ಗುರು ನಾನಕ್ ಜಯಂತಿಯ ನಿಮಿತ್ತ ಪಾಕಿಸ್ತಾನದ ಗುರುದ್ವಾರಕ್ಕೆ ಹೋಗಲು ಬಯಸಿದವರನ್ನು ಗಡಿಯಿಂದ ಹಿಂದಕ್ಕೆ ಕಳುಹಿಸಲಾಯಿತು! : Hindus Entry Denied

  • ಪಾಕಿಸ್ತಾನದಿಂದ ಹಿಂದೂ ಮತ್ತು ಸಿಖ್ಖರ ನಡುವೆ ಒಡಕು ಮೂಡಿಸುವ ಪ್ರಯತ್ನ!
  • ಸಿಖ್ಖರಿಗೆ ಮಾತ್ರ ಪುಷ್ಪವೃಷ್ಟಿಗೈದು ಸ್ವಾಗತಿಸಲಾಯಿತು!

ಲಾಹೋರ (ಪಾಕಿಸ್ತಾನ) – ಗುರು ನಾನಕ್ ಜಯಂತಿಯ ನಿಮಿತ್ತ, ಪಾಕಿಸ್ತಾನದ ನನಕಾನಾದಲ್ಲಿರುವ ಜನ್ಮಸ್ಥಳವಾಗಿರುವ ಗುರುದ್ವಾರಕ್ಕೆ ಭೇಟಿ ನೀಡಲು ಭಾರತದಿಂದ ಸಿಖ್ ಮತ್ತು ಹಿಂದೂ ಯಾತ್ರಿಕರು ತೆರಳಿದ್ದರು. ಈ ಸಂದರ್ಭದಲ್ಲಿ, ಪಾಕಿಸ್ತಾನವು ಹಿಂದೂ ಮತ್ತು ಸಿಖ್ಖರ ನಡುವೆ ಒಡಕು ಮೂಡಿಸಲು ಪ್ರಯತ್ನಿಸಿತು. ಪಾಕಿಸ್ತಾನವು ಸಿಖ್ಖರಿಗೆ ಪುಷ್ಪವೃಷ್ಟಿಯೊಂದಿಗೆ ಸ್ವಾಗತ ಕೋರಿದರೆ, ಹಿಂದೂಗಳಿಗೆ ಗಡಿ ದಾಟಲು ಅನುಮತಿ ನಿರಾಕರಿಸಿತು. ಪಾಕಿಸ್ತಾನದ ಅಧಿಕಾರಿಗಳು ಹಿಂದೂಗಳಿಗೆ ಅವಮಾನ ಮಾಡಿ ಅವರನ್ನು ಹಿಂದಕ್ಕೆ ಕಳುಹಿಸಿದರು. 14 ಹಿಂದೂ ಕುಟುಂಬಗಳು ಹಿಂತಿರುಗಬೇಕಾಯಿತು. ಈ ಕುಟುಂಬಗಳು ದೆಹಲಿ, ಲಖನೌ ಮತ್ತು ನವಾಂಶಹರ್ (ಪಂಜಾಬ್) ಮೂಲದವರಾಗಿದ್ದರು.

ಪಂಜಾಬಿನ ಅಟಾರಿ ಗಡಿಯಿಂದ ಹಿಂದಿರುಗಿದ ನಂತರ ಗಂಗಾರಾಮ ಮತ್ತು ಅಮರಚಂದ ಅವರು, ‘ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ’ಯ ಮೂಲಕ ಪಾಕಿಸ್ತಾನದಲ್ಲಿರುವ ಗುರುಧಾಮಗಳಿಗೆ ಭೇಟಿ ನೀಡಲು ‘ವೀಸಾ’ ಪಡೆದಿದ್ದೆವು ಮತ್ತು ಸಿಖ್ ಯಾತ್ರಿಕರೊಂದಿಗೆ ಹೋಗಿದ್ದೆವು. ಆದರೆ ಪಾಕಿಸ್ತಾನದ ವಾಘಾ ಗಡಿಯಲ್ಲಿ ಪಾಕಿಸ್ತಾನಿ ಪಾಸ್‌ ಪೋರ್ಟ್ ಅಧಿಕಾರಿಗಳು ಮತ್ತು ಸೇನಾಧಿಕಾರಿಗಳು ನಮ್ಮೊಂದಿಗೆ ಅತ್ಯಂತ ಅಸಭ್ಯವಾಗಿ ವರ್ತಿಸಿದರು. ಅವರು, ನೀವು ಹಿಂದೂಗಳು, ಸಿಖ್ ಯಾತ್ರಿಕರೊಂದಿಗೆ ಏಕೆ ಬಂದಿದ್ದೀರಿ? ನಿಮ್ಮ ದೇವಸ್ಥಾನಗಳಿಗೆ ಹೋಗಿ, ಸಿಖ್ಖರ ಗುರುದ್ವಾರಕ್ಕೆ ಏನು ಮಾಡಲು ಬಂದಿದ್ದೀರಿ? ಎಂದು ಹೇಳಿದರು. ಈ ವೇಳೆ ಹಿಂದೂಗಳು, ಗುರು ನಾನಕ್ ದೇವಜಿ ಅವರನ್ನು ಸಿಖ್ಖರು ಮಾತ್ರವಲ್ಲ, ಹೆಚ್ಚಿನ ಸಂಖ್ಯೆಯ ಹಿಂದೂ ಭಕ್ತರೂ ಸಹ ಪೂಜಿಸುತ್ತಾರೆ ಮತ್ತು ಅವರ ಬೋಧನೆಗಳ ಪ್ರಕಾರ ನಡೆಯುತ್ತಾರೆ, ಎಂದು ತಿಳಿಸಿದರು. ಆದರೂ ಅಧಿಕಾರಿಗಳು ಅವರ ಮಾತುಗಳನ್ನು ಕೇಳದೆ ಅವರನ್ನು ಹಿಂದಕ್ಕೆ ಕಳುಹಿಸಿದರು.

ಈ ಹಿಂದೂ ಯಾತ್ರಿಕರಲ್ಲಿ ಕೆಲವರು ಪಾಕಿಸ್ತಾನದಲ್ಲಿ ಜನಿಸಿದವರಾಗಿದ್ದರು, ಆದರೆ ಈಗ ಭಾರತದ ಖಾಯಂ ನಾಗರಿಕರಾಗಿದ್ದಾರೆ ಮತ್ತು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.

ಭಾರತ ಸರಕಾರ ಗಮನಹರಿಸಿದೆ!

ಮೂಲಗಳ ಪ್ರಕಾರ, ಭಾರತವು ಈ ವಿಷಯವನ್ನು ಪಾಕಿಸ್ತಾನದ ಮುಂದೆ ಅಧಿಕೃತವಾಗಿ ಪ್ರಸ್ತಾಪಿಸಲಿದೆ. ಪಾಕಿಸ್ತಾನವು ‘ಆಪರೇಷನ್ ಸಿಂದೂರ್’ನಿಂದ ಕೆರಳಿದ್ದು, ಹಿಂದೂ ಮತ್ತು ಸಿಖ್ಖರ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಆ ಕಾರಣದಿಂದಲೇ ಈ ಕೃತ್ಯವನ್ನು ಎಸಗಿದೆ, ಎಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿರುವ ಪಾಕಿಸ್ತಾನ ಪ್ರೇಮಿಗಳು ಈ ಘಟನೆಯನ್ನು ವಿರೋಧಿಸುತ್ತಾರೆಯೇ?