ಯುವ ನಾಯಕ ಉಸ್ಮಾನ್ ಹಾದಿ ನಿಧನದ ನಂತರ ಬಾಂಗ್ಲಾದೇಶದಲ್ಲಿ ಭೀಕರ ಹಿಂಸಾಚಾರ ! : Bangladesh Violence

  • ಓರ್ವ ಹಿಂದೂ ಯುವಕನನ್ನು ಜೀವಂತವಾಗಿ ಸುಟ್ಟರು

  • ೨ ದಿನಪತ್ರಿಕೆಗಳ ಕಚೇರಿಗಳಿಗೆ ಬೆಂಕಿ

  • ಒಬ್ಬ ಪತ್ರಕರ್ತನ ಹತ್ಯೆ

 

ಕೊಲೆಯಾದ ಉಸ್ಮಾನ್ ಹಾದಿ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಮತ್ತೆ ಭೀಕರ ಹಿಂಸಾಚಾರ ಆರಂಭವಾಗಿದೆ. ‘ಇನಕ್ವಿಲಾಬ್ ಮಂಚ್’ನ ಯುವ ನಾಯಕ ಹಾಗೂ ಕಟ್ಟರ ಭಾರತ ವಿರೋಧಿ ಶರೀಫ್ ಉಸ್ಮಾನ್ ಹಾದಿ ಡಿಸೆಂಬರ್ ೧೨ ರಂದು ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದನು. ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವನು ಡಿಸೆಂಬರ್ ೧೮ ರಂದು ಮೃತಪಟ್ಟ ನಂತರ ಅಂದೇ ರಾತ್ರಿಯಿಂದ ಬಾಂಗ್ಲಾದೇಶದ ರಾಜಧಾನಿಯಲ್ಲಿ ಹಿಂಸಾಚಾರ ಪ್ರಾರಂಭವಾಗಿದೆ. ಹಾದಿಯ ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ನಡೆಸತೊಡಗಿದರು. ಇಲ್ಲಿ ಅನೇಕ ಕಚೇರಿಗಳ ಮೇಲೆ ದಾಳಿ ನಡೆಸಲಾಯಿತು. ಹಾಗೆಯೇ ೨ ದಿನಪತ್ರಿಕೆಗಳ ಕಚೇರಿಗಳಿಗೆ ಬೆಂಕಿ ಹಚ್ಚಲಾಯಿತು. ಇಲ್ಲಿ ೨೮ ಪತ್ರಕರ್ತರನ್ನು ಕೊಲ್ಲುವ ಪ್ರಯತ್ನವೂ ನಡೆಯಿತು. ಅದೇ ಸಮಯದಲ್ಲಿ ಹಿಂದೂಗಳ ಮೇಲೆಯೂ ದಾಳಿಗಳು ನಡೆದವು. ಒಬ್ಬ ಹಿಂದೂ ಯುವಕನನ್ನು ಜೀವಂತವಾಗಿ ಸುಟ್ಟರು. ಹಾದಿಯ ನಿಧನದ ನಂತರ ಬಾಂಗ್ಲಾದೇಶದಲ್ಲಿ ಡಿಸೆಂಬರ್ ೧೯ ರಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಮಾಡಲಾಯಿತು. ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವಿರುದ್ಧ ನಡೆದ ಆಂದೋಲನದಲ್ಲಿ ಹಾದಿ ಭಾಗಿಯಾಗಿದ್ದನು. ಹಿಂಸಾಚಾರದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಸೇನೆ ಮತ್ತು ಅರೆಸೇನಾ ಪಡೆಯ ಸೈನಿಕರನ್ನು ಉದ್ವಿಗ್ನ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ಡಿಸೆಂಬರ್ ೧೮ ರ ರಾತ್ರಿ ‘ಇನಕ್ವಿಲಾಬ್ ಮಂಚ್’ ಢಾಕಾದ ಶಾಹಾಬಾಗ್ ಪ್ರದೇಶದಲ್ಲಿ ಒಟ್ಟುಗೂಡುವಂತೆ ಹಾದಿಯ ಬೆಂಬಲಿಗರಿಗೆ ಕರೆ ನೀಡಿತ್ತು. ಹಾದಿ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ನಾಯಕನಾಗಿ ಹೊರಹೊಮ್ಮಿದ್ದನು. ಢಾಕಾ ವಿಶ್ವವಿದ್ಯಾಲಯದ ‘ಜಾತಿಯಾ ಛಾತ್ರ ಶಕ್ತಿ’ ಎಂಬ ವಿದ್ಯಾರ್ಥಿ ಸಂಘಟನೆಯು ಶೋಕಯಾತ್ರೆ ನಡೆಸಿ ಹಾದಿಯ ಹತ್ಯೆಯನ್ನು ಖಂಡಿಸಿದೆ. ಹಾದಿಯ ಕೊಲೆಗಡುಕರಿಗೆ ಶಿಕ್ಷೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಪ್ರತಿಭಟನೆಯ ಸಮಯದಲ್ಲಿ ಈ ಸಂಘಟನೆಯ ಕಾರ್ಯಕರ್ತರು ಬಾಂಗ್ಲಾದೇಶದ ಗೃಹ ಇಲಾಖೆಯ ಸಲಹೆಗಾರ ಜಹಾಂಗೀರ್ ಆಲಂ ಚೌಧರಿ ಅವರ ಮನೆಗೆ ಬೆಂಕಿ ಹಚ್ಚಿದರು.

ಕಾನೂನನ್ನು ಕೈಗೆತ್ತಿಕೊಳ್ಳಬೇಡಿ ಎಂದು ಯೂನಸ್ ಅವರಿಂದ ಪ್ರತಿಭಟನಾಕಾರರಿಗೆ ಮನವಿ

ಉಸ್ಮಾನ್ ಹಾದಿ ನಿಧನಕ್ಕೆ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯೂನಸ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಗೆಯೇ ‘ಪ್ರತಿಭಟನಾಕಾರರು ಕಾನೂನನ್ನು ಕೈಗೆತ್ತಿಕೊಳ್ಳಬಾರದು, ಹಾದಿಯ ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು’ ಎಂದು ಅವರು ಭರವಸೆ ನೀಡಿದ್ದಾರೆ.

‘ಪ್ರೋಥೋಮ್ ಅಲೋ’ ಮತ್ತು ‘ಡೈಲಿ ಸ್ಟಾರ್’ ದಿನಪತ್ರಿಕೆಗಳ ಕಚೇರಿಗಳಿಗೆ ಬೆಂಕಿ !

‘ಪ್ರೋಥಮ್ ಅಲೋ’ ಮತ್ತು ‘ಡೈಲಿ ಸ್ಟಾರ್’ ದಿನಪತ್ರಿಕೆಗಳ ಕಚೇರಿಗಳಿಗೆ ಬೆಂಕಿ ಹಚ್ಚಲಾಯಿತು.

ಬಾಂಗ್ಲಾದೇಶದಲ್ಲಿ ಅತಿ ಹೆಚ್ಚು ಪ್ರಸಾರವಿರುವ ಪತ್ರಿಕೆಗಳಲ್ಲಿ ಒಂದಾದ ‘ಪ್ರೋಥೋಮ್ ಅಲೋ’ ಮತ್ತು ‘ಡೈಲಿ ಸ್ಟಾರ್’ ಪತ್ರಿಕೆಗಳ ಕಚೇರಿಗಳಿಗೆ ಬೆಂಕಿ ಹಚ್ಚಲಾಯಿತು. ಆ ಸಮಯದಲ್ಲಿ ಅನೇಕ ಪತ್ರಕರ್ತರು ಮತ್ತು ನಾಗರಿಕರು ಕಟ್ಟಡದಲ್ಲಿ ಸಿಲುಕಿಕೊಂಡಿದ್ದರು. ಪ್ರತಿಭಟನಾಕಾರರು ಮೊದಲು ಕಟ್ಟಡವನ್ನು ಮುತ್ತಿಗೆ ಹಾಕಿ ನಂತರ ಬೆಂಕಿ ಹಚ್ಚಿದರು. ಪೊಲೀಸರು ಕಟ್ಟಡದಲ್ಲಿ ಸಿಲುಕಿದ್ದ ಪತ್ರಕರ್ತರನ್ನು ಹರಸಾಹಸ ಪಟ್ಟು ಹೊರತಂದರು. ಈ ಕಚೇರಿಗಳಿಗೆ ಬೆಂಕಿ ಹಚ್ಚುವ ಮೊದಲು ಲೂಟಿಯನ್ನೂ ಮಾಡಿದರು. ಹಾಗೆಯೇ ಇತರ ಪ್ರಮುಖ ಕಟ್ಟಡಗಳಿಗೂ ಬೆಂಕಿ ಹಚ್ಚಿದರು.

ಬೆಂಕಿಯಲ್ಲಿ ಸಿಲುಕಿದ್ದ ‘ಡೈಲಿ ಸ್ಟಾರ್’ನ ಪತ್ರಕರ್ತೆ ಜೈಮಾ ಇಸ್ಲಾಂ ಅವರು ‘ಫೇಸ್‌ಬುಕ್’ನಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ‘ನನಗೆ ಈಗ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿ ತುಂಬಾ ಹೊಗೆ ಇದೆ. ನಾನು ಒಳಗಿದ್ದೇನೆ’ ಎಂದು ಹೇಳಿದ್ದರು.

ಈ ದಾಳಿಯಿಂದಾಗಿ ಡಿಸೆಂಬರ್ ೧೯ ರಂದು ಎರಡೂ ಪತ್ರಿಕೆಗಳು ಪ್ರಕಟಗೊಳ್ಳಲು ಸಾಧ್ಯವಾಗಲಿಲ್ಲ. ಹಾಗೆಯೇ ಅವುಗಳ ಆನ್‌ಲೈನ್ ಸೇವೆಯೂ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ನ್ಯೂ ಏಜ್’ ಸಂಪಾದಕರ ಮೇಲೆ ದಾಳಿ

ಢಾಕಾದ ‘ನ್ಯೂ ಏಜ್’ ಸಂಪಾದಕ ನುರುಲ್ ಕಬೀರ್ ಅವರ ಮೇಲೆ ಕೆಲವು ವ್ಯಕ್ತಿಗಳು ದಾಳಿ ನಡೆಸಿದರು.
ರಾತ್ರಿ ವಿಧ್ವಂಸಕ ಕೃತ್ಯನಡೆಸಿದರು ಮತ್ತು ಬೆಂಕಿ ಹಚ್ಚುತ್ತಾ ಪ್ರತಿಭಟನಾಕಾರರು ಕಬೀರ್ ಅವರ ಕಚೇರಿಗೆ ತಲುಪಿ ಅವರ ಮೇಲೆ ದಾಳಿ ಮಾಡಿದರು

ಮುಜಿಬುರ್ ರೆಹಮಾನ್ ಅವರ ನಿವಾಸ ಧ್ವಂಸ

ಹಿಂಸಾತ್ಮಕ ಪ್ರತಿಭಟನಾಕಾರರು ಮಾಜಿ ರಾಷ್ಟ್ರಪತಿ ಶೇಖ್ ಮುಜಿಬುರ್ ರೆಹಮಾನ್ ಅವರ ನಿವಾಸವನ್ನೂ ಧ್ವಂಸಗೊಳಿಸಿದರು. ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಕಚೇರಿಗಳಿಗೂ ಬೆಂಕಿ ಹಚ್ಚಿದರು. ಹಾದಿ ನಿಧನದ ನಂತರ ಅವನ ಬೆಂಬಲಿಗರು ಢಾಕಾ ವಿಶ್ವವಿದ್ಯಾಲಯದ ಶೇಖ್ ಮುಜಿಬುರ್ ರೆಹಮಾನ್ ಸಭಾಂಗಣದ ಹೆಸರನ್ನು ‘ಶಹೀದ್ ಉಸ್ಮಾನ್ ಹಾದಿ ಹಾಲ್’ ಎಂದು ಫಲಕವನ್ನು
ಹಾಕಿದ್ದಾರೆ.

ಪತ್ರಕರ್ತನ ಗುಂಡಿನ ದಾಳಿಯಲ್ಲಿ ಹತ್ಯೆ

ಬಾಂಗ್ಲಾದೇಶದ ಖುಲನಾದಲ್ಲಿ ಪತ್ರಕರ್ತ ಇಮ್ದಾದುಲ್ ಹಕ್ ಮಿಲನ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈ ಘಟನೆಯಲ್ಲಿ ಇನ್ನೋರ್ವ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಪೋಲೀಸರು ಹೇಳಿದರು. ಮಿಲನ್ ಅವರು ಶಾಲುಆ ಪ್ರೆಸ್ ಕ್ಲಬ್‌ನ ಅಧ್ಯಕ್ಷರಾಗಿದ್ದರು. ಗುಂಡಿನ ದಾಳಿಯ ಸಮಯದಲ್ಲಿ ಮಿಲನ್ ಶಾಲುವಾ ಮಾರುಕಟ್ಟೆಯ ಚಹಾ ಅಂಗಡಿಯೊಂದರಲ್ಲಿ ಕುಳಿತು ಚಹಾ ಕುಡಿಯುತ್ತಿದ್ದರು. ಅದೇ ಕ್ಷಣದಲ್ಲಿ ೨ ಮೋಟಾರ್ ಸೈಕಲ್‌ಗಳಲ್ಲಿ ಬಂದ ೪ ಮಂದಿ ಏಕಾಏಕಿ ಗುಂಡಿನ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಚಿತ್ತಗಾಂಗ್‌ನಲ್ಲಿ ಭಾರತೀಯ ಹೈಕಮಿಷನ್ ಮೇಲೆ ದಾಳಿ

ಢಾಕಾದಂತೆಯೇ ಚಿತ್ತಗಾಂಗ್‌ನಲ್ಲೂ ಹಲವೆಡೆ ಪ್ರತಿಭಟನೆಗಳು ನಡೆದವು. ಭಾರತೀಯ ಸಹಾಯಕ ಹೈಕಮಿಷನರ್ ನಿವಾಸದ ಮುಂದೆ ದೊಡ್ಡ ಜನಸಮೂಹ ಜಮಾಯಿಸಿತ್ತು. ಅವರು ಹೈಕಮಿಷನ್ ಮೇಲೆ ಇಟ್ಟಿಗೆಗಳನ್ನು ಎಸೆದರು. ಪ್ರತಿಭಟನಾಕಾರರ ಒಂದು ಗುಂಪು ಕಚೇರಿಯ ಹೊರಗೆ ಧರಣಿ ನಡೆಸಿ ಹಾದಿ ಹತ್ಯೆಯ ವಿರುದ್ಧ ಘೋಷಣೆಗಳನ್ನು ಕೂಗಿತು. ಅವರು ಅವಾಮಿ ಲೀಗ್ ಮತ್ತು ಭಾರತ ವಿರೋಧಿ ಘೋಷಣೆಗಳನ್ನೂ ಕೂಗಿದರು. ಪ್ರತಿಭಟನಾಕಾರರ ಒಂದು ಗುಂಪು ಸಂಕೀರ್ಣದ ೨ ನೇ ಸಂಖ್ಯೆಯ ಗೇಟ್ ಬಳಿ ಜಮಾಯಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಕ್ರಮ ಕೈಗೊಂಡು ಗುಂಪನ್ನು ಚದುರಿಸಲು ಅಶ್ರುವಾಯು ನಳಿಕೆ ಸಿಡಿಸಿದರು ಮತ್ತು ಲಾಠಿ ಚಾರ್ಜ್ ನಡೆಸಿದರು.

ಬಳಿಕ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಇದಲ್ಲದೆ, ಶೇಖ್ ಹಸೀನಾ ಅವರ ಅವಾಮಿ ಲೀಗ್ ಸರಕಾರದಲ್ಲಿ ಮಾಜಿ ಶಿಕ್ಷಣ ಸಚಿವರಾಗಿದ್ದ ಮೊಹಿಬುಲ್ ಹಸನ್ ಚೌಧರಿ ಅವರ ಮನೆ ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ.

ಭಾರತದಿಂದ ಬಾಂಗ್ಲಾದೇಶದಲ್ಲಿರುವ ಭಾರತೀಯರಿಗೆ ಸೂಚನೆ

ಬಾಂಗ್ಲಾದೇಶದಲ್ಲಿರುವ ಭಾರತೀಯ ಹೈಕಮಿಷನ್ ಡಿಸೆಂಬರ್ ೧೯ ರಂದು ಬೆಳಿಗ್ಗೆ ಸೂಚನೆಯೊಂದನ್ನು ಹೊರಡಿಸಿದ್ದು, ಬಾಂಗ್ಲಾದೇಶದಲ್ಲಿ ವಾಸಿಸುವ ಭಾರತೀಯ ಸಮುದಾಯದ ಸದಸ್ಯರು ಮತ್ತು ಭಾರತೀಯ ವಿದ್ಯಾರ್ಥಿಗಳು ಪ್ರಯಾಣಿಸುವುದನ್ನು ತಪ್ಪಿಸುವಂತೆ ಮನವಿ ಮಾಡಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶವು ಎರಡನೇ ಪಾಕಿಸ್ತಾನವಾಗುತ್ತಿರುವುದರಿಂದ ಭಾರತವು ಈಗ ಪಾಕಿಸ್ತಾನ, ಚೀನಾ ಮತ್ತು ಬಾಂಗ್ಲಾದೇಶ ಹೀಗೆ ೩ ರಂಗಗಳಲ್ಲಿ ಹೋರಾಡಬೇಕಿದೆ‌ ಇದಕ್ಕಾಗಿ ಭಾರತೀಯ ಜನತೆ ಸಿದ್ಧರಿದ್ದಾರೆಯೇ?