ಭಾರತಕ್ಕೆ 113 ತೇಜಸ್ ‘ಮಾರ್ಕ್-1ಎ’ ಇಂಜಿನ್‌ಗಳನ್ನು ನೀಡಿದ ಅಮೆರಿಕ!

ಭಾರತದ ‘ಎಚ್‌ಎಎಲ್’ (HAL) ಮತ್ತು ಅಮೆರಿಕದ ಸಂಸ್ಥೆ ‘ಜಿಇ’ (GE) ನಡುವೆ ಸುಮಾರು 8,870 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಒಪ್ಪಂದ!

ನವದೆಹಲಿ – ಭಾರತದ ‘ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್’ (HAL) ನವೆಂಬರ್ 7 ರಂದು ಅಮೆರಿಕದ ‘ಜನರಲ್ ಎಲೆಕ್ಟ್ರಿಕ್’ (GE) ಸಂಸ್ಥೆ ಜೊತೆ 1 ಬಿಲಿಯನ್ ಡಾಲರ್ (ಸುಮಾರು 8,870 ಕೋಟಿ ರೂಪಾಯಿಗಳಿಗಿಂತ ಹೆಚ್ಚು) ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಅಡಿಯಲ್ಲಿ, ‘ಜನರಲ್ ಎಲೆಕ್ಟ್ರಿಕ್’ ಭಾರತಕ್ಕೆ 113 ಜೆಟ್ ಇಂಜಿನ್‌ಗಳು ಮತ್ತು ‘ಸಪೋರ್ಟ್ ಪ್ಯಾಕೇಜ್‌’ಗಳನ್ನು ಒದಗಿಸಲಿದೆ.

‘ಎಚ್‌ಎಎಲ್’ ತನ್ನ ‘ಎಕ್ಸ್’ ಖಾತೆಯ ಒಂದು ಪೋಸ್ಟ್‌ನಲ್ಲಿ ಈ ಒಪ್ಪಂದದ ಮಾಹಿತಿ ನೀಡಿದೆ. ಈ ಇಂಜಿನ್‌ಗಳನ್ನು 97 ‘ಮಾರ್ಕ್-1ಎ’ ಲಘು ಯುದ್ಧ ವಿಮಾನಗಳಲ್ಲಿ (ತೇಜಸ್ ಯುದ್ಧ ವಿಮಾನಗಳಲ್ಲಿ) ಅಳವಡಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಈ ಇಂಜಿನ್‌ಗಳನ್ನು ಭಾರತಕ್ಕೆ 2027 ರಿಂದ 2032 ರ ಅವಧಿಯಲ್ಲಿ ಪೂರೈಕೆ ಮಾಡಲಾಗುವುದು. ರಕ್ಷಣಾ ಸಚಿವಾಲಯವು ಸೆಪ್ಟೆಂಬರ್ 25 ರಂದು ‘ಎಚ್‌ಎಎಲ್’ ಜೊತೆ 62,370 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದ್ದು, ಇದರ ಅಡಿಯಲ್ಲಿ ‘ಎಚ್‌ಎಎಲ್’ ಭಾರತೀಯ ವಾಯುಪಡೆಗಾಗಿ 97 ‘ಎಲ್‌ಸಿಎ ತೇಜಸ್ ಮಾರ್ಕ್-1ಎ’ ಯುದ್ಧ ವಿಮಾನಗಳನ್ನು ಸಿದ್ಧಪಡಿಸಲಿದೆ.

ಭಾರತೀಯ ವಾಯುಪಡೆಗೆ ವಿಮಾನಗಳ ಪೂರೈಕೆ ಇನ್ನೂ ಬಾಕಿ!

ಫೆಬ್ರವರಿ 2021 ರಲ್ಲಿ, ಸರಕಾರವು 83 ತೇಜಸ್ ‘ಮಾರ್ಕ್-1ಎ’ ವಿಮಾನಗಳನ್ನು ಖರೀದಿಸಲು ‘ಎಚ್‌ಎಎಲ್’ ಜೊತೆ 48,000 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಅಮೆರಿಕನ್ ಇಂಜಿನ್‌ಗಳ ವಿತರಣೆಯಲ್ಲಿ ವಿಳಂಬವಾಗುತ್ತಿದ್ದರಿಂದ ‘ಎಚ್‌ಎಎಲ್’ ಇನ್ನೂ ಒಂದು ವಿಮಾನವನ್ನೂ ಸಹ ವಾಯುಪಡೆಗೆ ನೀಡಿಲ್ಲ. 2028 ರ ವೇಳೆಗೆ ‘ಎಚ್‌ಎಎಲ್’ ಎಲ್ಲಾ ವಿಮಾನಗಳನ್ನು ವಾಯುಪಡೆಗೆ ನೀಡುವ ನಿರೀಕ್ಷೆಯಿದೆ. ಈ ವಿಮಾನಗಳಿಗಾಗಿ ‘ಎಚ್‌ಎಎಲ್’ಗೆ ಈಗಾಗಲೇ ‘ಜಿಇ’ಯಿಂದ 4 ಇಂಜಿನ್‌ಗಳು ಲಭ್ಯವಾಗಿವೆ.