ಯುದ್ಧ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ! – ಡೊನಾಲ್ಡ್ ಟ್ರಂಪ್ ದಾವೆ

ನವ ದೆಹಲಿ – ಒಂದು ವೇಳೆ ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಪೂರೈಕೆಯನ್ನು ತಡೆಯಲು ಪ್ರಯತ್ನಿಸಿದರೆ, ಅಮೆರಿಕವು ಅದರ ಮೇಲೆ 20 ಪಟ್ಟು ಹೆಚ್ಚು ಶಕ್ತಿಯೊಂದಿಗೆ ದಾಳಿ ಮಾಡಲಿದೆ. ಶತ್ರು ಸಂಪೂರ್ಣವಾಗಿ ನಾಶವಾಗುವವರೆಗೆ ಈ ಯುದ್ಧ ಮುಂದುವರಿಯಲಿದೆ. ಯುದ್ಧ ಆರಂಭವಾದಾಗಿನಿಂದ ಅಮೆರಿಕ ಮತ್ತು ಇಸ್ರೈಲ್ ಸೇರಿ ಇರಾನ್‌ ನ 5 ಸಾವಿರಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿವೆ. ಕೆಲವು ಅತ್ಯಂತ ಪ್ರಮುಖ ಸ್ಥಳಗಳನ್ನು ಇನ್ನೂ ಉದ್ದೇಶಪೂರ್ವಕವಾಗಿ ಗುರಿಪಡಿಸಲಾಗಿಲ್ಲ, ಅಗತ್ಯವಿದ್ದಲ್ಲಿ ನಂತರ ಕ್ರಮ ಕೈಗೊಳ್ಳಲು ಅವುಗಳನ್ನು ಉಳಿಸಿಕೊಳ್ಳಲಾಗಿದೆ. ಅಮೆರಿಕ ಮತ್ತು ಇಸ್ರೈಲ್ ಈ ಯುದ್ಧದಲ್ಲಿ ದೊಡ್ಡ ಮುನ್ನಡೆ ಸಾಧಿಸಿವೆ ಮತ್ತು ಬಹುಶಃ ಈ ಯುದ್ಧವು ಶೀಘ್ರದಲ್ಲೇ ಮುಕ್ತಾಯಗೊಳ್ಳಬಹುದು; ಆದರೆ ಸದ್ಯಕ್ಕೆ ಸೈನಿಕ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫ್ಲೋರಿಡಾದ ಡೋರಲ್ ನಗರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಯುದ್ಧ ಯಾವಾಗ ಮುಗಿಸಬೇಕು ಎಂಬುದನ್ನು ಅಮೆರಿಕವಲ್ಲ, ನಾವು ನಿರ್ಧರಿಸುತ್ತೇವೆ! – ಇರಾನ್ ಪ್ರತ್ಯುತ್ತರ

ಟ್ರಂಪ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್‌ ನ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’, ಯುದ್ಧದ ಅಂತ್ಯವನ್ನು ನಾವು ನಿರ್ಧರಿಸುತ್ತೇವೆ ಎಂದು ಹೇಳಿದೆ. ಈ ಭಾಗದ ರಾಜಕೀಯ ಸಮೀಕರಣಗಳು ಮತ್ತು ಭವಿಷ್ಯದ ಪರಿಸ್ಥಿತಿ ಈಗ ನಮ್ಮ ಸೈನ್ಯದ ಕೈಯಲ್ಲಿದೆ. ಅಮೆರಿಕದ ಸೈನ್ಯವು ಈ ಯುದ್ಧವನ್ನು ಕೊನೆಗೊಳಿಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

ಟ್ರಂಪ್ ಮತ್ತು ಪುಟಿನ್ ನಡುವೆ ದೂರವಾಣಿ ಚರ್ಚೆ

ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ಪುಟಿನ್ ನಡುವೆ ಮಾರ್ಚ್ 9 ರಂದು ಸುಮಾರು 1 ಗಂಟೆಗಳ ಕಾಲ ದೂರವಾಣಿ ಚರ್ಚೆ ನಡೆಯಿತು. ಇದು ಈ ವರ್ಷದ ಇವರಿಬ್ಬರ ನಡುವಿನ ಮೊದಲ ಅಧಿಕೃತ ಚರ್ಚೆ ಎಂದು ಹೇಳಲಾಗುತ್ತಿದೆ. ಈ ಸಂವಾದದಲ್ಲಿ ಪ್ರಮುಖವಾಗಿ ಮಧ್ಯಪ್ರಾಚ್ಯದ ಸಂಘರ್ಷ, ಉಕ್ರೇನ್ ಯುದ್ಧ ಮತ್ತು ಜಾಗತಿಕ ಇಂಧನ ಪರಿಸ್ಥಿತಿಯ ಬಗ್ಗೆ ಚರ್ಚಿಸಲಾಗಿದೆ.

ಟ್ರಂಪ್ ಕರೆ ನೀಡಿದ ನಂತರ ಆಸ್ಟ್ರೇಲಿಯಾದಿಂದ 5 ಇರಾನಿ ಮಹಿಳಾ ಫುಟ್ಬಾಲ್ ಆಟಗಾರರಿಗೆ ಆಶ್ರಯ!

ಇರಾನ್‌ ನ ಮಹಿಳಾ ಫುಟ್ಬಾಲ್ ಆಟಗಾರರಿಗೆ ಆಶ್ರಯ ನೀಡುವಂತೆ ಟ್ರಂಪ್ ಆಸ್ಟ್ರೇಲಿಯಾಕ್ಕೆ ಮನವಿ ಮಾಡಿದ್ದರು. ‘ಒಂದು ವೇಳೆ ಅವರನ್ನು ಇರಾನ್‌ ಗೆ ಮರಳಿ ಕಳುಹಿಸಿದರೆ, ಅವರ ಪ್ರಾಣಕ್ಕೆ ಅಪಾಯ ಉಂಟಾಗಬಹುದು ಮತ್ತು ಇದು ದೊಡ್ಡ ಮಾನವೀಯ ತಪ್ಪಾಗಲಿದೆ. ಆಸ್ಟ್ರೇಲಿಯಾ ಅವರಿಗೆ ಆಶ್ರಯ ನೀಡಲು ಸಿದ್ಧವಿಲ್ಲದಿದ್ದರೆ, ಅಮೆರಿಕ ನೀಡಲು ಸಿದ್ಧವಿದೆ’ ಎಂದು ಟ್ರಂಪ್ ಹೇಳಿದ್ದರು. ಇದರ ನಂತರ ಆಸ್ಟ್ರೇಲಿಯಾವು ಇರಾನ್ ಮಹಿಳಾ ಫುಟ್ಬಾಲ್ ತಂಡದ 5 ಆಟಗಾರರಿಗೆ ಮಾನವೀಯ ನೆಲೆಯ ವೀಸಾ ನೀಡಿದ್ದು, ದೇಶದಲ್ಲಿ ಉಳಿಯಲು ಅನುಮತಿ ನೀಡಿದೆ. ಆಟಗಾರರನ್ನು ಪೊಲೀಸರು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯನ್ ಫುಟ್ಬಾಲ್ ಕಪ್ ಪಂದ್ಯಾವಳಿಯಲ್ಲಿ, ಇರಾನ್ ಮೇಲೆ ದಾಳಿಯಾದ ನಂತರ ಮಹಿಳಾ ತಂಡವು ರಾಷ್ಟ್ರಗೀತೆಯನ್ನು ಹಾಡಿರಲಿಲ್ಲ. ಇದನ್ನು ಸರಕಾರ ವಿರೋಧಿ ಪ್ರತಿಭಟನೆಯಾಗಿ ನೋಡಲಾಗಿತ್ತು. ಇದರ ನಂತರ ಇರಾನಿ ಮಾಧ್ಯಮಗಳಲ್ಲಿ ಆಟಗಾರರನ್ನು ‘ದೇಶದ್ರೋಹಿಗಳು’ ಎಂದು ಕರೆದು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿತ್ತು.

ಇರಾನ್ ದಾಳಿಯನ್ನು ಬೆಂಬಲಿಸಿದ ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿ ನಾಗರಿಕರನ್ನು ಬಹ್ರೇನ್‌ ನಲ್ಲಿ ಬಂಧಿಸಲಾಯಿತು

ಇರಾನ್ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮತ್ತು ಪೋಸ್ಟಗಳನ್ನು ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹ್ರೇನ್ ಆಡಳಿತವು 6 ವಿದೇಶಿ ನಾಗರಿಕರನ್ನು ಬಂಧಿಸಿದೆ. ಇದರಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಾಗರಿಕರು ಸೇರಿದ್ದಾರೆ. ಇವರೆಲ್ಲರೂ ಬಹ್ರೇನ್‌ ನಲ್ಲಿ ಉದ್ಯೋಗ ಅಥವಾ ವ್ಯವಹಾರದ ನಿಮಿತ್ತ ನೆಲೆಸಿದ್ದರು. ಈ ನಾಗರಿಕರು ಇರಾನ್‌ ನ ಸೈನಿಕ ಕಾರ್ಯಾಚರಣೆಗಳನ್ನು ಬೆಂಬಲಿಸುವ ಮತ್ತು ಬಹ್ರೇನ್‌ ನ ಅಧಿಕೃತ ನೀತಿಗಳಿಗೆ ವಿರುದ್ಧವಾಗಿರುವ ವಿಡಿಯೋಗಳನ್ನು ಪ್ರಸಾರ ಮಾಡಿದ್ದರು. ದೇಶದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳುಮಾಡುವ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ ಎಂದು ಬಹ್ರೇನ್ ಸರಕಾರವು ಸ್ಪಷ್ಟಪಡಿಸಿದೆ.

ಪಾಕಿಸ್ತಾನದಲ್ಲಿ ತೈಲದ ಅಭಾವದಿಂದ ಶಾಲೆಗಳು ಬಂದ್, ಮಂತ್ರಿಗಳ ವೇತನ ಮತ್ತು ವಿದೇಶಿ ಪ್ರವಾಸಗಳಿಗೆ ತಡೆ!

ಪಾಕಿಸ್ತಾನದ ಪ್ರಧಾನಿ ಶಹಬಾಜ ಶರೀಫ್ ಅವರು ತೈಲ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ವೆಚ್ಚ ಕಡಿತ ಮಾಡುವ ಯೋಜನೆಯನ್ನು ಘೋಷಿಸಿದ್ದಾರೆ. ತೈಲದ ಬೆಲೆ 60 ಡಾಲರ್‌ನಿಂದ 100 ಡಾಲರ್ ಪ್ರತಿ ಬ್ಯಾರೆಲ್‌ಗಿಂತ ಹೆಚ್ಚಾಗಿದೆ, ಆದ್ದರಿಂದ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಶರೀಫ್ ಹೇಳಿದ್ದಾರೆ. ಈ ನಿರ್ಧಾರದ ಅಡಿಯಲ್ಲಿ ಸರಕಾರಿ ಕಚೇರಿಗಳು ವಾರದಲ್ಲಿ ಕೇವಲ 4 ದಿನಗಳು ಮಾತ್ರ ಕಾರ್ಯನಿರ್ವಹಿಸಲಿವೆ ಮತ್ತು ಅರ್ಧದಷ್ಟು ಸಿಬ್ಬಂದಿ ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಮ್) ಮಾಡಲಿದ್ದಾರೆ. ಈ ವಾರಾಂತ್ಯದಿಂದ ಶಾಲೆಗಳು 2 ವಾರಗಳ ಕಾಲ ಮುಚ್ಚಲ್ಪಡಲಿವೆ. ಮಂತ್ರಿಗಳು ಮತ್ತು ಸಲಹೆಗಾರರ ವಿದೇಶಿ ಪ್ರವಾಸಗಳನ್ನು ನಿಲ್ಲಿಸಲಾಗಿದೆ. ಮಂತ್ರಿಗಳು 2 ತಿಂಗಳ ಕಾಲ ವೇತನ ಪಡೆಯುವುದಿಲ್ಲ ಮತ್ತು ಸಂಸದರ ವೇತನದಲ್ಲಿ ಶೇ. 25 ರಷ್ಟು ಕಡಿತಗೊಳಿಸಲಾಗುವುದು. ಪಾಕಿಸ್ತಾನದಲ್ಲಿ 2 ತಿಂಗಳ ಕಾಲ ಸರಕಾರಿ ವಾಹನಗಳಿಗೆ ಶೇ. 50 ರಷ್ಟು ಮಾತ್ರ ಇಂಧನ ಸಿಗಲಿದೆ. ಶೇ. 60 ರಷ್ಟು ಸರಕಾರಿ ವಾಹನಗಳು ರಸ್ತೆಗೆ ಇಳಿಯುವುದಿಲ್ಲ. ಎಲ್ಲಾ ಸರಕಾರಿ ಇಲಾಖೆಗಳು ತಮ್ಮ ವೆಚ್ಚದಲ್ಲಿ ಶೇ. 20 ರಷ್ಟು ಕಡಿತಗೊಳಿಸಲಿವೆ.

ಇಫ್ತಾರ್ ಔತಣಕೂಟಗಳು ಬಂದ್

ಇಫ್ತಾರ್ ಔತಣಕೂಟಗಳನ್ನು ಸಹ ನಿಲ್ಲಿಸಲು ನಿರ್ಧರಿಸಲಾಗಿದೆ. ರಮಜಾನ್ ತಿಂಗಳಿನಲ್ಲಿ ಪಾಕಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಇಫ್ತಾರ್ ಔತಣಕೂಟಗಳನ್ನು ಆಯೋಜಿಸಲಾಗುತ್ತದೆ; ಆದರೆ ಈಗ ಪಾಕಿಸ್ತಾನ ಸರಕಾರವು ನೇರವಾಗಿ ಇಫ್ತಾರ್ ಔತಣಕೂಟಗಳನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿದೆ.

ಇವರೇ ಟ್ರಂಪ್‌ಗೆ ನೊಬೆಲ್ ನೀಡಲು ಆಗ್ರಹಿಸುತ್ತಿದ್ದವರು! – ಪಾಕ್‌ನ ಹಿರಿಯ ಪತ್ರಕರ್ತನ ತರಾಟೆ

ಪಾಕಿಸ್ತಾನದ ಹಿರಿಯ ಪತ್ರಕರ್ತ ನಜಮ್ ಸೇಠಿ ಅವರು ಶಹಬಾಜ್ ಷರೀಫ್ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಡೊನಾಲ್ಡ್ ಟ್ರಂಪ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸುತ್ತಿದ್ದವರು ಇವರೇ. ಭಾರತಕ್ಕೆ ತೈಲಕ್ಕಾಗಿ ರಿಯಾಯಿತಿ ನೀಡಿದಂತೆ ನಮಗೂ ನೀಡಿ ಎಂದು ಕೇಳಲು ಈಗ ಇವರೇ ಟ್ರಂಪ್ ಬಳಿ ಏಕೆ ಹೋಗುತ್ತಿಲ್ಲ?’ ಎಂದು ನಜಮ್ ಸೇಠಿ ಸುದ್ದಿವಾಹಿನಿಯೊಂದರಲ್ಲಿ ಪ್ರಶ್ನಿಸಿದ್ದಾರೆ.

ರಾಜಕಾರಣಿಗಳು ದೇಶ ಬಿಟ್ಟು ಓಡಬೇಕಾಗುತ್ತದೆ!

ಸೇಠಿ ಅವರು ಮಾತು ಮುಂದುವರಿಸಿ, ‘ಸರಕಾರವು ಎಂತಹ ನೀತಿಗಳನ್ನು ರೂಪಿಸುತ್ತಿದೆ? ಜನರಲ್ಲಿ ನಿಮ್ಮ ಬಗ್ಗೆ (ಸರಕಾರದ ಬಗ್ಗೆ) ಭಾರಿ ಆಕ್ರೋಶವಿದೆ. ಈ ಆಕ್ರೋಶ ಸ್ಫೋಟಗೊಂಡರೆ ನಿಮಗೆ ದಿಕ್ಕೇ ತೋಚುವುದಿಲ್ಲ. ಯಾವುದಾದರೂ ವಿಮಾನದಲ್ಲಿ ಕುಳಿತು ನೀವು ಓಡಿಹೋಗಬೇಕಾಗುತ್ತದೆ. ದಯವಿಟ್ಟು ಜನರ ಮೇಲೆ ಈ (ತೈಲ ಬೆಲೆ ಏರಿಕೆಯ) ಬಾಂಬ್ ಹಾಕಬೇಡಿ. ನಿಮಗೆ ಈ ಬಾಂಬ್ ಹಾಕಬೇಕೆಂದಿದ್ದರೆ ಅಧಿಕಾರಿಗಳ ಮೇಲೆ ಹಾಕಿ, ಅವರಿಗೆ ನೀಡುವ ಸೌಲಭ್ಯಗಳನ್ನು ಕಡಿತಗೊಳಿಸಿ’ ಎಂದು ಆಗ್ರಹಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟಕ್ಕೆ ಮಿತಿ: ದ್ವಿಚಕ್ರ ವಾಹನಗಳಿಗೆ ದಿನಕ್ಕೆ ಕೇವಲ 2 ಲೀಟರ್ ಪೆಟ್ರೋಲ್

ಬಾಂಗ್ಲಾದೇಶ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ಮಿತಿಗಳನ್ನು ಹೇರಿದೆ. ರಾಜಧಾನಿ ಢಾಕಾ ಸೇರಿದಂತೆ ಹಲವು ನಗರಗಳಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ಉದ್ದನೆಯ ಸರತಿ ಸಾಲುಗಳು ಕಂಡುಬರುತ್ತಿದ್ದು, ಜನರು ಭೀತಿಯಿಂದ ಹೆಚ್ಚಿನ ತೈಲವನ್ನು ಖರೀದಿಸಿ ಸಂಗ್ರಹಿಸಲು ಮುಂದಾಗಿದ್ದಾರೆ. ಕಾಳಸಂತೆ ಮತ್ತು ವದಂತಿಗಳನ್ನು ತಡೆಯಲು ‘ಬಾಂಗ್ಲಾದೇಶ ಪೆಟ್ರೋಲಿಯಂ ಕಾರ್ಪೊರೇಷನ್’ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಈಗ ದ್ವಿಚಕ್ರ ವಾಹನಗಳಿಗೆ ದಿನಕ್ಕೆ ಕೇವಲ 2 ಲೀಟರ್ ಪೆಟ್ರೋಲ್ ಮಾತ್ರ ಸಿಗಲಿದೆ. ಖಾಸಗಿ ಕಾರುಗಳಿಗೆ ಗರಿಷ್ಠ 10 ಲೀಟರ್ ಮಿತಿ ನಿಗದಿಪಡಿಸಲಾಗಿದೆ, ಬಸ್ ಮತ್ತು ಟ್ರಕ್‌ಗಳಿಗೆ 70 ರಿಂದ 220 ಲೀಟರ್ ವರೆಗೆ ಮಿತಿ ವಿಧಿಸಲಾಗಿದೆ. ಪ್ರತಿಯೊಂದು ಪೆಟ್ರೋಲ್ ಬಂಕ್‌ನಲ್ಲಿ ರಸೀದಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಮತ್ತು ಹಿಂದಿನ ಖರೀದಿಯ ರಸೀದಿಯನ್ನು ತೋರಿಸದ ಹೊರತು ಹೊಸದಾಗಿ ಇಂಧನ ನೀಡಲಾಗುವುದಿಲ್ಲ. ಜನರು ಆತಂಕಕ್ಕೊಳಗಾಗಿ ತೈಲ ಸಂಗ್ರಹಣೆ ಮಾಡಬಾರದು ಎಂದು ಸರಕಾರವು ಮನವಿ ಮಾಡಿದೆ.

ಬಾಂಗ್ಲಾದೇಶದ ವಿನಂತಿಯ ಮೇರೆಗೆ ಭಾರತದಿಂದ 5 ಸಾವಿರ ಮೆಟ್ರಿಕ್ ಟನ್ ಡೀಸೆಲ್ ರವಾನೆ!

ಭಾರತದ ಮೇಲೆ ದ್ವೇಷ ಸಾಧಿಸುವ ಮತ್ತು ತನ್ನ ದೇಶದಲ್ಲಿ ಹಿಂದೂಗಳ ವಂಶಹತ್ಯೆ ಮಾಡುತ್ತಿರುವ ಬಾಂಗ್ಲಾದೇಶಕ್ಕೆ ಸಂಕಷ್ಟದ ಸಮಯದಲ್ಲಿ ಸಹಾಯಕ್ಕಾಗಿ ಭಾರತ ಮತ್ತು ಭಾರತದ ಹಿಂದೂ ಆಡಳಿತಗಾರರೇ ನೆನಪಾಗುತ್ತಾರೆ! ಇದನ್ನು ಬಳಸಿಕೊಂಡು ಭಾರತವು ಅಲ್ಲಿನ ಹಿಂದೂಗಳ ರಕ್ಷಣೆಗೆ ಒತ್ತಾಯಿಸುವುದು ಅತ್ಯಗತ್ಯವಾಗಿದೆ. ಇಲ್ಲದಿದ್ದರೆ ಬಾಂಗ್ಲಾದೇಶದ ಮತಾಂಧರು ಕೃತಘ್ನತೆಯನ್ನೇ ಮೆರೆಯುತ್ತಾರೆ ಎಂಬುದು ಇತಿಹಾಸ!

ಬಾಂಗ್ಲಾದೇಶದ ‘ಚಾನೆಲ್-24’ ವರದಿಯ ಪ್ರಕಾರ, ಬಾಂಗ್ಲಾದೇಶವು ಭಾರತದ ಸರಕಾರಿ ಸ್ವಾಮ್ಯದ ‘ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್’ ಮತ್ತು ಅಸ್ಸಾಂನ ‘ನುಮಾಲಿಗಢ್ ರಿಫೈನರಿ ಲಿಮಿಟೆಡ್’ ಸಂಸ್ಥೆಗಳಿಗೆ ಮುಂದಿನ 4 ತಿಂಗಳಲ್ಲಿ 50 ಸಾವಿರ ಟನ್ ಡೀಸೆಲ್ ಪೂರೈಸುವಂತೆ ವಿನಂತಿಸಿತ್ತು. ಇದರ ಬೆನ್ನಲ್ಲೇ ಭಾರತವು ಅಸ್ಸಾಂನ ನುಮಾಲಿಗಢ್ ರಿಫೈನರಿಯಿಂದ ಬಾಂಗ್ಲಾದೇಶಕ್ಕೆ 5 ಸಾವಿರ ಮೆಟ್ರಿಕ್ ಟನ್ ಡೀಸೆಲ್ ಅನ್ನು ಕಳುಹಿಸಿಕೊಟ್ಟಿದೆ.

ಬಾಂಗ್ಲಾದೇಶದ ಮಾಧ್ಯಮ ವರದಿಗಳ ಪ್ರಕಾರ, ಹಣಕಾಸು ಸಚಿವ ಅಮೀರ್ ಖೋಸ್ರು ಮಹಮೂದ್ ಚೌಧರಿ ಅವರು ಢಾಕಾದಲ್ಲಿ ಭಾರತದ ಹೈಕಮಿಷನರ್ ಪ್ರಣಯ್ ವರ್ಮಾ ಅವರೊಂದಿಗೆ ತೈಲ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಬಾಂಗ್ಲಾದೇಶವು ಮುಂದಿನ 4 ತಿಂಗಳಲ್ಲಿ ಬಾಂಗ್ಲಾದೇಶ-ಭಾರತ ಪೈಪ್‌ಲೈನ್ ಮೂಲಕ 50 ಸಾವಿರ ಮೆಟ್ರಿಕ್ ಟನ್ ಹೆಚ್ಚುವರಿ ಡೀಸೆಲ್ ಪೂರೈಸಲು ಅಧಿಕೃತ ವಿನಂತಿ ಸಲ್ಲಿಸಿತ್ತು. ಈ ಕುರಿತು ಪ್ರಣಯ ವರ್ಮಾ ಅವರು ‘ದಿ ಫೈನಾನ್ಷಿಯಲ್ ಎಕ್ಸ್‌ಪ್ರೆಸ್’ಗೆ ಪ್ರತಿಕ್ರಿಯಿಸಿ, ಬಾಂಗ್ಲಾದೇಶವು ಭಾರತದ ಅತ್ಯಂತ ಪ್ರಮುಖ ಮಿತ್ರ ರಾಷ್ಟ್ರವಾಗಿದ್ದು, ಅದರ ಪ್ರಗತಿಗಾಗಿ ನಾವು ಸಾಧ್ಯವಿರುವ ಎಲ್ಲಾ ಸಹಾಯವನ್ನು ಮಾಡಲು ಸಿದ್ಧವಿದ್ದೇವೆ, ಎಂದು ತಿಳಿಸಿದ್ದಾರೆ.