ಕಚ್ಚಾ ತೈಲದ ಖರೀದಿಯ ಮೇಲೆ ರಷ್ಯಾ ಭಾರತಕ್ಕೆ ಹೆಚ್ಚು ರಿಯಾಯಿತಿ ನೀಡಲಿದೆ! : Russian Oil Discount

ರಷ್ಯಾದಿಂದ ಅಮೆರಿಕಕ್ಕೆ ತೀವ್ರ ಮುಖಭಂಗ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಮಾಸ್ಕೋ (ರಷ್ಯಾ) – ಭಾರತವು ರಷ್ಯಾದಿಂದ ಖರೀದಿಸುತ್ತಿರುವ ಕಚ್ಚಾ ತೈಲದ ಮೇಲೆ ರಷ್ಯಾ ಈಗ ಭಾರತಕ್ಕೆ ಹೆಚ್ಚು ರಿಯಾಯಿತಿ ನೀಡಲಿದೆ. ಭಾರತವು ಈಗಾಗಲೇ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲವನ್ನು ಖರೀದಿಸುತ್ತಿದೆ ಮತ್ತು ಈಗ ಹೆಚ್ಚು ರಿಯಾಯಿತಿ ಸಿಕ್ಕರೆ ಭಾರತಕ್ಕೆ ಸಾಕಷ್ಟು ಹಣ ಉಳಿತಾಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ, ರಷ್ಯಾದಿಂದ ಭಾರತಕ್ಕೆ ‘ಎಸ್-400’ ವಾಯು ರಕ್ಷಣಾ ವ್ಯವಸ್ಥೆಯೂ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗಲಿದೆ. ಅಮೆರಿಕವು ಭಾರತದ ಮೇಲೆ ಭಾರಿ ಆಮದು ಸುಂಕ ವಿಧಿಸಿದ ನಂತರ, ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧಗಳು ಸಾಕಷ್ಟು ಹದಗೆಟ್ಟಿವೆ. ಈ ಹಿನ್ನೆಲೆಯಲ್ಲಿ, ರಷ್ಯಾ ಭಾರತಕ್ಕೆ ಹೆಚ್ಚು ರಿಯಾಯಿತಿ ನೀಡುವುದರ ಮೂಲಕ ಅಮೆರಿಕಕ್ಕೆ ತೀವ್ರ ಹೊಡೆತ ನೀಡಿದೆ ಎಂದು ತಜ್ಞರು ಹೇಳಿದ್ದಾರೆ. ಈ ರಿಯಾಯಿತಿ ಸೆಪ್ಟೆಂಬರ್ ಅಂತ್ಯ ಮತ್ತು ಅಕ್ಟೋಬರ್ ತಿಂಗಳಲ್ಲಿ ಲಭ್ಯವಾಗಬಹುದು. ಕಳೆದ ವಾರ ಈ ರಿಯಾಯಿತಿ ಪ್ರತಿ ಬ್ಯಾರೆಲ್‌ಗೆ 2.50 ಡಾಲರ್ ಇತ್ತು, ಮತ್ತು ಜುಲೈ ತಿಂಗಳಲ್ಲಿ ಅದು ಪ್ರತಿ ಬ್ಯಾರೆಲ್‌ಗೆ 1 ಡಾಲರ್ ಇತ್ತು. ಕಳೆದ ತಿಂಗಳು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಶೇ‌.50 ತೆರಿಗೆ ವಿಧಿಸಿದ್ದರು, ಅದರಲ್ಲಿ ಶೇ.25 ತೆರಿಗೆಯನ್ನು ರಷ್ಯಾದಿಂದ ಕಚ್ಚಾ ತೈಲ ಖರೀದಿಯ ಮೇಲೆ ವಿಧಿಸಲಾಗಿತ್ತು. ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದರಿಂದ ಉಕ್ರೇನ್ ಯುದ್ಧಕ್ಕೆ ಹಣಕಾಸು ಒದಗಿಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಆಮದು ಸುಂಕದಿಂದಾಗಿ ಭಾರತದ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ; ಆದರೆ ಈಗ ರಷ್ಯಾದಿಂದ ಕಚ್ಚಾ ತೈಲದ ಮೇಲೆ ಹೆಚ್ಚು ರಿಯಾಯಿತಿ ಸಿಕ್ಕರೆ, ಖಂಡಿತವಾಗಿಯೂ ಭಾರತದ ಮೇಲಿನ ಆರ್ಥಿಕ ಒತ್ತಡವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.

ಭಾರತಕ್ಕೆ ‘ಎಸ್-400’ ಪೂರೈಕೆ ಹೆಚ್ಚಲಿದೆ!

‘ಎಸ್-400’ ವಾಯು ರಕ್ಷಣಾ ವ್ಯವಸ್ಥೆ ಖರೀದಿಯ ಕುರಿತು ಭಾರತ ಮತ್ತು ರಷ್ಯಾದ ನಡುವೆ ಮಾತುಕತೆಗಳು ನಡೆಯುತ್ತಿವೆ ಎಂದು ಅನೇಕ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ರಷ್ಯಾದಿಂದ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ‘ಎಸ್-400’ ಪೂರೈಕೆಯಾಗಬಹುದು. ‘ಆಪರೇಷನ್ ಸಿಂಧೂರ್’ನಲ್ಲಿ ಇದೇ ‘ಎಸ್-400’ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸಿತು ಮತ್ತು ಭಾರತೀಯ ವಾಯು ರಕ್ಷಣಾ ಪಡೆ ಉತ್ತಮ ಕಾರ್ಯಕ್ಷಮತೆ ತೋರಿತು. ಇದೇ ಕಾರಣದಿಂದ ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತದ ವಿರುದ್ಧ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಭಾರತಕ್ಕೆ ಹೆಚ್ಚು ‘ಎಸ್-400’ ಬೇಕಾಗಿದೆ.