ಪೋಷಕರೇ, ಮಕ್ಕಳನ್ನು ಜಾಗರೂಕತೆಯಿಂದ ಬೆಳೆಸಿ !

ಪೂ. ಅಶೋಕ ಪಾತ್ರೀಕರ

೧. ಹುಟ್ಟಿನಿಂದ ಶಿಶುವಿಹಾರಕ್ಕೆ ಹೋಗುವವರೆಗಿನ ೫ ವರ್ಷಗಳ (ಬಾಲ ವಯೋಮಾನದಲ್ಲಿ) ಮಕ್ಕಳಿಗೆ ಪೋಷಕರು ಮಾಡಬೇಕಾದ ಸಂಸ್ಕಾರಗಳು ಮತ್ತು ಅವರ ಕರ್ತವ್ಯಗಳು !

ಅ. ಮಕ್ಕಳಿಗೆ ಆದರಾತಿಥ್ಯ ಮಾಡಲು ಕಲಿಸಬೇಕು.

ಆ. ಮಕ್ಕಳು ತಮ್ಮ ಗೆಳೆಯರಿಂದ ಅನುಚಿತ ವರ್ತನೆ ಕಲಿಯದಂತೆ ಗಮನವಿಡಬೇಕು.

ಇ. ಮನೆಯಲ್ಲಿ ಪೋಷಕರ ವರ್ತನೆ ಆದರ್ಶವಾಗಿರ ಬೇಕು. ಜಗಳ, ವಾದ-ವಿವಾದ ಇತ್ಯಾದಿ ತಪ್ಪಿಸಬೇಕು. ತಂದೆ-ತಾಯಂದಿರು ಮನೆಯಲ್ಲಿ ದೂರದರ್ಶನ ಕಾರ್ಯಕ್ರಮ ವೀಕ್ಷಣೆ ತಪ್ಪಿಸಬೇಕು. ಕಾರ್ಯಕ್ರಮಗಳನ್ನು ನೋಡಬೇಕಿದ್ದರೆ, ದೇವರು-ಧರ್ಮದ ಸಂಸ್ಕಾರಗಳ ಆಯ್ದ ಕಾರ್ಯಕ್ರಮಗಳನ್ನು ಮಕ್ಕಳೊಂದಿಗೆ ನೋಡಬೇಕು, ಹಾಗೆಯೇ ಆ ಕಾರ್ಯಕ್ರಮಗಳಲ್ಲಿನ ಧಾರ್ಮಿಕ ವಿಷಯಗಳ ಭಾವಾರ್ಥವನ್ನು ಮಕ್ಕಳಿಗೆ ಹೇಳಬೇಕು.

ಈ. ಮಕ್ಕಳಲ್ಲಿ ಸಾಧನೆಯ ಅಭಿರುಚಿ ಬೆಳೆಯಲು, ತಂದೆ-ತಾಯಂದಿರು ನಿತ್ಯನೇಮದಿಂದ ದೇವರಿಗೆ ಪ್ರಾರ್ಥನೆ ಮತ್ತು ನಾಮಜಪದÀ ಕಡೆಗೆ, ಹಾಗೆಯೇ ಕೃತಜ್ಞತೆಯನ್ನು ವ್ಯಕ್ತಪಡಿಸುವುದರ ಕಡೆಗೆ ಗಮನಹರಿಸಬೇಕು. ಮಕ್ಕಳಿಂದಲೂ ಅದೇ ರೀತಿ ಪ್ರಯತ್ನವನ್ನು ಮಾಡಿಸಿಕೊಳ್ಳಬೇಕು.

ಉ. ದೇವರಪೂಜೆಯನ್ನು ಮಾಡುವಾಗ ಮಗುವನ್ನು ಮಡಿಲಲ್ಲಿ ಕುಳ್ಳಿರಿಸಿ ಕೊಂಡು ಪೂಜೆ ಮಾಡಬೇಕು. ಅದರಿಂದ ಮಗುವಿಗೆ ದೇವರಪೂಜೆಯಲ್ಲಿ ಆಸಕ್ತಿ ಮೂಡುತ್ತದೆ. ಸಂಜೆಯ ಸಮಯದಲ್ಲಿ ಮಕ್ಕಳಿಗೆ ಮನೆಗೆ ಬರಲು ಹೇಳಿ, ಕೈ-ಕಾಲು ತೊಳೆಸಿ ‘ಶುಭಂಕರೋತಿ’ಯನ್ನು ಹೇಳಲು ಹೇಳಬೇಕು.

ಊ. ಮಕ್ಕಳ ಈ ವಯಸ್ಸು ಸಂಸ್ಕಾರಗಳನ್ನು ಗ್ರಹಿಸುವ ವಯಸ್ಸಾಗಿರುವುದರಿಂದ ಧರ್ಮಾಚರಣೆಯ ಕೃತಿಗಳನ್ನು ತಂದೆ-ತಾಯಂದಿರು ಕಡ್ಡಾಯವಾಗಿ ಮಾಡಬೇಕು, ಉದಾಹರಣೆಗೆ- ಬೆಳಗ್ಗೆ ಎದ್ದ ನಂತರ ದೇವರಿಗೆ ನಮಸ್ಕಾರ ಮಾಡುವುದು, ಹಿರಿಯರಿಗೆ ನಮಸ್ಕರಿಸುವುದು, ಪುರುಷರು ಹೊರಗೆ ಹೋಗುವ ಮೊದಲು ಹಣೆಯಲ್ಲಿ ತಿಲಕವನ್ನು ಹಚ್ಚಿಕೊಳ್ಳುವುದು ಮತ್ತು ಸಾತ್ತ್ವಿಕ ವೇಷಭೂಷಣಗಳನ್ನು ಧರಿಸುವುದು ಇತ್ಯಾದಿ.

ಎ. ಅವರಿಗೆ ದೇವರು ಮತ್ತು ಸಂತರ ಕಥೆಗಳನ್ನು ಹಾಗೂ ಅವುಗಳ ಭಾವಾರ್ಥವನ್ನು ಹೇಳಿ, ಅದೇ ರೀತಿ ಆಚರಣೆ ಮಾಡಲೂ ಹೇಳಬೇಕು.

ಐ. ಮಕ್ಕಳನ್ನು ಅನಾವಶ್ಯಕವಾಗಿ ಮುದ್ದಿಸಬಾರದು. ಅವರ ತಪ್ಪುಗಳನ್ನು ಅವರಿಗೆ ತೋರಿಸಿ ಅವುಗಳನ್ನು ಸುಧಾರಿಸಲು ಕಲಿಸಬೇಕು. ಹಾಗೆಯೇ ಸಮಯಕ್ಕೆ ತಕ್ಕಂತೆ ಶಿಕ್ಷೆಯನ್ನೂ ನೀಡಬೇಕು.

ಈ ೫ ವರ್ಷಗಳಲ್ಲಿ ಮಗುವಿನ ತಂದೆ-ತಾಯಂದಿರು ಕೇವಲ ‘ಪೋಷಕರು’ ಎಂದು ಆಗಿರದೆ ಅವರ ‘ಗುರು’ ಆಗಿರಬೇಕು.

೨. ೬ ರಿಂದ ೧೨ ವರ್ಷ ಕುಮಾರ ವಯಸ್ಸಿನ ಮಕ್ಕಳನ್ನು ರೂಪಿಸಲು ತಂದೆ ತಾಯಂದಿರು ಮಾಡಬೇಕಾದ ಕೃತಿಗಳು !

ಈ ವಯಸ್ಸಿನ ಮಕ್ಕಳಿಗೂ ಮೇಲಿನ (೫ ವರ್ಷದ ವಯೋಮಾನದ ಮಕ್ಕಳಿಗೆ ಸಂಬಂಧಿಸಿದ) ಎಲ್ಲ ವಿಷಯಗಳೂ ಆವಶ್ಯಕವಾಗಿವೆ. ಅದರ ಜೊತೆಗೆ ಮುಂದಿನ ವಿಷಯಗಳನ್ನೂ ಮಾಡಬೇಕು.

ಅ. ಅವರನ್ನು ಮೊದಲು ಕನ್ನಡ ಶಿಶುವಿಹಾರಕ್ಕೆ ಮತ್ತು ನಂತರ ಕನ್ನಡ ಶಾಲೆಗೆ ಮಾತ್ರ ಶಿಕ್ಷಣಕ್ಕಾಗಿ ಕಳುಹಿಸಬೇಕು. ಮನೆಯಲ್ಲಿ ಮಾತನಾಡುವಾಗ ಕನ್ನಡ ಭಾಷೆಯನ್ನೇ ಹೆಚ್ಚಾಗಿ ಬಳಸಬೇಕು.

ಆ. ನಡುನಡುವೆ ಅವರ ಶಾಲೆಯ ಗೆಳೆಯರ ಕಡೆಗೆ ಗಮನ ಹರಿಸಿ, ‘ಅವರು ಅವರಲ್ಲಿನ ಯಾವುದಾದರೂ ದುರ್ಗುಣಗಳನ್ನು ತೆಗೆದುಕೊಳ್ಳುತ್ತಿಲ್ಲವಲ್ಲ’, ಎಂಬುದರ ಕಡೆಗೆ ಗಮನ ನೀಡಬೇಕು.

ಇ. ಅವರಿಗೆ ವ್ಯಾಯಾಮದ ಮಹತ್ವವನ್ನು ತಿಳಿಸಿ ಪೋಷಕರು ಸ್ವತಃ ವ್ಯಾಯಾಮ ಮಾಡುತ್ತಾ ಅವರಿಂದಲೂ ವ್ಯಾಯಾಮ ಮಾಡಿಸಬೇಕು.

ಈ. ಅವರಿಗೆ ಸಿಕ್ಕ ತಿಂಡಿಯನ್ನು ಇತರರಿಗೆ ಹಂಚಿ ತಿನ್ನುವ ಅಭ್ಯಾಸವನ್ನು ಮಾಡಿಸಬೇಕು.

ಉ. ಸಮಯದ ಮಹತ್ವವನ್ನು ತಿಳಿಸಿ ಪ್ರತಿಯೊಂದು ವಿಷಯವನ್ನು ಸಮಯಕ್ಕೆ ಸರಿಯಾಗಿ ಮಾಡುವ ಅಭ್ಯಾಸ ಮಾಡಿಸಬೇಕು.

ಊ. ಅವರಿಗೆ ಪ್ರತ್ಯೇಕ ಮೊಬೈಲ್‌ ಖರೀದಿಸಿ ಕೊಡುವುದು ಬೇಡ.

ಎ. ಶಾಲೆಯ ಸಮಯದ ಹೊರತಾಗಿ ಅವರು ಸಾತ್ತ್ವಿಕ ವಾತಾವರಣದಲ್ಲಿ ಇರುವಂತೆ, ಆಯೋಜನೆ ಮಾಡಬೇಕು.

ಐ. ಅವರಲ್ಲಿ ಅಧ್ಯಯನದ ಅಭಿರುಚಿ ಮೂಡುವಂತೆ ನೋಡಿಕೊಳ್ಳಿ. ಅವರ ಅಧ್ಯಯನದ ಮೇಜಿನ ಮೇಲೆ ಶ್ರೀ ಗಣಪತಿ ಮತ್ತು ಶ್ರೀ ಸರಸ್ವತಿಯ ಸಾತ್ತ್ವಿಕ ಚಿತ್ರಗಳನ್ನು ಇಡಬೇಕು, ಹಾಗೆಯೇ ಅಧ್ಯಯನ ಆರಂಭಿಸುವ ಮೊದಲು ಅವುಗಳ ಕಡೆಗೆ ನೋಡಿ ಪ್ರಾರ್ಥನೆ ಮತ್ತು ನಾಮಜಪವನ್ನು ಮಾಡುವ ಅಭ್ಯಾಸವನ್ನು ಅವರಿಗೆ ಮಾಡಿಸಬೇಕು.

ಒ. ಅವರ ಗೆಳೆಯರಲ್ಲಿನ ಸಾತ್ತ್ವಿಕ ಗೆಳೆಯರನ್ನು ಮನೆಗೆ ಕರೆಸಿ ಅವರಿಗೂ ಪ್ರಾಥಮಿಕ ಸಾಧನೆಯನ್ನು ಹೇಳಿ ಅದನ್ನು ಮಾಡಿಸಿಕೊಳ್ಳಬಹುದು.

ಔ. ಮಕ್ಕಳನ್ನು ಸನಾತನದ ಬಾಲಸಂಸ್ಕಾರ ವರ್ಗಕ್ಕೆ ಕಡ್ಡಾಯವಾಗಿ ಕಳುಹಿಸಬೇಕು. ತಂದೆ-ತಾಯಂದಿರು ಸತ್ಸಂಗಕ್ಕೆ ಹೋಗುವಾಗ ಸಾಧ್ಯವಿದ್ದರೆ, ಅವರನ್ನೂ ಕರೆದುಕೊಂಡು ಹೋಗಬೇಕು.

ಅಂ. ಸನಾತನದ ‘ಬಾಲಸಂಸ್ಕಾರ’ ಮಾಲಿಕೆಯಲ್ಲಿನ ಗ್ರಂಥಗಳನ್ನು ಅವರಿಗೆ ಓದಲು ಕೊಡಬೇಕು.

ಕ. ಅವರಿಗೆ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ’ಯನ್ನು ವಿವರಿಸಿ, ತಮ್ಮೊಳಗಿನ ಸ್ವಭಾವದೋಷಗಳ ಮೇಲೆ ಸೂಚನಾಸತ್ರಗಳನ್ನು ಮಾಡಲು ಕಲಿಸಬೇಕು.

ಖ. ಮಕ್ಕಳ ಬೌದ್ಧಿಕ ಕ್ಷಮತೆಗನುಸಾರ ಅವರ ಮುಂದಿನ ಶಿಕ್ಷಣದ ಕ್ಷೇತ್ರವನ್ನು ಆಯ್ಕೆ ಮಾಡಬೇಕು.

ತಂದೆ-ತಾಯಂದಿರು ಯಾವುದೇ ರೀತಿಯ ದುಶ್ಚಟಗಳಿಂದ ಮತ್ತು ವ್ಯಸನಗಳಿಂದ ದೂರವಿರಬೇಕು. ಹಾಗೆಯೇ ಅಧ್ಯಾತ್ಮದ ಆಸಕ್ತಿ ಇರುವವರೊಂದಿಗೆ ಗೆಳೆತನ ಬೆಳೆಸಬೇಕು. ಮಕ್ಕಳಲ್ಲಿ ಆಧ್ಯಾತ್ಮಿಕ ಗುಣಗಳನ್ನು ಹೆಚ್ಚಿಸಲು ಮೇಲೆ ಹೇಳಿದ ನಿಯಮಗಳೇ ಪೋಷಕರಿಗೂ ಅನ್ವಯಿಸುತ್ತವೆ.

– (ಪೂ.) ಶ್ರೀ. ಅಶೋಕ ಪಾತ್ರೀಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೭.೬.೨೦೧೫)