ಯುದ್ಧದ 17ನೇ ದಿನ : …ಇಲ್ಲದಿದ್ದರೆ ‘ನಾಟೋ’ (NATO) ಭವಿಷ್ಯ ಅಂಧಕಾರಮಯ!

ಹತಾಶರಾದ ಟ್ರಂಪ್ ಅವರಿಂದ ಒತ್ತಡ ಹೇರಿಕೆ ಮುಂದುವರಿಕೆ!

ವಾಷಿಂಗ್ಟನ್/ತೆಲ್ ಅವಿವ್/ತೆಹ್ರಾನ್: ಯುದ್ಧ ಆರಂಭವಾಗಿ 17 ದಿನಗಳು ಕಳೆದಿವೆ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕ ಈಗ ‘ನಾಟೋ’ ಸದಸ್ಯ ರಾಷ್ಟ್ರಗಳಿಗೆ ಎಚ್ಚರಿಕೆ ನೀಡುತ್ತಾ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಒತ್ತಡ ಹೇರಲು ಶುರು ಮಾಡಿದೆ. ಹತಾಶರಾಗಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಒಂದು ವೇಳೆ ನಾಟೋ ರಾಷ್ಟ್ರಗಳು ‘ಹಾರ್ಮುಜ್ ಜಲಸಂಧಿ’ಯನ್ನು ಮರು ತೆರೆಯಲು ಅಮೆರಿಕಕ್ಕೆ ಸಹಾಯ ಮಾಡದಿದ್ದರೆ, ನಾಟೋ ಭವಿಷ್ಯ ಅಂಧಕಾರಮಯವಾಗಲಿದೆ” ಎಂದು ಎಚ್ಚರಿಸಿದ್ದಾರೆ. ಇರಾನ್ ವಿರುದ್ಧದ ಸಂಘರ್ಷದಲ್ಲಿ ಅಮೆರಿಕವನ್ನು ಬೆಂಬಲಿಸಲು ಯುರೋಪಿಯನ್ ರಾಷ್ಟ್ರಗಳು ವಿಫಲವಾದರೆ ಅವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಚೀನಾಗೂ ಟ್ರಂಪ್ ಎಚ್ಚರಿಕೆ!

ಚೀನಾಕ್ಕೂ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. “ಚೀನಾ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡಲು ಸಹಾಯ ಮಾಡದಿದ್ದರೆ, ಈ ತಿಂಗಳ ಕೊನೆಯಲ್ಲಿ ಚೀನಾ ಅಧ್ಯಕ್ಷ ಶೀ ಜಿನ್‌ಪಿಂಗ್ ಅವರೊಂದಿಗೆ ನಡೆಯಲಿರುವ ಶೃಂಗಸಭೆಯನ್ನು ಮುಂದೂಡಬಹುದು” ಎಂದು ಅವರು ತಿಳಿಸಿದ್ದಾರೆ. ಟ್ರಂಪ್ ಮಾರ್ಚ್ 31 ರಂದು ಚೀನಾಕ್ಕೆ ಭೇಟಿ ನೀಡಬೇಕಿದೆ.

ಯುದ್ಧ ನಿಲ್ಲಿಸುವಂತೆ ಪೋಪ್ ಲಿಯೋ ಕರೆ!

ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಲಿಯೋ ಅವರು, “ಮಧ್ಯಪ್ರಾಚ್ಯದ ಪರಿಸ್ಥಿತಿ ಭಯಾನಕವಾಗಿದೆ ಮತ್ತು ಯುದ್ಧವು ತಕ್ಷಣವೇ ನಿಲ್ಲಬೇಕು” ಎಂದು ಮನವಿ ಮಾಡಿದ್ದಾರೆ. ಎಲ್ಲರೂ ಹಿಂಸಾಚಾರವನ್ನು ನಿಲ್ಲಿಸಿ ಸಂವಾದವನ್ನು ಆರಂಭಿಸಬೇಕು. ಶಾಲೆಗಳು, ಆಸ್ಪತ್ರೆಗಳು ಮತ್ತು ಮನೆಗಳ ಮೇಲಿನ ದಾಳಿಯಲ್ಲಿ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗಾಗಿ ನಾನು ಖೇದ ವ್ಯಕ್ತಪಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಸಾವಿರಾರು ಇರಾನಿ ನಾಗರಿಕರು ಅಫ್ಘಾನಿಸ್ತಾನ ಅಥವಾ ಪಾಕಿಸ್ತಾನಕ್ಕೆ ಪಲಾಯನ! – ವಿಶ್ವಸಂಸ್ಥೆ

ಇರಾನ್‌ನ ಸಾವಿರಾರು ಜನರು ದೇಶದಿಂದ ಪಲಾಯನ ಮಾಡಿದ್ದಾರೆ. ಅವರು ನೆರೆಯ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇರಾನ್‌ನ ಅನೇಕ ನಗರಗಳಲ್ಲಿ ಮನೆಗಳು ಮತ್ತು ಅಗತ್ಯ ಸೇವೆಗಳು ನಾಶವಾಗಿರುವುದರಿಂದ ಜನರು ಸುರಕ್ಷತೆಗಾಗಿ ಹುಡುಕಾಡುತ್ತಿದ್ದಾರೆ. ಇವರಲ್ಲಿ ಸುಮಾರು 32 ಸಾವಿರ ಜನರು ಅಫ್ಘಾನಿಸ್ತಾನವನ್ನು ತಲುಪಿದ್ದರೆ, ಸುಮಾರು 4 ಸಾವಿರ ಜನರು ಪಾಕಿಸ್ತಾನಕ್ಕೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.

ಟ್ರಂಪ್ ಕರೆಗೆ ಜಪಾನ್ ಮತ್ತು ಆಸ್ಟ್ರೇಲಿಯಾ ನಿರಾಕರಣೆ!

ಹಾರ್ಮುಜ್ ಜಲಸಂಧಿಯ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಇರಾನ್ ಎದುರಿಸಲು ಟ್ರಂಪ್ ತಮ್ಮ ಮಿತ್ರರಾಷ್ಟ್ರಗಳಿಗೆ ಯುದ್ಧನೌಕೆಗಳನ್ನು ಕಳುಹಿಸಲು ಕರೆ ನೀಡಿದ್ದರು. ಆದರೆ ಜಪಾನ್ ಮತ್ತು ಆಸ್ಟ್ರೇಲಿಯಾ ಈ ಮನವಿಯನ್ನು ತಿರಸ್ಕರಿಸಿವೆ.

1. ಆಸ್ಟ್ರೇಲಿಯಾ: ಅಮೆರಿಕದ ಒತ್ತಡಕ್ಕೆ ಮಣಿಯದ ಆಸ್ಟ್ರೇಲಿಯಾ ನೌಕಾಪಡೆಯು ‘ನೌಕೆಗಳನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ’ ಎಂದು ಸ್ಪಷ್ಟಪಡಿಸಿದೆ. ಕ್ಯಾಬಿನೆಟ್ ಸಚಿವೆ ಕ್ಯಾಥರಿನ್ ಕಿಂಗ್ ಅವರು, “ಈ ಮಾರ್ಗವು ಬಹಳ ಮುಖ್ಯವಾಗಿದ್ದರೂ, ಆಸ್ಟ್ರೇಲಿಯಾಕ್ಕೆ ಯಾವುದೇ ಅಧಿಕೃತ ವಿನಂತಿ ಬಂದಿಲ್ಲ” ಸಧ್ಯ ಅಲ್ಲಿ ಸೇನೆಯನ್ನು ನಿರ್ಮಿಸುವ ಯಾವುದೇ ಯೋಜನೆ ಇಲ್ಲ, ಎಂದು ಹೇಳಿದ್ದಾರೆ.

2. ಜಪಾನ್: ಸಮುದ್ರ ಸುರಕ್ಷತೆಗಾಗಿ ಯಾವುದೇ ಮಿಲಿಟರಿ ಕಾರ್ಯಾಚರಣೆಗೆ ನಾವು ಅನುಮತಿ ನೀಡಿಲ್ಲ ಎಂದು ಜಪಾನ್ ಹೇಳಿದೆ. ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಸನಾಯೆ ತಾಕೈಚಿ, ಯುದ್ಧನೌಕೆಗಳನ್ನು ಕಳುಹಿಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ. ಕಾನೂನು ರೀತಿಯಲ್ಲಿ ಜಪಾನ್ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಹುದು.

3. ದಕ್ಷಿಣ ಕೊರಿಯಾ: ಅಮೆರಿಕದೊಂದಿಗೆ ಚರ್ಚೆ ನಡೆಯುತ್ತಿದ್ದು, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ದಕ್ಷಿಣ ಕೊರಿಯಾ ಜಾಗರೂಕ ನಿಲುವು ತಳೆದಿದೆ.

4. ಬ್ರಿಟನ್: ಜಾಗತಿಕ ಸಮುದ್ರ ಸಾರಿಗೆಯ ಅಡೆತಡೆಗಳನ್ನು ಕಡಿಮೆ ಮಾಡಲು ಜಲಸಂಧಿಯನ್ನು ಪುನಃ ತೆರೆಯುವ ಬಗ್ಗೆ ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್ ಅವರು ಟ್ರಂಪ್ ಅವರೊಂದಿಗೆ ಚರ್ಚಿಸಿದ್ದಾರೆ.

ನೆತನ್ಯಾಹು ಅವರು ಜೀವಂತವಾಗಿರುವ ವಿಡಿಯೋ ಪ್ರಸಾರ !

ಇರಾನ್ ದಾಳಿಯಲ್ಲಿ ನೆತನ್ಯಾಹು ಅವರು ಮೃತಪಟ್ಟಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಹರಡಿದ್ದವು. ಇರಾನಿ ಮತ್ತು ಪಾಕಿಸ್ತಾನಿ ಮಾಧ್ಯಮಗಳು ಇವುಗಳನ್ನು ಹರಡಿದ್ದವು. ಇದೇ ಸಂದರ್ಭದಲ್ಲಿ ಭಾರತದ ಆದಿತ್ಯ ರಾಜ್ ಕೌಲ್ ಎಂಬ ಪತ್ರಕರ್ತರು ನೆತನ್ಯಾಹು ಅವರ ಇರುವಿಕೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ನೀಡಿದ್ದಾರೆ ಎಂಬ ಸುಳ್ಳು ದಾವೆಗಳನ್ನು ಕೂಡ ಮಾಡಲಾಗಿತ್ತು. ಇದರಿಂದಾಗಿ ನೆತನ್ಯಾಹು ಅವರು ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಲಾಗುತ್ತಿತ್ತು.

ಈ ಎಲ್ಲಾ ವದಂತಿಗಳಿಗೆ ಪೂರ್ಣವಿರಾಮ ಹಾಕುತ್ತಾ ನೆತನ್ಯಾಹು ಅವರು ತಮ್ಮದೇ ಆದ ಒಂದು ವಿಡಿಯೋ ಪ್ರಸಾರ ಮಾಡಿದ್ದಾರೆ. ನೆತನ್ಯಾಹು ಅವರು ಟೆಲ್ ಅವಿವ್‌ನ ಕಾಫಿ ಅಂಗಡಿಯೊಂದರಲ್ಲಿ ನಗುನಗುತ್ತಾ ಇರುವುದನ್ನು ವಿಡಿಯೋ ಮೂಲಕ ಪ್ರಸಾರ ಮಾಡಿದರು. ಇದರ ಮೂಲಕ ಅವರು ಎಲ್ಲಾ ವದಂತಿಗಳನ್ನು ನೇರವಾಗಿ ಲೇವಡಿ ಮಾಡಿದರು. “ಇಸ್ರೇಲಿ ಜನರ ಬೆಂಬಲ ನನಗೆ, ಸರ್ಕಾರಕ್ಕೆ, ಇಸ್ರೇಲಿ ರಕ್ಷಣಾ ಪಡೆಗೆ, ‘ಮೊಸಾದ್’ಗೆ ಮತ್ತು ನಮ್ಮ ವಿವಿಧ ಸಂಸ್ಥೆಗಳಿಗೆ ಶಕ್ತಿ ನೀಡುತ್ತದೆ. ನಾವು ಪ್ರಸ್ತುತ ಕೆಲವು ಕೆಲಸಗಳನ್ನು ಮಾಡುತ್ತಿದ್ದೇವೆ, ಅದರ ಮಾಹಿತಿಯನ್ನು ನಾನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ; ಆದರೆ ನಾವು ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತಿದ್ದೇವೆ. ನಾವು ಇರಾನ್ ಮತ್ತು ಲೆಬನಾನ್ ಮೇಲೆ ಅತ್ಯಂತ ಬಲವಾದ ದಾಳಿ ನಡೆಸುತ್ತಿದ್ದೇವೆ!” ಎಂದು ಅವರು ಹೇಳಿದರು.

ಭಾರತ-ಇರಾನ್ ನಡುವೆ ಸಹಕಾರದ ಸುದೀರ್ಘ ಇತಿಹಾಸವಿದೆ! – ಡಾ. ಜೈಶಂಕರ್

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿ, ಭಾರತವು ಇರಾನ್‌ನೊಂದಿಗೆ ನೇರ ಮತ್ತು ನಿರ್ಣಾಯಕ ಸಂವಾದ ನಡೆಸುತ್ತಿದೆ. ಅದರ ಮೂಲಕ ಭಾರತೀಯ ಧ್ವಜ ಹೊಂದಿರುವ ನೌಕೆಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಪ್ರತಿ ಭಾರತೀಯ ನೌಕೆಗೆ ಸ್ವತಂತ್ರವಾಗಿ (ವೈಯಕ್ತಿಕ ಮಟ್ಟದಲ್ಲಿ) ಅನುಮತಿ ನೀಡಲಾಗುತ್ತಿದೆ; ಈ ಉದ್ದೇಶಕ್ಕಾಗಿ ಭಾರತ ಮತ್ತು ಇರಾನ್ ನಡುವೆ ಯಾವುದೇ ಹೊಸ ಔಪಚಾರಿಕ ಒಪ್ಪಂದವನ್ನು ಮಾಡಿಕೊಳ್ಳಲಾಗಿಲ್ಲ, ಎಂದು ತಿಳಿಸಿದ್ದಾರೆ.

ಡಾ. ಜೈಶಂಕರ್ ಅವರು ಮಾತು ಮುಂದುವರೆಸುತ್ತಾ, ಭಾರತೀಯ ನೌಕೆಗಳ ಸುರಕ್ಷಿತ ಸಂಚಾರಕ್ಕೆ ಪ್ರತಿಯಾಗಿ ಭಾರತವು ಇರಾನ್‌ಗೆ ಯಾವುದೇ ರೀತಿಯ ಸವಲತ್ತು ಅಥವಾ ಲಾಭವನ್ನು ನೀಡಿಲ್ಲ. ಭಾರತ ಮತ್ತು ಇರಾನ್ ನಡುವೆ ಸಹಕಾರದ ಸುದೀರ್ಘ ಇತಿಹಾಸವಿದೆ ಮತ್ತು ಇದೇ ಆಧಾರದ ಮೇಲೆ ಭಾರತವು ಈ ಉಪಕ್ರಮವನ್ನು ಕೈಗೊಂಡಿದೆ. ಇದು ಯಾವುದೇ ‘ಕೊಡು-ಕೊಳ್ಳುವಿಕೆ’ ಸ್ವರೂಪದ ವ್ಯವಸ್ಥೆಯಲ್ಲ ಎಂದು ಜೈಶಂಕರ್ ಅವರು ದೃಢವಾಗಿ ಹೇಳಿದರು.

ಸೇನಾ ಕಾರ್ಯಾಚರಣೆಗಿಂತ ರಾಜತಾಂತ್ರಿಕತೆ ಹೆಚ್ಚು ಪರಿಣಾಮಕಾರಿ ಸಾಧನ! – ಡಾ. ಜೈಶಂಕರ್

ನವದೆಹಲಿ – ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟನ್ನು ಪರಿಹರಿಸಲು ಡಾ. ಎಸ್. ಜೈಶಂಕರ್ ಅವರು ಅತ್ಯಂತ ಸೂಚಕ ಪದಗಳಲ್ಲಿ ಅಮೆರಿಕಾಗೆ ಒಂದು ಪರಿಹಾರವನ್ನು ಸೂಚಿಸಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಕ್ತಗೊಳಿಸಲು ಯುದ್ಧನೌಕೆಗಳಲ್ಲ, ಬದಲಿಗೆ ರಾಜತಾಂತ್ರಿಕತೆಯೇ ಅತ್ಯಂತ ಪ್ರಮುಖ ಮತ್ತು ಪರಿಣಾಮಕಾರಿ ಸಾಧನವಾಗಿದೆ ಎಂದು ಡಾ. ಜೈಶಂಕರ್ ದೃಢವಾಗಿ ಹೇಳಿದ್ದಾರೆ.

ಭಾರತದ ದೃಷ್ಟಿಕೋನದಿಂದ ನೋಡುವುದಾದರೆ, ಪರಸ್ಪರ ಸಮನ್ವಯ ಸಾಧಿಸಿ ಯಾವುದಾದರೂ ಒಂದು ಪರಿಹಾರಕ್ಕೆ ತಲುಪಲು ಪ್ರಯತ್ನಿಸುವುದು ಹೆಚ್ಚು ಶ್ರೇಯಸ್ಕರ; ಆದರೆ ಪ್ರಸ್ತುತ ಹಾಗೆ ನಡೆಯುತ್ತಿರುವುದು ಕಾಣಿಸುತ್ತಿಲ್ಲ ಎಂದು ಡಾ. ಜೈಶಂಕರ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು. ಈ ಪ್ರಕ್ರಿಯೆಯಲ್ಲಿ ಇತರ ಸಂಬಂಧಿತ ಘಟಕಗಳನ್ನೂ ಒಳಗೊಳ್ಳುವುದು ವಿಶ್ವದ ವಿಶಾಲ ಹಿತದೃಷ್ಟಿಯಿಂದ ಒಳ್ಳೆಯದು ಎಂದು ನಾನು ನಂಬುತ್ತೇನೆ ಎಂದರು.

ಯುದ್ಧದಲ್ಲಿ ಇರಾನ್ ದೃಢ ನಿಂತಿರುವುದರ ಹಿಂದೆ ಇದೇ ಕಾರಣ !

ಹಾರ್ಮುಜ್‌ನಲ್ಲಿನ ಜಲಸುರಂಗಗಳಿಂದ (ನೇವಲ್ ಮೈನ್ಸ್) ಅಮೆರಿಕಾ ಕಂಗಾಲಾಗಿದೆ. ‘ಇರಾನ್‌ನ ವಿನಾಶ ಮಾಡುವುದು ಅತ್ಯಂತ ಅನಿವಾರ್ಯವಾಗಿದೆ’ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ. ಇರಾನ್ ಬಳಿ ಯಾವುದೇ ಸಾಂಪ್ರದಾಯಿಕ ನೌಕಾಪಡೆ ಇಲ್ಲ, ವಿಮಾನ ವಿರೋಧಿ ಕ್ಷಮತೆಯೂ ಇಲ್ಲ, ಸಮರ್ಥ ವಾಯುಪಡೆಯೂ ಇಲ್ಲ, ಆದರೂ ಅದು ಹೋರಾಡುತ್ತಿದೆ ಎಂದು ಅವರು ಹೇಳಿದರು. ಇರಾನ್ ಜಲಮಾರ್ಗಗಳಲ್ಲಿ ಅಲ್ಲಲ್ಲಿ ಜಲಸುರಂಗಗಳನ್ನು ಅಳವಡಿಸಿಟ್ಟಿರುವುದರಿಂದ ಅದು ಹೀಗೆ ಮಾಡಲು ಸಾಧ್ಯವಾಗುತ್ತಿದೆ.

ಕಳೆದ ವಾರ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 100 ಡಾಲರ್ (9 ಸಾವಿರದ 233 ರೂಪಾಯಿ) ಗಡಿಯನ್ನು ದಾಟಿವೆ. 2022ರ ನಂತರ ಮೊದಲ ಬಾರಿಗೆ ಹೀಗೆ ಸಂಭವಿಸಿದೆ. ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮತ್ತೆ ಮುಕ್ತವಾಗದಿದ್ದರೆ, ಈ ಬೆಲೆಗಳು ಗಗನಕ್ಕೇರಿ ಪ್ರತಿ ಬ್ಯಾರೆಲ್‌ಗೆ 150 ಡಾಲರ್ (13 ಸಾವಿರದ 850 ರೂಪಾಯಿ) ತಲುಪಬಹುದು. ಇದರಿಂದ ಅಮೆರಿಕಾ ಸೇರಿದಂತೆ ವಿಶ್ವದಾದ್ಯಂತ ದೊಡ್ಡ ಪ್ರಮಾಣದಲ್ಲಿ ಅರಾಜಕತೆ ಉಂಟಾಗುವ ಸಾಧ್ಯತೆಯಿದೆ.