ಅಮೆರಿಕಾವು ಕಳೆದ ೧೦ ತಿಂಗಳಲ್ಲಿ ೨ ಸಾವಿರದ ೭೯೦ ಅಕ್ರಮ ಭಾರತೀಯರನ್ನು ಭಾರತಕ್ಕೆ ವಾಪಸ್ ಕಳುಹಿಸಿದೆ!

ಭಾರತೀಯರ ಅಕ್ರಮ ಪ್ರವೇಶದಲ್ಲಿ ಶೇ. ೬೨ ರಷ್ಟು ಇಳಿಕೆ

ನವದೆಹಲಿ – ಭಾರತ ಸರಕಾರ ನೀಡಿರುವ ಮಾಹಿತಿಯ ಪ್ರಕಾರ, ೨೦೨೫ ರ ಆರಂಭದಿಂದ ಇಲ್ಲಿಯವರೆಗೆ ಅಮೆರಿಕಾದಿಂದ ಒಟ್ಟು ೨ ಸಾವಿರದ ೭೯೦ ಭಾರತೀಯ ನಾಗರಿಕರನ್ನು ದೇಶಕ್ಕೆ ವಾಪಸ್ ಕಳುಹಿಸಲಾಗಿದೆ. ಇವರೆಲ್ಲರೂ ಅಮೆರಿಕಾದಲ್ಲಿ ಅಕ್ರಮವಾಗಿ ನೆಲೆಸಿದ್ದರು. ಅವರ ಗುರುತು ಮತ್ತು ಪೌರತ್ವವನ್ನು ದೃಢೀಕರಿಸಿದ ನಂತರವೇ ಅವರನ್ನು ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಸಂಪೂರ್ಣ ಪ್ರಕ್ರಿಯೆಯು ಭಾರತ ಮತ್ತು ಅಮೆರಿಕಾ ನಡುವಿನ ನಿರ್ಧರಿತ ಕಾನೂನು ಮತ್ತು ರಾಜತಾಂತ್ರಿಕ ಚೌಕಟ್ಟಿನಲ್ಲಿ ನಡೆದಿದೆ. ಇದೇ ರೀತಿ, ಈ ವರ್ಷ ಬ್ರಿಟನ್‌ನಿಂದ ಸುಮಾರು ೧೦೦ ಭಾರತೀಯ ನಾಗರಿಕರನ್ನು ಅವರ ರಾಷ್ಟ್ರೀಯತೆಯನ್ನು ಖಚಿತಪಡಿಸಿದ ನಂತರ ವಾಪಸ್ ಕಳುಹಿಸಲಾಗಿದೆ. ಮತ್ತೊಂದೆಡೆ, ಭಾರತೀಯರು ಅಮೆರಿಕಾವನ್ನು ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುವವರ ಸಂಖ್ಯೆ ೪ ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಅಮೆರಿಕಾದ ಗಡಿ ಭದ್ರತಾ ಇಲಾಖೆಯ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಅಕ್ಟೋಬರ್ ೨೦೨೪ ರಿಂದ ಸಪ್ಟೆಂಬರ್ ೨೦೨೫ ರ ಅವಧಿಯಲ್ಲಿ ೩೪ ಸಾವಿರದ ೧೪೬ ಭಾರತೀಯರನ್ನು ಅಮೆರಿಕಾವನ್ನು ಅನಧಿಕೃತವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ ಬಂಧಿಸಲಾಗಿದೆ. (ಇದೇ ಅವಧಿಯಲ್ಲಿ ಭಾರತದಲ್ಲಿ ನುಸುಳುತ್ತಿದ್ದ ಎಷ್ಟು ಬಾಂಗ್ಲಾದೇಶಿಯರನ್ನು ಭಾರತವು ಹಿಡಿದಿದೆ? ಅಮೆರಿಕಾ ಏನು ಮಾಡುತ್ತದೋ, ಅದು ಭಾರತಕ್ಕೆ ಏಕೆ ಸಾಧ್ಯವಾಗುತ್ತಿಲ್ಲ? – ಸಂಪಾದಕರು) ಈ ಸಂಖ್ಯೆಯು ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ. ೬೨ ರಷ್ಟು ಕಡಿಮೆಯಾಗಿದೆ. ಆ ಸಮಯದಲ್ಲಿ ೯೦ ಸಾವಿರದ ೪೧೫ ಭಾರತೀಯರು ಸಿಕ್ಕಿಬಿದ್ದಿದ್ದರು. ಈ ಇಳಿಕೆಯು ೨೦೨೧ ರ ನಂತರದ ಅತಿದೊಡ್ಡ ವಾರ್ಷಿಕ ಇಳಿಕೆಯಾಗಿದೆ.

ಸಂಪಾದಕೀಯ ನಿಲುವು

  • ಅಮೆರಿಕಾದಿಂದ ಕಳೆದ ೧೦ ತಿಂಗಳಲ್ಲಿ ಇಷ್ಟೊಂದು ಅಕ್ರಮ ಭಾರತೀಯರನ್ನು ಹೊರಹಾಕಿದ್ದರೆ, ಭಾರತ ಸರಕಾರವು ಅದೇ ಅವಧಿಯಲ್ಲಿ ಎಷ್ಟು ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾಗಳನ್ನು ಹೊರಹಾಕಿದೆ ಎಂಬ ಮಾಹಿತಿಯನ್ನು ನೀಡಬೇಕು!
  • ಭಾರತಕ್ಕೆ ವಾಪಸ್ ಬರುವವರ ಮೇಲೆ ಮೊಕದ್ದಮೆ ದಾಖಲಿಸಿ ಇಲ್ಲಿಯೇ ಶಿಕ್ಷೆ ಆಗಬೇಕು. ಅವರಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಅಪಖ್ಯಾತಿ ಉಂಟಾಗಿದೆ!