ರಷ್ಯಾ-ಉಕ್ರೇನ್ ನಡುವೆ ಈಗಲೇ ಕದನ ವಿರಾಮ ಸಾಧ್ಯವಿಲ್ಲ! – ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ (ಅಮೇರಿಕಾ) – ರಷ್ಯಾ ಮತ್ತು ಉಕ್ರೇನ್ ನಡುವೆ ಈಗಲೇ ಕದನ ವಿರಾಮ ಸಾಧ್ಯವಿಲ್ಲ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆಗಸ್ಟ್ 18ರಂದು ಶ್ವೇತಭವನದಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮತ್ತು ಯುರೋಪಿಯನ್ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ನಂತರ ಅವರು ಈ ವಿಷಯ ತಿಳಿಸಿದ್ದಾರೆ. ‘ರಷ್ಯಾ ಮತ್ತು ಉಕ್ರೇನ್ ನಡುವೆ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಯಾವುದೇ ಒಪ್ಪಂದವಾಗಿಲ್ಲ’ ಎಂದು ಹೇಳುವ ಮೂಲಕ ಅವರು ಮೇಲಿನ ಮಾಹಿತಿಯನ್ನು ನೀಡಿದರು.
ಈ ಸಭೆಯಲ್ಲಿ ಉಕ್ರೇನ್ ನ ಭದ್ರತೆಯ ಭರವಸೆಯ ಕುರಿತು ಚರ್ಚಿಸಲಾಯಿತು. ಅಮೇರಿಕಾ ಮತ್ತು ಯುರೋಪಿಯನ್ ರಾಷ್ಟ್ರಗಳು ಈ ವಿಷಯದ ಮೇಲೆ ಒಟ್ಟಾಗಿ ಕೆಲಸ ಮಾಡಲಿವೆ ಎಂದು ಟ್ರಂಪ್ ಹೇಳಿದರು. ಮತ್ತೊಂದೆಡೆ, ರಷ್ಯಾದ ಅಧ್ಯಕ್ಷರ ಕಚೇರಿ (‘ಕ್ರೆಮ್ಲಿನ್’) ಹೇಳಿರುವ ಪ್ರಕಾರ, ಟ್ರಂಪ್ ಈ ಸಭೆಯನ್ನು ಮೊಟಕುಗೊಳಿಸಿ, ಪುಟಿನ್ ಅವರೊಂದಿಗೆ 40 ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತನಾಡಿದರು. ಈ ವೇಳೆ ಪುಟಿನ್ ರಷ್ಯಾ ಮತ್ತು ಉಕ್ರೇನ್ ಪ್ರತಿನಿಧಿಗಳ ನಡುವೆ ನೇರ ಮಾತುಕತೆಗೆ ಬೆಂಬಲ ವ್ಯಕ್ತಪಡಿಸಿದರು.

ಶಾಂತಿಗಾಗಿ ಉಕ್ರೇನ್‌ಗೆ ಸಂಪೂರ್ಣ ಭದ್ರತೆ ಬೇಕು! – ಝೆಲೆನ್ಸ್ಕಿ

ಶಾಂತಿ ಒಪ್ಪಂದಕ್ಕಾಗಿ ಉಕ್ರೇನ್‌ ಭದ್ರತೆಗೆ ಸಂಬಂಧಿಸಿದ ಎಲ್ಲ ಬೇಡಿಕೆಗಳು ಪೂರ್ತಿಗೊಳ್ಳಬೇಕೆಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಆಗ್ರಹಿಸಿದರು. ಮೊದಲು ಉಕ್ರೇನ್‌ಗೆ ಬಲಿಷ್ಠ ಸೇನೆ ಬೇಕು, ಇದರಲ್ಲಿ ಶಸ್ತ್ರಾಸ್ತ್ರಗಳು, ಸೈನಿಕರು, ತರಬೇತಿ ಮತ್ತು ಗುಪ್ತಚರ ವ್ಯವಸ್ಥೆಗಳು ಸೇರಿವೆ. ಇವೆಲ್ಲವೂ ಅಮೇರಿಕಾ ಮತ್ತು ಇತರ ಮಿತ್ರರಾಷ್ಟ್ರಗಳಂತಹ ದೊಡ್ಡ ದೇಶಗಳ ಸಹಾಯವನ್ನು ಅವಲಂಬಿಸಿರುತ್ತದೆ ಎಂದು ಝೆಲೆನ್ಸ್ಕಿ ಹೇಳಿದರು.

ರಷ್ಯಾದೊಂದಿಗೆ ಭೂಮಿ ವಿನಿಮಯ ಮಾಡಿಕೊಳ್ಳುವುದಿಲ್ಲ! – ಝೆಲೆನ್ಸ್ಕಿ

ಯುದ್ಧ ಕೊನೆಗೊಳಿಸಲು ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಲು ಉಕ್ರೇನ್ ಸಿದ್ಧವಿದೆ ಎಂದು ಝೆಲೆನ್ಸ್ಕಿ ಹೇಳಿದರು. ಮಾಸ್ಕೋ ಮತ್ತು ವಾಷಿಂಗ್ಟನ್ ಜೊತೆ ತ್ರಿಪಕ್ಷೀಯ ಸಭೆ ಅಗತ್ಯವಿದೆ. ರಷ್ಯಾದೊಂದಿಗೆ ಭೂಮಿಯನ್ನು ವಿನಿಮಯ ಮಾಡಿಕೊಳ್ಳುವುದಿಲ್ಲ ಎಂದು ಕೂಡ ಅವರು ಸ್ಪಷ್ಟಪಡಿಸಿದರು.