
ಕಲೆಗಳ ಆಧ್ಯಾತ್ಮಿಕ ಇತಿಹಾಸದ ಪ್ರಾಸ್ತಾವಿಕ !
ಇಲ್ಲಿ ಮುದ್ರಿತವಾಗುತ್ತಿರುವ ಲೇಖನಮಾಲೆಯಲ್ಲಿನ ಮುಂದಿನ ಕೆಲವು ಭಾಗದಲ್ಲಿ ನಾವು ‘ಗಾಯನ, ವಾದನ ನೃತ್ಯ ಮತ್ತು ನಾಟ್ಯ’ ಇದರ ಆಧ್ಯಾತ್ಮಿಕ ಇತಿಹಾಸವನ್ನು ನೋಡುತ್ತಿದ್ದೇವೆ. ಈ ಲೇಖನದಲ್ಲಿ ನಾವು ಭಾರತೀಯ ಕಲೆಗಳ ನಿರ್ಮಿತಿಯ ಬಗ್ಗೆ ತಿಳಿದುಕೊಳ್ಳೋಣ.
(ಲೇಖನ ೧೨)
ಹಿಂದಿನ ಲೇಖನ ಸಂಖ್ಯೆ ೧೧ ಓದಲು ಇಲ್ಲಿ ಲಿಂಕ್‌ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/172767.html
ಭಾರತೀಯ ಕಲೆಗಳಿಗೆ ಶಾಸ್ತ್ರೀಯ ಆಧಾರವನ್ನು ನೀಡುವ ಮಹಾನ ಋಷಿಮುನಿಗಳು !
ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ವೇದ ಮತ್ತು ಉಪನಿಷತ್ತುಗಳಿಂದ ಉತ್ಪನ್ನವಾಗಿರುವ ಭಾರತೀಯ ಸಂಗೀತಕ್ಕೆ ದೈವೀ ಅಧಿಷ್ಠಾನವಿದೆ. ಈ ಮಹಾನ ಪರಂಪರೆಯನ್ನು ವಿಕಾಸನಗೊಳಿಸಿದ ಋಷಿಪರಂಪರೆಯಲ್ಲಿ ನಾರದಮುನಿಗಳ, ಭರತಮುನಿಗಳ ಮತ್ತು ತಂಡುಮುನಿಗಳ ಸ್ಥಾನವು ಅತ್ಯಂತ ಮಹತ್ವದ್ದಾಗಿದೆ. ನಾರದಮುನಿಗಳು ಭಕ್ತಿಸಂಗೀತ ಮತ್ತು ನಾದಬ್ರಹ್ಮನ ಪ್ರಸಾರ ಮಾಡಿದರು. ತಂಡುಮುನಿಗಳು ಭಗವಾನ ಶಿವನ ತಾಂಡವ ನೃತ್ಯ ಪರಂಪರೆಗೆ ಶಾಸ್ತ್ರೀಯ ಸ್ವರೂಪವನ್ನು ನೀಡಿದರು ಮತ್ತು ಭರತಮುನಿಗಳು ‘ನಾಟ್ಯಶಾಸ್ತ್ರ’ ಎಂಬ ‘ಪಂಚಮವೇದ’ದ ಮಾಧ್ಯಮದಿಂದ ಸಂಗೀತ, ನೃತ್ಯ ಮತ್ತು ನಾಟಕಗಳನ್ನು ಒಟ್ಟುಗೂಡಿಸಿ ಶಾಸ್ತ್ರಬದ್ಧಗೊಳಿಸಿದರು. ಇಂತಹ ಮಹಾನ ಋಷಿಮುನಿಗಳು ತಮ್ಮ ಬರವಣಿಗೆಯಿಂದ ಮಾಡಿದ ಮಾರ್ಗದರ್ಶನದಿಂದಲೇ ಇಂದಿಗೂ ನಮಗೆ ಭಾರತೀಯ ಕಲೆಗಳಲ್ಲಿ ಸಾತ್ತ್ವಿಕತೆ ಕಂಡುಬರುತ್ತದೆ. ಈ ಋಷಿಮುನಿಗಳಿಂದಲೇ ಕಲೆಗಳಿಗೆ ಶಾಸ್ತ್ರಬದ್ಧ ಪರಂಪರೆ ಲಭಿಸಿದೆ. ಇಂದಿನ ಲೇಖನದಲ್ಲಿ ನಾವು ‘ನಾರದಮುನಿ, ತಂಡುಮುನಿ ಮತ್ತು ಭರತಮುನಿಗಳು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ನೀಡಿದ ಕೊಡುಗೆ’ಯ ಬಗ್ಗೆ ತಿಳಿದುಕೊಳ್ಳಲಿದ್ದೇವೆ.

೧. ಭಕ್ತಿಸತ್ಸಂಗದ ಆದಿ ಪ್ರವರ್ತಕ ನಾರದಮುನಿಗಳು
‘ನಾರದಮುನಿಗಳನ್ನು ಭಾರತೀಯ ಆಧ್ಯಾತ್ಮಿಕ ಪರಂಪರೆಯ ಸಂಗೀತದ ‘ಆದಿ ಉಪಾಸಕರು’, ‘ಪ್ರಚಾರಕರು’ ಮತ್ತು ‘ದೈವೀ ಸಂದೇಶವಾಹಕರು’ ಎಂದು ಪರಿಗಣಿಸಲಾಗುತ್ತದೆ. ಸಂಗೀತ ಪರಂಪರೆಯಲ್ಲಿ ನಾರದಮುನಿಗಳು ಕೇವಲ ಒಬ್ಬ ಋಷಿಗಳಾಗಿರದೇ ಸಂಗೀತವನ್ನು ಆಧ್ಯಾತ್ಮಿಕ ಶಿಖರದಲ್ಲಿ ಒಯ್ಯುವ ಮತ್ತು ಸಂಗೀತದ ಮಾಧ್ಯಮದಿಂದ ಭಕ್ತಿಪೂರ್ವಕ ಈಶ್ವರೀ ಗುಣಗಾನ ಮಾಡಲು ಕಲಿಸುವ ಮಹಾನ ದೇವತುಲ್ಯ ವಿಭೂತಿಗಳಾಗಿದ್ದಾರೆ. ಅವರಿಗೆ ‘ದೇವರ್ಷಿ’, ಎಂದಲೂ ಕರೆಯುತ್ತಾರೆ. ನಾರದಮುನಿಗಳು ಜ್ಞಾನ, ಭಕ್ತಿ ಮತ್ತು ಸಂಗೀತದ ತ್ರಿವೇಣಿ ಸಂಗಮವಾಗಿದ್ದಾರೆ. – ನಾರದ ಮುನಿಗಳಿಗೂ ಗಂಧರ್ವ ವಿದ್ಯೆಗೂ ಅವಿನಾಭಾವ ಸಂಬಂಧವಿದೆ. ಗಂಧರ್ವರನ್ನು ‘ದೈವೀ ಗಾಯಕರು’ ಎಂದು ಪರಿಗಣಿಸಲಾಗುತ್ತದೆ ಮತ್ತು ನಾರದಮುನಿಗಳು ಆ ದೈವೀ ಸಂಗೀತ ಪರಂಪರೆಯ ಮಾರ್ಗದರ್ಶಕರಾಗಿದ್ದಾರೆ.

೧ ಅ. ನಾರದಮುನಿಗಳು ಮತ್ತು ಭಕ್ತಿಸತ್ಸಂಗ : ನಾರದಮುನಿಗಳನ್ನು ‘ಭಕ್ತಿಸತ್ಸಂಗದ ಜನಕ’ರೆಂದು ಪರಿಗಣಿಸಲಾಗುತ್ತದೆ. ಅವರು ನಿರಂತರವಾಗಿ ಜಪಿಸುತ್ತಿರುವ ‘ನಾರಾಯಣ, ನಾರಾಯಣ’, ಈ ನಾಮಸ್ಮರಣೆಯು ನಮಗೆ ಭಗವದ್ಭಕ್ತಿಯ ಮಾರ್ಗವನ್ನು ತೋರಿಸುತ್ತದೆ.
೧ ಆ. ಯೋಗಮಾರ್ಗ ಮತ್ತು ನಾರದಮುನಿಗಳು ಜಪಿಸುವ ನಾಮಸ್ಮರಣೆ : ‘ಯೋಗಮಾರ್ಗದಲ್ಲಿ ಮನುಷ್ಯನ ‘ಇಡಾ’, ‘ಪಿಂಗಳಾ’ ಮತ್ತು ‘ಸುಷುಮ್ನಾ’, ಹೀಗೆ ೩ ನಾಡಿಗಳನ್ನು ಹೇಳಿದ್ದಾರೆ. ‘ಸಾಧಕನ ಸುಷುಮ್ನಾ ನಾಡಿ ಪ್ರಾರಂಭವಾಗುವುದು’, ಅಂದರೆ ‘ಸಾಧಕನ ಪ್ರವಾಸವು ಈಶ್ವರಪ್ರಾಪ್ತಿಯ ದಿಶೆಯಿಂದ ಅಥವಾ ಕುಂಡಲಿನೀಯ ಪ್ರವಾಸವು ಊರ್ಧ್ವ ದಿಶೆಯಿಂದ ಪ್ರಾರಂಭವಾಗುವುದು, ಎಂದರ್ಥ. ನಾರದಮುನಿಗಳು ‘ನಾರಾಯಣ, ನಾರಾಯಣ’, ಹೀಗೆ ೨ ಬಾರಿ ಹೇಳುತ್ತಾರೆ. ಅವರು ೨ ಬಾರಿ ‘ನಾರಾಯಣ’ ಎಂದು ನಾಮ ಸ್ಮರಿಸಿದುದರಿಂದ ಸಹಜವಾಗಿ ಇಡಾ ಮತ್ತು ಪಿಂಗಳಾ ಈ ನಾಡಿಗಳಿಂದ ನೇರವಾಗಿ ಅವರ ಪ್ರಾಣಶಕ್ತಿವಹನದ ಪ್ರವಾಸವಾಗುತ್ತಿತ್ತು. ‘ನಾರಾಯಣ’, ‘ನಾರಾಯಣ’ ಎಂಬ ನಾಮಸ್ಮರಣೆಯಿಂದ ಅವರು ಸಹಜವಾಗಿ ಸುಷುಮ್ನಾ ನಾಡಿಯಲ್ಲಿ ಸ್ಥಿರವಾಗಿ ಭಗವಂತನ ಅನುಸಂಧಾನದಲ್ಲಿರುತ್ತಿದ್ದರು.’
– ಪ.ಪೂ. ದೇವಬಾಬಾ, ಸಂಸ್ಥಾಪಕರು, ಶಕ್ತಿದರ್ಶನ ಯೋಗಾಶ್ರಮ, ಕಿನ್ನಿಗೋಳಿ, ಕರ್ನಾಟಕ.
೧ ಇ. ನಾರದಮುನಿಗಳ ವೀಣೆ : ನಾರದಮುನಿಗಳ ಕೈಯಲ್ಲಿ ಯಾವಾಗಲೂ ವೀಣೆ ಇರುತ್ತದೆ. ಅವರ ವೀಣೆಯು ‘ಮಹತಿ’, ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ.
೨. ಭಗವಾನ ನಟರಾಜನ ಪ್ರಿಯ ಶಿಷ್ಯ ‘ತಂಡು’ ಅಂದರೆ ‘ತಂಡುಮುನಿಗಳು’
೨ ಅ. ತಂಡುಮುನಿ ಮತ್ತು ನೃತ್ಯ : ಭಾರತೀಯ ನೃತ್ಯ ಪರಂಪರೆಯಲ್ಲಿ ತಂಡುಮುನಿಗಳ ಸ್ಥಾನವು ಅತ್ಯಂತ ಮಹತ್ವ ದ್ದಾಗಿದೆ. ಅವರನ್ನು ‘ಭಗವಾನ ಶಿವನ ತಾಂಡವ ನೃತ್ಯ ಪರಂಪರೆಯ ಮೊದಲನೇ ಶಾಸ್ತ್ರೀಯ ಪ್ರವರ್ತಕರು’ ಎಂದು ಪರಿಗಣಿಸಲಾಗುತ್ತದೆ. ಈ ತಾಂಡವ ನೃತ್ಯದ ಪ್ರಸಾರದಲ್ಲಿ ತಂಡುಮುನಿಗಳ ಹೆಸರು ಅಗ್ರಗಣ್ಯವಾಗಿದೆ.

೨ ಆ. ಭಗವಾನ ಶಿವ ಮತ್ತು ತಂಡುಮುನಿ : ಭಗವಾನ ನಟರಾಜನ ಪ್ರಳಯಕಾರಿ; ಆದರೆ ಸತ್-ಚಿತ್-ಆನಂದದ ಅನುಭೂತಿಯನ್ನು ನೀಡುವ ನೃತ್ಯವೆಂದರೆ ‘ತಾಂಡವ’, ‘ತಾಂಡವ ನೃತ್ಯದ ಆದಿ (ಪ್ರಥಮ) ಶಿಷ್ಯರು’ ಎಂದು ತಂಡುಮುನಿಗಳ ಉಲ್ಲೇಖ ಕಂಡುಬರುತ್ತದೆ. ‘ತಂಡು’ ಎಂಬ ಹೆಸರಿನಿಂದ ಈ ನೃತ್ಯಕ್ಕೆ ‘ತಾಂಡವ’ ಎಂಬ ಹೆಸರು ಬಂದಿರಬೇಕು. ಭಗವಾನ ಶಿವನ ಆಜ್ಞೆಗನುಸಾರ ತಂಡುಮುನಿಗಳು ಭರತಮುನಿಗಳಿಗೆ ನೃತ್ಯದಲ್ಲಿನ ಭಾಗವನ್ನು ಕಲಿಸಿರುವ ವರ್ಣನೆಯು ನಾಟ್ಯಶಾಸ್ತ್ರದಲ್ಲಿದೆ.
ನಾಟ್ಯಶಾಸ್ತ್ರದ ನಾಲ್ಕನೇ ಅಧ್ಯಾಯದಲ್ಲಿ ‘ತಾಂಡವಲಕ್ಷಣಮ್’ ದಲ್ಲಿ ತಂಡುಮುನಿಗಳ ಉಲ್ಲೇಖ ಕಂಡುಬರುತ್ತದೆ.
ಪ್ರಯೋಗಮಙ್ಗಹಾರಾಣಾಮಾಚಕ್ಷ್ವ ಸುರಸತ್ತಮ |
ತತಸ್ತಣ್ಡುಂ ಸಮಾಹೂಯ ಪ್ರೋಕ್ತವಾನ್ ಭುವನೇಶ್ವರಃ ||
– ನಾಟ್ಯಶಾಸ್ತ್ರ, ಅಧ್ಯಾಯ ೪, ಶ್ಲೋಕ ೧೭
ಪ್ರಯೋಗಮಙ್ಗಹಾರಾಣಾಮಾಚಕ್ಷ್ವ ಭರತಾಯ ವೈ |
ತತೋ ಯೇ ತಣ್ಡುನಾ ಪ್ರೋಕ್ತಾಃ ತು ಅಙ್ಗಹಾರಾಃ ಮಹಾತ್ಮನಾ || – ನಾಟ್ಯಶಾಸ್ತ್ರ, ಅಧ್ಯಾಯ ೪, ಶ್ಲೋಕ ೧೮
ನಾನಾಕರಣಸಂಯುಕ್ತಾನ್ ವ್ಯಾಖ್ಯಾಸ್ಯಾಮಿ ಸರೇಚಕಾನ್ |
– ನಾಟ್ಯಶಾಸ್ತ್ರ, ಅಧ್ಯಾಯ ೪, ಶ್ಲೋಕ ೧೯
ಅರ್ಥ : (ಬ್ರಹ್ಮದೇವನು ಭಗವಾನ ಶಂಕರನಲ್ಲಿ ವಿನಂತಿಸಿದನು,)
‘ಹೇ ದೇವಾಧಿದೇವಾ, ಅಂಗಹಾರಗಳ (ನೃತ್ಯಭಂಗಿ) ಪ್ರಯೋಗದ ಬಗ್ಗೆ ಹೇಳಿ.’ ಆಗ ತ್ರಿಭುವನಾಧಿಪತಿ ಭಗವಾನ ಶಿವನು ತಂಡುಮುನಿಗಳನ್ನು ಕರೆದು, “ಭರತಮುನಿಗಳಿಗೆ ಅಂಗಹಾರಗಳ ಪ್ರಯೋಗದ ಬಗ್ಗೆ ತಿಳಿಸಿ,” ಎಂದು ಹೇಳಿದರು. ಆಗ ತಂಡುಮುನಿಗಳು ವಿವಿಧ ಕರಣಗಳು (ಟಿಪ್ಪಣಿ ೧) ಮತ್ತು ರೇಚಕ (ಟಿಪ್ಪಣಿ ೩)ಗಳಿಂದ ಕೂಡಿದ ಯಾವ ಅಂಗಹಾರಗಳನ್ನು ಹೇಳಲಾಗಿದೆಯೋ ಅವುಗಳನ್ನು ನಾನು ವ್ಯಾಖ್ಯಾನಿಸುತ್ತೇನೆ ಎಂದು ಹೇಳಿದರು.
ಟಿಪ್ಪಣಿ ೧ – ಕರಣ : ನೃತ್ಯದಲ್ಲಿ ವೇಗವಾದ ನೃತ್ಯ (ಟಿಪ್ಪಣಿ ೨)
ಮತ್ತು ವಿಲಾಸಪೂರ್ಣ ಪದನ್ಯಾಸಾದಿ ಚಲನೆ (ಕಾಲುಗಳ ಲಾಲಿತ್ಯಪೂರ್ಣ ಚಲನೆ)ಗಳಿಗೆ ‘ಕರಣ’, ಎಂದು ಕರೆಯುತ್ತಾರೆ. ‘ಈ ಕರಣಗಳು ಸಾಕ್ಷಾತ್ ಶಿವನ ತಾಂಡವ ನೃತ್ಯದಿಂದ ನಿರ್ಮಿತಿಯಾಗಿವೆ’, ಎಂದು ಭರತಮುನಿಗಳು ನಾಟ್ಯಶಾಸ್ತ್ರದಲ್ಲಿ ಹೇಳಿದ್ದಾರೆ.
ಟಿಪ್ಪಣಿ ೨ – ನೃತ್ತ : ನರ್ತನದಲ್ಲಿ ನೃತ್ತ, ನಾಟಕ ಮತ್ತು ನೃತ್ಯ ಹೀಗೆ ಮೂರು ವಿಧಗಳಿವೆ. ನೃತ್ತವೆಂದರೆ ಭಾವ ಮತ್ತು ಅಭಿನಯ ವಿರಹಿತ ತಾಲ-ಲಯಗಳೊಂದಿಗೆ ಸಮನ್ವಯ ಸಾಧಿಸಿ ಅಂಗಾಂಗಗಳ ಚಲನೆ ಮತ್ತು ಪದನ್ಯಾಸವನ್ನು ಒಟ್ಟಿಗೆ ಮಾಡುವುದು.
ಟಿಪ್ಪಣಿ ೩ – ರೇಚಕ : ‘ವಿವಿಧ ಕ್ರಿಯೆಗಳಿಂದ ಅಂಗಾಂಗಗಳನ್ನು ಬಳುಕಿಸುವುದು’, ಇದಕ್ಕೆ ‘ರೇಚಿತ’, ಎಂಬ ಹೆಸರನ್ನು ನೀಡಲಾಗಿದೆ. ‘ಮೇಲೆ ಎತ್ತುವುದು’, ‘ವಿವಿಧ ಕ್ರಿಯೆಗಳನ್ನು ಮಾಡುವುದು’ ಮತ್ತು ‘ಚಲನೆ ಮಾಡುವುದು’, ಇವುಗಳಿಂದಾಗಿಯೂ ಆ ಚಲನೆಗಳಿಗೆ ‘ರೇಚಕ’, ಎನ್ನಲಾಗುತ್ತದೆ.’
(ಆಧಾರ : ನಾಟ್ಯಶಾಸ್ತ್ರ, ಅಧ್ಯಾಯ ೪, ಶ್ಲೋಕ ೨೪೮)
೩. ನಾಟ್ಯಶಾಸ್ತ್ರದ ರಚನಾಕಾರ ಭರತಮುನಿಗಳು
ಅ. ಬ್ರಹ್ಮದೇವನು ಪಂಚಮ ವೇದ, ಅಂದರೆ ‘ನಾಟ್ಯವೇದ’ವನ್ನು ರಚಿಸಿ ಅದನ್ನು ಭರತಮುನಿಗಳಿಗೆ ನೀಡಿದನು. ಭರತಮುನಿಗಳು ಈ ನಾಟ್ಯವೇದವನ್ನು ಶಾಸ್ತ್ರೋಕ್ತವಾಗಿ ರಚಿಸಿ ‘ನಾಟ್ಯಶಾಸ್ತ್ರ’, ಎಂಬ ಗ್ರಂಥವನ್ನು ಬರೆದರು. ನಾಟ್ಯಶಾಸ್ತ್ರದಲ್ಲಿ ಒಟ್ಟು ೩೬ ಅಧ್ಯಾಯಗಳಿದ್ದು ೬,೦೦೦ ಶ್ಲೋಕಗಳಿವೆ.
ಆ. ಭರತಮುನಿಗಳ ‘ರಸ ಸಿದ್ಧಾಂತ’ವು ಪ್ರಸಿದ್ಧವಾಗಿದೆ. ದೃಶ್ಯವನ್ನು ನೋಡುವಾಗ ನಾವು ಅಂತರ್ಮನಸ್ಸಿನಿಂದ ಏನು ಅನುಭವಿಸುತ್ತೇವೆಯೋ ಅದು ‘ರಸ’ವಾಗಿದೆ. ಭರತಮುನಿಗಳು ನಾಟ್ಯಶಾಸ್ತ್ರದಲ್ಲಿ ಅಷ್ಟರಸಗಳ ಪರಿಕಲ್ಪನೆಗಳನ್ನು ನೀಡಿದ್ದಾರೆ.
ಭರತಮುನಿಗಳು ನಾಟ್ಯಶಾಸ್ತ್ರದಲ್ಲಿ ‘ನೃತ್ಯ ಮತ್ತು ನಾಟ್ಯ ಈ ರಸನಿಷ್ಪತ್ತಿಗಾಗಿ ಭಾವ ಮತ್ತು ಅಭಿಯನದ ಮುಖ್ಯ ವಿಧಗಳು’, ಇವುಗಳ ಬಗ್ಗೆ ಶಾಸ್ತ್ರೋಕ್ತವಾದ ವಿವರಣೆಯನ್ನು ನೀಡಿದ್ದಾರೆ, ಹಾಗೆಯೇ ‘ಆದರ್ಶ ನಾಟ್ಯಗೃಹವು ಹೇಗಿರಬೇಕು ? ಅದರ ಪರಿಣಾಮ ಹೇಗಿರಬೇಕು ? ನಾಟ್ಯಗೃಹದ ವಿಧಗಳು’, ಈ ವಿಷಯಗಳ ಬಗ್ಗೆಯೂ ವರ್ಣಿಸಲಾಗಿದೆ.
ಇ. ಭರತಮುನಿಗಳು ರಚಿಸಿದ ‘ನಾಟ್ಯಶಾಸ್ತ್ರ’ವು ಒಂದು ಪರಿಪೂರ್ಣ ಗ್ರಂಥವಾಗಿದ್ದು ನಾಟಕದ ಜೊತೆಗೆ ಭಾರತೀಯ ಶಾಸ್ತ್ರೀಯ ನೃತ್ಯದ ಎಂಟೂ ಶೈಲಿಗಳಿಗಾಗಿ ಇದು ಆಧಾರಸ್ತಂಭ ಗ್ರಂಥವಾಗಿದೆ. ‘ನಾಟ್ಯಶಾಸ್ತ್ರ’ಗಳಂತಹ ಮಹಾನ ಗ್ರಂಥವನ್ನು ರಚಿಸಿ ಭರತಮುನಿಗಳು ನೃತ್ಯ ಮತ್ತು ನಾಟ್ಯ ಈ ಕಲೆಗಳ ಸಂಪೂರ್ಣ ಸಾರಾಂಶವನ್ನು ಮನುಕುಲಕ್ಕೆ ನೀಡಿ ‘ಕಲೆಯ ಮಾಧ್ಯಮದಿಂದ ಈಶ್ವರಪ್ರಾಪ್ತಿ’ಯ ಉಪದೇಶವನ್ನು ನೀಡಿದ್ದಾರೆ.
ಸಾರಾಂಶ : ಮೇಲಿನ ಉದಾಹರಣೆಯಿಂದ ಗಮನಕ್ಕೆ ಬರುವ ಅಂಶವೆಂದರೆ, ಪ್ರಾಚೀನ ಕಾಲದಿಂದಲೂ ಗಾಯನ, ವಾದನ ಮತ್ತು ನೃತ್ಯಗಳಿಗೆ ಶಾಸ್ತ್ರದ ಆಧಾರ ಸಿಕ್ಕಿರುವುದರ ಹಿಂದೆ ಮಹಾನ ಋಷಿಮುನಿಗಳ ಕೊಡುಗೆಯಿದೆ. ಋಷಿಮುನಿಗಳ ಉಚ್ಚ ಭಗವದ್ಭಕ್ತಿಯಿಂದಲೇ ಅವರು ಕಲೆಗಳನ್ನು ಈಶ್ವರೀ ಆರಾಧನೆಯ ಒಂದು ಮಾಧ್ಯಮವನ್ನಾಗಿ ಮಾಡಿದರು. ಋಷಿಮುನಿಗಳಿಂದಲೇ ಇದುವರೆಗೆ ಭಾರತೀಯ ಗಾಯನ, ವಾದನ, ನೃತ್ಯ ಮತ್ತು ನಾಟಕ ಈ ಕಲೆಗಳನ್ನು ‘ಶಾಸ್ತ್ರೀಯ ಕಲೆಗಳು’ ಎಂದು ಗೌರವಿಸಲಾಗುತ್ತಿದೆ. ‘ಇಂತಹ ಋಷಿಮುನಿಗಳ ಪರಂಪರೆ ದೊರಕಿರುವುದು’, ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವಾಗಿದೆ. ಅದಕ್ಕಾಗಿ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಆಗಿದೆ.’
ಸಂಗ್ರಹಕಾರರು : ಕು. ಅಪಾಲಾ ಔಂಧಕರ (ಆಧ್ಯಾತ್ಮಿಕ ಮಟ್ಟ ಶೇ. ೬೦, ವಯಸ್ಸು ೧೮ ವರ್ಷ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ. (೩.೧.೨೦೨೬)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !