ಹೊರ್ಮುಜ್ ಜಲಸಂಧಿಯನ್ನು ೪೮ ಗಂಟೆಗಳಲ್ಲಿ ತೆರೆಯಿರಿ, ಇಲ್ಲದಿದ್ದರೆ ಇಂಧನ ಯೋಜನೆಗಳನ್ನು ಧ್ವಂಸಗೊಳಿಸುತ್ತೇವೆ! – ಇರಾನ್‌ ಗೆ ಟ್ರಂಪ್ ಎಚ್ಚರಿಕೆ

ನವ ದೆಹಲಿ – ಇರಾನ್ ಒಂದು ವೇಳೆ ೪೮ ಗಂಟೆಗಳ ಒಳಗೆ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ, ಇರಾನ್‌ ನ ಇಂಧನ ಯೋಜನೆಗಳ ಮೇಲೆ ದಾಳಿ ಮಾಡಿ ಅವುಗಳನ್ನು ಧ್ವಂಸಗೊಳಿಸುತ್ತೇವೆ ಮತ್ತು ಅತಿದೊಡ್ಡ ಯೋಜನೆಯಿಂದ ಈ ಕಾರ್ಯಾಚರಣೆ ಪ್ರಾರಂಭಿಸಲಾಗುವುದೆಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ ಗೆ ಎಚ್ಚರಿಕೆ ನೀಡಿದ್ದಾರೆ.

ಅಮೇರಿಕಾ-ಇಸ್ರೇಲ್ ಯೋಜನೆಗಳನ್ನು ಧ್ವಂಸಗೊಳಿಸುತ್ತೇವೆ! – ಇರಾನ್ ಪ್ರತ್ಯುತ್ತರ

ಟ್ರಂಪ್ ಅವರ ಎಚ್ಚರಿಕೆಗೆ ಇರಾನ್‌ ನ ‘ಖಾತಮ್ ಅಲ್-ಅನ್ಬಿಯಾ ಸೆಂಟ್ರಲ್ ಕಮಾಂಡ್’ನ ವಕ್ತಾರ ಇಬ್ರಾಹಿಂ ಜುಲ್ಪಾಘಾರಿ ಅವರು ಪ್ರತ್ಯುತ್ತರ ನೀಡುತ್ತಾ, “ಒಂದು ವೇಳೆ ನಮ್ಮ ಇಂಧನ ಯೋಜನೆಗಳನ್ನು ಗುರಿಯಾಗಿಸಿದರೆ, ಮಧ್ಯಪ್ರಾಚ್ಯದಲ್ಲಿ ಅಮೇರಿಕಾ ಮತ್ತು ಇಸ್ರೇಲ್‌ ಗೆ ಸಂಬಂಧಿಸಿದ ಎಲ್ಲಾ ಇಂಧನ ಮೂಲಸೌಕರ್ಯಗಳ ಮೇಲೆ ನಾವೂ ದಾಳಿ ಮಾಡುತ್ತೇವೆ. ಸಮುದ್ರದ ನೀರನ್ನು ಸಿಹಿನೀರು ಮಾಡುವ ಯೋಜನೆಗಳು (ಡಿಸಾಲಿನೇಶನ್ ಪ್ಲಾಂಟ್) ಮತ್ತು ಮಾಹಿತಿ ತಂತ್ರಜ್ಞಾನ ಸೌಲಭ್ಯಗಳ ಮೇಲೆ ಆಕ್ರಮಣ ಮಾಡುತ್ತೇವೆ” ಎಂದು ಹೇಳಿದ್ದಾರೆ. ಹಾರ್ಮುಜ್ ವಿಷಯದಲ್ಲಿ ಸಂಯುಕ್ತ ಅರಬ್ ಎಮಿರೇಟ್ಸ್, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಜಪಾನ್ ಸೇರಿದಂತೆ ೨೨ ದೇಶಗಳು ಒಂದಾಗಿವೆ. ಹಾರ್ಮುಜ್ ಜಲಸಂಧಿಯನ್ನು ತಡೆಯುವುದು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ. ಇರಾನ್ ಆಕ್ರಮಣಗಳನ್ನು ನಿಲ್ಲಿಸಿ ಸಮುದ್ರ ಮಾರ್ಗವನ್ನು ಮುಕ್ತಗೊಳಿಸಬೇಕು ಎಂದು ಈ ದೇಶಗಳು ಆಗ್ರಹಿಸಿವೆ.

ಶತ್ರು ದೇಶಗಳನ್ನು ಹೊರತುಪಡಿಸಿ ಇತರ ದೇಶಗಳಿಗೆ ಜಲಸಂಧಿ ಮುಕ್ತವಾಗಿದೆ! – ಇರಾನ್

ಹಾರ್ಮುಜ್ ಜಲಸಂಧಿಯು ಎಲ್ಲಾ ದೇಶಗಳ ಹಡಗುಗಳಿಗೆ ಮುಕ್ತವಾಗಿದೆ; ಆದರೆ ಶತ್ರು ದೇಶಗಳಿಗೆ ಸಂಬಂಧಿಸಿದ ಹಡಗುಗಳಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಇರಾನ್ ಘೋಷಿಸಿದೆ. ಶತ್ರು ದೇಶಗಳಲ್ಲಿ ಅಮೇರಿಕಾ, ಇಸ್ರೇಲ್ ಮತ್ತು ಅವುಗಳ ಮಿತ್ರ ರಾಷ್ಟ್ರಗಳು ಸೇರಿವೆ. ಹಾರ್ಮುಜ್ ಮಾರ್ಗದ ಮೂಲಕ ವಿಶ್ವದ ಸುಮಾರು ಶೇ. ೨೦% ರಷ್ಟು ತೈಲ ಸಾಗಣೆಯಾಗುತ್ತದೆ. ಇದರಿಂದಾಗಿ ಜಾಗತಿಕ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರಬಹುದೆಂಬ ಆತಂಕ ವ್ಯಕ್ತವಾಗಿದೆ.

ಇರಾನ್‌: ೪ ವಾರಗಳಿಂದ ಇಂಟರ್ನೆಟ್ ಬಂದ್

ಇರಾನ್‌ ನಲ್ಲಿ ಕಳೆದ ೪ ವಾರಗಳಿಂದ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ‘ಇಂಟರ್ನೆಟ್ ಸಂಪಕ್’ ವನ್ನು ಮೇಲ್ವಿಚಾರಣೆ ಮಾಡುವ ‘ನೆಟ್‌ ಬ್ಲಾಕ್ಸ್’ ಸಂಸ್ಥೆಯ ಮಾಹಿತಿಯ ಪ್ರಕಾರ, ಹೊರ ಜಗತ್ತಿನೊಂದಿಗೆ ಸಂಪರ್ಕಿಸುವ ಇಂಟರ್ನೆಟ್ ಕೊಂಡಿಗಳನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ ಮತ್ತು ದೇಶದ ಒಳಗಿನ ಇಂಟರ್ನೆಟ್ ಬಳಕೆ ಅತ್ಯಂತ ಸೀಮಿತವಾಗಿದೆ. ಸರಕಾರವು ವಿಪಿಎನ್ (VPN) ಮತ್ತು ‘ಸ್ಯಾಟಲೈಟ್ ಇಂಟರ್ನೆಟ್’ ಮೇಲೆಯೂ ನಿಷೇಧ ಹೇರಿದೆ; ಇದರಿಂದಾಗಿ ಜನರಿಗೆ ಇಂಟರ್ನೆಟ್ ಬಳಸಲು ಈಗ ಅತ್ಯಂತ ಕಡಿಮೆ ಆಯ್ಕೆಗಳು ಉಳಿದಿವೆ.

ಶ್ರೀಲಂಕಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ

ಶ್ರೀಲಂಕಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಮತ್ತೊಮ್ಮೆ ಏರಿಕೆಯಾಗಿದೆ. ಕಳೆದ ಎರಡು ವಾರಗಳಲ್ಲಿ ಎರಡು ಬಾರಿ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ದರ ಈಗ ಪ್ರತಿ ಲೀಟರ್‌ಗೆ ೩೯೮ ರೂಪಾಯಿ ಆಗಿದ್ದು, ಈ ಹಿಂದಿದ್ದ ೩೧೭ ರೂಪಾಯಿಗಳಿಗಿಂತ ಹೆಚ್ಚಾಗಿದೆ. ಡೀಸೆಲ್ ಬೆಲೆಯೂ ಏರಿಕೆಯಾಗಿದ್ದು, ಪ್ರತಿ ಲೀಟರ್‌ ಗೆ ೩೮೨ ರೂಪಾಯಿಗಳಾಗಿದೆ. ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರು, ಯುದ್ಧದಿಂದಾಗಿ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಬಹುದು; ಆದ್ದರಿಂದ ದೇಶದ ಜನರು ಇದಕ್ಕೆ ಮೊದಲೇ ಸಿದ್ಧವಾಗಿರಬೇಕು ಎಂದು ತಿಳಿಸಿದ್ದಾರೆ.

ಇಸ್ರೇಲ್‌ ನ ಡಿಮೋನಾ ಅಣು ಕೇಂದ್ರದ ಮೇಲೆ ಇರಾನ್ ಕ್ಷಿಪಣಿ ದಾಳಿ

ಮಾರ್ಚ್ ೨೧ ರಂದು ಇರಾನ್ ಹಾಗೂ ಅಮೇರಿಕಾ-ಇಸ್ರೇಲ್ ಪಡೆಗಳು ಪರಸ್ಪರರ ಅತ್ಯಂತ ಸುರಕ್ಷಿತ ಅಣು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಯುದ್ಧದ ತೀವ್ರತೆಯನ್ನು ಹೆಚ್ಚಿಸಿವೆ. ಇಸ್ರೇಲ್ ಮತ್ತು ಅಮೇರಿಕಾದ ವಾಯುಪಡೆಯು ಇರಾನ್‌ ನ ಮುಖ್ಯ ಅಣುಸ್ಥಾವರ ‘ನತಾಂಜ್’ ಮೇಲೆ ಭೀಕರ ಆಕ್ರಮಣ ಮಾಡಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಇಸ್ರೇಲ್‌ ನ ಡಿಮೋನಾ ನಗರದ ಅಣು ಕೇಂದ್ರದ ಮೇಲೆ ಆಕ್ರಮಣ ಮಾಡಿದೆ. ಈ ನಗರದ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮಳೆಗರೆದಿದೆ. ಒಂದು ಬ್ಯಾಲಿಸ್ಟಿಕ್ ಕ್ಷಿಪಣಿ ವಸತಿ ಪ್ರದೇಶದಲ್ಲಿ ಬಿದ್ದಿದೆ. ಇದರಿಂದಾಗಿ ಒಂದು ಬಹುಮಹಡಿ ಕಟ್ಟಡವು ಒಣ ಎಲೆಗಳಂತೆ ಕುಸಿದು ಬಿದ್ದಿದೆ. ಈ ದಾಳಿಯಲ್ಲಿ ೪೭ ಜನರು ಗಾಯಗೊಂಡಿದ್ದಾರೆ.

ಡಿಮೋನಾ ನಗರ ‘ಲಿಟಲ್ ಇಂಡಿಯಾ’ : ಮರಾಠಿ ಭಾಷಿಕರ ಸಂಖ್ಯೆ ಹೆಚ್ಚು!

ಇರಾನ್ ಆಕ್ರಮಣ ಮಾಡಿದ ಡಿಮೋನಾ ನಗರವನ್ನು ‘ಲಿಟಲ್ ಇಂಡಿಯಾ’ ಎಂದೂ ಕರೆಯಲಾಗುತ್ತದೆ; ಏಕೆಂದರೆ ಇಲ್ಲಿ ಭಾರತೀಯ ಮೂಲದ ಯಹೂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಜನಸಂಖ್ಯೆಯ ಶೇ. ೩೦% ರಷ್ಟು, ಅಂದರೆ ಸುಮಾರು ೭,೫೦೦ ಜನರು ಭಾರತೀಯ ಮೂಲದವರಾಗಿದ್ದು, ಅವರಲ್ಲಿ ಹೆಚ್ಚಿನವರು ಮರಾಠಿ ಭಾಷಿಕರಾಗಿದ್ದಾರೆ. ಇವರು ಮಹಾರಾಷ್ಟ್ರದ ‘ಬೆನೆ ಇಸ್ರೇಲಿ’ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ನಗರದಲ್ಲಿ ಮರಾಠಿ ಭಾಷೆ, ಭಾರತೀಯ ಆಹಾರ ಸಂಸ್ಕೃತಿ ಮತ್ತು ಪರಂಪರೆಯ ಸ್ಪಷ್ಟ ಪ್ರಭಾವ ಕಂಡುಬರುತ್ತದೆ. ಇಲ್ಲಿನ ರಸ್ತೆಗಳಲ್ಲಿ ಸೋನ್‌ ಪಾಪಡಿ, ಗುಲಾಬ್ ಜಾಮೂನ್, ಪಾಪಡಿ ಚಾಟ್ ಮತ್ತು ಭೇಲ್‌ ಪುರಿ ಸುಲಭವಾಗಿ ಲಭ್ಯವಿರುತ್ತವೆ. ಇದರೊಂದಿಗೆ ಡಿಮೋನಾದಲ್ಲಿ ಕ್ರಿಕೆಟ್ ಕೂಡ ಅತ್ಯಂತ ಜನಪ್ರಿಯವಾಗಿದೆ.

ಅಮೇರಿಕಾ-ಇಸ್ರೇಲ್ ಪ್ರಯಾಣಿಕ ಹಡಗುಗಳನ್ನು ಗುರಿಯಾಗಿಸುತ್ತಿವೆ! – ಇರಾನ್ ಆರೋಪ

ಅಮೇರಿಕಾ ಮತ್ತು ಇಸ್ರೇಲ್ ಗಲ್ಫ್ ಪ್ರದೇಶದಲ್ಲಿ ಖಾಸಗಿ ಮತ್ತು ಪ್ರಯಾಣಿಕ ಹಡಗುಗಳನ್ನು ಗುರಿಯಾಗಿಸುತ್ತಿವೆ ಎಂದು ಇರಾನ್ ಸೈನ್ಯವು ಆರೋಪಿಸಿದೆ. ಈ ಆಕ್ರಮಣ ನಿಲ್ಲಿಸದಿದ್ದರೆ, ನಾವು ಯಾರೂ ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ರೀತಿಯಲ್ಲಿ ಪ್ರತ್ಯುತ್ತರ ನೀಡುತ್ತೇವೆ ಎಂದು ಇರಾನ್ ಎಚ್ಚರಿಸಿದೆ. ಇನ್ನೊಂದೆಡೆ ಇಸ್ರೇಲ್‌ ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು, ಬರುವ ವಾರದಲ್ಲಿ ಇರಾನ್ ಮೇಲಿನ ಆಕ್ರಮಣಗಳ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.