ಸನಾತನ ಧರ್ಮದ ವಿರುದ್ಧ ಟೀಕಿಸಿದ ಉದಯನಿಧಿ ಸ್ಟಾಲಿನ್ ವಿರುದ್ಧದ ಪ್ರಕರಣಗಳನ್ನು ಒಟ್ಟುಗೂಡಿಸಲಾಗುವುದಿಲ್ಲ: ಸರ್ವೋಚ್ಚ ನ್ಯಾಯಾಲಯ!

ಮುಂದಿನ ವಿಚಾರಣೆ 2026ರವರೆಗೆ ಮುಂದೂಡಿಕೆ

ನವದೆಹಲಿ – ಸನಾತನ ಧರ್ಮದ ಕುರಿತು ಆಕ್ಷೇಪಾರ್ಹ ಹೇಳಿಕೆಗಳಿಗಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ ಮತ್ತು ರಾಜ್ಯ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಒಟ್ಟುಗೂಡಿಸಲು ನಾವು ಆಸಕ್ತಿ ಹೊಂದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಆದಾಗ್ಯೂ, ಉದಯನಿಧಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರ ಕೋರಿಕೆಯ ಮೇರೆಗೆ ಪ್ರಕರಣವನ್ನು 2026ರವರೆಗೆ ಮುಂದೂಡಲಾಗಿದೆ. ನ್ಯಾಯಮೂರ್ತಿಗಳಾದ ವಿಕ್ರಮ ನಾಥ ಮತ್ತು ಸಂದೀಪ ಮೆಹ್ತಾ ಅವರ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಅವರು ಈ ಬಗ್ಗೆ ಮೌಖಿಕ ಅವಲೋಕನಗಳನ್ನು ನೊಂದಾಯಿಸಿದರು.

ಯಾವ ಪ್ರಕರಣ?

ಉದಯನಿಧಿ ಸ್ಟಾಲಿನ್ ಅವರು ಸೆಪ್ಟೆಂಬರ್ 2, 2023 ರಂದು, ಅಂದರೆ ಸುಮಾರು 2 ವರ್ಷಗಳ ಹಿಂದೆ, ಸನಾತನ ಧರ್ಮವು ಡೆಂಗ್ಯೂ, ಮಲೇರಿಯಾ ಮತ್ತು ಕೋವಿಡ್‌ನಂತಹ ಕಾಯಿಲೆಗಳಂತಿದ್ದು, ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಈ ಹೇಳಿಕೆಗೆ ದೇಶಾದ್ಯಂತ ಹಿಂದೂಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಈ ಹಿಂದೆ, ಮಾರ್ಚ್ 6 ರಂದು, ಸರ್ವೋಚ್ಚ ನ್ಯಾಯಾಲಯ ಈ ಪ್ರಕರಣದಲ್ಲಿ ಉದಯನಿಧಿ ಸ್ಟಾಲಿನ್ ವಿರುದ್ಧ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಯಾವುದೇ ಮುಂದಿನ ಕ್ರಿಮಿನಲ್ ಪ್ರಕರಣಗಳನ್ನು ತೆಗೆದುಕೊಳ್ಳುವುದನ್ನು ನಿರ್ಬಂಧಿಸಿತ್ತು. ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಕುರಿತು ಮಾತನಾಡಿದ್ದನ್ನು ಸರ್ವೋಚ್ಚ ನ್ಯಾಯಾಲಯವು ಮಾರ್ಚ್ 2024 ರಲ್ಲಿ ಕಟುವಾಗಿ ಟೀಕಿಸಿತ್ತು.

ಸಂಪಾದಕೀಯ ನಿಲುವು

ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ನಾಶ ಮಾಡುವ ಬಗ್ಗೆ ಮಾತನಾಡಿದ್ದರು. ಅವರ ಆ ಹೇಳಿಕೆಗೆ ಈಗ ಸುಮಾರು 2 ವರ್ಷಗಳಾಗಿವೆ. ಆದ್ದರಿಂದ, ಮಾನ್ಯ ಸರ್ವೋಚ್ಚ ನ್ಯಾಯಾಲಯವು ಆದಷ್ಟು ಬೇಗ ಅರ್ಜಿಯನ್ನು ವಿಲೇವಾರಿ ಮಾಡಿ ಉದಯನಿಧಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಮಸ್ತ ಹಿಂದೂಗಳು ಅಪೇಕ್ಷಿಸುತ್ತಿದ್ದಾರೆ.