ಚರ್ಚೆಯ ನಂತರ ಯುದ್ಧ ನಿಲ್ಲಿಸಿ, ಇಲ್ಲವಾದರೆ ಗಂಭೀರ ಪರಿಣಾಮ ಎದುರಿಸಿ! – Trump Threaten Putin

ಟ್ರಂಪ್ ಅವರಿಂದ ಪುಟಿನ್ ಅವರಿಗೆ ಎಚ್ಚರಿಕೆ

ವಾಷಿಂಗ್ಟನ (ಅಮೆರಿಕ) – ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಆಗಸ್ಟ್ 15 ರಂದು ನಡೆಯಲಿರುವ ಮಾತುಕತೆಯ ನಂತರ ಯುದ್ಧವನ್ನು ನಿಲ್ಲಿಸಿ, ಇಲ್ಲವಾದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಗಸ್ಟ್ 13 ರಂದು ರಾತ್ರಿ ಕೆನಡಿ ಸೆಂಟರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಕಳೆದ ಮೂರೂವರೆ ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಆಗಸ್ಟ್ 15 ರಂದು ಅಲಾಸ್ಕಾದಲ್ಲಿ ಟ್ರಂಪ್ ಮತ್ತು ಪುಟಿನ್ ನಡುವೆ ಮಾತುಕತೆ ನಡೆಯಲಿದೆ. ಎರಡೂ ನಾಯಕರು ಅಮೆರಿಕದ ನೆಲದಲ್ಲಿ ಮೊದಲ ಬಾರಿಗೆ ಭೇಟಿಯಾಗುತ್ತಿದ್ದಾರೆ. ಇದಕ್ಕೂ ಮೊದಲು, ಟ್ರಂಪ್ ಮತ್ತು ಪುಟಿನ್ ಅವರು ಜುಲೈ 16, 2018 ರಂದು ಫಿನ್‌ ಲ್ಯಾಂಡ್ ರಾಜಧಾನಿ ಹೆಲ್ಸಿಂಕಿಯಲ್ಲಿ ಭೇಟಿಯಾಗಿದ್ದರು. ಅದು ಇಬ್ಬರ ನಡುವಿನ ಕೊನೆಯ ಸಭೆಯಾಗಿತ್ತು.

ಯುದ್ಧವನ್ನು ಕೊನೆಗೊಳಿಸಲು ಡೋನಬಾಸ್ ಪ್ರದೇಶದ ಭೂಮಿ ನೀಡಲು ಉಕ್ರೇನ್ ನಿರಾಕರಣೆ!

ಟ್ರಂಪ್ ಅವರು ಆಗಸ್ಟ್ 13 ರಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಯುರೋಪಿಯನ್ ನಾಯಕರೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ, ಯುದ್ಧವನ್ನು ಕೊನೆಗೊಳಿಸಲು ಎರಡೂ ಕಡೆಯವರು ಭೂಮಿಯನ್ನು ವಿನಿಮಯ ಮಾಡಿಕೊಳ್ಳಬೇಕಾಗಬಹುದು ಎಂದು ಟ್ರಂಪ್ ಹೇಳಿದರು. ಇದಕ್ಕೆ ಝೆಲೆನ್ಸ್ಕಿ ಅವರು ಟ್ರಂಪ್ ಅವರ ಪ್ರಸ್ತಾವನೆಯನ್ನು ತಳ್ಳಿಹಾಕಿ, ಯುದ್ಧವನ್ನು ಕೊನೆಗೊಳಿಸಲು ರಷ್ಯಾಕ್ಕೆ ಡೋನಬಾಸ್  ಪ್ರದೇಶದ ಭೂಮಿಯನ್ನು ನೀಡಲು ಸ್ಪಷ್ಟವಾಗಿ ನಿರಾಕರಿಸಿದರು.