ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವಿನ ಘರ್ಷಣೆ ದುರದೃಷ್ಟಕರ! – ಅಮೆರಿಕಾದ ಮಾಜಿ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ

ಅಮೆರಿಕದ ನೀತಿಗಳ ಬಗ್ಗೆ ಟ್ರಂಪ್ ಅವರನ್ನು ಟೀಕಿಸಿದ ಅಮೆರಿಕೆಯ ಮಾಜಿ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ

ವಾಷಿಂಗ್ಟನ (ಅಮೆರಿಕ) – ಟ್ರಂಪ್ ಅವರು ಭಾರತದ ಮೇಲೆ ಹೇರಿರುವ ಹೆಚ್ಚುವರಿ ಆಮದು ಸುಂಕ ಮತ್ತು ಆ ಮೂಲಕ, ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುತ್ತಿರುವುದನ್ನು ಸ್ವತಃ ಅಮೆರಿಕದಲ್ಲೇ ವಿರೋಧಿಸಲಾಗುತ್ತಿದೆ. ಇದೀಗ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಡಳಿತದ ಅವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದ (ಸೆಕ್ರೆಟರಿ ಆಫ್ ಸ್ಟೇಟ್) ಜಾನ್ ಕೆರ್ರಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರು, “ನಮಗೆ ಆತಂಕವಿದೆ. ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವಿನ ಈ ಘರ್ಷಣೆ ದುರದೃಷ್ಟಕರವಾಗಿದೆ. ಮಹಾನ್ ರಾಷ್ಟ್ರಗಳು ಸಾಮಾನ್ಯ ನೆಲೆಯನ್ನು ಕಂಡುಕೊಳ್ಳಲು ಮತ್ತು ಸಾಮಾನ್ಯ ವ್ಯವಹಾರಗಳನ್ನು ನಡೆಸಲು ಪ್ರಾಮಾಣಿಕ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುತ್ತವೆ. ಅವು ಅನಗತ್ಯವಾಗಿ ಜನರಿಗೆ (ರಾಷ್ಟ್ರಗಳಿಗೆ) ‘ಅಲ್ಟಿಮೇಟಮ್’ (ಒಂದು ನಿಗದಿತ ಸಮಯದೊಳಗೆ ಒಂದು ನಿರ್ದಿಷ್ಟ ಕೆಲಸವನ್ನು ಪೂರ್ಣಗೊಳಿಸಲು ನೀಡುವ ಆದೇಶ) ನೀಡಿ ತಮ್ಮ ಮಹತ್ವವನ್ನು ತೋರಿಸುವುದಿಲ್ಲ” ಎಂದರು.

ಕೆರ್ರಿ ತಮ್ಮ ಮಾತನ್ನು ಮುಂದುವರಿಸಿ, ಒಬಾಮಾ ಆಡಳಿತದ ಅವಧಿಯಲ್ಲಿ ಸಹಕಾರ ಮತ್ತು ಗೌರವದಿಂದ ಮಾತುಕತೆಗಳನ್ನು ನಡೆಸಲಾಗುತ್ತಿತ್ತು; ಆದರೆ ಈಗ ಆದೇಶ ನೀಡುವುದು ಮತ್ತು ಒತ್ತಡ ಹೇರುವುದು ಶುರುವಾಗಿದೆ, ಎಂದು ಹೇಳಿದರು.