“ದೇವಸ್ಥಾನದ ಹಣವನ್ನು ಕೇವಲ ಧಾರ್ಮಿಕ ಉದ್ದೇಶಗಳಿಗಾಗಿ ಮಾತ್ರ ಬಳಸಬಹುದು!” – ಉಚ್ಚ ನ್ಯಾಯಾಲಯ

ಕಲ್ಲಾಝಗರ್ ದೇವಸ್ಥಾನದ 40 ಕೋಟಿ ರೂ. ಬಳಸುವ ತಮಿಳುನಾಡು ಸರಕಾರದ ಯೋಜನೆ ಮದ್ರಾಸ್ ಹೈಕೋರ್ಟ್‌ನಿಂದ ರದ್ದು!

ಚೆನ್ನೈ (ತಮಿಳುನಾಡು) – ಕಲ್ಲಾಝಗರ್ ದೇವಸ್ಥಾನದ ಉಳಿತಾಯ ಮತ್ತು ಹೆಚ್ಚುವರಿ ನಿಧಿಯನ್ನು ವಾಣಿಜ್ಯ ಸೌಲಭ್ಯಗಳಿಗಾಗಿ ಬಳಸುವ ತಮಿಳುನಾಡಿನ ಡಿಎಂಕೆ ಸರಕಾರದ ನಿರ್ಧಾರವನ್ನು ಮದ್ರಾಸ್ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ. ಈ ಯೋಜನೆಯಡಿ ದೇವಸ್ಥಾನದ ಹಣದಿಂದ ರೆಸ್ಟೋರೆಂಟ್, ಅಂಗಡಿಗಳು, ವಸತಿಗೃಹಗಳು ಮತ್ತು ಇತರ ವಾಣಿಜ್ಯ ಸೌಲಭ್ಯಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು; ಆದರೆ ನ್ಯಾಯಾಲಯವು ಈ ನಿರ್ಧಾರವು ಕಾನೂನುಬಾಹಿರ ಎಂದು ಹೇಳಿ ಸರ್ಕಾರದ ಆದೇಶವನ್ನು ರದ್ದುಗೊಳಿಸಿತು. ಈ ಯೋಜನೆಗಾಗಿ ದೇವಸ್ಥಾನದ 40 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಉದ್ದೇಶಿಸಲಾಗಿತ್ತು.

ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ದೇವಸ್ಥಾನವು ತನ್ನ ನಿಧಿಯನ್ನು ಕೇವಲ ಧಾರ್ಮಿಕ ಉದ್ದೇಶಗಳಿಗಾಗಿ ಮಾತ್ರ ಬಳಸಬಹುದು ಎಂದು ಸ್ಪಷ್ಟಪಡಿಸಿದೆ. ಸರಕಾರದ ಈ ನಿರ್ಧಾರವು ದೇವಸ್ಥಾನದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಮತ್ತು ‘ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯ್ದೆ’ಯ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಈ ದೇವಸ್ಥಾನದ ನಿಧಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಹಂಚಿಕೆ ಮಾಡಿತ್ತು. ಸರಕಾರವು ಈ ನಿಧಿಯನ್ನು ಬಳಸುವ ಮೊದಲು ಟ್ರಸ್ಟಿಗಳ ಮಂಡಳಿಯ ಅನುಮೋದನೆ ಪಡೆಯಲಿಲ್ಲ ಅಥವಾ ನಿಗದಿತ ಬಜೆಟ್ ಪ್ರಕ್ರಿಯೆಯನ್ನು ಅನುಸರಿಸಲಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ಬಂದಿತು.

ಸಂಪಾದಕೀಯ ನಿಲುವು

ಈ ತೀರ್ಪಿನ ಹಿನ್ನೆಲೆಯಲ್ಲಿ, ಈಗ ದೇಶಾದ್ಯಂತ ಸರಕಾರಿ ಸ್ವಾಧೀನದಲ್ಲಿರುವ ಎಲ್ಲಾ ದೇವಸ್ಥಾನಗಳ ಹಣವನ್ನು ಸರಕಾರದ ಯೋಜನೆಗಳಿಗಾಗಿ ಬಳಸದೆ ಕೇವಲ ಹಿಂದೂ ಧರ್ಮದ ಕಾರ್ಯಗಳಿಗಾಗಿ ಮಾತ್ರ ಬಳಸಬೇಕೆಂದು ಹಿಂದೂಗಳು ಮತ್ತು ಹಿಂದೂ ಸಂಘಟನೆಗಳು ಎಲ್ಲಾ ರಾಜ್ಯ ಸರಕಾರಗಳನ್ನು ಒತ್ತಾಯಿಸಬೇಕು!