ಒಪ್ಪಿಗೆಯಿಂದ ಸಂಬಂಧ ಬೆಳೆದು ಅದು ಮದುವೆಯಾಗಿ ಪರಿವರ್ತನೆಯಾಗದಿದ್ದರೆ ಅದನ್ನು ಅತ್ಯಾಚಾರ ಎನ್ನಲಾಗದು ! – ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಪರಸ್ಪರ ಸಮ್ಮತಿಯಿಂದ ಸುದೀರ್ಘ ಕಾಲ ನಡೆದ ಸಂಬಂಧವು ಮುರಿದು, ಮದುವೆಯಾಗಲು ಸಾಧ್ಯವಾಗದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಅದನ್ನು ಅತ್ಯಾಚಾರವೆಂದು ಪರಿಗಣಿಸಲಾಗದು, ಎಂದು ಸರ್ವೋಚ್ಚ ನ್ಯಾಯಾಲಯವು ಒಂದು ಪ್ರಕರಣದಲ್ಲಿ ತೀರ್ಪು ನೀಡಿದೆ. ಇಂತಹ ಪ್ರಕರಣಗಳಲ್ಲಿ ಕಾನೂನಿನ ದುರುಪಯೋಗವಾಗಬಾರದು ಎಂದು ನ್ಯಾಯಾಲಯ ಹೇಳಿದೆ. ನಿಜವಾಗಿಯೂ ಬಲವಂತ, ಭಯ, ಒತ್ತಡ ಅಥವಾ ಒಪ್ಪಿಗೆಯ ಕೊರತೆ ಇದ್ದಾಗ ಮಾತ್ರ ಅತ್ಯಾಚಾರದಂತಹ ಆರೋಪಗಳನ್ನು ಮಾಡಬೇಕು.

ಏನಿದು ಪ್ರಕರಣ ?

ಆಗಸ್ಟ್ 2024 ರಂದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಮಹಿಳೆಯೊಬ್ಬರು ಓರ್ವ ವಕೀಲರ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದರು. ಈ ಮಹಿಳೆಯು ತನ್ನ ಪತಿಯ ವಿರುದ್ಧ ದೂರು ನೀಡಿ, ಆತನಿಂದ ನಿರ್ವಹಣಾ ವೆಚ್ಚಕ್ಕಾಗಿ ಹಣವನ್ನು ಕೇಳುವ ಪ್ರಕ್ರಿಯೆ ಪ್ರಾರಂಭಿಸಿದ್ದರು. ಈ ನಡುವೆ ಆಕೆ ಆರೋಪಿ ವಕೀಲರನ್ನು ಭೇಟಿಯಾದರು. ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾದಾಗ, ಆರೋಪಿಯು ಮದುವೆಯ ಬಗ್ಗೆ ಕೇಳಿದರು; ಆದರೆ ಮಹಿಳೆ ಮೊದಲು ನಿರಾಕರಿಸಿದರು. ನಂತರ ಮಹಿಳೆ ಗರ್ಭಿಣಿಯಾದರು ಮತ್ತು ಗರ್ಭಪಾತ ಕೂಡ ಆಯಿತು. ಮಹಿಳೆ ಮದುವೆಯ ಬಗ್ಗೆ ಕೇಳಿದಾಗ, ಆರೋಪಿಯು ಹಿಂದೆ ಸರಿದರು. ಇದರ ನಂತರ, ಮಹಿಳೆಯು ಆತನ ವಿರುದ್ಧ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿ, ‘ಆರೋಪಿಯು ಮದುವೆಯ ಆಮಿಷವೊಡ್ಡಿ ದೈಹಿಕ ಸಂಬಂಧ ಇಟ್ಟುಕೊಂಡರು’ ಎಂದು ಆರೋಪಿಸಿದರು.

ಈ ಕುರಿತು ಸರ್ವೋಚ್ಚ ನ್ಯಾಯಾಲಯವು, ‘ಮಹಿಳೆ ಮತ್ತು ಆರೋಪಿ ವಕೀಲರು 3 ವರ್ಷಗಳಿಂದ ಸಂಬಂಧದಲ್ಲಿದ್ದರು ಮತ್ತು ಈ ಸಂಬಂಧವು ಸಂಪೂರ್ಣವಾಗಿ ಪರಸ್ಪರ ಒಪ್ಪಿಗೆಯಿಂದ ನಡೆದಿತ್ತು’ ಎಂದು ಅಭಿಪ್ರಾಯಪಟ್ಟಿತು. “ಆರೋಪಿಯು ಕೇವಲ ದೈಹಿಕ ಸಂಬಂಧಕ್ಕಾಗಿ ಮೋಸಗೊಳಿಸಿ, ನಂತರ ಕಣ್ಮರೆಯಾದ ಪ್ರಕರಣ ಇದಲ್ಲ ಎಂದು ನಮಗೆ ಅನಿಸುತ್ತದೆ. ಈ ಸಂಬಂಧವು 3 ವರ್ಷಗಳ ಕಾಲ ನಡೆಯಿತು, ಇದು ಬಹಳ ದೊಡ್ಡ ಅವಧಿಯಾಗಿದೆ. ಕೆಲವು ಪ್ರಕರಣಗಳಲ್ಲಿ ನಿಜವಾಗಿಯೂ ವಿಶ್ವಾಸದ್ರೋಹ ನಡೆದಿರುತ್ತದೆ ಮತ್ತು ಮಹಿಳೆಯರಿಗೆ ಹಾನಿಯಾಗುತ್ತದೆ. ಅಂತಹ ಪ್ರಕರಣಗಳಲ್ಲಿ ಕಾನೂನು ಖಂಡಿತವಾಗಿಯೂ ಸಹಾಯ ಮಾಡುತ್ತದೆ; ಆದರೆ ಆರೋಪಗಳು ಕೇವಲ ಕೋಪ ಅಥವಾ ಊಹೆಗಳ ಮೇಲೆ ಆಧರಿಸಿರಬಾರದು, ಬದಲಿಗೆ ಪುರಾವೆಗಳ ಮೇಲೆ ಆಧಾರಿತವಾಗಿರಬೇಕು” ಎಂದು ನ್ಯಾಯಾಲಯ ತಿಳಿಸಿತು.