ಅಲಾಸ್ಕಾ (ಅಮೇರಿಕ): ಭಾರತ ಅಮೇರಿಕಾ ಸೇನೆಯ ನಡುವೆ ಪ್ರತಿವರ್ಷದಂತೆ ಜಂಟಿ ಸಮರಾಭ್ಯಾಸ Indian American Army War Drill

ಅಲಾಸ್ಕಾ (ಅಮೆರಿಕ) – ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಸುಂಕ ಯುದ್ಧ’ದಿಂದಾಗಿ (ಆಮದು ತೆರಿಗೆ ಯುದ್ಧ) ಭಾರತ ಮತ್ತು ಅಮೆರಿಕದ ಸಂಬಂಧಗಳು ಹದಗೆಟ್ಟಿದೆ. ಆದಾಗ್ಯೂ ಎರಡೂ ದೇಶಗಳ ಸೈನ್ಯಗಳ ನಡುವೆ ವಾರ್ಷಿಕ ಜಂಟಿ ಸಮರಾಭ್ಯಾಸ ಮುಂದುವರೆದಿದೆ. ಈ ವರ್ಷ, ಅಮೆರಿಕದಲ್ಲಿನ ಕಾರ್ಯತಂತ್ರವಾಗಿ ಪ್ರಮುಖವಾಗಿರುವ ಅಲಾಸ್ಕಾದಲ್ಲಿ ಸೆಪ್ಟೆಂಬರ್ 1 ರಿಂದ 14 ರ ವರೆಗೆ ಈ ಸಮುರಾಭ್ಯಾಸವು ನಡೆಯಲಿದೆ. ಇದರ ಅಡಿಯಲ್ಲಿ  ಎರಡೂ ದೇಶಗಳ ಸೈನ್ಯಗಳು ಎತ್ತರದ ಪ್ರದೇಶಗಳ ವಾತಾವರಣದಲ್ಲಿ (ಪರಿಸ್ಥಿತಿಯಲ್ಲಿ) ಕಠಿಣ ಅಭ್ಯಾಸ ಮಾಡಲಿವೆ. ಪ್ರತಿ ವರ್ಷ, ಎರಡೂ ದೇಶಗಳ ಸೈನ್ಯಗಳು ಪರ್ಯಾಯವಾಗಿ ಪರಸ್ಪರ ದೇಶಗಳಲ್ಲಿ ಈ ಸಮರಾಭ್ಯಾಸವನ್ನು ಮಾಡುತ್ತವೆ.

ಈ ವರ್ಷದ ಸಮರಾಭ್ಯಾಸವು ಎತ್ತರದ ಪ್ರದೇಶದಲ್ಲಿ ಯುದ್ಧ ಮಾಡುವುದರ ಜೊತೆಗೆ ಡ್ರೋನ್ ಹಾಗೂ (ಕೌಂಟರ್)- ಪ್ರತಿ-ಡ್ರೋನ್ ಕಾರ್ಯಾಚರಣೆಗಳ ಮೇಲೆ ಕೇಂದ್ರೀಕರಿಸಲಿದೆ. ‘ಯುರೇಶಿಯನ್ ಟೈಮ್ಸ್ ‘ಪ್ರಕಾರ, ಅಲಾಸ್ಕಾದಲ್ಲಿ ನಡೆಯುತ್ತಿರುವ ಈ ಸಮರಾಭ್ಯಾಸವು ಭಾರತಕ್ಕೆ ಬಹಳ ಮುಖ್ಯವಾಗಿದೆ, ಏಕೆಂದರೆ ಇಲ್ಲಿನ ಹಿಮಭರಿತ ಮತ್ತು ಕಠಿಣ ಪರಿಸ್ಥಿತಿಗಳು ಭಾರತ-ಪಾಕಿಸ್ತಾನದ ನಡುವಿನ ನಿಯಂತ್ರಣ ರೇಖೆ ಹಾಗೂ ಭಾರತ-ಚೀನಾದ ನಡುವಿನ ವಾಸ್ತವಿಕ ನಿಯಂತ್ರಣ ರೇಖೆ ಪ್ರದೇಶಗಳ ಪರಿಸ್ಥಿತಿಗಳಂತೆಯೇ ಇರುತ್ತದೆ.