ತಮಿಳುನಾಡು: ಕುಂಭಮೇಳ ರಥಯಾತ್ರೆಗೆ ಅನುಮತಿ ನಿರಾಕರಿಸಿದ ಡಿಎಂಕೆ ಸರಕಾರ

ಚೆನ್ನೈ (ತಮಿಳುನಾಡು) – ಕೇರಳದ ಮಲಪ್ಪುರಂನಲ್ಲಿ ಆಯೋಜಿಸಲಾದ ಕುಂಭಮೇಳ – ಮಹಾಮಘಾ ಮಹೋತ್ಸವಕ್ಕೆ ಸಂಬಂಧಿಸಿದ ರಥಯಾತ್ರೆಗೆ ತಮಿಳುನಾಡು ಸರಕಾರವು ಅನುಮತಿ ನೀಡಲು ನಿರಾಕರಿಸಿದೆ. ಈ ರಥಯಾತ್ರೆಯು ಉದುಮಲಪೇಟೆ ಸಮೀಪದ ತಿರುಮೂರ್ತಿ ಬೆಟ್ಟಗಳಿಂದ ಪ್ರಾರಂಭವಾಗಬೇಕಿತ್ತು. ಇಲ್ಲಿಂದಲೇ ಭರತಪುಝಾ ನದಿಯು ಉಗಮಿಸುತ್ತದೆ.

೧. ಉದುಮಲಪೇಟೆಯ ಪೊಲೀಸರು ಈ ರಥಯಾತ್ರೆಯನ್ನು ತಡೆದಿದ್ದು, ಚೆನ್ನೈನ ಉನ್ನತ ಸರಕಾರಿ ಅಧಿಕಾರಿಗಳು ಅನುಮತಿಯನ್ನು ನಿರಾಕರಿಸಿದ್ದಾರೆ ಎಂದು ಆಯೋಜಕರು ತಿಳಿಸಿದರು.

೨. ರಥಯಾತ್ರೆಯಲ್ಲಿದ್ದ ಶ್ರೀ ಮಹಾಮೇರು ಮೂರ್ತಿಯನ್ನು ನಾಲ್ಕು ಚಕ್ರದ ವಾಹನದ ಮೂಲಕ ಕೇರಳದ ಗಡಿಯವರೆಗೆ ಕೊಂಡೊಯ್ಯಲು ಆಯೋಜಕರು ನಿರ್ಧರಿಸಿದರು. ನಂತರ ಪಾಲಕ್ಕಾಡ್ ನಿಂದ (ಕೇರಳ) ರಥಯಾತ್ರೆಯನ್ನು ಪುನಃ ಪ್ರಾರಂಭಿಸಲಾಯಿತು. ಈ ರಥಯಾತ್ರೆಯು ತಿರುನವಾಯದ ಭರತಪುಝಾ ನದಿಯ ದಂಡೆಯ ಮೇಲೆ ನಡೆಯುತ್ತಿರುವ ಮಹೋತ್ಸವಕ್ಕೆ ಸಂಬಂಧಿಸಿದ್ದಾಗಿದೆ.

೩. ಮಹಾಮೇರು ಪ್ರತಿಷ್ಠಾಪನೆಯನ್ನು ನೆರವೇರಿಸುವ ಈ ರಥಯಾತ್ರೆಯು ಮಹೋತ್ಸವದ ಒಂದು ಪ್ರಮುಖ ಆಧ್ಯಾತ್ಮಿಕ ಹಂತವಾಗಿದೆ ಎಂದು ಆಯೋಜಕರು ಈ ಮೊದಲು ತಿಳಿಸಿದ್ದರು. ಈ ಯಾತ್ರೆಯು ಭರತಪುಝಾ ನದಿಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧ ಹಾಗೂ ತಮಿಳುನಾಡು ಮತ್ತು ಕೇರಳ ರಾಜ್ಯಗಳ ನಡುವಿನ ಸಂಸ್ಕೃತಿಯ ಐತಿಹಾಸಿಕ ಕೊಂಡಿಯಾಗಿ ಮಹತ್ವದ್ದಾಗಿದೆ. ಇದರಲ್ಲಿ ತಮಿಳುನಾಡಿನ ಪ್ರಮುಖ ಅಧೀನಮ್ ಗಳು (ಮಠಗಳು) ಮತ್ತು ಧಾರ್ಮಿಕ ಸಂಸ್ಥೆಗಳು ಪಾಲ್ಗೊಳ್ಳುವ ನಿರೀಕ್ಷೆಯಿತ್ತು.

೪. ಈ ರಥಯಾತ್ರೆಯು ಭಾರತೀಯ ಧರ್ಮಪ್ರಚಾರ ಸಭೆಯ ಆಚಾರ್ಯ ಡಾ. ಶ್ರೀನಾಥ ಕರಾಯಟ್ಟ ಅವರ ನೇತೃತ್ವದಲ್ಲಿ ಮತ್ತು ವಿವಿಧ ಸಾಧು ಪರಂಪರೆಗಳ ಹಿರಿಯ ಆಚಾರ್ಯರೊಂದಿಗೆ ಸಾಗುತ್ತಿದೆ. ಯಾತ್ರೆಯು ಜನವರಿ ೨೧ ರಂದು ತಿರುನಾವಾಯದಲ್ಲಿ ಮುಕ್ತಾಯಗೊಳ್ಳಲಿದ್ದು, ಅಲ್ಲಿ ಮಹೋತ್ಸವದ ಮುಂದಿನ ಭಾಗವಾಗಿ ಮಹಾಮಘಾ ಪೂಜೆ ನಡೆಯಲಿದೆ.

೫. ‘ಮಹಾಮಘಾ ಮಹೋತ್ಸವ ೨೦೨೬’ ಅನ್ನು ಜನವರಿ ೧೯ ರಂದು ಕೇರಳದ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ ಅರ್ಲೇಕರ ಅಧಿಕೃತವಾಗಿ ಉದ್ಘಾಟಿಸಿದರು ಮತ್ತು ಅವರು ಉತ್ಸವದ ಧ್ವಜಾರೋಹಣವನ್ನು ವಿಧ್ಯುಕ್ತವಾಗಿ ನೆರವೇರಿಸಿದರು.

ಸಂಪಾದಕೀಯ ನಿಲುವು

ಸನಾತನ ಧರ್ಮವನ್ನು ನಾಶಪಡಿಸುವ ಹೇಳಿಕೆ ನೀಡುವ ಡಿಎಂಕೆ ಸರಕಾರವು ಇಂತಹ ಕೆಲಸ ಮಾಡಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಈ ಮನಸ್ಥಿತಿಯನ್ನು ರಾಜಕೀಯವಾಗಿ ನಾಶಪಡಿಸಲು ಹಿಂದೂಗಳು ಸಂಘಟಿತರಾಗಿ ಪ್ರಯತ್ನಿಸಬೇಕು!