ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ‘ಪತಂಜಲಿ ಆಯುರ್ವೇದ’ದ ಆಚಾರ್ಯ ಬಾಲಕೃಷ್ಣ ! : Acharya Balkrishna

ಯೋಗ ಋಷಿ ರಾಮದೇವ್ ಬಾಬಾ ಮತ್ತು ಆಚಾರ್ಯ ಬಾಲಕೃಷ್ಣ

ನ್ಯೂಯಾರ್ಕ್ (ಅಮೆರಿಕ) – ಅಮೆರಿಕದ ಸುಪ್ರಸಿದ್ಧ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ‘ಎಲ್ಸೆವಿಯರ್’ ಎಂಬ ಪ್ರಕಾಶನ ಸಂಸ್ಥೆಯ ಸಹಯೋಗದೊಂದಿಗೆ ಇತ್ತಿಚೆಗೆ ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಪತಂಜಲಿ ಆಯುರ್ವೇದದ ಆಚಾರ್ಯ ಬಾಲಕೃಷ್ಣ ಅವರು ವಿಶ್ವದ ಅಗ್ರ 2% ವಿಜ್ಞಾನಿಗಳ ಪೈಕಿ ಒಬ್ಬರು ಎಂದು ಗುರುತಿಸಲ್ಪಟ್ಟಿದ್ದಾರೆ. ದೃಢ ನಿರ್ಧಾರ ಮತ್ತು ಉತ್ಸಾಹವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಆಚಾರ್ಯ ಬಾಲಕೃಷ್ಣ ಅವರು ಭಾರತದ ಪ್ರಾಚೀನ ಜ್ಞಾನವನ್ನು ಆಧುನಿಕ ವೈಜ್ಞಾನಿಕ ವಿಧಾನಗಳೊಂದಿಗೆ ಅದ್ಭುತವಾಗಿ ಬೆರೆಸಿ ಸಾಬೀತುಪಡಿಸಿದ್ದಾರೆ. ಅವರ ಸಂಶೋಧನೆಗಳು ಭವಿಷ್ಯದ ವಿಜ್ಞಾನಿಗಳಿಗೆ ನೈಸರ್ಗಿಕ ಔಷಧೀಯ ಸಸ್ಯಗಳ ಪ್ರಯೋಜನಗಳನ್ನು ಅನ್ವೇಷಿಸಲು ಪ್ರೇರಣೆ ನೀಡುತ್ತವೆ.

ಆಯುರ್ವೇದಕ್ಕೆ ಆಚಾರ್ಯ ಬಾಲಕೃಷ್ಣ ಅವರ ಅಪಾರ ಕೊಡುಗೆ !

1. ಸಂಶೋಧನೆ ಮತ್ತು ಆಯುರ್ವೇದದಲ್ಲಿ ಆಚಾರ್ಯ ಬಾಲಕೃಷ್ಣ ಅವರ ಆಳವಾದ ಜ್ಞಾನ ಹಾಗೂ ಅವರ ಸ್ಪೂರ್ತಿದಾಯಕ ನಾಯಕತ್ವದಿಂದಾಗಿ 300ಕ್ಕೂ ಹೆಚ್ಚಿನ ಲೇಖನಗಳು ಅಂತರರಾಷ್ಟ್ರೀಯ ಸಂಶೋಧನಾ ಸಮಾವೇಶಗಳಲ್ಲಿ ಪ್ರಕಾಶಿತವಾಗಿವೆ.

2. ಅವರ ಮಾರ್ಗದರ್ಶನದಲ್ಲಿ, ಪತಂಜಲಿಯು ನೂರಕ್ಕೂ ಹೆಚ್ಚು ಪುರಾವೆ ಆಧಾರಿತ ಆಯುರ್ವೇದ ಔಷಧಗಳನ್ನು ಅಭಿವೃದ್ಧಿಪಡಿಸಿದೆ. ಈ ಔಷಧಗಳು ಎಲ್ಲರ ಕಲ್ಯಾಣಕ್ಕಾಗಿ ಅಲೋಪಥಿ ಚಿಕಿತ್ಸೆಗಳಿಗೆ ಸುರಕ್ಷಿತ ಮತ್ತು ನೈಸರ್ಗಿಕ ಪರ್ಯಾಯಗಳನ್ನು ಒದಗಿಸುತ್ತವೆ.

3. ಅವರು ಯೋಗ ಮತ್ತು ಆಯುರ್ವೇದದ ಕುರಿತು 120ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲದೆ, 25ಕ್ಕೂ ಹೆಚ್ಚು ಅಪ್ರಕಾಶಿತ ಪ್ರಾಚೀನ ಆಯುರ್ವೇದ ಹಸ್ತಪ್ರತಿಗಳನ್ನು ಪ್ರಕಟಿಸಲು ಕೊಡುಗೆ ನೀಡಿದ್ದಾರೆ.

4. ‘ಹರ್ಬಲ್ ಎನ್‌ಸೈಕ್ಲೋಪೀಡಿಯಾ’ ಮೂಲಕ ನೈಸರ್ಗಿಕ ಔಷಧೀಯ ಸಸ್ಯಗಳ ಪಟ್ಟಿಯನ್ನು ಸಿದ್ಧಪಡಿಸುವ ಅವರ ಕಾರ್ಯವು ಭವಿಷ್ಯದ ವಿಜ್ಞಾನಿಗಳಿಗೆ ಒಂದು ಅಮೂಲ್ಯ ಸಂಪನ್ಮೂಲವಾಗಿ ನಿಂತಿದೆ.

ಆಚಾರ್ಯರ ಗೌರವ ಇದು ಪಾರಂಪರಿಕ ಆಯುರ್ವೇದ ಜ್ಞಾನದಲ್ಲಿರುವ ಅಗಾಧ ಸಾಮರ್ಥ್ಯದ ಪ್ರತಿಫಲನ ! – ಯೋಗಋಷಿ ಬಾಬಾ ರಾಮದೇವ್

ಈ ಕುರಿತು ಯೋಗಋಷಿ ರಾಮದೇವ್ ಬಾಬಾ ಅವರು, “ಆಚಾರ್ಯ ಬಾಲಕೃಷ್ಣ ಅವರು ಕೇವಲ ಆಯುರ್ವೇದಕ್ಕೆ ವೈಜ್ಞಾನಿಕ ಮಾನ್ಯತೆ ಮಾತ್ರವಲ್ಲದೆ, ಪ್ರಪಂಚದಾದ್ಯಂತದ ವಿಜ್ಞಾನಿಗಳಿಗೆ ನಿಸರ್ಗ ಚಿಕಿತ್ಸೆಯಲ್ಲಿ ಸಂಶೋಧನೆಯ ಹೊಸ ಮಾರ್ಗಗಳನ್ನೂ ತೆರೆದಿದ್ದಾರೆ. ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಆಚಾರ್ಯರು ಸ್ಥಾನ ಪಡೆದಿರುವುದು, ಇದು ನೈಸರ್ಗಿಕ ಔಷಧೀಯ ಸಸ್ಯಗಳು ಮತ್ತು ಪಾರಂಪರಿಕ ಆಯುರ್ವೇದ ಜ್ಞಾನದಲ್ಲಿ ಅಡಗಿರುವ ಅಗಾಧ ಸಾಮರ್ಥ್ಯದ ಪ್ರತಿಫಲನವಾಗಿದೆ” ಎಂದು ತಿಳಿಸಿದ್ದಾರೆ.