ಪ್ರತಿವಾರ ಓದಿ ‘ಸ್ತ್ರೀರೋಗ ಮತ್ತು ಆಯುರ್ವೇದ’ ಈ ಸಂದರ್ಭದ ಲೇಖನಮಾಲೆ !
ಅನಿಯಮಿತ ಮುಟ್ಟು ಇಂದು ಅನೇಕ ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ, ಆದರೆ ನಿರ್ಲಕ್ಷಿತ ಸಮಸ್ಯೆಯಾಗಿದೆ. ಮುಟ್ಟಿನ ಸರದಿಯು ಸ್ತ್ರೀಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕನ್ನಡಿ ಎಂದು ಪರಿಗಣಿಸಲಾಗುತ್ತದೆ. ಮುಟ್ಟು ಸಮಯಕ್ಕೆ ಸರಿಯಾಗಿ, ವೇದನಾರಹಿತ ಮತ್ತು ಸರಿಯಾದ ಪ್ರಮಾಣದಲ್ಲಿ ಆಗದಿದ್ದರೆ, ಅದು ದೇಹದಲ್ಲಿ ಏನೋ ಅಸಮತೋಲನವಾಗುತ್ತಿದೆ ಎಂಬುದರ ಸಂಕೇತವಾಗಿದೆ. ಬದಲಾದ ಜೀವನಶೈಲಿ, ಹೆಚ್ಚುತ್ತಿರುವ ಮಾನಸಿಕ ಒತ್ತಡ, ಅನಿಯಮಿತ ಆಹಾರ, ನಿದ್ರೆಯ ಅಭಾವ ಮತ್ತು ಹಾರ್ಮೋನ್ಸಗಳ ಬದಲಾವಣೆಗಳಿಂದಾಗಿ ಈ ಸಮಸ್ಯೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಲೇಖನ ೧

೧. ಅನಿಯಮಿತ ಮುಟ್ಟು
ಸಾಮಾನ್ಯವಾಗಿ ೨೧ ರಿಂದ ೩೫ ದಿನಗಳ ಅಂತರದಲ್ಲಿ ಮುಟ್ಟು ಬರುವುದನ್ನು ನಿಯಮಿತ ಎಂದು ತಿಳಿದುಕೊಳ್ಳಲಾಗುತ್ತದೆ. ಕೆಲವು ಮಹಿಳೆಯರಲ್ಲಿ ಮುಟ್ಟು ತಡವಾಗಿ ಬರುತ್ತದೆ, ಕೆಲವರಲ್ಲಿ ಬಹಳ ಬೇಗನೇ ಬರುತ್ತದೆ, ಇನ್ನು ಕೆಲವರಲ್ಲಿ ತಿಂಗಳು ಪೂರ್ತಿಯಾದರೂ ಮುಟ್ಟೇ ಬರುವುದಿಲ್ಲ. ಕೆಲವು ಸ್ತ್ರೀಯರಿಗೆ ಅತಿಯಾದ ರಕ್ತಸ್ರಾವವಾದರೆ, ಇನ್ನು ಕೆಲವರಿಗೆ ಬಹಳ ಕಡಿಮೆ ಪ್ರಮಾಣದಲ್ಲಿ ರಕ್ತಸ್ರಾವ ಆಗುತ್ತದೆ. ಮುಟ್ಟಿನ ಸಮಯದಲ್ಲಿ ತೀವ್ರ ಹೊಟ್ಟೆನೋವು, ಸೊಂಟನೋವು, ರಕ್ತದ ಗಂಟುಗಳು ಬೀಳುವುದು, ಕಿರಿಕಿರಿ ಆಗುವುದು ಮತ್ತು ಸುಸ್ತಾಗುವುದು. ಇವೆಲ್ಲ ಒಟ್ಟಾಗಿ ‘ಅನಿಯಮಿತ ಮುಟ್ಟು’ ಎಂದು ಕರೆಯಲಾಗುತ್ತದೆ.
ವೈದ್ಯೆ (ಸೌ.) ಸಾರಿಕಾ ನೀಲೇಶ ಲೊಂಡೆ ಇವರ ಪರಿಚಯ

ವೈದ್ಯೆ (ಸೌ.) ಸಾರಿಕಾ ಲೊಂಡೆ ಅವರು ’ಎಂ.ಡಿ. ಆಯುರ್ವೇದ’ ಮತ್ತು ಯೋಗ ಶಿಕ್ಷಕರಾಗಿದ್ದು, ಪುಣೆಯ ಪಿಂಪರಿ-ಚಿಂಚವಾಡನಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಭವಿ ಆಯುರ್ವೇದ ಮತ್ತು ಕೌಟುಂಬಿಕ (ಫ್ಯಾಮಿಲಿ) ವೈದ್ಯರಾಗಿದ್ದಾರೆ. ಅವರಿಗೆ ಆಯುರ್ವೇದ ಮತ್ತು ಪಂಚಕರ್ಮ ಚಿಕಿತ್ಸೆಗಳಲ್ಲಿ ೧೫ ವರ್ಷಗಳ ಕ್ಲಿನಿಕಲ್ (ವೈದ್ಯಕೀಯ) ಅನುಭವವಿದೆ. ಅವರು ಭೋಸರಿಯ ಸುಸಜ್ಜಿತ ಆಯುರ್ವೇದ ಆಸ್ಪತ್ರೆಯಾದ ’ನಿರ್ವಿಕಾರ ಆಯುರ್ವೇದ ಹಾಸ್ಪಿಟಲ್’ನ ಸಂಸ್ಥಾಪಕರು ಮತ್ತು ಸಂಚಾಲಕರಾಗಿದ್ದಾರೆ. ಈ ಆಸ್ಪತ್ರೆಯು ಹೊರರೋಗಿ ಮತ್ತು ಒಳರೋಗಿ ವಿಭಾಗ, ಪಂಚಕರ್ಮ ವಿಭಾಗವನ್ನು ಒಳಗೊಂಡಿದೆ. ಅಲ್ಲದೆ, ’ಸಿ.ಜಿ.ಎಚ್.ಎಸ್.’ (ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ), ’ಈ.ಸಿ.ಎಚ್.ಎಸ್.’ (ಮಾಜಿ ಸೈನಿಕರ ಆರೋಗ್ಯ ಯೋಜನೆ) ಮತ್ತು ಇತರ ಹಲವು ಸಂಸ್ಥೆಗಳ ’ಕ್ಯಾಶ್‌ಲೆಸ್’ (ನಗದು ರಹಿತ) ಸೌಲಭ್ಯವನ್ನು ಹೊಂದಿರುವ ಪಿಂಪರಿ-ಚಿಂಚವಾಡನ ಮೊದಲ ಆಸ್ಪತ್ರೆಯಾಗಿದೆ. ಸುಮಾರು ೫೦೦೦ ಚದರ ಅಡಿ ವಿಸ್ತೀರ್ಣದಲ್ಲಿ ೨೦೧೮ ರಿಂದ ಈ ಆಸ್ಪತ್ರೆಯು ಸೇವೆಯನ್ನು ಸಲ್ಲಿಸುತ್ತಿದೆ.
ಸ್ತ್ರೀರೋಗ, ಬಂಜೆತನ, ದೀರ್ಘಕಾಲದ ಕಾಯಿಲೆಗಳು ಮತ್ತು ಪಂಚಕರ್ಮ ಚಿಕಿತ್ಸೆಗಳಲ್ಲಿ ಅವರು ವಿಶೇಷ ಪರಿಣತಿಯನ್ನು ಹೊಂದಿದ್ದಾರೆ. ಅವರು ’ಆಯುರ್ವೇದ ಮತ್ತು ಬಂಜೆತನ’ ಎಂಬ ವಿಷಯದ ಕುರಿತು ವೈದ್ಯರಿಗೆ ಮತ್ತು ಆಧುನಿಕ ವೈದ್ಯರಿಗೆ (ಡಾಕ್ಟರರಿಗೆ) ಉಪನ್ಯಾಸಗಳನ್ನು ನೀಡಿದ್ದಾರೆ, ಜೊತೆಗೆ ಸಾಮಾನ್ಯ ಜನರಿಗೂ ಆರೋಗ್ಯ ವಿಷಯದ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ.
೨. ವಾತ, ಪಿತ್ತ ಮತ್ತು ಕಫ ಈ ೩ ದೋಷಗಳ ಸಮತೋಲನದ ಮೇಲೆ ಮುಟ್ಟಿನ ನಿಯಮಿತತೆ ಅವಲಂಬಿಸಿರುತ್ತದೆ
ಆಯುರ್ವೇದದಲ್ಲಿ ಮುಟ್ಟನ್ನು ‘ಆರ್ತವ’ ಅಥವಾ ‘ರಜ’ ಎಂದು ಕರೆಯಲಾಗುತ್ತದೆ. ಆಯುರ್ವೇದದ ಪ್ರಕಾರ ವಾತ, ಪಿತ್ತ ಮತ್ತು ಕಫ ಈ ಮೂರು ದೋಷಗಳ ಸಮತೋಲನದ ಮೇಲೆ ಮುಟ್ಟಿನ ನಿಯಮಿತತೆ ಅವಲಂಬಿಸಿರುತ್ತದೆ. ವಾತದೋಷ ಕೆಟ್ಟರೆ ಮುಟ್ಟು ತಡವಾಗಿ ಬರುವುದು, ನೋವು ಉಂಟಾಗುವುದು ಅಥವಾ ಕಡಿಮೆ ರಕ್ತಸ್ರಾವವಾಗುತ್ತದೆ. ಪಿತ್ತದೋಷ ಹೆಚ್ಚಾದರೆ ಅಧಿಕ ರಕ್ತಸ್ರಾವ, ಉರಿ ಆಗುವುದು, ದೇಹದಲ್ಲಿ ಉಷ್ಣತೆ ಮತ್ತು ಕಿರಿಕಿರಿ ಉಂಟಾಗುತ್ತದೆ. ಕಫದೋಷ ಹೆಚ್ಚಾದಲ್ಲಿ ಮುಟ್ಟು ತಡವಾಗಿ ಬರುವುದು, ದೇಹದಲ್ಲಿ ಜಡತ್ವ, ಬಾವು ಮತ್ತು ತೂಕ ಹೆಚ್ಚಾಗುವ ಲಕ್ಷಣಗಳು ಕಂಡುಬರುತ್ತವೆ.
೩. ಮುಟ್ಟಿನ ಮೇಲೆ ಆಯುರ್ವೇದ ಚಿಕಿತ್ಸೆಯ ಮುಖ್ಯ ಉದ್ದೇಶ
ಅನಿಯಮಿತ ಮುಟ್ಟಿನ ಬಗ್ಗೆ ವಿಚಾರ ಮಾಡುವಾಗ ಆಯುರ್ವೇದವು ಸಂಪೂರ್ಣ ದೇಹದ ಬಗ್ಗೆ ವಿಚಾರ ಮಾಡುತ್ತದೆ. ಕೇವಲ ಗರ್ಭಾಶಯ ಅಥವಾ ‘ಹಾರ್ಮೋನ್ಸಗಳು’ ಮಾತ್ರವಲ್ಲ, ಜೀರ್ಣಶಕ್ತಿ, ರಕ್ತದ ಗುಣಮಟ್ಟ, ಮನಃಸ್ಥಿತಿ, ದಿನಚರಿ ಮತ್ತು ಆಹಾರ ಈ ಎಲ್ಲವನ್ನೂ ಒಟ್ಟಾಗಿ ವಿಚಾರ ಮಾಡುತ್ತದೆ. ಜೀರ್ಣಶಕ್ತಿ ದುರ್ಬಲವಾಗಿದ್ದರೆ, ದೇಹದಲ್ಲಿ ‘ಆಮ’ (ವಿಷಕಾರಿ ಅಂಶ) ಶೇಖರಣೆಯಾಗಿದ್ದರೆ ಅಥವಾ ನಿರಂತರ ಮಾನಸಿಕ ಒತ್ತಡವಿದ್ದರೆ, ಮುಟ್ಟಿನ ಮೇಲೆ ಅದರ ನೇರ ಪರಿಣಾಮ ಆಗುತ್ತದೆ.
ಆಯುರ್ವೇದ ಚಿಕಿತ್ಸೆಯ ಮುಖ್ಯ ಉದ್ದೇಶ ‘ದೇಹದಲ್ಲಿನ ದೋಷಗಳನ್ನು ಸಮತೋಲನಗೊಳಿಸುವುದು, ಜೀರ್ಣಶಕ್ತಿಯನ್ನು ಸುಧಾರಿಸುವುದು ಮತ್ತು ನೈಸರ್ಗಿಕವಾಗಿ ಮುಟ್ಟನ್ನು ನಿಯಮಿತ ಗೊಳಿಸುವುದು’ ಆಗಿದೆ. ‘ಅಶೋಕ’, ‘ಲೋಧ್ರ’, ‘ಶತಾವರಿ’, ‘ಕುಮಾರಿ (ಲೋಳೆಸರ)’ ಅಂತಹ ಔಷಧೀಯ ಸಸ್ಯಗಳನ್ನು ಆಯುರ್ವೇದದಲ್ಲಿ ಸ್ತ್ರೀರೋಗಗಳಿಗಾಗಿ ವಿಶೇಷವಾಗಿ ಉಪಯುಕ್ತ ಎಂದು ಪರಿಗಣಿಸಲಾಗಿದೆ. ‘ಅಶೋಕಾರಿಷ್ಟ’, ‘ಕುಮಾರಿ ಆಸವ’, ‘ಲೋಧ್ರಾಸವ’, ‘ಶತಾವರಿ ಕಲ್ಪ’ ಅಂತಹ ಔಷಧಿಗಳನ್ನು ವೈದ್ಯರ ಸಲಹೆಯ ಮೇರೆಗೆ ಸೇವಿಸಿದರೆ ಉತ್ತಮ ಲಾಭಸಿಗುತ್ತದೆ.
೪. ಮುಟ್ಟು ನಿಯಮಿತವಾಗಲು ಮನೆಮದ್ದುಗಳು
ಈ ಸಮಸ್ಯೆಯಲ್ಲಿ ಮನೆಮದ್ದುಗಳು ಸಹ ಬಹಳ ಉಪಯುಕ್ತ ಆಗಿರುತ್ತವೆ. ಬೆಳಗ್ಗೆ ಉಗುರುಬೆಚ್ಚಗಿನ ನೀರು ಕುಡಿಯುವುದು. ಆಹಾರದಲ್ಲಿ ಎಳ್ಳು ಮತ್ತು ಬೆಲ್ಲವನ್ನು ಸೇರಿಸಿಕೊಳ್ಳುವುದು; ಜೀರಿಗೆ, ಕೊತ್ತಂಬರಿಬೀಜ ಮತ್ತು ಬಡಿಸೋಪಿನ ಕಷಾಯ ಕುಡಿಯುವುದು. ರಾತ್ರಿ ಉಗುರುಬೆಚ್ಚಗಿನ ಹಾಲಿಗೆ ತುಪ್ಪ ಹಾಕಿ ಕುಡಿಯುವುದು. ಇವು ಮುಟ್ಟು ನಿಯಮಿತವಾಗಲು ಸಹಾಯ ಮಾಡುತ್ತವೆ. ಅತಿಯಾದ ತಂಪು ಪದಾರ್ಥಗಳು, ಜಂಕ್ ಫುಡ್ (ಪಿಜ್ಜಾ, ಬರ್ಗರ್), ಅತಿಯಾದ ಖಾರ ಮತ್ತು ಎಣ್ಣೆಯುಕ್ತ ಆಹಾರವನ್ನು ತ್ಯಜಿಸುವುದು ಆವಶ್ಯಕವಾಗಿರುತ್ತದೆ.
೫. ಮುಟ್ಟಿನ ಸಮಸ್ಯೆಗಾಗಿ ಉಪಯುಕ್ತ ಯೋಗಾಸನಗಳು
ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ನಿಯಮಿತವಾಗಿ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ‘ಹಾರ್ಮೋನ್’ಗಳ ಸಮತೋಲನ ಸುಧಾರಿಸುತ್ತದೆ. ಭುಜಂಗಾಸನ, ಧನುರಾಸನ ಮತ್ತು ಪವನಮುಕ್ತಾಸನಗಳಂತಹ ಯೋಗಾಸನಗಳು ಮುಟ್ಟಿನ ಸಮಸ್ಯೆಗೆ ಉಪಯುಕ್ತವಾಗಿವೆ. ಇದರೊಂದಿಗೆ ಸಾಕಷ್ಟು ನಿದ್ರೆ, ನಿಯಮಿತ ದಿನಚರಿ ಮತ್ತು ಸಕಾರಾತ್ಮಕ ಮನಸ್ಥಿತಿಯೂ ಪ್ರಮುಖ ಪಾತ್ರ ವಹಿಸುತ್ತದೆ.
೬. ಮುಟ್ಟು ನೈಸರ್ಗಿಕವಾಗಿ ನಿಯಮಿತವಾಗಿರಲು…
ಒಟ್ಟಾರೆ ಹೇಳುವುದಾದರೆ, ಅನಿಯಮಿತ ಮುಟ್ಟು ಕೇವಲ ದೈಹಿಕ ಸಮಸ್ಯೆಯಲ್ಲ; ಬದಲಾಗಿ ಅದು ದೇಹ ಮತ್ತು ಮನಸ್ಸಿನ ಅಸಮತೋಲನದ ಲಕ್ಷಣವಾಗಿದೆ. ಆಯುರ್ವೇದವು ಈ ಸಮಸ್ಯೆಯನ್ನು ಎಲ್ಲ ದೃಷ್ಟಿಕೋನದಿಂದ ನೋಡುತ್ತದೆ. ಸರಿಯಾದ ಆಹಾರ ಪದ್ಧತಿ, ಆರೋಗ್ಯಕರ ಜೀವನಶೈಲಿ, ಮಾನಸಿಕ ಶಾಂತಿ, ಆಯುರ್ವೇದ ಔಷಧಿಗಳು ಮತ್ತು ಮನೆಮದ್ದುಗಳ ನಡುವೆ ಸಮನ್ವಯವನ್ನು ಸಾಧಿಸಿದರೆ, ಮುಟ್ಟಿನ ಚಕ್ರವು ನೈಸರ್ಗಿಕವಾಗಿಯೇ ನಿಯಮಿತವಾಗಿ ಸ್ತ್ರೀಯ ಆರೋಗ್ಯವು ಉತ್ತಮವಾಗಿರುತ್ತದೆ.
– ವೈದ್ಯೆ (ಸೌ.) ಸಾರಿಕಾ ನೀಲೇಶ ಲೋಂಢೆ, ನಿರ್ವಿಕಾರ ಆಯುರ್ವೇದ ಹಾಸ್ಪಿಟಲ್, ಭೋಸರಿ, ಪುಣೆ (೪.೧.೨೦೨೬)
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ
ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !
ಮಕ್ಕಳ ಅನಾರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳು !
ಬೇಸಿಗೆಯಲ್ಲಿ ತೊಂದರೆಯಾಗಬಾರದೆಂದು ಮುಂದಿನ ಕಾಳಜಿ ವಹಿಸಿ !