ನ್ಯಾಯಾಂಗವನ್ನು ಅವಮಾನಿಸಲು ಯಾರಿಗೂ ಅನುಮತಿ ನೀಡುವುದಿಲ್ಲ ! Supreme Court CJI Halts NCERT Chapter

ಎನ್‌ ಸಿ ಇ ಆರ್‌ ಟಿ ಪಠ್ಯಪುಸ್ತಕದಲ್ಲಿ ನ್ಯಾಯಾಂಗದ ಭ್ರಷ್ಟಾಚಾರದ ಕುರಿತ ಪಾಠ: ಮುಖ್ಯ ನ್ಯಾಯಾಧೀಶರ ತೀವ್ರ ಆಕ್ರೋಶ


(ಎನ್‌ಸಿಇಆರ್‌ಟಿ ಎಂದರೆ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು)

ನವ ದೆಹಲಿ – ನ್ಯಾಯಾಂಗದ ಅಪಕೀರ್ತಿ ಅಥವಾ ಮಾನಹಾನಿ ಮಾಡುವ ಪ್ರಯತ್ನವನ್ನು ಯಾರಿಗೂ ಮಾಡಲು ಬಿಡುವುದಿಲ್ಲ ಮತ್ತು ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಪರಿಸ್ಥಿತಿಯಲ್ಲೂ ನಾನು ಇದನ್ನು ಸಹಿಸುವುದಿಲ್ಲ. ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ, ಕಾನೂನು ತನ್ನ ಕೆಲಸ ಮಾಡುತ್ತದೆ. ಈ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ನನಗೆ ಚೆನ್ನಾಗಿ ತಿಳಿದಿದೆ, ಎಂದು ಮುಖ್ಯ ನ್ಯಾಯಾಧೀಶರಾದ ಸೂರ್ಯಕಾಂತ ಅವರು ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು ೮ನೇ ತರಗತಿಯ ಹೊಸ ಸಾಮಾಜಿಕ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಕುರಿತು ಒಂದು ಪಾಠವನ್ನು ಸೇರಿಸಿದೆ. ಈ ಮೊದಲು ಇದ್ದ ಪಾಠದಲ್ಲಿ ನ್ಯಾಯಾಲಯದ ರಚನೆ ಮತ್ತು ಪಾತ್ರದ ಮೇಲೆ ಹೆಚ್ಚು ಗಮನ ಹರಿಸಲಾಗಿತ್ತು. ಈ ಹೊಸ ಬದಲಾವಣೆಯ ಕುರಿತು ಮುಖ್ಯ ನ್ಯಾಯಾಧೀಶರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೊಸ ಪುಸ್ತಕದ ಒಂದು ಪಾಠದಲ್ಲಿ ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ’ ಮತ್ತು ‘ಬಾಕಿ ಉಳಿದಿರುವ ಮೊಕದ್ದಮೆಗಳ ಬೆಟ್ಟ’ ನ್ಯಾಯಾಂಗ ವ್ಯವಸ್ಥೆಯ ಮುಂದಿರುವ ದೊಡ್ಡ ಸವಾಲುಗಳು ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ವಕೀಲರು ಮಾಹಿತಿ ನೀಡಿದಾಗ, ಮುಖ್ಯ ನ್ಯಾಯಾಧೀಶರಾದ ಸೂರ್ಯಕಾಂತ್ ಅವರು ಪ್ರತಿಕ್ರಿಯಿಸಿ, ನಾನು ಈ ವಿಷಯದ ಬಗ್ಗೆ ಸಂಪೂರ್ಣ ಜಾಗೃತನಾಗಿದ್ದೇನೆ. ಈ ಸಂಬಂಧ ನನಗೆ ಅನೇಕ ದೂರವಾಣಿ ಕರೆಗಳು ಮತ್ತು ಸಂದೇಶಗಳು ಬಂದಿವೆ. ಅನೇಕ ನ್ಯಾಯಾಧೀಶರು ಈ ಪಾಠದಿಂದ ಬೇಸರಗೊಂಡಿದ್ದಾರೆ. ನಾನು ನಿಮಗೆ ಭರವಸೆ ನೀಡುತ್ತೇನೆ, ನಾನು ಈಗಾಗಲೇ ಆದೇಶಗಳನ್ನು ನೀಡಿದ್ದು, ಈ ಪ್ರಕರಣವನ್ನು ‘ಸುಯೋ ಮೋಟೋ’ (ಸ್ವಯಂಪ್ರೇರಿತವಾಗಿ) ದಾಖಲಿಸಿಕೊಳ್ಳುತ್ತಿದ್ದೇನೆ ಎಂದರು.

ಈ ಪಾಠದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ೮೧,೦೦೦, ಹೈಕೋರ್ಟ್‌ಗಳಲ್ಲಿ ೬೨ ಲಕ್ಷ ೪೦ ಸಾವಿರ ಹಾಗೂ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ೪ ಕೋಟಿ ೭೦ ಲಕ್ಷ ಮೊಕದ್ದಮೆಗಳು ಬಾಕಿ ಇರುವುದನ್ನೂ ನಮೂದಿಸಲಾಗಿದೆ.

ಹೊಸ ಪಾಠದಲ್ಲಿ ಯಾವ ಮಾಹಿತಿಯನ್ನು ಸೇರಿಸಲಾಗಿದೆ?

ಈ ಪಾಠದಲ್ಲಿ ನ್ಯಾಯಾಧೀಶರು ನೀತಿ ಸಂಹಿತೆಗೆ ಬದ್ಧರಾಗಿರುತ್ತಾರೆ, ಇದು ಕೇವಲ ನ್ಯಾಯಾಲಯದಲ್ಲಿ ಮಾತ್ರವಲ್ಲದೆ ನ್ಯಾಯಾಲಯದ ಹೊರಗೂ ಅವರ ನಡವಳಿಕೆಯನ್ನು ನಿಯಂತ್ರಿಸುತ್ತದೆ ಎಂದು ಹೇಳಲಾಗಿದೆ. ಗಂಭೀರ ಪ್ರಕರಣಗಳಲ್ಲಿ ನ್ಯಾಯಾಧೀಶರನ್ನು ಹುದ್ದೆಯಿಂದ ತೆಗೆದುಹಾಕುವ ಸಾಂವಿಧಾನಿಕ ನಿಯಮದ ಬಗ್ಗೆಯೂ ಪುಸ್ತಕದಲ್ಲಿ ವಿವರಿಸಲಾಗಿದೆ. ಸಂಸತ್ತು ಮಹಾಭಿಯೋಗ ನಿರ್ಣಯವನ್ನು ಅಂಗೀಕರಿಸುವ ಮೂಲಕ ನ್ಯಾಯಾಧೀಶರನ್ನು ಹುದ್ದೆಯಿಂದ ತೆಗೆದುಹಾಕಬಹುದು ಎಂಬ ಮಾಹಿತಿಯನ್ನು ನೀಡಲಾಗಿದೆ.

ಈ ಪ್ರಕರಣದಲ್ಲಿ, ಜನರು ನ್ಯಾಯಾಂಗದ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರವನ್ನು ಎದುರಿಸುತ್ತಾರೆ ಎಂದು ಬರೆಯಲಾಗಿದೆ. ಬಡವರು ಮತ್ತು ಅಗತ್ಯವಿರುವವರಿಗೆ ನ್ಯಾಯ ಪಡೆಯುವ ಪ್ರಕ್ರಿಯೆಯಲ್ಲಿ ತೊಂದರೆಗಳು ಉಂಟಾಗಬಹುದು. ರಾಜ್ಯ ಮತ್ತು ಕೇಂದ್ರ ಸರಕಾರಗಳು ಆಡಳಿತದಲ್ಲಿ ಪಾರದರ್ಶಕತೆ ತರುವ ಮೂಲಕ ಸಾರ್ವಜನಿಕ ವಿಶ್ವಾಸವನ್ನು ಬಲಪಡಿಸಲು ಪ್ರಯತ್ನಿಸುತ್ತಿವೆ. ಇದರಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಭ್ರಷ್ಟಾಚಾರದ ಪ್ರಕರಣಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವುದೂ ಸೇರಿದೆ ಎಂದು ಪಾಠದಲ್ಲಿ ವಿವರಿಸಲಾಗಿದೆ.