ಯುದ್ಧ ನಿಲ್ಲಿಸಲು ನಾವು ಸಿದ್ಧರಿದ್ದೇವೆ ! – ಇರಾನ್

ಚರ್ಚೆಯ ಸಮಯ ಈಗ ಮೀರಿದೆ ! – ಟ್ರಂಪ್ ಪ್ರತ್ಯುತ್ತರ

ಮುಖ್ಯಾಂಶಗಳು

• ಅಮೇರಿಕಾದಿಂದ ಇರಾನ್‌ ನ ೧೭ ಯುದ್ಧನೌಕೆ ಮತ್ತು ೧ ಜಲಾಂತರ್ಗಾಮಿ ಧ್ವಂಸ

• ಇರಾನ್‌ ನಿಂದ ಬಹ್ರೇನ್ ಮೇಲೆ ೭೩ ಕ್ಷಿಪಣಿ ಮತ್ತು ೯೧ ಡ್ರೋನ್, ಸಂಯುಕ್ತ ಅರಬ್ ಎಮಿರೇಟ್ಸ್ ಮೇಲೆ ೧೮೬ ಕ್ಷಿಪಣಿ ಮತ್ತು ೮೧೨ ಡ್ರೋನ್‌ ಗಳ ಮೂಲಕ ದಾಳಿ

• ೫ ದಿನಗಳಲ್ಲಿ ಅಮೇರಿಕಾದಿಂದ ೨ ಸಾವಿರ ಸ್ಥಳಗಳ ಮೇಲೆ ದಾಳಿ

• ದುಬೈನಲ್ಲಿರುವ ಅಮೇರಿಕಾ ರಾಯಭಾರಿ ಕಚೇರಿಯ ಮೇಲೆ ದಾಳಿ

• ಅಮೇರಿಕಾದ ೬೫೦ ಸೈನಿಕರು ಹತರಾಗಿದ್ದಾರೆಂದು ಇರಾನ್ ದಾವೆ, ಇರಾನ್‌ ನಲ್ಲಿ ೧ ಸಾವಿರದ ೧೦೦ ಜನರ ಸಾವು

• ಫ್ರಾನ್ಸನಿಂದ ಸಂಯುಕ್ತ ಅರಬ್ ಎಮಿರೇಟ್ಸ್ ನೆಲೆಯಲ್ಲಿ ರಾಫೆಲ್ ಯುದ್ಧ ವಿಮಾನಗಳ ನೇಮಕ

• ಖತಾರ್‌ ನಿಂದ ಇರಾನಿ ಸೈನ್ಯದ ೧೦ ಗೂಢಚಾರರ ಬಂಧನ

• ಅಮೇರಿಕಾದಿಂದ ಸೌದಿ ಅರೇಬಿಯಾ, ಇಸ್ರೇಲ್, ಜೋರ್ಡಾನ್, ಬಹ್ರೇನ್, ಇರಾಕ್, ಓಮನ್ ಸೇರಿದಂತೆ ೧೪ ದೇಶಗಳಲ್ಲಿರುವ ಸರಕಾರಿ ಉದ್ಯೋಗಿಗಳು ಮತ್ತು ಅವರ ಕುಟುಂಬದವರಿಗೆ ದೇಶ ತೊರೆಯುವಂತೆ ಆದೇಶ

ಟೆಹರಾನ (ಇರಾನ್) / ವಾಷಿಂಗ್ಟನ್ ಡಿ.ಸಿ. (ಅಮೇರಿಕಾ) – ಇರಾನ್‌ ನ ಹತನಾದ ಸರ್ವೋಚ್ಚ ನಾಯಕ ಖಮೇನಿಯವರ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಅವರು ‘ಎ.ಎನ್.ಐ.’(ಏಶಿಯನ್ ನ್ಯೂಸ ಇಂಟರನ್ಯಾಶನಲ್) ವಾರ್ತಾ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ನಾವು ಯುದ್ಧ ನಿಲ್ಲಿಸಲು ಸಿದ್ಧರಿದ್ದೇವೆ. ನಾವು ಚರ್ಚೆಗೂ ಸಿದ್ಧರಿದ್ದೇವೆ; ಆದರೆ ಚರ್ಚೆಯು ಗೌರವಯುತವಾಗಿರಬೇಕು; ಇರಾನ್ ವಿರುದ್ಧ ಆದೇಶ ನೀಡಲು ಅಲ್ಲ. ನಾವು ಆತ್ಮರಕ್ಷಣೆ ಮಾಡಿಕೊಳ್ಳುತ್ತಿದ್ದೇವೆ, ನಾವು ನಮ್ಮ ಅಧಿಕಾರವನ್ನು ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ. ಇಲಾಹಿ ಅವರ ಈ ಮನವಿಗೆ ಉತ್ತರಿಸಿದ ಅಮೇರಿಕಾ ಅಧ್ಯಕ್ಷ ಟ್ರಂಪ್, ಇರಾನ್‌ ನೊಂದಿಗೆ ಚರ್ಚೆ ನಡೆಸುವ ಸಮಯ ಈಗ ಮೀರಿದೆ. ಇಸ್ರೇಲ್ ನಮ್ಮ ಬಳಿ ಸಹಾಯ ಕೇಳಿರಲಿಲ್ಲ, ನಾವೇ ಅವರ ಸಹಾಯಕ್ಕೆ ಬಂದಿದ್ದೇವೆ; ಏಕೆಂದರೆ ಇರಾನ್ ಆಕ್ರಮಣ ಮಾಡಲಿದೆ ಎಂಬ ಮಾಹಿತಿ ನಮ್ಮ ಬಳಿ ಇತ್ತು, ಎಂದು ಹೇಳಿದರು.

ಮೊಜತಾಬ ಖಮೇನಿ ನೂತನ ಧಾರ್ಮಿಕ ಮುಖ್ಯಸ್ಥ

ಅಮೇರಿಕಾ ಮತ್ತು ಇಸ್ರೇಲ್ ಆಕ್ರಮಣದಲ್ಲಿ ಇರಾನ್‌ ನ ಶಿಯಾ ಮುಸಲ್ಮಾನರ ಸರ್ವೋಚ್ಚ ಧರ್ಮಗುರು ಆಯತೊಲ್ಲಾ ಖಮೇನಿ ಹತರಾದ ನಂತರ, ಈಗ ಇರಾನ್ ಖಮೇನಿಯವರ ಕಿರಿಯ ಪುತ್ರ ಮೊಜತಾಬ ಖಮೇನಿಯನ್ನು ಅಧಿಕೃತವಾಗಿ ಪ್ರಮುಖ ಧರ್ಮಗುರು ಎಂದು ನೇಮಕ ಮಾಡಿದೆ ಎಂಬ ಸುದ್ದಿ ಪ್ರಸಾರವಾಗಿದೆ. ಆದಾಗ್ಯೂ, ಮುಂಬಯಿಯಲ್ಲಿರುವ ಇರಾನ್ ರಾಯಭಾರಿ ಕಚೇರಿಯು ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ‘ಇನ್ನೂ ಯಾರನ್ನೂ ನೇಮಕ ಮಾಡಿಲ್ಲ’ ಎಂದು ಸ್ಪಷ್ಟೀಕರಣ ನೀಡಿದೆ. ವಿಶೇಷವೆಂದರೆ ಈ ನೇಮಕಾತಿಗಾಗಿ ಸಭೆ ನಡೆಯುತ್ತಿದ್ದಾಗಲೂ ಇಸ್ರೇಲ್ ಮತ್ತು ಅಮೇರಿಕಾದಿಂದ ಆಕ್ರಮಣ ಮಾಡಲಾಗಿದೆ. ಈ ಸಭೆಯು ಟೆಹರಾನ್‌ ನಿಂದ ಸುಮಾರು ೧೩೦ ಕಿ.ಮೀ. ದಕ್ಷಿಣಕ್ಕೆ ಇರುವ ಕೋಮ್ ನಗರದ ‘ಮಜ್ಲಿಸ್-ಎ-ಖೋಬ್ರೆಗಾನ್’ ಕಟ್ಟಡದಲ್ಲಿ ಆಯೋಜಿಸಲಾಗಿತ್ತು. ಈ ಕಟ್ಟಡದ ಮೇಲೆ ದಾಳಿ ಮಾಡಿ ಅದನ್ನು ಧ್ವಂಸಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಭೆಯಲ್ಲಿ ೮೮ ಧಾರ್ಮಿಕ ನಾಯಕರು ಉಪಸ್ಥಿತರಿದ್ದರು. ಇವರಲ್ಲಿ ಎಷ್ಟು ಮಂದಿ ಹತರಾಗಿದ್ದಾರೆ ? ಅಥವಾ ಎಷ್ಟು ಹಾನಿಯಾಗಿದೆ ?, ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಇರಾನ್ ಯುದ್ಧ ನಿಲ್ಲಿಸುವುದಕ್ಕಾಗಿಯೇ ಕೊಲ್ಲಿ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡುತ್ತಿದೆ ! – ಕೆ.ಪಿ. ಫಾಬಿಯಾನ್, ಇರಾನ್‌ ನಲ್ಲಿನ ಭಾರತದ ಮಾಜಿ ರಾಯಭಾರಿ

ಇರಾನ್‌ ನಲ್ಲಿನ ಭಾರತದ ಮಾಜಿ ರಾಯಭಾರಿ ಕೆ.ಪಿ. ಫಾಬಿಯಾನ್ ಅವರು, ಇರಾನ್ ಅರಬ್ ದೇಶಗಳ ಮೇಲೆ ನಡೆಸುತ್ತಿರುವ ದಾಳಿಗಳು ಅಮೇರಿಕಾ ಮತ್ತು ಇಸ್ರೇಲ್ ಯುದ್ಧ ನಿಲ್ಲಿಸುವಂತೆ ಒತ್ತಡ ಹೇರಲು ಮಾಡುತ್ತಿವೆ. ಒಂದು ವೇಳೆ ಈ ದೇಶಗಳ ಮೇಲಿನ ದಾಳಿಗಳು ನಿಲ್ಲದಿದ್ದರೆ, ಅವುಗಳ ಸಂಪೂರ್ಣ ಆರ್ಥಿಕತೆಯು ಕುಸಿಯಲಿದೆ. ಹೊರ್ಮುಜ್ ಜಲಸಂಧಿಯ ಮಾರ್ಗವನ್ನು ಬಂದ್ ಮಾಡುವುದು ಇರಾನ್‌ ನ ನಿರ್ಣಾಯಕ ಆಘಾತ (ಮಾಸ್ಟರ್‌ಸ್ಟ್ರೋಕ್) ಆಗಿದೆ. ಇದರಿಂದಾಗಿ ತೈಲ ಬೆಲೆಗಳು ಗಗನಕ್ಕೇರಲಿವೆ. ಇರಾನ್ ತನ್ನ ಕ್ಷಿಪಣಿಗಳ ಸಂಗ್ರಹವನ್ನು ಅತಿ ಜಾಗರೂಕತೆಯಿಂದ ಕಾಯ್ದಿರಿಸಿದ್ದು, ಅದು ದೀರ್ಘಕಾಲದ ಯುದ್ಧಕ್ಕೆ ಸನ್ನದ್ಧವಾಗಿದೆ

ಅಮೇರಿಕಾದ ಕ್ಷಿಪಣಿಗಳ ಸಂಗ್ರಹದಲ್ಲಿ ಇಳಿಕೆ !

ಅಮೇರಿಕಾದ ರಕ್ಷಣಾ ಇಲಾಖೆ ‘ಪೆಂಟಗನ್’ ಮಾಹಿತಿಯ ಪ್ರಕಾರ, ಮುಂದಿನ ೧೦ ದಿನಗಳವರೆಗೆ ಆಕ್ರಮಣ ಮುಂದುವರಿದರೆ ಅಮೇರಿಕಾದ ಕ್ಷಿಪಣಿಗಳ ಸಂಗ್ರಹವು ಗಮನಾರ್ಹವಾಗಿ ಕಡಿಮೆಯಾಗಬಹುದು. ಹಿರಿಯ ಅಮೇರಿಕನ್ ಅಧಿಕಾರಿಯೊಬ್ಬರ ಉಲ್ಲೇಖವಿರುವ ವರದಿಯಲ್ಲಿ, ಅಮೇರಿಕಾದ ಬಳಿ ‘ಟೊಮಾಹಾಕ್’ ಕ್ಷಿಪಣಿಗಳು ಮತ್ತು ‘ಎಸ್ಎಮ್-೩ ಇಂಟರಸೆಪ್ಟರ್’ ಸೇರಿದಂತೆ ಪ್ರಮುಖ ಕ್ಷಿಪಣಿ ವ್ಯವಸ್ಥೆಗಳ ಕೊರತೆ ಮೊದಲೇ ಇತ್ತು ಎಂದು ಹೇಳಲಾಗಿದೆ. ಕ್ಷಿಪಣಿಗಳ ಸಂಗ್ರಹದಲ್ಲಿ ಸತತವಾಗಿ ಇಳಿಕೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಮುಂದಿನ ೨೪ ಗಂಟೆಗಳಲ್ಲಿ ಆಕ್ರಮಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ರಷ್ಯಾ ವಿರುದ್ಧದ ೪ ವರ್ಷಗಳ ಸಂಘರ್ಷದಲ್ಲಿ ಉಕ್ರೇನ್‌ ನ ವಾಯು ರಕ್ಷಣಾ ಪಡೆಗಳು ಅಮೇರಿಕಾದ ಶಸ್ತ್ರಾಸ್ತ್ರ ಸಂಗ್ರಹವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಸಿದ್ದರಿಂದ ಈ ಸ್ಥಿತಿ ನಿರ್ಮಾಣವಾಗಿದೆಯೆಂದು ಹೇಳಲಾಗುತ್ತಿದೆ. ಹಿಂದಿನ ಸಂಘರ್ಷದಲ್ಲಿ ಅಮೇರಿಕಾ ಸುಮಾರು ಶೇ. ೨೫ ರಷ್ಟು ಶಸ್ತ್ರಾಸ್ತ್ರ ಸಂಗ್ರಹವನ್ನು ಬಳಸಿತ್ತು ಎಂದು ಹೇಳಲಾಗುತ್ತದೆ. ಯುದ್ಧನೌಕೆಗಳಲ್ಲಿ ನಿಯೋಜಿಸಲಾದ ಅನೇಕ ಕ್ಷಿಪಣಿಗಳು ಈಗಾಗಲೇ ಖಾಲಿಯಾಗಿವೆ. ಇರಾನ್ ಪ್ರತಿ ತಿಂಗಳು ೧೦೦ ಕ್ಕಿಂತ ಹೆಚ್ಚು ಕ್ಷಿಪಣಿಗಳನ್ನು ಉತ್ಪಾದಿಸುತ್ತಿದ್ದರೆ, ಅಮೇರಿಕಾ ಕೇವಲ ೬-೭ ಕ್ಷಿಪಣಿಗಳನ್ನು ಮಾತ್ರ ತಯಾರಿಸುತ್ತಿದೆ.

ಕಚ್ಚಾ ತೈಲ ಬೆಲೆಯಲ್ಲಿ ಸತತ ಏರಿಕೆಯಾಗುತ್ತಿದೆ !

ಯುದ್ಧದ ಕೇವಲ ೪ ದಿನಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಶೇ. ೧೪ ರಷ್ಟು ಏರಿಕೆಯಾಗಿದೆ. ಇರಾನ್ ‘ಹೊರ್ಮುಜ್ ಜಲಸಂಧಿ’ಯನ್ನು ಬಂದ್ ಮಾಡಿದ್ದರಿಂದ ಅಲ್ಲಿಂದ ನಡೆಯುತ್ತಿದ್ದ ತೈಲ ಸಾಗಾಟವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ಕಚ್ಚಾ ತೈಲದ ಬೆಲೆಯಲ್ಲಿ ಪ್ರತಿ ಬ್ಯಾರೆಲ್‌ ಗೆ ತಕ್ಷಣವೇ ೧೫ ಡಾಲರ್‌ ಗಳಷ್ಟು ಹೆಚ್ಚಳವಾದರೆ, ದೇಶದ ವಿತ್ತೀಯ ಕೊರತೆಯು ನಿಯಂತ್ರಣ ತಪ್ಪಬಹುದು. ಆದಾಗ್ಯೂ, ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಪುರಿ ಅವರು ಭಾರತದ ಬಳಿ ಇಂಧನದ ಇತರ ಮೂಲಗಳಿವೆ ಎಂದು ದಾವೆ ಮಾಡಿದ್ದಾರೆ.

ಭಾರತದ ಬಳಿ ೪೫ ದಿನಗಳ ತೈಲ ಸಂಗ್ರಹ !

ಭಾರತದ ಬಳಿ ತುರ್ತು ಪೂರೈಕೆಗಾಗಿ ಅಧಿಕೃತವಾಗಿ ಸುಮಾರು ೨೫ ದಿನಗಳ ತೈಲ ಸಂಗ್ರಹವು ಲಭ್ಯವಿದೆ. ವಾಣಿಜ್ಯ ಮತ್ತು ವ್ಯೂಹಾತ್ಮಕ ಸಂಗ್ರಹವನ್ನು ಒಟ್ಟಾಗಿ ಪರಿಗಣಿಸಿದರೆ, ಸುಮಾರು ೪೦ ರಿಂದ ೪೫ ದಿನಗಳವರೆಗೆ ಸಾಕಾಗುವಷ್ಟು ತೈಲ ದಾಸ್ತಾನು ಭಾರತದ ಬಳಿಯಿದೆ. ಇದರ ಆಧಾರದ ಮೇಲೆ ಮುಂದಿನ ಕೆಲವು ವಾರಗಳವರೆಗೆ ತೈಲ ಪೂರೈಕೆಯನ್ನು ಸುಗಮವಾಗಿ ನಿರ್ವಹಿಸಬಹುದು. ಆದರೆ, ದೀರ್ಘಕಾಲದವರೆಗೆ ಅಥವಾ ಗಂಭೀರವಾಗಿ ಪೂರೈಕೆಯಲ್ಲಿ ಅಡೆತಡೆ ಉಂಟಾದಲ್ಲಿ ಇನ್ನೂ ಹೆಚ್ಚಿನ ಸಂಗ್ರಹದ ಅವಶ್ಯಕತೆಯಿದೆ.

ರಷ್ಯಾದಿಂದ ಭಾರತಕ್ಕೆ ತೈಲ ಪೂರೈಕೆಯ ಸುಳಿವು !

ತೈಲ ಉತ್ಪಾದಿಸುವ ಕೊಲ್ಲಿ ರಾಷ್ಟ್ರಗಳಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ಭಾರತಕ್ಕೆ ಆಗುವ ತೈಲ ಪೂರೈಕೆಯು ಸ್ಥಗಿತಗೊಳ್ಳುವ ಹಂತದಲ್ಲಿದೆ. ಇಂತಹ ಸಮಯದಲ್ಲಿ ರಷ್ಯಾದ ಸರಕಾರವು ಭಾರತಕ್ಕೆ ತೈಲ ಪೂರೈಸಲು ಸಿದ್ಧವಿರುವುದಾಗಿ ಸುಳಿವು ನೀಡಿದೆ ಎಂದು ವಾರ್ತಾ ಸಂಸ್ಥೆಯೊಂದು ವರದಿ ಮಾಡಿದೆ. ಅಮೇರಿಕವು ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರಿದ ನಂತರವೂ ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುತ್ತಿತ್ತು. ಆದರೆ ಅಮೇರಿಕದ ಒತ್ತಡ ಮತ್ತು ನಿರ್ಬಂಧಗಳಿಂದಾಗಿ ಈ ಖರೀದಿಯಲ್ಲಿ ಇತ್ತೀಚೆಗೆ ಇಳಿಕೆಯಾಗಿತ್ತು. ಈಗ ಯುದ್ಧದ ಹಿನ್ನೆಲೆಯಲ್ಲಿ ಈ ಖರೀದಿಯನ್ನು ಮತ್ತೆ ಹೆಚ್ಚಿಸುವ ಸಾಧ್ಯತೆ ನಿರ್ಮಾಣವಾಗಿದೆ.

ಇರಾಕ್‌ ನಲ್ಲಿನ ಕುರ್ದ್ ಮಿಲಿಶಿಯಾ ಸಂಘಟನೆಯ ಸಹಾಯ ಪಡೆಯಲು ಅಮೇರಿಕಾದ ಪ್ರಯತ್ನ !

ಅಮೇರಿಕಾದ ಗುಪ್ತಚರ ಸಂಸ್ಥೆ ‘ಸಿ.ಐ.ಎ.’ ಇರಾಕ್‌ ನಲ್ಲಿನ ‘ಕುರ್ದ್ ಮಿಲಿಶಿಯಾ’ ಎಂಬ ಭಯೋತ್ಪಾದಕ ಸಂಘಟನೆಗೆ ಶಸ್ತ್ರಾಸ್ತ್ರ ಸಹಾಯ ನೀಡುವ ಬಗ್ಗೆ ಕೆಲಸ ಆರಂಭಿಸಿದೆ ಎಂಬ ಮಾಹಿತಿಯನ್ನು ‘ಸಿ.ಎನ್.ಎನ್.’(ಕೇಬಲ್ ನ್ಯೂಜ ನೆಟವರ್ಕ) ವಾರ್ತಾ ವಾಹಿನಿ ನೀಡಿದೆ. ಟ್ರಂಪ್ ಸರಕಾರವು ಇರಾಕ್‌ ನಲ್ಲಿನ ಕುರ್ದ್ ನಾಯಕರೊಂದಿಗೆ ಸೈನಿಕ ಸಹಾಯದ ಕುರಿತು ಚರ್ಚೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಇರಾನಿ ಕುರ್ದ್ ಸಶಸ್ತ್ರ ಗುಂಪುಗಳ ಸಾವಿರಾರು ಹೋರಾಟಗಾರರು ಇರಾಕ್-ಇರಾನ್ ಗಡಿಯ ಕುರ್ದಿಸ್ತಾನ್ ಭಾಗದಲ್ಲಿ ಸಕ್ರಿಯರಾಗಿದ್ದಾರೆ. ಅಮೇರಿಕಾ ಇರಾನ್ ಮೇಲೆ ಆಕ್ರಮಣ ಮಾಡಿದ ನಂತರ, ಇರಾನ್ ‘ಡೆಮೋಕ್ರಾಟಿಕ್ ಪಾರ್ಟಿ ಆಫ್ ಇರಾನಿ ಕುರ್ದಿಸ್ತಾನ್’ ಮೇಲೆ ಆಕ್ರಮಣ ಆರಂಭಿಸಿದೆ. ಈ ಸಂಘಟನೆಯ ಅಧ್ಯಕ್ಷ ಮುಸ್ತಫಾ ಹಿಜರಿ ಅವರೊಂದಿಗೆ ಟ್ರಂಪ್ ಚರ್ಚೆ ನಡೆಸಿದ್ದಾರೆ. ಇನ್ನೊಂದೆಡೆ ಇರಾಕ್‌ ನಲ್ಲಿನ ಶಿಯಾ ಮಿಲಿಶಿಯಾ ಗುಂಪು ಇರಾನ್‌ ಗೆ ಸಹಾಯ ಮಾಡುತ್ತಿದೆ.

ಸ್ಪೇನ್ ಅಮೇರಿಕಾಗೆ ನಿರೀಕ್ಷಿತ ಬೆಂಬಲ ನೀಡದ ಕಾರಣ ಟ್ರಂಪ್ ಅವರಿಂದ ವ್ಯಾಪಾರ ಸ್ಥಗಿತದ ಬೆದರಿಕೆ !

ನಾವು ಸ್ಪೇನ್ ಜೊತೆಗಿನ ಎಲ್ಲಾ ವ್ಯಾಪಾರವನ್ನು ನಿಲ್ಲಿಸಲಿದ್ದೇವೆ. ನಮಗೆ ಸ್ಪೇನ್ ಜೊತೆಗೆ ಯಾವುದೇ ಸಂಬಂಧ ಇರಿಸಿಕೊಳ್ಳುವ ಇಚ್ಛೆಯಿಲ್ಲ, ಎಂದು ಅಮೇರಿಕಾ ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ. ಇರಾನ್ ಮೇಲಿನ ಅಮೇರಿಕಾ ಮತ್ತು ಇಸ್ರೇಲ್ ಆಕ್ರಮಣಗಳಿಗೆ ಸ್ಪೇನ್‌ನಿಂದ ನಿರೀಕ್ಷಿತ ಬೆಂಬಲ ಸಿಗದಿರುವುದು ಮತ್ತು ‘ನಾಟೋ’ ಒಕ್ಕೂಟದಲ್ಲಿ ತನ್ನ ಪಾಲಿನ ಧನಸಹಾಯವನ್ನು ಹೆಚ್ಚಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ನಿಲುವು ಹೊರಬಂದಿದೆ. ಸ್ಪೇನ್ ಯುರೋಪಿಯನ್ ಒಕ್ಕೂಟದ ಸದಸ್ಯ ದೇಶವಾಗಿರುವುದರಿಂದ ವ್ಯಾಪಾರವನ್ನು ಹೇಗೆ ಸ್ಥಗಿತಗೊಳಿಸಲಾಗುತ್ತದೆ ಎಂಬ ಬಗ್ಗೆ ಟ್ರಂಪ್ ಅವರ ಹೇಳಿಕೆಯಲ್ಲಿ ಸ್ಪಷ್ಟತೆಯಿಲ್ಲ. ಏಕೆಂದರೆ ಯುರೋಪಿಯನ್ ಒಕ್ಕೂಟವು ತನ್ನ ೨೭ ಸದಸ್ಯ ರಾಷ್ಟ್ರಗಳ ಪರವಾಗಿ ವ್ಯಾಪಾರ ಒಪ್ಪಂದಗಳ ಬಗ್ಗೆ ಚರ್ಚಿಸುತ್ತದೆ.

ಸ್ಪೇನ್ ಪ್ರಧಾನಿ ಪೆಡ್ರೊ ಸಾಂಚೆಜ್ ಅವರು ಇರಾನ್ ಮೇಲಿನ ಆಕ್ರಮಣವನ್ನು ಟೀಕಿಸಿದ್ದು, ಸ್ಪೇನ್ ಯುದ್ಧದ ವಿರೋಧಿಯಾಗಿದೆ ಮತ್ತು ಇಂತಹ ಕೃತ್ಯಗಳಿಂದ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು, ಎಂದು ಹೇಳಿದ್ದಾರೆ.