ಹಮಾಸ್ ಜೊತೆಗಿನ ಸಂಬಂಧವನ್ನು ಒಪ್ಪಿಕೊಂಡ ಲಷ್ಕರ್-ಎ-ತೊಯ್ಬಾ!

ನವದೆಹಲಿ – ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಕಮಾಂಡರ್ ಒಬ್ಬ ಪ್ಯಾಲೆಸ್ತೀನ್ ಭಯೋತ್ಪಾದಕ ಸಂಘಟನೆ ಹಮಾಸ್‌ನೊಂದಿಗೆ ತನಗೆ ಸಂಬಂಧವಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಹಮಾಸ್‌ನ ಉನ್ನತ ನಾಯಕರೊಂದಿಗೆ ನಡೆದ ಭೇಟಿಯ ವರದಿಗಳನ್ನು ಈತ ಖಚಿತಪಡಿಸಿದ್ದಾನೆ. ಲಷ್ಕರ್-ಎ-ತೊಯ್ಬಾದ ರಾಜಕೀಯ ಮುಖವೆಂದು ಪರಿಗಣಿಸಲಾದ ‘ಪಾಕಿಸ್ತಾನ ಮರ್ಕಜಿ ಮುಸ್ಲಿಂ ಲೀಗ್‌’ನ ಕಮಾಂಡರ್ ಫೈಸಲ್ ನದೀಮ್ ಎಂಬುವವನು ವಿಡಿಯೋವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾನೆ.

೧. ನದೀಮ್, ೨೦೨೪ರಲ್ಲಿ ಕತಾರ್ ರಾಜಧಾನಿ ದೋಹಾದಲ್ಲಿ ತಾನು ಹಮಾಸ್‌ನ ಹಿರಿಯ ನಾಯಕರನ್ನು ಭೇಟಿಯಾಗಿದ್ದಾಗಿ ತಿಳಿಸಿದ್ದಾನೆ. ಅವನೊಂದಿಗೆ ಸೈಫುಲ್ಲಾ ಕಸೂರಿ ಕೂಡ ಇದ್ದನು. ಕಸೂರಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್ ಎಂದು ನಂಬಲಾಗಿದೆ. ಇವರಿಬ್ಬರೂ ಹಮಾಸ್ ನಾಯಕ ಖಾಲಿದ್ ಮಶಾಲ್‌ನನ್ನು ಭೇಟಿಯಾಗಿದ್ದರು ಎಂದು ನದೀಮ್ ಹೇಳಿದ್ದಾನೆ.

೨. ಗುಪ್ತಚರ ಸಂಸ್ಥೆಗಳ ಪ್ರಕಾರ, ಇದು ದಕ್ಷಿಣ ಏಷ್ಯಾ ಮತ್ತು ಮಧ್ಯಪ್ರಾಚ್ಯದ ಭಯೋತ್ಪಾದಕ ಜಾಲಗಳ ನಡುವಿನ ನೇರ ಸಮನ್ವಯಕ್ಕೆ ದೊಡ್ಡ ಪುರಾವೆಯಾಗಿದೆ. ಈ ಮೈತ್ರಿಯು ಶಸ್ತ್ರಾಸ್ತ್ರ ಪೂರೈಕೆ, ಸುಳ್ಳು ಮಾಹಿತಿ ಹರಡುವುದು ಮತ್ತು ಪರಸ್ಪರರ ಅನುಭವಗಳನ್ನು ಬಳಸಿಕೊಳ್ಳುವ ಉದ್ದೇಶ ಹೊಂದಿದೆ.

ಪಾಕಿಸ್ತಾನದಲ್ಲಿ ಒಂದೇ ವೇದಿಕೆಯಲ್ಲಿ ಕಂಡ ಹಮಾಸ್ ಮತ್ತು ಪಾಕ್ ಸೈನ್ಯ!

ಜನವರಿ ೭ ರಂದು ಪಾಕಿಸ್ತಾನದ ಗುಜ್ರಾನ್‌ವಾಲಾದಲ್ಲಿ ನಡೆದ ‘ಪಾಕಿಸ್ತಾನ ಮರ್ಕಜಿ ಮುಸ್ಲಿಂ ಲೀಗ್‌’ನ ಕಾರ್ಯಕ್ರಮದಲ್ಲಿ ಹಮಾಸ್ ಮತ್ತು ಲಷ್ಕರ್ ನಾಯಕರು ಒಟ್ಟಿಗೆ ಕಾಣಿಸಿಕೊಂಡ ನಂತರ ಈ ಮಾಹಿತಿ ಹೊರಬಿದ್ದಿದೆ. ಈ ಕಾರ್ಯಕ್ರಮದಲ್ಲಿ ಹಮಾಸ್ ಹಿರಿಯ ಕಮಾಂಡರ್ ನಾಜಿ ಜಹೀರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರೆ, ಲಷ್ಕರ್ ಕಮಾಂಡರ್ ರಶೀದ್ ಅಲಿ ಸಂಧು ರಾಜಕೀಯ ನಾಯಕನಾಗಿ ಭಾಗವಹಿಸಿದ್ದರು. ಭದ್ರತಾ ಅಧಿಕಾರಿಗಳ ಪ್ರಕಾರ, ನಾಜಿ ಜಹೀರ್ ಅಕ್ಟೋಬರ್ ೨೦೨೩ ರಿಂದ ಈವರೆಗೆ ಸುಮಾರು ೧೫ ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾನೆ.

ಅಂತರಾಷ್ಟ್ರೀಯ ಶಾಂತಿಗೆ ದೊಡ್ಡ ಅಪಾಯ

ಹಮಾಸ್ ಮತ್ತು ಲಷ್ಕರ್-ಎ-ತೊಯ್ಬಾ ನಡುವಿನ ಯಾವುದೇ ರೀತಿಯ ಸಮನ್ವಯವು ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಶಾಂತಿಗೆ ಅತ್ಯಂತ ಅಪಾಯಕಾರಿ ಎಂದು ಭಯೋತ್ಪಾದನಾ ನಿರೋಧಕ ತಜ್ಞರು ಹೇಳಿದ್ದಾರೆ. ಗುಪ್ತಚರ ಸಂಸ್ಥೆಗಳು ಈ ಹೊಸ ಮೈತ್ರಿಯ ಮೇಲೆ ತೀವ್ರ ನಿಗಾ ಇರಿಸಿವೆ. ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಭಾರತವು ಈ ವಿಷಯವನ್ನು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಮತ್ತು ‘ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್’ ನಂತಹ ಸಂಸ್ಥೆಗಳ ಮುಂದೆ ಪ್ರಸ್ತಾಪಿಸಲು ಸಿದ್ಧತೆ ನಡೆಸುತ್ತಿದೆ. ಅದರಿಂದಾಗಿ ಪಾಕಿಸ್ತಾನದ ಮೇಲೆ ಕಠಿಣ ಕ್ರಮ ಕೈಗೊಳ್ಳಬಹುದು.

ಪಾಕಿಸ್ತಾನದಲ್ಲಿ ಹಮಾಸ್ ನ ನೂತನ ಉಗ್ರರಿಗೆ ತರಬೇತಿ

ಗುಪ್ತಚರ ಅಧಿಕಾರಿಯೊಬ್ಬರ ಮಾಹಿತಿಯ ಪ್ರಕಾರ, ಪಾಕಿಸ್ತಾನದಲ್ಲಿ ಹಮಾಸ್‌ನ ಹೊಸ ಭಯೋತ್ಪಾದಕರಿಗೆ ತರಬೇತಿ ನೀಡಲಾಗುತ್ತಿದೆ. ಈ ಉಗ್ರರನ್ನು ವಿಶೇಷ ವಿಮಾನಗಳ ಮೂಲಕ ತರಲಾಗುತ್ತಿದ್ದು, ಈ ತರಬೇತಿಯಲ್ಲಿ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ಕೂಡ ಭಾಗಿಯಾಗಿದ್ದಾರೆ. ಪಾಕಿಸ್ತಾನದಲ್ಲಿರುವ ತನ್ನ ನೆಲೆಗಳ ಮೇಲೆ ಇಸ್ರೇಲ್ ದಾಳಿ ಮಾಡುವುದಿಲ್ಲ ಎಂದು ಹಮಾಸ್‌ಗೆ ನಂಬಿಕೆ ಇರುವುದರಿಂದ ಪಾಕ್ ನಲ್ಲಿ ಯಾವುದೇ ಭಯವಿಲ್ಲದೆ ಚಟುವಟಿಕೆಗಳು ನಡೆಯುತ್ತಿವೆ.

ಭಾರತಕ್ಕೆ ಏಕೆ ಆತಂಕದ ವಿಷಯ?

ಹಮಾಸ್ ನೇರವಾಗಿ ಭಾರತದ ಮೇಲೆ ದಾಳಿ ಮಾಡದಿದ್ದರೂ, ಅದರ ಉಪಸ್ಥಿತಿಯು ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಭಾರತೀಯ ಸಂಸ್ಥೆಗಳು ಭಾವಿಸಿವೆ. ಏಕೆಂದರೆ ಹಮಾಸ್‌ನ ತಾಂತ್ರಿಕ ಮತ್ತು ಕಾರ್ಯಾಚರಣೆಯ ಸಾಮರ್ಥ್ಯವು ಲಷ್ಕರ್ ಮತ್ತು ಜೈಶ್‌ಗಿಂತ ಹೆಚ್ಚು ಸುಧಾರಿತವಾಗಿದೆ. ತರಬೇತಿಯ ಸಮಯದಲ್ಲಿ ಹಮಾಸ್ ತನ್ನ ಅನುಭವಗಳನ್ನು ಮತ್ತು ಆಧುನಿಕ ದಾಳಿಯ ತಂತ್ರಗಳನ್ನು ಈ ಸಂಘಟನೆಗಳಿಗೆ ನೀಡುತ್ತಿದೆ. ಇದರಿಂದ ಭವಿಷ್ಯದಲ್ಲಿ ಭಾರತದ ವಿರುದ್ಧ ದೊಡ್ಡ ಮತ್ತು ಹೆಚ್ಚು ಮಾರಕ ದಾಳಿಗಳು ನಡೆಯುವ ಸಾಧ್ಯತೆ ಹೆಚ್ಚಿದೆ.

ಗಾಜಾ ಹೆಸರಿನಲ್ಲಿ ದೇಣಿಗೆ ಸಂಗ್ರಹ ಮತ್ತು ಭಯೋತ್ಪಾದನೆಗೆ ಬಳಕೆ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI), ಹಮಾಸ್ ಹೆಸರನ್ನು ಬಳಸಿ ಗಾಜಾಗಾಗಿ ದೇಣಿಗೆ ಸಂಗ್ರಹಿಸಿದೆ; ಆದರೆ ಈ ಹಣವನ್ನು ಹಮಾಸ್‌ಗಾಗಿ ಬಳಸಲಿಲ್ಲ. ಬದಲಾಗಿ, ಲಷ್ಕರ್ ಮತ್ತು ಜೈಶ್‌ನ ಧ್ವಂಸಗೊಂಡ ನೆಲೆಗಳನ್ನು ಪುನರ್ನಿರ್ಮಿಸಲು ದೇಣಿಗೆಯಲ್ಲಿ ಬಂದ ಕೋಟ್ಯಂತರ ರೂಪಾಯಿಗಳನ್ನು ಬಳಸಲಾಗಿದೆ.