ಪಾಕಿಸ್ತಾನ: ಚೀನೀ ಸಂಸ್ಥೆಗಳಲ್ಲಿ ಕ್ಯಾಮೆರಾ ಅಳವಡಿಕೆಗೆ ಪಾಕಿಸ್ತಾನದಿಂದ ಎಚ್ಚರಿಕೆ : Pakistan Warns China

ಚೀನಾದ ಆಕ್ಷೇಪ

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ತೆರಿಗೆಗೆ ಸಂಬಂಧಿಸಿದ ಸರ್ವೋಚ್ಚ ಸರಕಾರಿ ಸಂಸ್ಥೆಯಾದ ‘ಫೆಡರಲ್ ಬೋರ್ಡ್ ಆಫ್ ರೆವಿನ್ಯೂ’ ಪಾಕಿಸ್ತಾನದಲ್ಲಿನ ಚೀನೀ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ. ಚೀನೀ ಸಂಸ್ಥೆಗಳು ತಮ್ಮ ಉತ್ಪಾದನೆಯ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು, ಇಲ್ಲದಿದ್ದರೆ ಪಾಕಿಸ್ತಾನದಲ್ಲಿ ತಮ್ಮ ವಹಿವಾಟನ್ನು ಸ್ಥಗಿತಗೊಳಿಸಬೇಕೆಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ತೆರಿಗೆ ವಂಚನೆಯ ಸಮಸ್ಯೆಯ ಹಿನ್ನೆಲೆಯಲ್ಲಿ ಪಾಕಿಸ್ತಾನವು ಇಂತಹ ಕಠಿಣ ನಿಲುವು ತೆಗೆದುಕೊಂಡಿದೆ. ಆದರೆ 4 ಚೀನೀ ಸಂಸ್ಥೆಗಳ ಪ್ರತಿನಿಧಿಗಳು, ಸಂಸ್ಥೆಗಳ ಆಡಳಿತ ಮಂಡಳಿಯು ಇದಕ್ಕೆ ಅನುಮತಿಯಿಲ್ಲವೆಂದು ಫೆಡರಲ್ ಬೋರ್ಡ್ ಆಫ್ ರೆವಿನ್ಯೂ ಗೆ ತಿಳಿಸಿದ್ದಾರೆ.

1. ಪಾಕಿಸ್ತಾನದಲ್ಲಿ ‘ಟೈಲ್ಸ್’ ತಯಾರಿಸುವ ಚೀನೀ ಸಂಸ್ಥೆಗಳು ಕಡಿಮೆ ಉತ್ಪಾದನೆಯನ್ನು ತೋರಿಸಿ, ಪ್ರತಿ ವರ್ಷ ಸುಮಾರು 30 ಬಿಲಿಯನ್ ರೂಪಾಯಿಗಳ ತೆರಿಗೆ ವಂಚನೆ ಮಾಡುತ್ತಿವೆ ಎಂದು ಸರಕಾರ ಹೇಳುತ್ತಿದೆ.

2. ಈ ಕಾರಣಕ್ಕಾಗಿಯೇ, ಪಾಕಿಸ್ತಾನ ಸರಕಾರವು ಎಲ್ಲಾ ಸ್ಥಳೀಯ ಹಾಗೂ ವಿದೇಶಿ ‘ಸೆರಾಮಿಕ್’ ಕಾರ್ಖಾನೆಗಳ ಉತ್ಪಾದನೆಯ ಮೇಲೆ ನಿಗಾ ಇಡಲು ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ.

ಚೀನಾದ ನಿಲುವು!

ಉತ್ಪಾದನೆಯ ಮೇಲೆ ನಿಗಾ ಇಡಲು ಕ್ಯಾಮೆರಾಗಳನ್ನು ಅಳವಡಿಸಿದರೆ, ನಮ್ಮ ವ್ಯಾಪಾರ ರಹಸ್ಯಗಳು(ಟ್ರೇಡ್ ಸೀಕ್ರೆಟ್ ಗಳು) ಬಹಿರಂಗವಾಗುತ್ತವೆ ಎಂದು ಚೀನೀ ಸಂಸ್ಥೆಗಳು ವಾದವನ್ನು ಮಂಡಿಸಿದವು. ಆದಾಗ್ಯೂ, ಈ ವಾದವನ್ನು ಪಾಕಿಸ್ತಾನವು ತಳ್ಳಿಹಾಕಿತು. ನಾವು ಈಗಾಗಲೇ ಚೀನೀ ಹೂಡಿಕೆದಾರರಿಗೆ ವಿನಾಯಿತಿ ನೀಡಿದ್ದೇವೆ. ಪ್ರತಿ ಕಾರ್ಖಾನೆಯಲ್ಲಿ ಈ ಹಿಂದೆ ಇದ್ದಂತಹ 16 ಕ್ಯಾಮೆರಾಗಳನ್ನು ತೆಗೆದು ಸದ್ಯ 5 ಕ್ಯಾಮೆರಾಗಳನ್ನು ಮಾತ್ರ ಇರಿಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.

ಸಂಪಾದಕೀಯ ನಿಲುವು

ತೆರಿಗೆ ವಂಚನೆಯಾಗದಂತೆ ತಡೆಯಲು ಇಂತಹ ನಿಯಂತ್ರಣವಿರಬೇಕು. ಯಾವ ದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆಯೋ, ಅಲ್ಲಿ ಕ್ಯಾಮೆರಾ ಅಳವಡಿಸಿದರೂ ಅಥವಾ ಸರಕಾರಿ ಅಧಿಕಾರಿಗಳ ಮುಂದೆಯೇ ಉತ್ಪಾದನೆ ಮಾಡಿದರೂ, ತೆರಿಗೆ ವಂಚನೆ ಆಗಿಯೇ ಆಗುತ್ತದೆ. ಆದ್ದರಿಂದ ಇಂತಹ ಕ್ರಮಗಳನ್ನು ನೋಡಿದಾಗ ಪಾಕಿಸ್ತಾನದ ಬಗ್ಗೆ ಕರುಣೆ ಮೂಡದೆ ಇರದು.