ಮಕ್ಕಳೇ, ಈ ಮಹಾಪುರುಷರ ಆದರ್ಶವನ್ನು ಇಟ್ಟುಕೊಳ್ಳಿ !

ಆದಿ ಶಂಕರಾಚಾರ್ಯರು ಭಾರತ ವರ್ಷದ ದಿವ್ಯ ವಿಭೂತಿ

ಶ್ರೀ ಶಂಕರಾಚಾರ್ಯರು ತಮ್ಮ ೮ ನೇ ವಯಸ್ಸಿನಲ್ಲಿ ಎಲ್ಲ ವೇದಗಳ ಅಧ್ಯಯನವನ್ನು ಪೂರ್ಣಗೊಳಿಸಿದರು. ತಾಯಿಯಿಂದ ಸನ್ಯಾಸ ಸ್ವೀಕರಿಸಲು ಅನುಮತಿ ಪಡೆದು ಅವರು ಮನೆಯಿಂದ ಹೊರಬಿದ್ದರು. ಗೋವಿಂದ ಪೂಜ್ಯಪಾದಾಚಾರ್ಯರಿಂದ ಸನ್ಯಾಸ ದೀಕ್ಷೆ ಪಡೆದು, ೧೨ ನೇ ವಯಸ್ಸಿನಲ್ಲಿ ಅವರು ಎಲ್ಲ ಶಾಸ್ತ್ರಗಳಲ್ಲಿ ಪ್ರಾವೀಣ್ಯತೆಯನ್ನು ಪಡೆದರು. ಶಂಕರಾಚಾರ್ಯರಿಂದ ವೈದಿಕ ಸಂಸ್ಕೃತಿಯ ಪರಂಪರೆ ಪುನರುಜ್ಜೀವನಗೊಂಡಿತು.

ಛತ್ರಪತಿ ಶಿವಾಜಿ ಮಹಾರಾಜರು  ಹಿಂದವೀ ಸ್ವರಾಜ್ಯ ಸಂಸ್ಥಾಪಕ

ಮೊಘಲರ ದೌರ್ಜನ್ಯಗಳಿಗೆ ಅಂಜದೆ, ಕೇವಲ ೧೬ ನೇ ವಯಸ್ಸಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಸಹಚರರೊಂದಿಗೆ ಸ್ವರಾಜ್ಯದ ಪ್ರತಿಜ್ಞೆ ತೆಗೆದುಕೊಂಡಿದ್ದರು. ಮುಷ್ಠಿಯಷ್ಟು ಮಾವಳೆಯರಲ್ಲಿ ಧರ್ಮಪ್ರೇಮವನ್ನು ಜಾಗೃತಗೊಳಿಸಿ, ಅವರಿಗೆ ಹೋರಾಡಲು ಕಲಿಸಿ ಮತ್ತು ಐದು ಬಾದಶಾಹರ ವಿರುದ್ಧ ಹೋರಾಡಿ ಸ್ವರಾಜ್ಯದ ಕಲ್ಪನೆಯನ್ನು ವಾಸ್ತವಕ್ಕೆ ಇಳಿಸಿದರು.

ಧರ್ಮಕ್ಕಾಗಿ ಪ್ರಾಣಾರ್ಪಣೆ ಮಾಡಿದ ಜೋರಾವರ್‌ ಸಿಂಗ್‌ ಮತ್ತು ಫತೇಹ್‌ ಸಿಂಗ್‌

ಜೋರಾವರ್‌ ಸಿಂಗ್‌ ಮತ್ತು ಫತೇಹ್‌ ಸಿಂಗ್‌ ಅವರು ಸಿಕ್ಖ್‌ರ ಹತ್ತನೇ ಗುರುಗಳಾದ ಗೋವಿಂದ ಸಿಂಗ್‌ ಅವರ ಇಬ್ಬರು ಸುಪುತ್ರರು. ‘ನಾವು ಸತ್ತರೂ ಪರವಾಗಿಲ್ಲ; ಆದರೆ ನಾವು ಧರ್ಮವನ್ನು ಬಿಡುವುದಿಲ್ಲ ! ನಮ್ಮ ಧರ್ಮ ನಮಗೆ ಪ್ರಾಣಕ್ಕಿಂತಲೂ ಮಿಗಿಲಾಗಿದೆ’ ಎಂದು ಅವರು ಮೊಘಲರಿಗೆ ದೃಢವಾಗಿ ಹೇಳಿದರು. ಈ ಇಬ್ಬರು ಸಹೋದರರನ್ನು ಜೀವಂತವಾಗಿರುವಾಗಲೇ ಅವರ ಸುತ್ತ ಗೋಡೆ ಕಟ್ಟಿ ಕೊಲ್ಲಲಾಯಿತು. ಈ ಸಮಯದಲ್ಲಿ ಜೋರಾವರ್‌ ಸಿಂಗ್‌ ೮ ವರ್ಷದವರಾಗಿದ್ದರೆ, ಫತೇಹ್‌ ಸಿಂಗ್‌ ೫ ವರ್ಷದವರಾಗಿದ್ದರು. ಧರ್ಮಕ್ಕಾಗಿ ಪ್ರಾಣಾರ್ಪಣೆ ಮಾಡಿದ ಜೋರಾವರ್‌ ಸಿಂಗ್‌ ಮತ್ತು ಫತೇಹ್‌ ಸಿಂಗ್‌ ಇವರು ಜಗತ್ತಿನ ಇತಿಹಾಸದಲ್ಲಿ ಏಕೈಕ ಬಾಲಸಿಂಹರು !

ದೃಢ ನಿರ್ಧಾರದಿಂದ ಏನನ್ನೂ ಸಾಧಿಸಬಹುದು ಎಂಬ ದೃಢನಿಶ್ಚಯದ ಸ್ವಾಮಿ ವಿವೇಕಾನಂದರು

ಜಯಪುರದಲ್ಲಿರುವಾಗ ಸ್ವಾಮಿ ವಿವೇಕಾನಂದರು ಪಾಣಿನಿಯ ಸಂಸ್ಕೃತ ವ್ಯಾಕರಣ ಕಲಿಯಲು ಪ್ರಸಿದ್ಧ ಪಂಡಿತರ ಬಳಿ ಹೋಗುತ್ತಿದ್ದರು. ಪಂಡಿತರು ಮೊದಲನೆಯ ಸೂತ್ರವನ್ನು ಅವರಿಗೆ ಹಲವು ಬಗೆಯಿಂದ ಹೇಳಿಕೊಟ್ಟರೂ ಅವರಿಗೆ ಅದು ಬರುತ್ತಿರಲಿಲ್ಲ. ಮೂರು ದಿನ ಪ್ರಯತ್ನಿಸಿದ ನಂತರ ಪಂಡಿತರು ಹೇಳಿದರು, ‘ಮೂರು ದಿನ ಪ್ರಯತ್ನಿಸಿದರೂ ನಾನು ನಿಮಗೆ ಒಂದು ಸೂತ್ರವನ್ನೂ ಕಲಿಸಲು ವಿಫಲನಾಗಿದ್ದೇನೆ. ಆದ್ದರಿಂದ ನೀವು ನನ್ನ ಬಳಿ ಕಲಿಯುವುದರ ಲಾಭವಿಲ್ಲ’. ಪಂಡಿತರ ಮಾತು ಕೇಳಿ ವಿವೇಕಾನಂದರಿಗೆ ತುಂಬಾ ದುಃಖವಾಯಿತು. ಎಲ್ಲಿಯ ವರೆಗೆ ಈ ಸೂತ್ರವನ್ನು ನಾನು ಅರಿಯುವುದಿಲ್ಲವೋ ಅಲ್ಲಿಯ ವರೆಗೆ ಊಟ-ತಿಂಡಿ ಮಾಡುವುದಿಲ್ಲ ಎಂದು ತೀರ್ಮಾನ ಮಾಡಿದರು. ಅವರು ಏಕಾಗ್ರ ಚಿತ್ತದಿಂದ ಸೂತ್ರದ ಅಭ್ಯಾಸ ಮಾಡಿದ ನಂತರ ಪಂಡಿತರಲ್ಲಿಗೆ ಹೋದರು. ಸ್ವಾಮಿ ವಿವೇಕಾನಂದರಿಂದ ಸೂತ್ರದ ಸಹಜ ಮತ್ತು ಸುಂದರ ವಿವರಣೆ ಕೇಳಿ ಪಂಡಿತರಿಗೆ ಆಶ್ಚರ್ಯವಾಯಿತು.

ದೇಶದ ಸ್ವಾತಂತ್ರ್ಯಕ್ಕಾಗಿ ಕಷ್ಟಗಳ ಅರಿವಿದ್ದ ಸುಭಾಷ್‌ ಚಂದ್ರ ಬೋಸ್‌

ಕಿಶೋರವಯಸ್ಸಿನ ಸುಭಾಷ ಅವರು ಹಾಸಿಗೆಯ ಮೇಲೆ ಮಲಗದೆ ನೆಲದ ಮೇಲೆ ಜಮಖಾನೆಯನ್ನು ಹಾಸಿ ಮಲಗುತ್ತಿದ್ದರು. ಇದರ ಬಗ್ಗೆ ಅವರ ತಾಯಿ ಅವರಿಗೆ ಕೇಳಿದಾಗ, ಅವರು ಹೀಗೆಂದರು, ‘ಸುಖ-ಸಮಾಧಾನದಲ್ಲಿ ಬದುಕುತ್ತಿರುವವರು ದೊಡ್ಡ ಕೆಲಸಗಳನ್ನು ಹೇಗೆ ಮಾಡಲು ಸಾಧ್ಯ ? ನಮ್ಮ ಋಷಿಮುನಿಗಳು ಕಾಡಿನಲ್ಲಿ ಆಶ್ರಮಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು ಮತ್ತು ನೆಲದ ಮೇಲೆ ಮಲಗುತ್ತಿದ್ದರು; ಆದ್ದರಿಂದಲೇ ಅವರು ಮಹಾನ್‌ ಗ್ರಂಥಗಳನ್ನು ಬರೆಯಲು ಸಾಧ್ಯವಾಯಿತು.’ ಭಾರತ ಮಾತೆಯನ್ನು ಪಾರತಂತ್ರ್ಯದಿಂದ ಮುಕ್ತಗೊಳಿಸಲು ಪ್ರಾಣಗಳನ್ನು ತ್ಯಾಗ ಮಾಡುವ ಸಿದ್ಧತೆ ಮತ್ತು ತೆಗೆದುಕೊಳ್ಳಬೇಕಾದ ಕಷ್ಟಗಳ ಅರಿವು ಅವರಿಗೆ ಕಿಶೋರವಯಸ್ಸಿನಲ್ಲಿಯೇ ಇತ್ತು.

ತ್ಯಾಗ ಮತ್ತು ಧರ್ಮನಿಷ್ಠೆ ಬೋಧಿಸುವ ಸಾಮ್ರಾಟ ದಿಲೀಪ

ಸಾಮ್ರಾಟ ದಿಲೀಪನು ರಘುವಂಶದ ಮಹಾನ್‌ ಚಕ್ರವರ್ತಿಯಾಗಿದ್ದು, ಗೋರಕ್ಷಣೆಯನ್ನು ತನ್ನ ಧರ್ಮವೆಂದು ಆಚರಿಸುತ್ತಿದ್ದನು ಅವನು ವಸಿಷ್ಠ ಮುನಿಗಳ ಹಸು ನಂದಿನಿಯನ್ನು ಭಕ್ತಿಯಿಂದ ಸೇವಿಸುತ್ತಿದ್ದನು. ಪ್ರತಿದಿನ ನಂದಿನಿಗೆ ಹುಲ್ಲು ತಿನ್ನಿಸುತ್ತಾ, ಅದರ ರಕ್ಷಣೆಯಲ್ಲಿ ಸದಾ ತೊಡಗಿಸಿಕೊಂಡಿದ್ದನು. ಒಂದು ದಿನ ಅರಣ್ಯದಲ್ಲಿ ಮೇಯಿಸುತ್ತಿರುವ ನಂದಿನಿಯ ಮೇಲೆ ಸಿಂಹವು ದಾಳಿ ಮಾಡಲು ಬಂದಿತು. ದಿಲೀಪನು ಸಿಂಹದ ಎದುರು ಧೈರ್ಯವಾಗಿ ನಿಂತು ನಂದಿನಿಯನ್ನು ರಕ್ಷಿಸಲು ಸಿದ್ಧನಾದನು. ಹಸುವಿನ ಬದಲಿಗೆ ತನ್ನ ಜೀವವನ್ನೇ ಅರ್ಪಿಸಲು ಆತ ತಯಾರಾದನು.

ದಿಲೀಪನ ತ್ಯಾಗಭಾವವನ್ನು ಕಂಡು ಸಿಂಹವೂ ಕರುಣೆಯಿಂದ ಅರಣ್ಯಕ್ಕೆ ಮರಳಿತು. ದಿಲೀಪನು ಪ್ರಜೆಗಳಿಗೆ ರಕ್ಷಣಾ ಧರ್ಮ ಪಾಲಿಸಿದ, ಸತ್ಯವಂತ, ದಾನಶೀಲ ಸಾಮ್ರಾಟನಾಗಿದ್ದನು. ಅವನ ಜೀವನ ತ್ಯಾಗ, ಧರ್ಮ ಮತ್ತು ನಿಸ್ವಾರ್ಥ ಸೇವೆಯ ಮಾದರಿಯಾಗಿತ್ತು.