AI : ರಾಜಕೀಯ ಪ್ರಚಾರ ಸಮರದ ಹೊಸ ರಣರಂಗ !

(ಎಐ ಎಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂದರೆ ಕೃತಕ ಬುದ್ಧಿಮತ್ತೆ)

‘ಎಐ ನಮ್ಮ ಜೀವನವನ್ನು ಅಕ್ಷರಶಃ ಕಲಕಿಬಿಟ್ಟಿದೆ. ಕಾಲು ಶತಮಾನದ ಹಿಂದೆ ‘ಡಾಟ್ ಕಾಮ್ನ ಗದ್ದಲ ಮತ್ತು ನಂತರದ ‘ಸಾಮಾಜಿಕ ಮಾಧ್ಯಮಗಳ (‘ಸೋಷಿಯಲ್ ಮೀಡಿಯಾ) ಅಲೆಯನ್ನು ನಾವೆಲ್ಲರೂ ಅನುಭವಿಸಿದ್ದೇವೆ. ನಾನಂತೂ ತೆರೆದ ಕಣ್ಣುಗಳಿಂದ ಇದರ ಮೂಲಕ ಸಾಗಿದ್ದೇನೆ; ಆದರೆ ಇವೆಲ್ಲದಕ್ಕಿಂತ ‘ಎಐನ ಬಿರುಗಾಳಿ ಹೆಚ್ಚು ತೀಕ್ಷ್ಣ ಮತ್ತು ಭೀಕರವಾಗಿದೆ. ಇದು ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂಬುದು ಖಂಡಿತ; ಆದರೆ ‘ಎಐ ವಿವಿಧ ಕ್ಷೇತ್ರಗಳನ್ನು ಆಮೂಲಾಗ್ರವಾಗಿ ಬದಲಾಯಿಸುತ್ತದೆ ಎಂಬುದರ ಕುರುಹುಗಳು ಕಾಣುತ್ತಿವೆ. ಈ ಕುರಿತು ಇಲ್ಲಿ ವಿವರಣೆ ನೀಡಲಾಗಿದೆ.

೧. ‘ಎಐ ನಿರ್ಮಿತ ವಿಡಿಯೋಗಳಿಂದ ವಿವಾದ !

ಕೆಲವು ದಿನಗಳ ಹಿಂದೆ ಬಿಹಾರ ಕಾಂಗ್ರೆಸ್ಸಿನ ‘ಸೋಷಿಯಲ್ ಮೀಡಿಯಾ ಖಾತೆಯಿಂದ ಒಂದು ವಿಡಿಯೋ ಪ್ರಸಾರವಾದಾಗ ದೊಡ್ಡ ಸಂಚಲನ ಮೂಡಿತು. ಇದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿಯ ನಡುವಿನ ಕಾಲ್ಪನಿಕ ಸಂಭಾಷಣೆಯನ್ನು ತೋರಿಸಲಾಗಿದೆ. ಈಗ ಹೆಚ್ಚಿನ ರಾಜಕೀಯ ಪಕ್ಷಗಳು ‘ಎಐ ನಿರ್ಮಿತ ವಿಡಿಯೋಗಳನ್ನು ಬಳಸುತ್ತಿದ್ದರೂ, ಕಾಂಗ್ರೆಸ್ಸಿನ ವಿಡಿಯೋದ ವಿಷಯದಿಂದಾಗಿ ಅದು ವಿವಾದಕ್ಕೆ ಸಿಲುಕಿತು. ನಿರೀಕ್ಷೆಯಂತೆ ಭಾಜಪ ತಕ್ಷಣವೇ ಪ್ರತಿಕ್ರಿಯಿಸಿ, ರಾಹುಲ ಮತ್ತು ಸೋನಿಯಾ ಗಾಂಧಿ ಅವರ ಕುರಿತು ‘ಎಐ ವಿಡಿಯೋ ಪ್ರಸಾರ ಮಾಡಿತು. ಇದರ ವಿಷಯವೂ ಕಳಪೆ ಮಟ್ಟದ್ದಾಗಿದ್ದರಿಂದ ಸ್ವಾಭಾವಿಕವಾಗಿ ಸಂಚಲನ ಉಂಟಾಯಿತು. ಕಾಂಗ್ರೆಸ್ ಮತ್ತು ಭಾಜಪದ ಈ ಕೃತಿ ನೈತಿಕವೇ ಅಥವಾ ಅನೈತಿಕವೇ ? ಈ ಬಗ್ಗೆ ಸಾಕಷ್ಟು ಚರ್ಚೆಗಳಾದವು; ಆದರೆ ಪ್ರಮುಖ ಅಂಶವೆಂದರೆ, ರಾಜಕೀಯ ‘ಪ್ರೊಪಗಾಂಡಾ ವಾರ್ ಅಂದರೆ ಪ್ರಚಾರ ಸಮರವು ಈಗ ‘ಎಐನ ರಣಾಂಗಣವನ್ನು ತಲುಪಿದೆಯೇ ಎಂಬುದನ್ನು ಪರಿಗಣಿಸಬೇಕಾಗಿದೆ. ಕಾಲ ಕಳೆದಂತೆ ಪ್ರಸಾರ ಮಾಧ್ಯಮಗಳು ಬದಲಾದಂತೆ, ರಾಜಕೀಯ ಪ್ರಚಾರ ತಂತ್ರಗಳೂ ಬದಲಾಗಿವೆ. ಮೊದಲು ಭಿತ್ತಿಪತ್ರಗಳು, ಸಭೆಗಳು, ಪ್ರಚಾರಯಾತ್ರೆಗಳು ಮುಂತಾದ ಸಾಂಪ್ರದಾಯಿಕ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತಿತ್ತು. ಅದಕ್ಕೆ ಪತ್ರಿಕೆಗಳ ಜಾಹೀರಾತು ಮತ್ತು ಸುದ್ದಿಗಳ ಬೆಂಬಲ ಇತ್ತು. ಕಳೆದ ದಶಕದ ಆರಂಭದಲ್ಲಿ ‘ಸೋಷಿಯಲ್ ಮೀಡಿಯಾ ಬೆಳೆದ ನಂತರ ರಾಜಕೀಯ ಪಕ್ಷಗಳು ಅದರತ್ತ ಗಮನ ಹರಿಸಿದವು. ‘ಇಂಡಿಯಾ ಅಗೇನ್ಸ್ಟ ಕರಪ್ಷನ್ ಆಂದೋಲನ, ಅಣ್ಣಾ ಹಜಾರೆ ಅವರ ಉಪವಾಸ ಮುಂತಾದವುಗಳ ಮೂಲಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಸಹಯೋಗಿಗಳು ಸಾಮಾಜಿಕ ಮಾಧ್ಯಮಗಳನ್ನು ಸೂಕ್ತವಾಗಿ ಬಳಸಿಕೊಂಡರು ಮತ್ತು ಅದರಿಂದಲೇ ಆಮ್ ಆದ್ಮಿ ಪಕ್ಷ ಉದಯವಾಯಿತು. ಅದು ಉತ್ತಮ ಯಶಸ್ಸನ್ನೂ ಗಳಿಸಿತು.

೨. ಎಲ್ಲಾ ರಾಜಕೀಯ ಪಕ್ಷಗಳಿಂದ ಈಗ ‘ಎಐ ಬಳಕೆ !

ಇದರ ನಂತರ ಭಾಜಪ ‘ಸೋಷಿಯಲ್ ಮೀಡಿಯಾವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡು ದೆಹಲಿಯಲ್ಲಿ ಮತ್ತು ನಂತರ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಅಧಿಕಾರ ಗಳಿಸಿತು. ಮೋದಿ ಯುಗದ ಯಶಸ್ಸಿನಲ್ಲಿ ಇದರ ದೊಡ್ಡ ಪಾಲಿದೆ. ಇತರ ರಾಜಕೀಯ ಪಕ್ಷಗಳು ಮೊದಲು ಈ ಬಗ್ಗೆ ಸ್ವಲ್ಪ ತಡಕಾಡಿದರೂ, ನಂತರ ಅವುಗಳೂ ಇದನ್ನು ಪರಿಣಾಮಕಾರಿಯಾಗಿ ಬಳಸಲು ಪ್ರಾರಂಭಿಸಿದವು. ಇಂದು ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ‘ಸೋಷಿಯಲ್ ಮೀಡಿಯಾವನ್ನು ಹೆಚ್ಚಾಗಿ ಬಳಸುತ್ತಿವೆ. ಕಳೆದ ವರ್ಷ ನಡೆದ ಲೋಕಸಭಾ ಮತ್ತು ನಂತರ ವಿಧಾನಸಭಾ ಚುನಾವಣೆಗಳಲ್ಲಿ ಸಾಮಾಜಿಕ ಮಾಧ್ಯಮಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗಿದ್ದರೆ, ‘ಎಐವನ್ನು ಅತ್ಯಲ್ಪವಾಗಿ ಬಳಸಲಾಯಿತು. ಈ ವರ್ಷದ ಆರಂಭದಿಂದ ‘ಎಐನ ಬಿರುಗಾಳಿ ಪ್ರಾರಂಭವಾಯಿತು ಮತ್ತು ಸ್ವಾಭಾವಿಕವಾಗಿ ರಾಜಕೀಯ ಪಕ್ಷಗಳು ಅದನ್ನು ತಕ್ಷಣವೇ ಬಳಸಿಕೊಂಡು ಪ್ರಚಾರತಂತ್ರದ ಅಸ್ತ್ರವನ್ನಾಗಿ ಮಾಡಿಕೊಂಡವು. ಕಾಂಗ್ರೆಸ್ ಮತ್ತು ಭಾಜಪ ನಡುವೆ ಈಗ ನಡೆಯುತ್ತಿರುವ ವಿವಾದವು ‘ಎಐನಿಂದಲೇ ಆಗಿದೆ.


ಭವಿಷ್ಯದಲ್ಲಿ ಎಐ ನಿರ್ಮಿತ ವಿಡಿಯೋ ಸಮರ ವಿರಾಟ ಸ್ವರೂಪ ತಾಳಬಹುದು

ಒಂದು ವಿಶಾಲ ಅರ್ಥದಲ್ಲಿ, ಜಗತ್ತಿನ ಎಲ್ಲಾ ವಿವಿಧ ರೀತಿಯ ತಂತ್ರಜ್ಞಾನಗಳು ‘ಎಐನಿಂದ ಬದಲಾದಂತೆ, ಸೋಷಿಯಲ್ ಮೀಡಿಯಾದಲ್ಲಿಯೂ ಬದಲಾವಣೆಗಳು ಪ್ರಾರಂಭವಾಗಿವೆ. ಈ ಹೊಸ ಯುಗವು ಅದ್ಭುತವಾಗಿ ಪರಿಣಾಮಕಾರಿ, ಆಕರ್ಷಕ, ವೇಗವಾದ ಮತ್ತು ಸಹಜವಾಗಿಯೇ ಸತ್ಯ ಮತ್ತು ಸುಳ್ಳಿನ ನಡುವಿನ ಗೆರೆಯನ್ನು ಹೆಚ್ಚು ಮಸುಕಾಗಿಸುತ್ತದೆ. ಈ ‘ನರೋ ವಾ ಕುಂಜರೋ ವಾ (ನಿಜವೇ ಅಥವಾ ಸುಳ್ಳೇ) ರೀತಿಯ ಯುಗವನ್ನು ನಾವು ಈಗಾಗಲೇ ಪ್ರವೇಶಿಸಿದ್ದೇವೆ ಎಂಬುದನ್ನು ಎಲ್ಲರೂ ಗಮನಿಸು ವುದು ಅವಶ್ಯಕವಾಗಿದೆ. ಕಾಂಗ್ರೆಸ್ ಮತ್ತು ಭಾಜಪ ನಡುವಿನ ಎಐ ನಿರ್ಮಿತ ‘ವಿಡಿಯೋ ಸಮರವು ಕ್ಷುಲ್ಲಕವಾಗಿದೆ. ಮುಂಬರುವ ದಿನಗಳಲ್ಲಿ ಇಂತಹ ಅನೇಕ ವಿಷಯಗಳು ವಿರಾಟ ರೂಪದಲ್ಲಿ ನಮ್ಮ ಮೇಲೆ ಅಪ್ಪಳಿಸುತ್ತವೆ.

ಒಂದೆಡೆ ಜಗತ್ತು ‘ಎಐ ಯುಗಕ್ಕೆ ಪ್ರವೇಶಿಸುತ್ತಿರುವಾಗಲೇ ಸೋಷಿಯಲ್ ಮೀಡಿಯಾ ಕೂಡ ಬದಲಾಗುತ್ತಿದೆ. ಇದರಲ್ಲಿ ಮಾನವನ ಪಾತ್ರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇಂದು ಯಾರೂ ವಿಷಯವನ್ನು ಸಿದ್ಧಪಡಿಸಿ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲು ತಮ್ಮ ಸಮಯವನ್ನು ವ್ಯಯಿಸಬೇಕಾಗಿಲ್ಲ. ನಮ್ಮ ಪರವಾಗಿ ಕೆಲಸ ಮಾಡುವ ‘ಬಾಟ್ಸ್ ಅಥವಾ ‘ಏಜೆಂಟ್ಸ್ಗಗಳನ್ನು ಯಾರಾದರೂ ಸುಲಭವಾಗಿ ರಚಿಸಬಹುದು. ಉದಾಹರಣೆಗೆ, ನಾನು ಯಾವುದಾದರೂ ಒಂದು ವಿಷಯದ ಬಗ್ಗೆ ‘ಪೋಸ್ಟ್ (ಬರಹ) ತಯಾರಿಸಿ ಅದನ್ನು ನನ್ನ ‘ಬ್ಲಾಗ್, ‘ಫೇಸ್ಬುಕ್, ‘ಎಕ್ಸ್ ಮುಂತಾದ ವೇದಿಕೆಗಳಿಂದ ಪ್ರಸಾರ ಮಾಡಬೇಕಿದ್ದರೆ, ಈ ಎಲ್ಲಾ ಕೆಲಸಗಳನ್ನು ತಾನಾಗಿಯೇ ಮಾಡಬಹುದು, ಹಾಗೆಯೇ ಇದರ ಮೇಲೆ ಪ್ರತಿಕ್ರಿಯೆಗಳನ್ನು ದಾಖಲಿಸುವುದು ಅಥವಾ ಪ್ರತಿಕ್ರಿಯೆಗಳಿಗೆ ಉತ್ತರಿಸುವುದು ಕೂಡ ಸ್ವಯಂಚಾಲಿತವಾಗಿ ಆಗುತ್ತದೆ. ಇದೇ ರೀತಿ ಇದನ್ನು ವಿಡಿಯೋವಾಗಿ ಪರಿವರ್ತಿಸಿ ‘ಯೂಟ್ಯೂಬ್, ‘ಇನ್ಸ್ಟಾಗ್ರಾಮ್, ‘ಫೇಸ್ಬುಕ್ ಮುಂತಾದ ವೇದಿಕೆಗಳಲ್ಲಿ ಸ್ವಯಂಚಾಲಿತವಾಗಿ ಪ್ರಸಾರ ಮಾಡುವ ಸೌಲಭ್ಯವೂ ಇಂದು ಲಭ್ಯವಿದೆ. ಇದರಿಂದ ಸೋಷಿಯಲ್ ಮೀಡಿಯಾದ ‘ಆಟೊಮೇಶನ್ ಹೆಚ್ಚಾಗುತ್ತಿದೆ. ಇನ್ನೊಂದೆಡೆ ವಿಷಯದ ರಚನೆಯೂ ಅದ್ಭುತ ವೇಗದಲ್ಲಿ ಬದಲಾಗುತ್ತಿದೆ ಮತ್ತು ಇದಕ್ಕೆ ‘ಎಐ ಕಾರಣವಾಗಿದೆ. ಯಾವುದೇ ಚಿತ್ರ ಅಥವಾ ವಿಡಿಯೋವನ್ನು ಬದಲಾಯಿಸುವುದು ಇಂದು ಸುಲಭವಾಗಿ ಸಾಧ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ‘ಎಐನ ಸಹಾಯದಿಂದ ಯಥಾವತ್ತಾಗಿ ಡಿಜಿಟಲ್ ಪ್ರತಿಕೃತಿಗಳನ್ನು ಸಿದ್ಧಪಡಿಸಬಹುದು. ಇದರೊಂದಿಗೆ ‘ವಾಯ್ಸ್ ಕ್ಲೋನಿಂಗ್ (ನಕಲಿ ಮತ್ತು ಬಹುಮಾದರಿಯ ಧ್ವನಿಯನ್ನು ಹೊರಹಾಕುವುದು), ವಿಡಿಯೋ ನಿರ್ಮಾಣ ಮುಂತಾದ ವಿಷಯಗಳೂ ಸಾಧ್ಯವಾಗಿವೆ. ನಾವು ಕನಸಿನಲ್ಲಿಯೂ ಕಲ್ಪಿಸಲಾಗದ ಜಗತ್ತನ್ನು ನಿರ್ಮಿಸುವ ಸಾಮರ್ಥ್ಯ ‘ಎಐನಲ್ಲಿ ಇದೆ ಮತ್ತು ರಾಜಕೀಯ ಪಕ್ಷಗಳು ಇದನ್ನೇ ಬಳಸಲು ಪ್ರಾರಂಭಿಸಿವೆ.

೩. ಇತಿಹಾಸದ ಸತ್ಯ ಮತ್ತು ಅಸತ್ಯ ಸಂಗತಿಗಳನ್ನು ತಮ್ಮ ತಮ್ಮ ಸಿದ್ಧಾಂತಗಳ ಮೂಲಕ ತೋರಿಸಲಾಗುತ್ತದೆ !

ಮುಂದಿನ ದಿನಗಳಲ್ಲಿ ಇದರ ವಿವಿಧ ರೂಪಗಳನ್ನು ನಾವು ರಾಜಕೀಯ ಪ್ರಚಾರ ಸಮರದಲ್ಲಿ ನೋಡುತ್ತೇವೆ ಎಂದು ಹೇಳಲು ಜ್ಯೋತಿಷಿಯ ಅವಶ್ಯಕತೆ ಇಲ್ಲ. ಇಂದು ಕಾಂಗ್ರೆಸ್ ಮೋದಿ ಅವರ ತಾಯಿಯನ್ನು ಕಾಲ್ಪನಿಕ ಕಥೆಯಲ್ಲಿ ತೋರಿಸಿರುವುದು ಮತ್ತು ಭಾಜಪ ರಾಹುಲ ಅವರ ತಾಯಿಯ ಪೂರ್ವಜೀವನದ ಆರೋಪಿತ ಘಟನೆಯನ್ನು ‘ಎಐನ ಸಹಾಯದಿಂದ ಜೀವಂತಗೊಳಿಸಿರುವುದು ಕೇವಲ ಪ್ರಾಥಮಿಕ ಸ್ವರೂಪದ ಘಟನೆಗಳು. ಇದರ ಅನೇಕ ಭೀಕರ ರೂಪಗಳು ಭವಿಷ್ಯದಲ್ಲಿ ಬರಲಿವೆ. ಇತಿಹಾಸದ ಅನೇಕ ನಿಜ ಮತ್ತು ಸುಳ್ಳಿನ ಸಂಗತಿಗಳನ್ನು ತಮ್ಮ ತಮ್ಮ ಸಿದ್ಧಾಂತಗಳ ಮೂಲಕ ತೋರಿಸುವ ಹೊಸ ‘ಟ್ರೆಂಡ್ ಕೂಡ ಶೀಘ್ರದಲ್ಲಿಯೇ ಬೆಳೆಯಲಿದೆ.

– ಶ್ರೀ. ಶೇಖರ ಪಾಟೀಲ, ಸಂಪಾದಕರು, ಲೈವ್ ಟ್ರೈನ್ ಡಿಜಿಟಲ್ ಮೀಡಿಯಾ, ಜಳಗಾಂವ, ಮಹಾರಾಷ್ಟ್ರ.