ಇಸ್ಲಾಮಿಕ್ ಕಟ್ಟರವಾದಿಗಳ ವಿರೋಧದಿಂದಾಗಿ ಬಾಂಗ್ಲಾದೇಶದ ಶಾಲೆಗಳಿಂದ ಸಂಗೀತ ಮತ್ತು ಕ್ರೀಡಾ ಶಿಕ್ಷಕರ ಹುದ್ದೆಗಳು ರದ್ದು

ಶೀಘ್ರದಲ್ಲೇ ಬಾಂಗ್ಲಾದೇಶ ಅಧಿಕೃತ ಇಸ್ಲಾಮಿಕ್ ದೇಶವೆಂದು ಘೋಷಣೆಯಾಗಿ ಅಲ್ಲಿ ಶರಿಯತ್ ಕಾನೂನು ಜಾರಿಯಾಗುವ ದಿಕ್ಕಿನಲ್ಲಿ ಮುಂದೆ ಸಾಗುತ್ತಿದೆ. ಇದರಿಂದ ಪಶ್ಚಿಮದಿಂದ ಪಾಕಿಸ್ತಾನ ಮತ್ತು ಪೂರ್ವದಿಂದ ಬಾಂಗ್ಲಾದೇಶವು ಭಾರತಕ್ಕೆ ಸಂಕಷ್ಟವಾಗಿ ನಿಲ್ಲಲಿದೆ!

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಧ್ಯಂತರ ಸರಕಾರವು ಪ್ರಾಥಮಿಕ ಶಾಲೆಗಳಲ್ಲಿ ಸಂಗೀತ ಮತ್ತು ಕ್ರೀಡಾ ಶಿಕ್ಷಕರ ನೇಮಕಾತಿಯ ನಿರ್ಧಾರವನ್ನು ಹಿಂಪಡೆದಿದೆ. ಕಟ್ಟರವಾದಿ ಗುಂಪುಗಳು ಈ ನೇಮಕಾತಿಗಳನ್ನು ‘ಇಸ್ಲಾಂ ವಿರೋಧಿ ನೀತಿ’ ಎಂದು ಕರೆದು ವಿರೋಧಿಸಿದ್ದವು. ಒತ್ತಡದ ಪ್ರಶ್ನೆಗೆ ಉತ್ತರಿಸುವುದನ್ನು ತಪ್ಪಿಸಿದ ಸಚಿವಾಲಯದ ಅಧಿಕಾರಿಯೊಬ್ಬರು, ನೀವೇ ಪರಿಸ್ಥಿತಿಯನ್ನು ನೋಡಿ ಎಂದು ಮಾತ್ರ ಹೇಳಿದ್ದಾರೆ.

ಜಮಾತ್-ಎ-ಇಸ್ಲಾಮಿ, ಹಿಫಾಜತ್-ಎ-ಇಸ್ಲಾಂ ಮತ್ತು ಇತರ ಹಲವಾರು ಧಾರ್ಮಿಕ ಇಸ್ಲಾಮಿಕ್ ಸಂಘಟನೆಗಳು ಮಧ್ಯಂತರ ಸರಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡುತ್ತಾ, ಸಂಗೀತ ಮತ್ತು ಕ್ರೀಡಾ ಶಿಕ್ಷಣವನ್ನು ಮುಂದುವರೆಸಿದರೆ, ಅವು ಬೀದಿಗಿಳಿದು ಪ್ರತಿಭಟಿಸುತ್ತವೆ. ಈ ನಿರ್ಧಾರವು ಮಕ್ಕಳನ್ನು ಧರ್ಮದಿಂದ ದೂರ ಮಾಡುವ ಪ್ರಯತ್ನ ಎಂದು ಅವರು ಆರೋಪಿಸಿದ್ದರು. ಕೆಲವು ಕಟ್ಟರವಾದಿ ನಾಯಕರು ಸಂಗೀತವನ್ನು ಕಲಿಸುವ ಶಿಕ್ಷಕರು ಮಕ್ಕಳನ್ನು ನಿರ್ಲಕ್ಷ್ಯದ ಮತ್ತು ನೈತಿಕತೆಯಿಲ್ಲದವರನ್ನಾಗಿ ಮಾಡುತ್ತಾರೆ ಎಂದು ಸಹ ಹೇಳಿದ್ದರು.

ಮಹಿಳೆಯರ ಸುಧಾರಣೆಗಳ ವಿಷಯದಲ್ಲೂ ಸರಕಾರದ ಹಿನ್ನಡೆ

ಕೆಲವು ತಿಂಗಳ ಹಿಂದೆ ಮಹಿಳಾ ಹಕ್ಕುಗಳಿಗಾಗಿ ರಚಿಸಲಾಗಿದ್ದ ಸುಧಾರಣಾ ಸಮಿತಿಯನ್ನು ಸಹ ಕಟ್ಟರವಾದಿಗಳ ವಿರೋಧದ ನಂತರ ವಿಸರ್ಜಿಸಲಾಗಿತ್ತು. ಆ ಸಮಯದಲ್ಲಿಯೂ ಧಾರ್ಮಿಕ ಸಂಘಟನೆಗಳು ಸರಕಾರಕ್ಕೆ, ಈ ಸುಧಾರಣೆಗಳನ್ನು ಸರಕಾರ ಜಾರಿಗೆ ತಂದರೆ, ಅವರ ನಾಯಕರಿಗೆ ಓಡಿಹೋಗಲು ಅವಕಾಶವೂ ಸಿಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದವು.