‘ಪ್ರತಿಯೊಬ್ಬ ಉದ್ಯಮಿಗಾಗಿ ರಾಮಾಯಣದ ಬೋಧನೆಗಳು’ ಪುಸ್ತಕ ಬಿಡುಗಡೆ ! : Ramayana Every Entrepreneur

ಲೇಖಕರು: ಪ್ರಸಿದ್ಧ ಲೇಖಕ, ಚಲನಚಿತ್ರ ನಿರ್ಮಾಪಕ ಮತ್ತು ಪ್ರಖರ ಹಿಂದುತ್ವವಾದಿ ಶ್ರೀ. ಶಂತನು ಗುಪ್ತಾ

ನವ ದೆಹಲಿ – ‘ಪ್ರತಿಯೊಬ್ಬ ಉದ್ಯಮಿಗಾಗಿ ರಾಮಾಯಣದ ಬೋಧನೆಗಳು’ (Teachings from the Ramayana for every entrepreneur) ಎಂಬ ಇಂಗ್ಲಿಷ್ ಪುಸ್ತಕವು ಇತ್ತೀಚೆಗೆ ಬಿಡುಗಡೆಯಾಗಿದೆ. ಪ್ರಸಿದ್ಧ ಲೇಖಕ, ಚಲನಚಿತ್ರ ನಿರ್ಮಾಪಕ ಮತ್ತು ಪ್ರಖರ ಹಿಂದುತ್ವವಾದಿ ಶ್ರೀ. ಶಂತನು ಗುಪ್ತಾ ಅವರು ಈ ಪುಸ್ತಕವನ್ನು ಬರೆದಿದ್ದಾರೆ. ಶ್ರೀ. ಗುಪ್ತಾ ಅವರು ರಾಮಾಯಣವು ಜೀವನದ ಯಾವುದೇ ಸವಾಲಿಗೂ ಉತ್ತರ ನೀಡಬಲ್ಲದು ಎಂಬ ಸಂದೇಶವನ್ನು ಈ ಪುಸ್ತಕದ ಮೂಲಕ ನೀಡಿದ್ದಾರೆ. ಅವರು ‘ಸನಾತನ ಪ್ರಭಾತ’ಕ್ಕೆ ಮಾಹಿತಿ ನೀಡುತ್ತಾ, ನಾನು ಉದ್ಯಮಿಗಳನ್ನು ಕೇಂದ್ರಬಿಂದುವಾಗಿಟ್ಟುಕೊಂಡು ವಾಲ್ಮೀಕಿ ರಾಮಾಯಣವನ್ನು ಅಧ್ಯಯನ ಮಾಡಿ ಈ ಪುಸ್ತಕವನ್ನು ಬರೆದಿದ್ದೇನೆ ಎಂದು ಶಂತನು ಅವರು ಹೇಳಿದರು. ಈ ಪುಸ್ತಕವು ಉದ್ಯಮಶೀಲತೆಯ ಪ್ರಯಾಣವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ರಾಮಾಯಣ ಕಾಲದ ಜ್ಞಾನವು ಪುಸ್ತಕದಲ್ಲಿನ ಪ್ರಾಯೋಗಿಕ ಮತ್ತು ಸಂವಾದಾತ್ಮಕ ಪಾಠಗಳ ಮೂಲಕ ಉದ್ಯಮಿಗಳಿಗೆ ಸಹಾಯವಾಗಲಿದೆ. ಈ ಪುಸ್ತಕದಲ್ಲಿ ರಾಮಾಯಣದ ೨೫ ಕಥೆಗಳ ಮೂಲಕ ಮಹತ್ವದ ಬೋಧನೆಗಳನ್ನು ನೀಡಲಾಗಿದೆ. ನನ್ನ ಪುಸ್ತಕವು ಯಶಸ್ವಿಯಾಗಲು ‘ಅರ್ಥಪೂರ್ಣ ಪಾಲುದಾರಿಕೆಯನ್ನು ಹೇಗೆ ಬೆಳೆಸಿಕೊಳ್ಳುವುದು?’, ‘ನಿಷ್ಠೆಯಿಂದ ನಾಯಕತ್ವವನ್ನು ಹೇಗೆ ಮುನ್ನಡೆಸುವುದು?’ ಮತ್ತು ‘ಒಬ್ಬ ಉತ್ತಮ ಮಾರ್ಗದರ್ಶಕನ ಶಕ್ತಿಯನ್ನು ಹೇಗೆ ಬಳಸಿಕೊಳ್ಳುವುದು’ ಎಂಬ ವಿಷಯಗಳಿಗೂ ಉಪಯುಕ್ತವಾಗಬಲ್ಲದು.

೧೦ ಅಂಶಗಳ ಮೂಲಕ ಪುಸ್ತಕದ ಮಾಹಿತಿಯನ್ನು ತಿಳಿದುಕೊಳ್ಳಿ

ಲೇಖಕ ಶ್ರೀ. ಶಂತನು ಗುಪ್ತಾ ಅವರು ‘ಸನಾತನ ಪ್ರಭಾತ’ದೊಂದಿಗೆ ಮಾತನಾಡುತ್ತಾ,

೧. ಈ ಪುಸ್ತಕದಲ್ಲಿ ‘ಟಾಟಾ’, ‘ಆಪಲ್’, ‘ಪೇಟಿಎಂ’ ನಿಂದ ‘ಫ್ಲಿಪ್ಕಾರ್ಟ್’ ಸಂಸ್ಥೆಗಳು ಸ್ಥಾಪಿಸಿದ ವ್ಯವಹಾರ ಮತ್ತು ‘ಸ್ಟಾರ್ಟ್ಅಪ್’ಗಳಿಗೆ (ನೂತನ ವ್ಯವಹಾರಗಳು) ಸಂಬಂಧಿಸಿದಂತೆ ೨೫ ‘ಕೇಸ್ ಸ್ಟಡಿ’ಗಳನ್ನು (ಅಧ್ಯಯನ ಯೋಗ್ಯ ಘಟನೆಗಳು) ಸೇರಿಸಲಾಗಿದೆ. ವ್ಯವಹಾರದ ಸವಾಲುಗಳನ್ನು ಎದುರಿಸಲು ‘ರಾಮಾಯಣ ಮಾರ್ಗ’ವನ್ನು ವಿವರಿಸಲಾಗಿದೆ.

೨. ಯಾವುದೇ ಉದ್ಯಮದ ಅಂತಿಮ ಗುರಿ ಲಾಭ ಗಳಿಸುವುದೇ ಆಗಿರುತ್ತದೆ ಮತ್ತು ಅದು ಸರಿಯೂ ಹೌದು. ವಾಸ್ತವವಾಗಿ ಭಾರತೀಯ ಶಾಸ್ತ್ರಗಳ ಪ್ರಕಾರ ‘ಅರ್ಥ’ (ಹಣ ಗಳಿಸುವುದು) ಜೀವನದ ಕಾನೂನುಬದ್ಧ ಉದ್ದೇಶಗಳಲ್ಲಿ ಒಂದಾಗಿದೆ; ಆದರೆ ಹಣ ಗಳಿಕೆಯನ್ನು ‘ಧರ್ಮ’ದ (ನೀತಿಮತ್ತೆಯ) ದಾರಿಯಲ್ಲಿ ಮಾಡಬೇಕು.

೩. ಇಂದಿನ ಯುಗದಲ್ಲಿ ‘ಕಾರ್ಪೊರೇಟ್ ನೀತಿಶಾಸ್ತ್ರ’ (ವೃತ್ತಿಪರ ನೈತಿಕತೆ) ಮತ್ತು ‘ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ’ (ವೃತ್ತಿಪರ ಸಾಮಾಜಿಕ ಹೊಣೆಗಾರಿಕೆ) ಎಂಬ ಪರಿಕಲ್ಪನೆಗಳು ಧರ್ಮದ ಮೂಲಕವೇ ಅರ್ಥವನ್ನು ಗಳಿಸಬೇಕೆಂಬ ವಿಚಾರವನ್ನು ಒತ್ತಿಹೇಳುತ್ತವೆ.

೪. ರಾಮಾಯಣದ ಒಬ್ಬ ವಿದ್ಯಾರ್ಥಿಯಾಗಿ ನನ್ನ ಬಲವಾದ ನಂಬಿಕೆಯೆಂದರೆ, ನಮ್ಮ ಕೆಲಸದಲ್ಲಿ ಎದುರಾಗುವ ಪ್ರತಿಯೊಂದು ಪರಿಸ್ಥಿತಿಗೂ ಈ ಮಹಾಕಾವ್ಯವು ನೈತಿಕ ಉತ್ತರವನ್ನು ನೀಡುತ್ತದೆ.

೫. ಪ್ರಭು ಶ್ರೀರಾಮ ತನ್ನ ೧೪ ವರ್ಷಗಳ ವನವಾಸವನ್ನು ಜಿದ್ದಿನಿಂದ ಮತ್ತು ದೃಢ ನಿಶ್ಚಯದ ಬಲದಿಂದ ಕಳೆದನು. ವನವಾಸದ ಸಮಯದಲ್ಲಿ ಶ್ರೀರಾಮ ಸಾಮಾನ್ಯ ವ್ಯಕ್ತಿಗಿಂತ ಅತ್ಯಂತ ಕಠಿಣವಾದ ಸವಾಲುಗಳನ್ನು ಎದುರಿಸಿದರು.

೬. ಈ ವನವಾಸದ ಸಮಯದಲ್ಲಿ ಶ್ರೀರಾಮ ತನ್ನ ರಾಜ್ಯ, ಪತ್ನಿ ಮತ್ತು ಸ್ವತಃ ಪ್ರಾಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬಂದಿತ್ತು; ಆದರೆ ಏನೇ ಆದರೂ ಅವರು ಯಾವುದೇ ತಪ್ಪು ದಾರಿ ಹಿಡಿಯಲಿಲ್ಲ, ಸಹಾಯಕ್ಕಾಗಿ ತನ್ನ ಸಹೋದರ ಭರತನ ಬಳಿ ಓಡಿ ಹೋಗಲಿಲ್ಲ ಮತ್ತು ತನ್ನ ಪ್ರಾಮಾಣಿಕತೆ, ಒಳ್ಳೆಯತನ ಅಥವಾ ಧರ್ಮವನ್ನು ತ್ಯಜಿಸಲಿಲ್ಲ.

೭. ಸೀತೆಯ ಅಪಹರಣದ ಆರಂಭಿಕ ಆಘಾತದ ನಂತರ ಅವರು ತನ್ನನ್ನು ತಾನು ಶಾಂತಗೊಳಿಸಿಕೊಂಡರು. ವಿವಿಧ ಗುರುಗಳು ಜೀವನದಲ್ಲಿ ಕಲಿಸಿದ ಎಲ್ಲಾ ಕೌಶಲ್ಯಗಳನ್ನು ಬಳಸಿದರು. ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ಅವರು ಕಾರ್ಯತಂತ್ರವನ್ನು ರೂಪಿಸಿದರು.

೮. ರಾಮಾಯಣದಲ್ಲಿ ಲಭ್ಯವಿರುವ ಆಯ್ಕೆಗಳಿಂದ ಬಹಳ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಂಡ ಅನೇಕ ಪಾತ್ರಗಳಿವೆ, ಆದರೆ ಕೆಲವರು ತಪ್ಪು ಆಯ್ಕೆಗಳನ್ನು ಮಾಡಿದ್ದಾರೆ. ನಾವು ಈ ಇಬ್ಬರಿಂದಲೂ ಸಾಕಷ್ಟು ಕಲಿಯಬಹುದು ಮತ್ತು ಜೀವನಕ್ಕಾಗಿ ಸ್ವತಃ ಒಂದು ಸಶಕ್ತ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಕಲಿಯಬಹುದು.

೯. ಈ ಪುಸ್ತಕವು ರಾಮಾಯಣದ ನಾಯಕತ್ವದ ಪಾಠಗಳನ್ನು ಇಂದಿನ ಕಾಲದ ಸಂದರ್ಭಕ್ಕೆ ತಕ್ಕಂತೆ ಮಂಡಿಸುವ ಒಂದು ಪ್ರಯತ್ನವಾಗಿದೆ.

೧೦. ವಾಲ್ಮೀಕಿ ರಾಮಾಯಣದ ೨೪,೦೦೦ ಶ್ಲೋಕಗಳ ಪೈಕಿ ಪ್ರತಿಯೊಂದು ಶ್ಲೋಕದಲ್ಲೂ ಒಂದು ಸಂದೇಶ ಅಡಗಿದೆ, ಈ ಶ್ಲೋಕಗಳು ಮಾನವಕುಲವನ್ನು ಅದ್ಭುತವಾಗಿ ಸಮೃದ್ಧಗೊಳಿಸಬಲ್ಲದು.

ಪುಸ್ತಕವನ್ನು ಖರೀದಿಸುವುದು ಹೇಗೆ?

ಈ ಪುಸ್ತಕವನ್ನು ‘ಅಮೆಜಾನ್’ ಮೂಲಕ ಖರೀದಿಸಬಹುದು. ಪುಸ್ತಕ ಖರೀದಿಗಾಗಿ ಕೆಳಗಿನ ಲಿಂಕ್‌ಗೆ ಭೇಟಿ ನೀಡಿ: https://www.amazon.in/Teachings-Ramayana-Every-Entrepreneur-Partnerships/dp/0143473778

ಪುಟಗಳ ಸಂಖ್ಯೆ: ೨೨೦

ಬೆಲೆ: ರೂ. ೨೭೩

ಸಂಪಾದಕೀಯ ನಿಲುವು

ಧರ್ಮಶಿಕ್ಷಣದ ಅಭಾವವಿರುವ ಹಿಂದೂಗಳು ಇಂದು ಜೀವನದ ನಿಜವಾದ ಅರ್ಥವನ್ನು ಹುಡುಕಲು ಹೆಣಗಾಡುತ್ತಿದ್ದಾರೆ. ದೇಶವನ್ನು ಆರ್ಥಿಕವಾಗಿ ‘ವಿಕಸಿತ ಭಾರತ’ವನ್ನಾಗಿ ಮಾಡಲು ಲಕ್ಷಾಂತರ ಹಿಂದೂ ಉದ್ಯಮಿಗಳು ಕಾರ್ಯನಿರ್ವಹಿಸುತ್ತಿರುವಾಗ, ಅವರಲ್ಲಿ ಧರ್ಮದ ದೃಷ್ಟಿಕೋನ ವಿಕಸಿತವಾಗುವುದು ಅತ್ಯಾವಶ್ಯಕವಾಗಿದೆ. ಶ್ರೀ. ಶಂತನು ಗುಪ್ತಾ ಅವರ ಈ ಪುಸ್ತಕವು ಆ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲಿದೆ. ಅವರಿಗೆ ಅಭಿನಂದನೆಗಳು.