Shehbaz Sharif On Sindhu River : ‘ಸಿಂಧೂ ನದಿಯ ನೀರು ತಡೆದರೆ ಭಾರತಕ್ಕೆ ಪಾಠ ಕಲಿಸುತ್ತೇವೆ!'(ಅಂತೆ)

ಪಾಕಿಸ್ತಾನದ ಪ್ರಧಾನಿ ಶೆಹಬಾಜ ಷರೀಫ್ ಅವರಿಂದ ಭಾರತಕ್ಕೆ ಬೆದರಿಕೆ!

ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್

ಇಸ್ಲಾಮಾಬಾದ (ಪಾಕಿಸ್ತಾನ) – ಶತ್ರು (ಭಾರತ) ಪಾಕಿಸ್ತಾನದಿಂದ ಒಂದು ಹನಿ ನೀರನ್ನು ಸಹ ಕಸಿದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಭಾರತವು ಪಾಕಿಸ್ತಾನತ್ತ ಹರಿಯುವ ನೀರನ್ನು ತಡೆಯಲು ಪ್ರಯತ್ನಿಸಿದರೆ, ಅದು ಸಿಂಧೂ ಜಲ ಒಪ್ಪಂದದ ಉಲ್ಲಂಘನೆಯಾಗುತ್ತದೆ. ನೀವು ನಮಗೆ ನೀರು ಸರಬರಾಜು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದೀರಿ. ನೀವು ಅದನ್ನು ಮಾಡಲು ಪ್ರಯತ್ನಿಸಿದರೆ, ಪಾಕಿಸ್ತಾನ ನಿಮಗೆ ಎಂದಿಗೂ ಮರೆಯದಂತಹ ಪಾಠವನ್ನು ಕಲಿಸುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ ಷರೀಫ್ ಬೆದರಿಕೆ ಹಾಕಿದ್ದಾರೆ. ‘ಸಿಂಧೂ ನದಿಯ ನೀರು ಪಾಕಿಸ್ತಾನದ ಜೀವನಾಡಿಯಾಗಿದ್ದು, ಅಂತರರಾಷ್ಟ್ರೀಯ ಒಪ್ಪಂದದ ಪ್ರಕಾರ ದೇಶದ ಹಕ್ಕುಗಳೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದೂ ಅವರು ಹೇಳಿದರು. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಸಿಂಧೂ ಜಲ ಒಪ್ಪಂದ ಹಂಚಿಕೆ ಎಂದರೇನು?

ಸಿಂಧೂ ನದಿ ವ್ಯವಸ್ಥೆಯಲ್ಲಿ ಸಿಂಧೂ, ಝೇಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲೆಜ್ ಎಂಬ ಆರು ನದಿಗಳಿವೆ. ಅವುಗಳ ದಡದ ಪ್ರದೇಶವು ಸುಮಾರು 11 ಲಕ್ಷದ 20 ಸಾವಿರ ಚದರ ಕಿಲೋಮೀಟರ್‌ಗಳಲ್ಲಿ ಹರಡಿಕೊಂಡಿದೆ. ಈ ಪೈಕಿ ಶೇ.47 ಭೂಮಿ ಪಾಕಿಸ್ತಾನದಲ್ಲಿ, ಶೇ.39 ಭಾರತದಲ್ಲಿ, ಶೇ.8 ಚೀನಾದಲ್ಲಿ ಮತ್ತು ಶೇ‌. 6 ಭೂಮಿ ಅಫ್ಘಾನಿಸ್ತಾನದಲ್ಲಿದೆ. ಈ ಎಲ್ಲಾ ದೇಶಗಳಲ್ಲಿ ಸುಮಾರು 30 ಕೋಟಿ ಜನರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

1947 ರಲ್ಲಿ ಭಾರತದ ವಿಭಜನೆಯಾಗುವ ಮೊದಲು, ಭಾರತದ ಪಂಜಾಬ್ ಪ್ರಾಂತ್ಯ ಮತ್ತು ಪಾಕಿಸ್ತಾನದ ಸಿಂಧ್ ಪ್ರಾಂತ್ಯಗಳ ನಡುವೆ ನದಿಯ ನೀರು ಹಂಚಿಕೆಯ ಕುರಿತು ವಿವಾದ ಪ್ರಾರಂಭವಾಗಿತ್ತು.

ಆ ಸಮಯದಲ್ಲಿ, ಭಾರತೀಯ ಮತ್ತು ಪಾಕಿಸ್ತಾನಿ ಇಂಜಿನಿಯರಗಳ ನಡುವೆ ‘ಸ್ಥಿರತೆ ಒಪ್ಪಂದ’ ಮಾಡಲಾಯಿತು. ಇದರ ಅಡಿಯಲ್ಲಿ, ಪಾಕಿಸ್ತಾನಕ್ಕೆ ಎರಡು ಮುಖ್ಯ ಕಾಲುವೆಗಳಿಂದ ನೀರು ಸಿಗುತ್ತಲೇ ಇತ್ತು. ಈ ಒಪ್ಪಂದವು ಮಾರ್ಚ್ 31, 1948 ರವರೆಗೆ ನಡೆಯಿತು. ಏಪ್ರಿಲ್ 1, 1948 ರಂದು ಒಪ್ಪಂದವು ಅಸ್ತಿತ್ವದಲ್ಲಿಲ್ಲದಿದ್ದಾಗ, ಭಾರತವು ಎರಡೂ ಕಾಲುವೆಗಳ ನೀರು ಸರಬರಾಜನ್ನು ನಿಲ್ಲಿಸಿತು. ಇದರಿಂದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ 17 ಲಕ್ಷ ಎಕರೆ ಭೂಮಿಯ ಕೃಷಿ ನಾಶವಾಯಿತು. ನಂತರ ಪುನಃ ಮಾತುಕತೆ ನಡೆದು, ಭಾರತ ನೀರು ಒದಗಿಸಲು ಒಪ್ಪಿಕೊಂಡಿತು. ನಂತರ 1951 ರಿಂದ 1960 ರವರೆಗೆ ವಿಶ್ವ ಬ್ಯಾಂಕಿನ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನೀರು ಹಂಚಿಕೆಯ ಬಗ್ಗೆ ಚರ್ಚೆ ನಡೆಯಿತು ಮತ್ತು ಸೆಪ್ಟೆಂಬರ್ 19, 1960 ರಂದು ಕರಾಚಿಯಲ್ಲಿ ಭಾರತದ ಪ್ರಧಾನಿ ನೆಹರು ಮತ್ತು ಪಾಕಿಸ್ತಾನದ ರಾಷ್ಟ್ರಪತಿ ಅಯೂಬ್ ಖಾನ್ ಅವರ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದನ್ನು ‘ಸಿಂಧೂ ಜಲ ಹಂಚಿಕೆ ಒಪ್ಪಂದ’ ಎಂದು ಕರೆಯಲಾಗುತ್ತದೆ. ಏಪ್ರಿಲ್ 24, 2025 ರಂದು ಭಾರತವು ಈ ಒಪ್ಪಂದವನ್ನು ರದ್ದುಗೊಳಿಸಿತು. ಪಹಲ್ಗಾಮನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಸಂಪಾದಕೀಯ ನಿಲುವು

ಪಾಕಿಸ್ತಾನದ ಇಂತಹ ಟೊಳ್ಳು ಬೆದರಿಕೆಗಳಿಗೆ ಭಾರತ ಸೊಪ್ಪು ಹಾಕುವುದಿಲ್ಲ ಎಂದು ಪಾಕಿಸ್ತಾನಕ್ಕೂ ತಿಳಿದಿದೆ; ಆದರೆ, ತಮ್ಮ ಜನರಿಗೆ ತೋರಿಸಲು ಇಂತಹ ಹೇಳಿಕೆಗಳನ್ನು ನೀಡಿ ತಮ್ಮ ಮಹತ್ವವನ್ನು ತಾವೇ ತೋರಿಸಿಕೊಳ್ಳಲು ಬಯಸುತ್ತಾರೆ