‘ಹಾರ್ಮೋನಲ್’ ಅಸಮತೋಲನ ಮತ್ತು ಆಯುರ್ವೇದ

ಇಂದಿನ ಧಾವಂತದ ಜೀವನಶೈಲಿಯಲ್ಲಿ ಅನೇಕ ಮಹಿಳೆಯರು ‘ಹಾರ್ಮೋನಲ್’ (ಸಂಪ್ರೇರಕಗಳ) ಅಸಮತೋಲನದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮುಟ್ಟು ಅನಿಯಮಿತವಾಗುವುದು, ತೂಕ ಇದ್ದಕ್ಕಿದ್ದಂತೆ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ಮುಖದ ಮೇಲೆ ಮೊಡವೆಗಳು ಬರುವುದು, ಕೂದಲು ಉದುರುವುದು, ಮುಟ್ಟಿನ ಸಮಯದಲ್ಲಿನ ಹೊಟ್ಟೆ ನೋವು, ಸತತ ಆಯಾಸ, ಕಿರಿಕಿರಿ ಅಥವಾ ನಿದ್ರೆಯ ತೊಂದರೆಯಂತಹ ಲಕ್ಷಣಗಳು ಅನೇಕ ಬಾರಿ ‘ಹಾರ್ಮೋನಲ್’ ಅಸಮತೋಲನಕ್ಕೆ ಸಂಬಂಧಿಸಿರುತ್ತವೆ; ಆದರೆ ಹೆಚ್ಚಾಗಿ ಈ ದೂರುಗಳು ಬೇರೆ ಬೇರೆ ರೂಪದಲ್ಲಿ ಕಂಡುಬರುವುದರಿಂದ ಮೂಲ ಕಾರಣವು ಗಮನಕ್ಕೆ ಬರುವುದಿಲ್ಲ. ಆಯುರ್ವೇದವು ಈ ಎಲ್ಲಾ ಲಕ್ಷಣಗಳನ್ನು ದೇಹದ ಆಂತರಿಕ ಸಮತೋಲನವು ತಪ್ಪಿರುವ ಸಂಕೇತವೆಂದು ನೋಡುತ್ತದೆ. (ಲೇಖನ ೭)

ಹಿಂದಿನ ಲೇಖನ ಸಂಖ್ಯೆ ೬ ಓದಲು ಇಲ್ಲಿ ಲಿಂಕ್‌ಮೇಲೆ ಕ್ಲಿಕ್‌ ಮಾಡಿ : https://sanatanprabhat.org/kannada/180952.html

೧. ‘ಹಾರ್ಮೋನಲ್’ ಅಸಮತೋಲನ ಎಂದರೇನು ?

ವೈದ್ಯ (ಸೌ.) ಸಾರಿಕಾ ನೀಲೇಶ ಲೊಂಡ

ಆಯುರ್ವೇದದ ದೃಷ್ಟಿಯಲ್ಲಿ ‘ಹಾರ್ಮೋನಲ್’ ಅಸಮತೋಲನ ಎಂದರೆ ಕೇವಲ ಯಾವುದಾದರೂ ಗ್ರಂಥಿಯ ಕಾಯಿಲೆಯಲ್ಲ, ಬದಲಾಗಿ ದೋಷ, ಧಾತು ಮತ್ತು ಅಗ್ನಿಯ ಸಮತೋಲನವು ತಪ್ಪಿರುವುದು. ವಾತದೋಷ ಹೆಚ್ಚಾದಲ್ಲಿ ಅನಿಯಮಿತ ಮುಟ್ಟು, ಚಿಂತೆ, ನಿದ್ರಾಹೀನತೆಯಂತಹ ಲಕ್ಷಣಗಳು ಕಂಡುಬರುತ್ತವೆ. ಪಿತ್ತದೋಷ ಪ್ರಬಲವಾದಲ್ಲಿ ಕಿರಿಕಿರಿ, ಅತಿಯಾದ ಉಷ್ಣತೆ, ಮೊಡವೆಗಳು ಏಳುವುದು ಮತ್ತು ಅತಿಯಾದ ರಕ್ತಸ್ರಾವ ಆಗಬಹುದು. ಕಫದೋಷ ಹೆಚ್ಚಾದಲ್ಲಿ ತೂಕ ಹೆಚ್ಚಾಗುವುದು, ಬಾವು, ಆಲಸ್ಯ, ಮುಟ್ಟು ತಡವಾಗಿ ಬರುವುದು ಅಥವಾ ‘ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್’ ‘(PCOD) ’ ನಂತಹ ಸಮಸ್ಯೆಗಳು ನಿರ್ಮಾಣವಾಗಬಹುದು. ಹೀಗಾಗಿ ಎಲ್ಲ ಮಹಿಳೆಯಲ್ಲಿಯೂ ‘ಹಾರ್ಮೋನಲ್’ ಅಸಮತೋಲನದ ಸ್ವರೂಪವು ಭಿನ್ನವಾಗಿರುತ್ತದೆ.

೨. ಆಯುರ್ವೇದ ಮತ್ತು ಮನೆಮದ್ದುಗಳು

ಚಿಕಿತ್ಸೆಯ ಬಗ್ಗೆ ವಿಚಾರ ಮಾಡುವಾಗ ಆಯುರ್ವೇದವು ಲಕ್ಷಣಗಳಿಗಿಂತ ಮೂಲ ಕಾರಣದ ಮೇಲೆ ಒತ್ತು ನೀಡುತ್ತದೆ. ಜೀರ್ಣಶಕ್ತಿ ದುರ್ಬಲವಾಗಿರುವುದು, ಅಯೋಗ್ಯ ಆಹಾರ ಪದ್ಧತಿ, ಸತತ ಮಾನಸಿಕ ಒತ್ತಡ, ಅಪೂರ್ಣ ನಿದ್ರೆ ಮತ್ತು ವ್ಯಾಯಾಮದ ಕೊರತೆಯು ‘ಹಾರ್ಮೋನಲ್’ ಅಸಮತೋಲನವನ್ನು ಹೆಚ್ಚಿಸುವ ಪ್ರಮುಖ ಅಂಶಗಳೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಚಿಕಿತ್ಸೆಯನ್ನು ಕೇವಲ ಔಷಧಿಗಳಿಗೆ ಸೀಮಿತಗೊಳಿಸದೆ ಆಹಾರ, ದಿನಚರಿ ಮತ್ತು ಮಾನಸಿಕ ಆರೋಗ್ಯವನ್ನು ಒಟ್ಟಾಗಿ ಪರಿಗಣಿಸಲಾಗುತ್ತದೆ. ದೇಹದಲ್ಲಿನ ‘ಅಗ್ನಿ’ಯು ಸುಧಾರಿಸಿದರೆ, ಕ್ರಮೇಣ ‘ಹಾರ್ಮೋನಲ್’ ಕಾರ್ಯವು ಸಮತೋಲನಗೊಳ್ಳಲು ಸಹಾಯವಾಗುತ್ತದೆ.

ಮನೆಯಲ್ಲಿ ನಿಯಮಿತ ಸಮಯಕ್ಕೆ ಊಟ, ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರ, ಬಿಸಿ ನೀರು ಕುಡಿಯುವ ಅಭ್ಯಾಸ, ಸರಿಯಾದ ವಿಶ್ರಾಂತಿ ಹಾಗೂ ಒತ್ತಡವನ್ನು ಕಡಿಮೆ ಮಾಡುವ ಉಪಾಯಗಳು ಉಪಯುಕ್ತವಾಗುತ್ತವೆ. ಸತತ ಉಪವಾಸ, ಅತಿಯಾಗಿ ಹಸಿವಿನಿಂದ ಇರುವುದು, ಜಂಕ್ ಫುಡ್ ಅಥವಾ ನಿದ್ರೆಯ ಅನಿಯಮಿತ ಸಮಯದಿಂದಲೂ ‘ಹಾರ್ಮೋನಲ್’ ಸಮಸ್ಯೆಗಳು ಹೆಚ್ಚಾಗಬಹುದು. ಒಂದು ವೇಳೆ ಲಕ್ಷಣಗಳು ದೀರ್ಘಕಾಲದ ವರೆಗೆ ಕಂಡುಬರುತ್ತಿದ್ದರೆ, ಮುಟ್ಟು ಸಂಪೂರ್ಣವಾಗಿ ನಿಂತು ಹೋಗುತ್ತಿದ್ದರೆ ಅಥವಾ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ ತಜ್ಞ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ.

೩. ‘ಹಾರ್ಮೋನಲ್ ಸಮತೋಲನ’ವನ್ನು ಪುನಃ ಪಡೆಯಲು…

ಒಟ್ಟಾರೆ, ‘ಹಾರ್ಮೋನಲ್’ ಅಸಮತೋಲನವು ಇಂದು ಸಾಮಾನ್ಯ ಸಮಸ್ಯೆಯಾಗಿದೆ; ಆದರೆ ಅದನ್ನು ನಿರ್ಲಕ್ಷಿಸಬಾರದು. ಆಯುರ್ವೇದವು ದೇಹವನ್ನು ಒಂದು ಸಮಗ್ರ ಘಟಕವೆಂದು ಪರಿಗಣಿಸಿ ದೋಷಗಳ ಸಮತೋಲನ, ಸರಿಯಾದ ಆಹಾರ ಮತ್ತು ಜೀವನಶೈಲಿಯ ಮಾಧ್ಯಮದ ಮೂಲಕ ನೈಸರ್ಗಿಕವಾಗಿ ಸುಧಾರಣೆ ತರುವ ಮಾರ್ಗವನ್ನು ತೋರಿಸುತ್ತದೆ. ಸಂಯಮ ಮತ್ತು ಸತತ ಪ್ರಯತ್ನವನ್ನು ಮೈಗೂಡಿಸಿಕೊಂಡರೆ ‘ಹಾರ್ಮೋನಲ್ ಸಮತೋಲನ’ವನ್ನು ಮತ್ತೆ ಪಡೆಯಲು ಸಾಧ್ಯವಾಗುತ್ತದೆ.

– ವೈದ್ಯ (ಸೌ.) ಸಾರಿಕಾ ನೀಲೇಶ ಲೊಂಡೆ, ನಿರ್ವಿಕಾರ ಆಯುರ್ವೇದ ಹಾಸ್ಪಿಟಲ್, ಭೋಸರಿ, ಪುಣೆ.