ರಷ್ಯಾ ಭಾರತದಿಂದ ಕೃಷಿ ಉತ್ಪನ್ನಗಳು, ಔಷಧಗಳು ಮತ್ತು ಇತರೆ ವಸ್ತುಗಳನ್ನು ಖರೀದಿಸಲಿದೆ! – ರಷ್ಯಾದ ಅಧ್ಯಕ್ಷ ಪುಟಿನ್ ಘೋಷಣೆ

ಡಿಸೆಂಬರ್‌ನಲ್ಲಿ ಪುಟಿನ್ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ

ಸೋಚಿ (ರಷ್ಯಾ) – ಭಾರತವು ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ಕಡಿಮೆ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸುತ್ತಿರುವುದರಿಂದ, ಅಮೆರಿಕವು ಭಾರತದ ಮೇಲೆ ಶೇ ೫೦ ರಷ್ಟು ಆಮದು ಸುಂಕವನ್ನು ವಿಧಿಸಿದೆ. ಒಂದು ಕಡೆ ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುತ್ತಿದ್ದರೆ, ಆ ಪ್ರಮಾಣಕ್ಕೆ ಹೋಲಿಸಿದರೆ ರಷ್ಯಾ ಭಾರತೀಯ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿಲ್ಲ. ಈ ಕುರಿತು ರಷ್ಯಾದ ಅಧ್ಯಕ್ಷ ಪುಟಿನ್ ಅವರು ಹೇಳಿಕೆ ನೀಡಿದ್ದಾರೆ. ಅವರು, ಎರಡೂ ದೇಶಗಳ ನಡುವಿನ ವ್ಯಾಪಾರ ಸಮತೋಲನವನ್ನು ಸುಧಾರಿಸಲು ರಷ್ಯಾ ಈಗ ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳು, ಔಷಧಗಳು ಮತ್ತು ಇತರ ವಸ್ತುಗಳನ್ನು ಖರೀದಿಸಲು ಯೋಜಿಸುತ್ತಿದೆ. ಇದರಿಂದ ಎರಡೂ ದೇಶಗಳ ನಡುವಿನ ವ್ಯಾಪಾರ ಅಸಮತೋಲನವನ್ನು ಕೊನೆಗೊಳಿಸಲು ರಷ್ಯಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ‘ಈ ನಿಟ್ಟಿನಲ್ಲಿ ಕೆಲಸ ಮಾಡಲು ಸರಕಾರಕ್ಕೆ ಸೂಚಿಸಲಾಗಿದೆ’ ಎಂದು ಪುಟಿನ್ ಸ್ಪಷ್ಟಪಡಿಸಿದರು. ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಪುಟಿನ್ ಅವರು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.

ಸೋಚಿ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪುಟಿನ್ ಮಾತನಾಡುತ್ತಿದ್ದರು. ‘ಭಾರತ-ರಷ್ಯಾದ ನಡುವೆ ಎಂದಿಗೂ ಯಾವುದೇ ಉದ್ವಿಗ್ನತೆ ಅಥವಾ ವಿವಾದಗಳು ಸೃಷ್ಟಿಯಾಗಿಲ್ಲ. ಭಾರತದ ಸ್ವಾತಂತ್ರ್ಯದ ಸಮಯದಿಂದಲೂ ರಷ್ಯಾ ಭಾರತದ ವಿಶ್ವಾಸಾರ್ಹ ಪಾಲುದಾರನಾಗಿ ಉಳಿದಿದೆ’ ಎಂದು ಪುಟಿನ್ ಹೇಳಿದರು.

ನರೇಂದ್ರ ಮೋದಿ ಅವರನ್ನು ‘ಮಿತ್ರ’ ಎಂದು ಕರೆದರು!

ಪುಟಿನ್‌ ತಮ್ಮ ಮಾತನ್ನು ಮುಂದುವರೆಸಿ, ಭಾರತವು ರಷ್ಯಾದ ಸಹಾಯವನ್ನು ಎಂದಿಗೂ ಮರೆತಿಲ್ಲ. ಇಂದಿಗೂ ಎರಡೂ ದೇಶಗಳ ನಡುವೆ ಗಟ್ಟಿಯಾದ ಪಾಲುದಾರಿಕೆ ಮತ್ತು ವಿಶ್ವಾಸದ ಸಂಬಂಧವಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನನ್ನ ಸ್ನೇಹಿತರಾಗಿದ್ದಾರೆ. ಅವರ ನೇತೃತ್ವದ ಸರಕಾರವು ಸಮತೋಲಿತ, ವಿವೇಕಯುತ ಮತ್ತು ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡುವಂತಿದೆ.

ಅಮೆರಿಕದ ಒತ್ತಡದ ನಡುವೆಯೂ ಭಾರತವು ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದ್ದಕ್ಕಾಗಿ ಅಧ್ಯಕ್ಷ ಪುಟಿನ್ ಅವರು ಭಾರತವನ್ನು ಶ್ಲಾಘಿಸಿದರು. ಈ ನಿರ್ಧಾರದಿಂದ ಭಾರತಕ್ಕೆ ಆರ್ಥಿಕ ಲಾಭ ಮಾತ್ರವಲ್ಲದೆ, ಅದರ ಸ್ವತಂತ್ರ ಮತ್ತು ಸಾರ್ವಭೌಮ ದೇಶದ ಪ್ರತಿಮೆಯು ಇನ್ನಷ್ಟು ಬಲಗೊಂಡಿದೆ ಎಂದು ಪುಟಿನ್ ಹೇಳಿದರು.

ರಷ್ಯಾ ಕೇವಲ ಉಕ್ರೇನ್‌ನೊಂದಿಗೆ ಮಾತ್ರವಲ್ಲ, ‘ನ್ಯಾಟೋ’ (NATO) ನೊಂದಿಗೆ ಹೋರಾಡುತ್ತಿದೆ!

ರಷ್ಯಾ ಕೇವಲ ಉಕ್ರೇನ್‌ನೊಂದಿಗೆ ಮಾತ್ರ ಹೋರಾಡುತ್ತಿಲ್ಲ, ಅದು ಸಂಪೂರ್ಣ ‘ನ್ಯಾಟೋ’ (ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್ ಎಂಬ ವಿಶ್ವದ ೨೯ ದೇಶಗಳ ಭಾಗವಹಿಸುವಿಕೆಯ ಒಂದು ಮಿಲಿಟರಿ ಸಂಸ್ಥೆ) ದೇಶಗಳೊಂದಿಗೆ ಹೋರಾಡುತ್ತಿದೆ ಎಂದು ಪುಟಿನ್ ಸ್ಪಷ್ಟಪಡಿಸಿದರು. ರಷ್ಯಾವನ್ನು ‘ಕಾಗದದ ಹುಲಿ’ ಎಂದು ಕರೆಯಲಾಗುತ್ತದೆ; ಆದರೆ ಕಳೆದ ಕೆಲವು ದಿನಗಳಿಂದ ರಷ್ಯಾವು ಏಕಾಂಗಿಯಾಗಿ ಇಡೀ ನ್ಯಾಟೋ ಸಮೂಹಕ್ಕೆ ಸವಾಲು ಹಾಕಿದೆ ಎಂದರು.

ಸಂಪಾದಕೀಯ ನಿಲುವು

ಅಮೆರಿಕವು ಆಮದು ಸುಂಕವನ್ನು ಹೆಚ್ಚಿಸಿರುವುದರಿಂದ ಭಾರತದ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿರುವ ಸಂದರ್ಭದಲ್ಲಿ, ರಷ್ಯಾ ಈ ರೀತಿ ಭಾರತದ ಸಹಾಯಕ್ಕೆ ಧಾವಿಸಿ ಬಂದಿರುವುದೇ ನಿಜವಾದ ಸ್ನೇಹ!