ಮುಟ್ಟಿನ ಸಮಯದ ನೋವು (ಕಷ್ಟಾರ್ತವ) ಮತ್ತು ಆಯುರ್ವೇದ

ಮಾಸಿಕ ಸರದಿಯ ಸಮಯದಲ್ಲಿ ತೀವ್ರವಾದ ಹೊಟ್ಟೆನೋವು, ಸೊಂಟ ನೋವು, ತೊಡೆಗಳವರೆಗೆ ಹರಡುವ ನೋವು, ವಾಕರಿಕೆ, ತಲೆನೋವು, ಕಿರಿಕಿರಿ ಅಥವಾ ನಿಃಶಕ್ತಿಯಂತಹ ದೂರುಗಳನ್ನು ಅನೇಕ ಸ್ತ್ರೀಯರು ಪ್ರತಿ ತಿಂಗಳು ಅನುಭವಿಸಬೇಕಾಗುತ್ತದೆ. ಕೆಲವು ಮಹಿಳೆಯರಿಗೆ ಈ ನೋವು ಎಷ್ಟು ತೀವ್ರವಾಗಿರುತ್ತದೆ ಎಂದರೆ, ಅವರ ದೈನಂದಿನ ಕೆಲಸ ಕಾರ್ಯಗಳು, ಉದ್ಯೋಗ ಮತ್ತು ಶಿಕ್ಷಣದ ಮೇಲೆ ಇದು ಬಹಳ ಪರಿಣಾಮ ಬೀರುತ್ತದೆ. ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ತಾತ್ಕಾಲಿಕ ಆರಾಮ ಸಿಗುತ್ತದೆ; ಆದರೆ ಮೂಲ ಸಮಸ್ಯೆ ಹಾಗೆಯೇ ಉಳಿಯುತ್ತದೆ. ಆಯುರ್ವೇದವು ಈ ಸ್ಥಿತಿಯನ್ನು ‘ಕಷ್ಟಾರ್ತವ’ ಎಂದು ಕರೆಯುತ್ತದೆ ಮತ್ತು ಈ ನೋವನ್ನು ಕೇವಲ ಒಂದು ಲಕ್ಷಣವೆಂದು ನೋಡದೆ, ಅದರ ಮೂಲ ಕಾರಣವನ್ನು ತಿಳಿಯಲು ಪ್ರಯತ್ನಿಸುತ್ತದೆ.

ಲೇಖನ ೨

೧. ಮುಟ್ಟಿನ ಸಮಯದಲ್ಲಿ ಉಂಟಾಗುವ ತೀವ್ರ ನೋವಿನ ಹಿಂದಿನ ಕಾರಣ

ಆಯುರ್ವೇದದ ಪ್ರಕಾರ, ಮುಟ್ಟು ಎಂಬುದು ಅಪಾನ ವಾಯು ಎಂಬ ವಾತದೋಷದ ಉಪಪ್ರಕಾರವನ್ನು ಅವಲಂಬಿಸಿರುವ ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಅಪಾನ ವಾಯುವಿನ ಕಾರ್ಯವು ಸರಿಯಾಗಿ ನಡೆದರೆ, ಮುಟ್ಟು ನೋವುರಹಿತ ಮತ್ತು ನಿಯಮಿತವಾಗಿರುತ್ತದೆ; ಆದರೆ ಅಯೋಗ್ಯ ಆಹಾರ-ವಿಹಾರ, ಅತಿಯಾದ ಉಪವಾಸ, ತಣ್ಣನೆಯ ಮತ್ತು ಒಣ ಪದಾರ್ಥಗಳ ಸೇವನೆ, ಅನಿಯಮಿತ ಊಟ, ಸತತ ಮಾನಸಿಕ ಒತ್ತಡ, ಚಿಂತೆ, ಭಯ ಹಾಗೂ ನಿದ್ದೆಯ ಕೊರತೆಯಿಂದ ವಾತದೋಷವು ಹದಗೆಡುತ್ತದೆ. ಈ ಹದಗೆಟ್ಟ ವಾತವು ಗರ್ಭಾಶಯದ ಸ್ನಾಯುಗಳಲ್ಲಿ ಆಕುಂಚನವನ್ನು ಹೆಚ್ಚಿಸುತ್ತದೆ ಮತ್ತು ಇದರಿಂದಾಗಿ ತೀವ್ರ ನೋವು ಉಂಟಾಗುತ್ತದೆ. ಕಷ್ಟಾರ್ತವದಲ್ಲಿ ಅನೇಕ ಬಾರಿ ಮುಟ್ಟು ತಡವಾಗಿ ಬರುವುದು, ರಕ್ತಸ್ರಾವ ಕಡಿಮೆಯಾಗುವುದು ಅಥವಾ ರಕ್ತದ ಗಡ್ಡೆಗಳು ಹೋಗುವುದು ಅಂತಹ ಲಕ್ಷಣಗಳೂ ಕಂಡುಬರುತ್ತವೆ. ಕೆಲವು ಸ್ತ್ರೀಯರಲ್ಲಿ ಮುಟ್ಟು ಪ್ರಾರಂಭವಾಗುವ ೧-೨ ದಿನ ಮೊದಲೇ ನೋವು ಶುರುವಾಗುತ್ತದೆ. ಆಯುರ್ವೇದದ ದೃಷ್ಟಿಯಲ್ಲಿ ಈ ಲಕ್ಷಣವು ಕೇವಲ ಗರ್ಭಾಶಯಕ್ಕೆ ಸೀಮಿತವಾಗಿರದೆ, ಸಂಪೂರ್ಣ ಶರೀರದಲ್ಲಿನ ವಾತದೋಷ ಮತ್ತು ಜೀರ್ಣಶಕ್ತಿಯ ಅಸಮತೋಲನಕ್ಕೆ ಸಂಬಂಧಿಸಿರುತ್ತದೆ. ಜೀರ್ಣಕ್ರಿಯೆ ಸರಿಯಾಗಿ ನಡೆಯದಿದ್ದರೆ ಶರೀರದಲ್ಲಿ ‘ಆಮ’ ಶೇಖರಣೆಯಾಗುತ್ತದೆ, ಇದು ವಾತವನ್ನು ಮತ್ತಷ್ಟು ಪ್ರಚೋದಿಸಿ ನೋವನ್ನು ಹೆಚ್ಚಿಸುತ್ತದೆ.

ವೈದ್ಯ (ಸೌ.) ಸಾರಿಕಾ ನೀಲೇಶ ಲೊಂಡ

೨. ಆಯುರ್ವೇದದ ಚಿಕಿತ್ಸೆಗಳು

ಆಯುರ್ವೇದ ಚಿಕಿತ್ಸೆಯ ಮುಖ್ಯ ಉದ್ದೇಶವೆಂದರೆ ‘ವಾತದೋಷವನ್ನು ಶಮನಗೊಳಿಸುವುದು, ಅಪಾನವಾಯುವಿನ ಸರಿಯಾದ ದಿಕ್ಕನ್ನು ಪುನಃಸ್ಥಾಪಿಸುವುದು ಮತ್ತು ಗರ್ಭಾಶಯಕ್ಕೆ ಪೋಷಣೆ ನೀಡುವುದು’. ದಶಮೂಲ, ಇಂಗು, ಅಜ್ವಾನ, ಶತಾವರಿಯಂತಹ ಔಷಧೀಯ ದ್ರವ್ಯಗಳು ವಾತ ಶಮನಕ್ಕೆ ಉಪಯುಕ್ತವೆಂದು ಪರಿಗಣಿಸಲಾಗಿದೆ. ಹಿಂಗಾಷ್ಟಕ ಚೂರ್ಣ ಅಥವಾ ದಶಮೂಲ ಕಷಾಯವನ್ನು ವೈದ್ಯರ ಸಲಹೆಯ ಮೇರೆಗೆ ಬಳಸುವುದರಿಂದ ನೋವಿನಲ್ಲಿ ಹಂತಹಂತವಾಗಿ ಸುಧಾರಣೆ ಕಂಡುಬರುತ್ತದೆ. ಆಯುರ್ವೇದದಲ್ಲಿ ‘ಸ್ನೇಹನ’ ಮತ್ತು ‘ಸ್ವೇದನ’, ಅಂದರೆ ಶರೀರಕ್ಕೆ ಸರಿಯಾದ ಪ್ರಮಾಣದಲ್ಲಿ ಜಿಡ್ಡು (ಎಣ್ಣೆ) ಮತ್ತು ಉಷ್ಣತೆಯನ್ನು ನೀಡುವುದಕ್ಕೆ ವಿಶೇಷ ಮಹತ್ವ ನೀಡಲಾಗುತ್ತದೆ; ಏಕೆಂದರೆ ಇದರಿಂದ ವಾತದೋಷವು ಶಾಂತವಾಗುತ್ತದೆ.

೩. ಮನೆಮದ್ದು ಮತ್ತು ಯೋಗಾಸನಗಳು

ಅ. ಕೆಲವು ಸುಲಭವಾದ ಮನೆಮದ್ದುಗಳಿವೆ; ಮನೆಯ ಮಟ್ಟದಲ್ಲಿ ಕೆಲವು ಸರಳ ಆದರೆ ಶಾಸ್ತ್ರೀಯ ಉಪಾಯಗಳನ್ನು ನಿಯಮಿತವಾಗಿ ಮಾಡುವುದರಿಂದ ಮುಟ್ಟಿನ ನೋವು ಕಡಿಮೆಯಾಗಲು ಸಹಾಯವಾಗುತ್ತದೆ. ಮುಟ್ಟಿನ ಮೊದಲು ಮತ್ತು ಮುಟ್ಟಿನ ದಿನಗಳಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು, ಅತಿಯಾದ ತಂಪು ಮತ್ತು ಒಣ ಪದಾರ್ಥಗಳನ್ನು ವರ್ಜಿಸುವುದು, ಎಳ್ಳು ಮತ್ತು ಬೆಲ್ಲದ ಕಷಾಯವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು. ಅಜ್ವಾನ ಅಥವಾ ಜೀರಿಗೆಯ ಬೆಚ್ಚಗಿನ ಕಷಾಯವನ್ನು ಕುಡಿಯುವುದು ಉಪಯುಕ್ತ. ಹೊಟ್ಟೆಯ ಮೇಲೆ ಬಿಸಿ ನೀರಿನ ಚೀಲವನ್ನು ಇಟ್ಟುಕೊಳ್ಳುವುದು ಒಂದು ಸರಳ ಮತ್ತು ಪರಿಣಾಮಕಾರಿ ಉಪಾಯವಾಗಿದೆ. ಹೊಟ್ಟೆಯ ಮೇಲೆ ಎಣ್ಣೆಯಿಂದ ಹಗುರವಾಗಿ ಮಸಾಜ್‌ ಮಾಡುವುದು ಕೂಡ ವಾತ ಶಮನಕ್ಕೆ ಸಹಾಯ ಮಾಡುತ್ತದೆ.

ಆ. ಯೋಗ ಮತ್ತು ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡುವುದರಿಂದ ಕಷ್ಟಾರ್ತವದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಭುಜಂಗಾಸನ, ಬದ್ಧಕೋಣಾಸನ ಮತ್ತು ಪವನಮುಕ್ತಾಸನದಂತಹ ಯೋಗಾಸನಗಳು ಅಪಾನ ವಾಯುವಿನ ಕಾರ್ಯವನ್ನು ಸುಧಾರಿಸಲು ಸಹಕಾರಿಯಾಗಿವೆ. ಇದರೊಂದಿಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು, ಮನಸ್ಸನ್ನು ಶಾಂತವಾಗಿಡುವುದು ಮತ್ತು ಪೂರಕ ನಿದ್ದೆ ಮಾಡುವುದು ಅಷ್ಟೇ ಮುಖ್ಯವಾಗಿದೆ.

೪. ಮಾಸಿಕ ಮುಟ್ಟಿಗೆ ಸಂಬಂಧಿಸಿದ ಆಯುರ್ವೇದದ ಸಮಗ್ರ ದೃಷ್ಟಿಕೋನ

ಒಟ್ಟಾರೆಯಾಗಿ ಹೇಳುವುದಾದರೆ, ಮುಟ್ಟಿನ ನೋವು ಕೇವಲ ಸಹಿಸಿಕೊಳ್ಳುವ ವಿಷಯವಲ್ಲ, ಅದು ಶರೀರದಲ್ಲಿನ ಅಸಮತೋಲನದ ಎಚ್ಚರಿಕೆಯಾಗಿದೆ. ಆಯುರ್ವೇದವು ಈ ಸಮಸ್ಯೆಯನ್ನು ಸಮಗ್ರ ದೃಷ್ಟಿಕೋನದಿಂದ ನೋಡುತ್ತದೆ ಮತ್ತು ತಾತ್ಕಾಲಿಕ ಆರಾಮದ ಬದಲಿಗೆ ದೀರ್ಘಕಾಲೀನ ಸುಧಾರಣೆಯ ಮೇಲೆ ಒತ್ತು ನೀಡುತ್ತದೆ. ಯೋಗ್ಯ ಆಹಾರ, ಜೀವನಶೈಲಿ, ಮಾನಸಿಕ ಸಮತೋಲನ, ಆಯುರ್ವೇದ ಔಷಧಗಳು ಮತ್ತು ಮನೆಮದ್ದುಗಳ ಸರಿಯಾದ ಸಮನ್ವಯ ಸಾಧಿಸಿದರೆ ಕಷ್ಟಾರ್ತವದ ತೀವ್ರತೆ ಕಡಿಮೆಯಾಗಿ ಸ್ತ್ರೀಯರ ಮಾಸಿಕ ಆರೋಗ್ಯವು ನೈಸರ್ಗಿಕವಾಗಿ ಸುಧಾರಿಸಬಹುದು.

– ವೈದ್ಯ (ಸೌ.) ಸಾರಿಕಾ ನೀಲೇಶ ಲೊಂಡೆ, ‘ನಿರ್ವಿಕಾರ ಆಯುರ್ವೇದ ಹಾಸ್ಪಿಟಲ್‌’, ಭೋಸರಿ, ಪುಣೆ.)

ಅನಿಯಮಿತ ಮಾಸಿಕ ಸರದಿ ಮತ್ತು ಆಯುರ್ವೇದ ! – ಭಾಗ 1

https://sanatanprabhat.org/kannada/174895.html