್ ಹೇಳಿದರು.”

ಯುದ್ಧದ ಪರಿಣಾಮ; ಕೊರೊನಾದಂತಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ! – ರಷ್ಯಾ ಅಧ್ಯಕ್ಷ ಪುಟಿನ್

ಕೊಲ್ಲಿ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮಗಳು ಜಗತ್ತಿನ ಮೇಲೆ ಏನಾಗುತ್ತವೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಈ ಯುದ್ಧದಲ್ಲಿ ಪಾಲ್ಗೊಂಡವರಿಗೂ ಇದರ ಅರಿವಿಲ್ಲ. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದ ಬಳಿಕ ಭುಗಿಲೆದ್ದಿರುವ ಯುದ್ಧದಿಂದಾಗಿ ಹಲವು ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಮುಂದಿನ ದಿನಗಳಲ್ಲಿ ಈ ಯುದ್ಧದ ಗಂಭೀರ ಪರಿಣಾಮಗಳು ಏನಿರಲಿವೆ ಎಂದು ಈಗಲೇ ಹೇಳುವುದು ಕಷ್ಟ. ಈ ಸಂಘರ್ಷವು ಅಂತರರಾಷ್ಟ್ರೀಯ ಪೂರೈಕೆ ಸರಪಳಿ, ಉತ್ಪಾದನೆ ಮತ್ತು ಆಮದು-ರಫ್ತಿನ ಮೇಲೆ ಭಾರಿ ಪರಿಣಾಮ ಬೀರಿದೆ. ಹೈಡ್ರೋಕಾರ್ಬನ್‌ಗಳು, ಲೋಹಗಳು ಮತ್ತು ರಸಗೊಬ್ಬರಗಳಿಗೆ ಸಂಬಂಧಿಸಿದ ಕೈಗಾರಿಕೆಗಳು ನೇರ ಹೊಡೆತ ನೀಡಿದೆ ಮತ್ತು ದೊಡ್ಡ ಆರ್ಥಿಕ ಪರಿಣಾಮಗಳನ್ನು ಎದುರಿಸುವ ಸಾಧ್ಯತೆಯಿದೆ. ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಎಲ್ಲಾ ವಲಯಗಳ ಪ್ರಗತಿಯು ಹೇಗೆ ನಿಧಾನವಾಗೊತ್ತೋ, ಪ್ರಸ್ತುತ ಅದೇ ರೀತಿಯ ಸಾಧ್ಯತೆ ಕಂಡುಬರುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದ ಕೈಗಾರಿಕೋದ್ಯಮಿಗಳ ಸಮ್ಮೇಳನದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಇರಾನ್ ಯುದ್ಧವನ್ನು ನಿಲ್ಲಿಸಬಹುದು ! – ನಿವೃತ್ತ ಅಮೆರಿಕನ್ ಕರ್ನಲ್ ಮ್ಯಾಕ್‌ಗ್ರೆಗರ್

ಇರಾನ್‌ನೊಂದಿಗೆ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಸಂಘರ್ಷದ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಣಾಯಕ ಪಾತ್ರವನ್ನು ವಹಿಸಬಹುದು ಎಂದು ಭೌಗೋಳಿಕ-ರಾಜಕೀಯ ವಿದ್ಯಮಾನಗಳ ತಜ್ಞ ಮತ್ತು ನಿವೃತ್ತ ಅಮೆರಿಕನ್ ಕರ್ನಲ್ ಡೌಗ್ಲಾಸ್ ಮ್ಯಾಕ್‌ಗ್ರೆಗರ್ ಅವರು ಎ.ಎನ್.ಐ. (ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್) ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುವಾಗ ಹೇಳಿದ್ದಾರೆ. ಇದೇ ವೇಳೆ, ಪಾಕಿಸ್ತಾನವನ್ನು ಸಂಭಾವ್ಯ ಮಧ್ಯಸ್ಥಿಕೆದಾರ ಎಂದು ಉಲ್ಲೇಖಿಸುತ್ತಿರುವುದನ್ನೂ ಅವರು ಟೀಕಿಸಿದರು. ಪಾಕಿಸ್ತಾನದ ವಿಶ್ವಾಸಾರ್ಹತೆಯ ಬಗ್ಗೆ ಮ್ಯಾಕ್‌ಗ್ರೆಗರ್ ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

ಟ್ರಂಪ್, ಪ್ರಧಾನಿ ಮೋದಿಯವರ ಮಾತನ್ನು ಕೇಳಬಹುದು !

ಭಾರತವು ಮಧ್ಯಸ್ಥಿಕೆ ವಹಿಸಲು ಮುಂದಾದರೆ, ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಪ್ರಧಾನಿ ಮೋದಿ ಅವರ ಮಾತನ್ನು ಕೇಳುವ ಸಾಧ್ಯತೆಯಿದೆ ಎಂದು ಮ್ಯಾಕ್‌ಗ್ರೆಗರ್ ಹೇಳಿದ್ದಾರೆ. ಭಾರತದ ಬೆಳೆಯುತ್ತಿರುವ ಆರ್ಥಿಕ ಮತ್ತು ಮಿಲಿಟರಿ ಶಕ್ತಿ, ಹಾಗೆಯೇ ಭಾರತದ ಮೇಲಿನ ಜಾಗತಿಕ ವಿಶ್ವಾಸವು ಭಾರತವನ್ನು ಉತ್ತಮ ಸ್ಥಾನದಲ್ಲಿರಿಸಿದೆ. ರಷ್ಯಾ ಮತ್ತು ಇರಾನ್‌ನಿಂದ ಹಿಡಿದು ಇಸ್ರೇಲ್ ಮತ್ತು ಅಮೆರಿಕದವರೆಗೆ ಪ್ರಪಂಚದ ಎಲ್ಲಾ ಪ್ರಮುಖ ಜಾಗತಿಕ ಶಕ್ತಿಗಳು ಭಾರತದ ಬಗ್ಗೆ ಅಪರೂಪದ ನಂಬಿಕೆಯನ್ನು ಹೊಂದಿವೆ. ಹಾಗಾಗಿ ವಿರೋಧಿ ಗುಂಪುಗಳ ನಡುವೆ ಭಾರತವು ಒಂದು ಕೊಂಡಿಯಾಗಿ ಕೆಲಸ ಮಾಡಬಲ್ಲದು.

ಪ್ರಧಾನಿ ಮೋದಿಯವರು ಪುಟಿನ್ ಅವರೊಂದಿಗೆ ಮುಕ್ತವಾಗಿ ಸಂವಹನ ನಡೆಸುವ ವ್ಯಕ್ತಿಯಾಗಿದ್ದಾರೆ, ಅವರು ಇರಾನ್ ನಾಯಕತ್ವದೊಂದಿಗೆ ಸುಲಭವಾಗಿ ಮಾತನಾಡಬಹುದು. ಇಸ್ರೇಲಿ ನಾಯಕತ್ವವು ಮೋದಿಯವರೊಂದಿಗೆ ಗೌರವಯುತವಾಗಿ ಸಂವಹನ ನಡೆಸುತ್ತದೆ ಮತ್ತು ನಮಗೂ (ಅಮೆರಿಕಕ್ಕೂ) ಅವರು ಅನುಕೂಲಕರವಾಗಿ ಕಾಣುತ್ತಾರೆ ಎಂದು ಮ್ಯಾಕ್‌ಗ್ರೆಗರ್ ನುಡಿದರು.

ಪಾಕಿಸ್ತಾನದ ಅಪಹಾಸ್ಯ

ಡೌಗ್ಲಾಸ್ ಮ್ಯಾಕ್‌ಗ್ರೆಗರ್ ಅವರು ಪಾಕಿಸ್ತಾನದ ಸಂಭಾವ್ಯ ಮಧ್ಯಸ್ಥಿಕೆಯ ಸಾಧ್ಯತೆಯನ್ನು ತಳ್ಳಿಹಾಕಿದರು. ಪಾಕಿಸ್ತಾನ ಸಹಾಯ ಮಾಡುವುದು, ಉರಿಯುತ್ತಿರುವ ಕಟ್ಟಡದಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬನಿಗೆ ಅದೇ ಕಟ್ಟಡದಲ್ಲಿ ಒಂದು ಖಾಲಿ ಕೋಣೆ ನೀಡಿದಂತಿದೆ ಎಂದು ಅವರು ಹೇಳಿದರು.

ಪಾಕಿಸ್ತಾನವು ಪ್ರಸ್ತುತ ತನ್ನ ಆಂತರಿಕ ಸವಾಲುಗಳಿಂದ, ಆರ್ಥಿಕ ಮುಗ್ಗಟ್ಟಿನಿಂದ ಸುತ್ತುವರಿದಿದೆ. ಯಾವುದೇ ಅರ್ಥಪೂರ್ಣ ರಾಜತಾಂತ್ರಿಕ ಪಾತ್ರವನ್ನು ವಹಿಸುವ ಅದರ ಸಾಮರ್ಥ್ಯವನ್ನು ಮಿತಿಗೊಳಿಸುತ್ತದೆ. ಅಲ್ಲದೆ, ಇಸ್ರೇಲ್ ಯಾವುದೇ ರೀತಿಯಲ್ಲಿ ಪಾಕಿಸ್ತಾನವನ್ನು ತಟಸ್ಥ ಎಂದು ಪರಿಗಣಿಸುವುದಿಲ್ಲ ಎಂದು ಮ್ಯಾಕ್‌ಗ್ರೆಗರ್ ವಾದಿಸಿದ್ದಾರೆ.