ಸ್ಥಳೀಯ ನ್ಯಾಯಾಲಯದ ಆದೇಶದ ನಂತರ ಪಾಕಿಸ್ತಾನದ ಸಂತ್ರಸ್ತ ಹಿಂದೂ ಬಾಲಕಿಯನ್ನು ಕುಟುಂಬಕ್ಕೆ ಒಪ್ಪಿಸಲಾಯಿತು! : Pakistan Hindu Girl

ಮೂರು ತಿಂಗಳ ಹಿಂದೆ ಅಪಹರಣ ಮತ್ತು ಬಲವಂತದ ನಿಕಾಹ್ ನಡೆದಿತ್ತು!

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸುನಿತಾ ಮಹಾರಾಜ್ ಎಂಬ ಹಿಂದೂ ಬಾಲಕಿಯನ್ನು ಸ್ಥಳೀಯ ನ್ಯಾಯಾಲಯದ ಆದೇಶದ ನಂತರ ಆಕೆಯ ಕುಟುಂಬಕ್ಕೆ ಒಪ್ಪಿಸಲಾಯಿತು. ಮೂರು ತಿಂಗಳ ಹಿಂದೆ ಮೀರ್‌ಪುರಖಾಸ್ ಜಿಲ್ಲೆಯ ಕುನ್ರೀನಗರದಿಂದ ಆಕೆಯನ್ನು ಅಪಹರಿಸಿ ಬಲವಂತವಾಗಿ ಮತಾಂತರ ಮಾಡಿ ಒಬ್ಬ ವೃದ್ಧ ಮುಸಲ್ಮಾನ ವ್ಯಕ್ತಿಯೊಂದಿಗೆ ಮದುವೆ ಮಾಡಲಾಗಿತ್ತು. ಉಮರ್‌ಕೋಟ್‌ನ ಕೆಳ ನ್ಯಾಯಾಲಯವು ನವೆಂಬರ್ ೧ ರಂದು ಸುನಿತಾಳನ್ನು ಆಕೆಯ ಕುಟುಂಬಕ್ಕೆ ಒಪ್ಪಿಸುವಂತೆ ಆದೇಶಿಸಿತು ಎಂದು ಹಿಂದೂ ಕಾರ್ಯಕರ್ತ ಶಿವ ಕಾಚಿ ಮಾಹಿತಿ ನೀಡಿದರು.

ಸ್ಥಳೀಯ ಹಿಂದೂ ಸಮುದಾಯದ ಮುಖಂಡರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು, ‘ಸುನಿತಾ ನ್ಯಾಯ ಪಡೆದ ಅದೃಷ್ಟವಂತ ಹಿಂದೂ ಹೆಣ್ಣುಮಕ್ಕಳಲ್ಲಿ ಒಬ್ಬಳು’ ಎಂದು ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನದ ಹಿಂದೂ ನಾಯಕರಿಂದ ಹಿಂದೂಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ!

ನ್ಯಾಯವಾದಿ ಚಂದರ್ ಕೊಹ್ಲಿ ಅವರು ಮಾತನಾಡಿ, ಸಿಂಧ್‌ನಲ್ಲಿ ಹಿಂದೂ ಹೆಣ್ಣುಮಕ್ಕಳ ಅಪಹರಣ, ಬಲವಂತದ ಮತಾಂತರ ಮತ್ತು ಮದುವೆಯಂತಹ ಘಟನೆಗಳು ಯಾವಾಗಲೂ ಹಿಂದೂ ಸಮಾಜದ ಚಿಂತೆಯನ್ನು ಹೆಚ್ಚಿಸುತ್ತಿವೆ. ಸುನಿತಾಳಂತಹ ಅನೇಕ ಸಂತ್ರಸ್ತ ಹೆಣ್ಣುಮಕ್ಕಳು ಬಡ ಕುಟುಂಬದವರಾಗಿದ್ದು, ನ್ಯಾಯಾಲಯದ ಪ್ರಕ್ರಿಯೆಗಳನ್ನು ನಿಭಾಯಿಸಲು ಅವರ ಬಳಿ ಸಂಪನ್ಮೂಲ ಅಥವಾ ಮಾಹಿತಿ ಇರುವುದಿಲ್ಲ. ಆದ್ದರಿಂದ, ಹಿಂದೂ ನಾಯಕರು ಈಗ ಈ ರೀತಿಯ ಪ್ರಕರಣಗಳನ್ನು ನಿಭಾಯಿಸಲು ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

  • ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಾಣದಿರಲು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕುರುಡಾಗಿದೆಯೇ? ಕೇಂದ್ರ ಸರಕಾರವು ಈ ಬಗ್ಗೆ ಆಯೋಗವನ್ನು ಪ್ರಶ್ನಿಸಬೇಕು!
  • ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ತಡೆಯಲು ಸಾಧ್ಯವಾಗದಿರುವುದು ಸ್ವಾತಂತ್ರ್ಯದ ನಂತರದ ಎಲ್ಲ ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿ!