ಗೋವಾ-ಮಹಾರಾಷ್ಟ್ರದಲ್ಲಿ ಭಾರಿ ಮಳೆಯ ಸಾಧ್ಯತೆ!

ನವದೆಹಲಿ – ಭಾರತೀಯ ಹವಾಮಾನ ಇಲಾಖೆಯು ಸಪ್ಟೆಂಬರ್ ತಿಂಗಳ ಭಾರತದ ಹವಾಮಾನದ ಕುರಿತು ಮುನ್ಸೂಚನೆ ನೀಡಿದೆ. ಮುಂದಿನ 7 ದಿನಗಳಲ್ಲಿ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ ಪ್ರಕಾರ, ಸಪ್ಟೆಂಬರ್ 2025 ರಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

ಆಗಸ್ಟ್ ತಿಂಗಳಿನಲ್ಲಿ, ದೇಶದ ವಿವಿಧ ರಾಜ್ಯಗಳಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಹವಾಮಾನ ಇಲಾಖೆಯ ಪ್ರಕಾರ, 2001ರ ನಂತರ ಮೊದಲ ಬಾರಿಗೆ ವಾಯುವ್ಯ ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಜೂನ್ 1 ರಿಂದ ಆಗಸ್ಟ್ 31 ರವರೆಗಿನ ಅವಧಿಯನ್ನು ಪರಿಶೀಲಿಸಿದರೆ, ದೇಶದಲ್ಲಿ ಒಟ್ಟು 743.1 ಮಿಮೀ ಮಳೆಯಾಗಿದ್ದು, ಇದು ಸರಾಸರಿಗಿಂತ ಶೇಕಡಾ 27%ರಷ್ಟು ಹೆಚ್ಚಾಗಿದೆ.

1. ಪಂಜಾಬ್‌ನಲ್ಲಿ ಸುರಿದ ಮಳೆಯಿಂದಾಗಿ ಹಲವು ದಶಕಗಳಲ್ಲಿ ಅತಿ ದೊಡ್ಡ ಪ್ರವಾಹ ಉಂಟಾಯಿತು. ಅಲ್ಲಿನ ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಜಲಾವೃತವಾಗಿದೆ. ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆದು ಬೇರೆಡೆಗೆ ಹೋಗಬೇಕಾಯಿತು.

2. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಮೇಘ ಸ್ಫೋಟದಿಂದ ಭಾರಿ ಹಾನಿಯಾಗಿದೆ.

3. ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ಅವರು, ಸಪ್ಟೆಂಬರ್‌ನಲ್ಲಿ ಉತ್ತರಾಖಂಡದಲ್ಲಿ ಭಾರಿ ಮಳೆಯಿಂದ ಭೂಕುಸಿತ ಮತ್ತು ಹಠಾತ್ ಪ್ರವಾಹಗಳು ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದರೊಂದಿಗೆ ದಕ್ಷಿಣ ಹರಿಯಾಣ, ದೆಹಲಿ ಮತ್ತು ಉತ್ತರ ರಾಜಸ್ಥಾನದಲ್ಲಿಯೂ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಳ್ಳಬಹುದು ಎಂದು ಸೂಚಿಸಿದ್ದಾರೆ.