ಜಿ.ಎಸ್ .ಟಿ. ಕಡಿತದಿಂದ 100 ಅಗತ್ಯ ವಸ್ತುಗಳು ಅಗ್ಗ! : GST Rates Revised

  • ಆರೋಗ್ಯ ಉತ್ಪನ್ನಗಳು ಮತ್ತು ಜೀವ ವಿಮೆ ತೆರಿಗೆ ರಹಿತ

  • ಕೇಂದ್ರ ಸರಕಾರದಿಂದ ಸಾಮಾನ್ಯ ಜನರಿಗೆ ಭಾರಿ ನೆಮ್ಮದಿ

  • ಸರಕಾರವು ತೆರಿಗೆಯನ್ನು ಶೇಕಡಾ 18 ರಿಂದ ನೇರವಾಗಿ ಶೇಕಡಾ 5 ಕ್ಕೆ ಇಳಿಸಿದೆ

(ಜಿ.ಎಸ್.ಟಿ. ಎಂದರೆ ಸರಕು ಮತ್ತು ಸೇವಾ ತೆರಿಗೆ)

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ – ಕೇಂದ್ರ ಸರಕಾರ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ದರವನ್ನು ಕಡಿತಗೊಳಿಸುವ ಮೂಲಕ ಸಾಮಾನ್ಯ ಜನರಿಗೆ ಭಾರಿ ನೆಮ್ಮದಿ ನೀಡಿದೆ. ಸೆಪ್ಟೆಂಬರ್ 3 ರಂದು ನಡೆದ ಜಿ.ಎಸ್.ಟಿ. ಮಂಡಳಿಯ 56 ನೇ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಜಿ.ಎಸ್.ಟಿ. ದರ ಕಡಿತದಿಂದ 100 ಅಗತ್ಯ ವಸ್ತುಗಳು ಅಗ್ಗವಾಗಲಿವೆ. ಸರಕಾರವು ಈ ತೆರಿಗೆಯನ್ನು ಶೇಕಡಾ 18 ರಿಂದ ನೇರವಾಗಿ ಶೇಕಡಾ 5 ಕ್ಕೆ ಇಳಿಸಿದೆ. ಈ ಬದಲಾವಣೆಗಳ ಉದ್ದೇಶವು ಸಾಮಾನ್ಯ ಜನರಿಗೆ ನೆಮ್ಮದಿ ನೀಡುವುದು, ಸಣ್ಣ ವ್ಯಾಪಾರಗಳನ್ನು ಬೆಂಬಲಿಸುವುದು ಮತ್ತು ತಂಬಾಕಿನಂತಹ ಹಾನಿಕಾರಕ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಮೂಲಕ ಅವುಗಳ ಬಳಕೆಯನ್ನು ಕಡಿಮೆ ಮಾಡುವುದಾಗಿದೆ. ಆದ್ದರಿಂದ, ಕೇಂದ್ರ ಸರಕಾರವು ತಂಬಾಕು, ಕೆಫೀನ್ ಪಾನೀಯಗಳು, ಕ್ಯಾಸಿನೊಗಳು, ಕ್ರಿಕೆಟ್ ಪಂದ್ಯಗಳ ಟಿಕೆಟ್‌ಗಳು, 350 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಮಧ್ಯಮ ಮತ್ತು ದೊಡ್ಡ ಕಾರುಗಳಂತಹ ಐಷಾರಾಮಿ ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಈ ಹೊಸ ಬದಲಾವಣೆಗಳು ನವರಾತ್ರಿಯ ಮೊದಲ ದಿನ, ಅಂದರೆ ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ.

ಈ ಬಗ್ಗೆ ಮಾಹಿತಿ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಾಲು, ಗೋಧಿ, ಪಿಜ್ಜಾ, ಬ್ರೆಡ್ ಸೇರಿದಂತೆ ಅನೇಕ ಆಹಾರ ಉತ್ಪನ್ನಗಳು ತೆರಿಗೆ ( ಜಿ.ಎಸ್.ಟಿ) ರಹಿತ ಎಂದು ಹೇಳಿದರು. ಆರೋಗ್ಯ ಉತ್ಪನ್ನಗಳು ಮತ್ತು ಜೀವ ವಿಮೆಯ ಮೇಲೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಇದರೊಂದಿಗೆ, 33 ಜೀವ ರಕ್ಷಕ ಔಷಧಗಳು, ಅಪರೂಪದ ಕಾಯಿಲೆಗಳಿಗೆ ಔಷಧಗಳು ಮತ್ತು ಗಂಭೀರ ಕಾಯಿಲೆಗಳಿಗೆ ಔಷಧಗಳು ಕೂಡ ತೆರಿಗೆ ಮುಕ್ತವಾಗಿರುತ್ತವೆ.

ಈ ವಸ್ತುಗಳು ಅಗ್ಗವಾಗಲಿವೆ!

ಒಣ ಹಣ್ಣುಗಳು, ಬ್ರಾಂಡೆಡ್ ನಮಕೀನ್, ಹಲ್ಲುಜ್ಜುವ ಪುಡಿ, ಟೂತ್‌ಪೇಸ್ಟ್, ಸಾಬೂನು, ಕೂದಲಿನ ಎಣ್ಣೆ, ಸಾಮಾನ್ಯ ಆಂಟಿಬಯೋಟಿಕ್ಸ್, ನೋವು ನಿವಾರಕಗಳು, ಸಂಸ್ಕರಿಸಿದ ಆಹಾರ, ತಿಂಡಿಗಳು, ಫ್ರೋಜನ್ ತರಕಾರಿಗಳು, ಕಂಡೆನ್ಸೆಡ್ ಹಾಲು, ಕೆಲವು ಮೊಬೈಲ್ ಫೋನ್‌ಗಳು, ಕೆಲವು ಕಂಪ್ಯೂಟರ್‌ಗಳು, ಹೊಲಿಗೆ ಯಂತ್ರಗಳು, ಪ್ರೆಶರ್ ಕುಕ್ಕರ್‌ಗಳು, ಗೀಸರ್‌ಗಳಂತಹ ವಸ್ತುಗಳು ಅಗ್ಗವಾಗಲಿವೆ. ಈ ವಸ್ತುಗಳ ಮೇಲಿನ ತೆರಿಗೆಯು ಶೇಕಡಾ 12 ರಿಂದ ಶೇಕಡಾ 5 ಕ್ಕೆ ಇಳಿಯಲಿದೆ. ಇದರೊಂದಿಗೆ, ವಿದ್ಯುತ್ ರಹಿತ ವಾಟರ್ ಫಿಲ್ಟರ್‌ಗಳು, ಎಲೆಕ್ಟ್ರಿಕ್ ಇಸ್ತ್ರಿ ಪೆಟ್ಟಿಗೆಗಳು, ವ್ಯಾಕ್ಯೂಮ್ ಕ್ಲೀನರ್‌ಗಳು, 1,000 ರೂಪಾಯಿಗಿಂತ ಹೆಚ್ಚಿನ ಬೆಲೆಯ ಸಿದ್ಧ ಉಡುಪುಗಳು, 500 ರಿಂದ 1,000 ರೂಪಾಯಿಯವರೆಗಿನ ಬೂಟುಗಳು, ಅನೇಕ ಲಸಿಕೆಗಳು, ಹೆಚ್.ಐ.ವಿ, ಟಿ.ಬಿ. ಡಯಾಗ್ನೋಸ್ಟಿಕ್ ಕಿಟ್‌ಗಳು, ಸೈಕಲ್‌ಗಳು ಮತ್ತು ಪಾತ್ರೆಗಳ ಮೇಲೆ ಕಡಿಮೆ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ರೇಖಾಗಣಿತ ಪೆಟ್ಟಿಗೆಗಳು, ನಕ್ಷೆಗಳು, ಗ್ಲೋಬ್‌ಗಳು, ಮೆರುಗುಗೊಳಿಸಿದ ಟೈಲ್ಸ್, ಪೂರ್ವ-ನಿರ್ಮಿತ ಕಟ್ಟಡಗಳು, ಯಂತ್ರಗಳು, ಸಾರ್ವಜನಿಕ ಸಾರಿಗೆ ವಾಹನಗಳು, ಕೃಷಿ ಯಂತ್ರೋಪಕರಣಗಳು, ಸೌರ ವಾಟರ್ ಹೀಟರ್‌ಗಳಂತಹ ಉತ್ಪನ್ನಗಳು ಶೇಕಡಾ 12 ರ ತೆರಿಗೆ ಸ್ಲ್ಯಾಬ್‌ನಲ್ಲಿವೆ. ಇವುಗಳಿಗೆ ಈಗ ಶೇಕಡಾ 5 ರ ತೆರಿಗೆ ವಿಧಿಸಲಾಗುವುದು.

ಈ ಬದಲಾವಣೆಗಳಿಂದ ನಾಗರಿಕರ ಜೀವನ ಉತ್ತಮಗೊಳ್ಳಲಿದೆ! – ಪ್ರಧಾನ ಮಂತ್ರಿ

ಪ್ರಧಾನಿ ಮೋದಿ

ಜಿ.ಎಸ್.ಟಿ. ದರ ಕಡಿತದ ಕುರಿತು ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ತಮ್ಮ ‘ಎಕ್ಸ್’ ಪೋಸ್ಟ್‌ನಲ್ಲಿ, ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಸರಕಾರವು ಜಿ.ಎಸ್.ಟಿ.ಯಲ್ಲಿ ಮುಂದಿನ ಸುಧಾರಣೆಗಳನ್ನು ತರುವ ಉದ್ದೇಶವನ್ನು ವ್ಯಕ್ತಪಡಿಸಿದೆ. ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸಲು ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸಲು ಕೇಂದ್ರ ಸರಕಾರವು ಜಿ.ಎಸ್.ಟಿ. ದರಗಳನ್ನು ಬದಲಾಯಿಸಲು ಮತ್ತು ಪ್ರಕ್ರಿಯೆಗಳನ್ನು ಸುಲಭಗೊಳಿಸಲು ವಿವರವಾದ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ ಎಂದು ಹೇಳಿದರು.