ರೈತರ ಮತ್ತು ಪಶುಪಾಲಕರ ಹಿತಾಸಕ್ತಿಗಳೊಂದಿಗೆ ರಾಜಿಯಾಗುವುದಿಲ್ಲ! – PM Modi American Imports Agreement

ಪಧಾನಮಂತ್ರಿ ಮೋದಿಯವರಿಂದ ಅಮೆರಿಕದ ಆಮದು ಸುಂಕ ಒಪ್ಪಂದದ ಕುರಿತು ಪರೋಕ್ಷ ಹೇಳಿಕೆ

ನವದೆಹಲಿ – ನಮ್ಮ ರೈತರ ಹಿತಾಸಕ್ತಿಯೇ ನಮ್ಮ ಪರಮ ಆದ್ಯತೆ. ಭಾರತವು ರೈತರು, ಪಶುಪಾಲಕರು ಮತ್ತು ಮೀನುಗಾರರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ನನಗಿದರಿಂದ ವೈಯಕ್ತಿಕವಾಗಿ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ನನಗೆ ತಿಳಿದಿದೆ; ಆದರೆ ಅದಕ್ಕಾಗಿ ನಾನು ಸಿದ್ಧನಿದ್ದೇನೆ, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಹೆಸರನ್ನು ಹೇಳದೆ, ಶೇ. 50ರಷ್ಟು ಆಮದು ಸುಂಕದ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿದರು. ಅವರು ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

ಆಗಸ್ಟ್ 7 ರಿಂದಲೇ ಭಾರತದಿಂದ ಅಮೆರಿಕಕ್ಕೆ ಕಳುಹಿಸುವ ವಸ್ತುಗಳ ಮೇಲೆ ಶೇ. 25 ತೆರಿಗೆ ವಿಧಿಸುವುದು ಪ್ರಾರಂಭವಾಗಿದೆ. ಹೆಚ್ಚುವರಿ ಶೇ. 25ರಷ್ಟು ತೆರಿಗೆ ಆಗಸ್ಟ್ 27 ರಿಂದ ಅನ್ವಯವಾಗುತ್ತದೆ. ಇದರಿಂದ ಅಮೆರಿಕದ ಮಾರುಕಟ್ಟೆಯಲ್ಲಿ ಭಾರತೀಯ ವಸ್ತುಗಳು ದುಬಾರಿಯಾಗುತ್ತವೆ ಮತ್ತು ಅವುಗಳ ಬೇಡಿಕೆ ಕಡಿಮೆಯಾಗಬಹುದು. ಅಲ್ಲಿನ ಆಮದುದಾರರು ಇತರ ದೇಶಗಳಿಂದ ವಸ್ತುಗಳನ್ನು ತರಿಸಿಕೊಳ್ಳಬಹುದು.

ಅಮೆರಿಕವು ಭಾರತದಿಂದ ಏನನ್ನು ನಿರೀಕ್ಷಿಸುತ್ತದೆ?

ಅಮೆರಿಕವು ಭಾರತದಲ್ಲಿ ಡೈರಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ಬಯಸುತ್ತದೆ. ತಮ್ಮ ಹಾಲು ಶುದ್ಧ ಮತ್ತು ಉತ್ತಮ ಗುಣಮಟ್ಟದಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗವೂ ಆಗಿರಬಹುದು ಎಂದು ಅಮೆರಿಕದ ಕಂಪನಿಗಳು ಹೇಳಿಕೊಂಡಿವೆ. ಆದರೆ, ಭಾರತವು ವಿಶ್ವದಲ್ಲಿಯೇ ಅತಿ ದೊಡ್ಡ ಹಾಲು ಉತ್ಪಾದಕ ದೇಶವಾಗಿದ್ದು, ಲಕ್ಷಾಂತರ ಸಣ್ಣ ರೈತರು ಈ ಕ್ಷೇತ್ರದಲ್ಲಿ ತೊಡಗಿದ್ದಾರೆ. ಒಂದು ವೇಳೆ ಅಮೆರಿಕದ ಡೈರಿ ಉತ್ಪನ್ನಗಳು ಭಾರತಕ್ಕೆ ಬಂದರೆ, ಸ್ಥಳೀಯ ರೈತರಿಗೆ ದೊಡ್ಡ ಹಾನಿಯಾಗಬಹುದು ಎಂದು ಭಾರತ ಸರಕಾರಕ್ಕೆ ಭಯವಿದೆ.

ಭಾರತದಲ್ಲಿ ಹೆಚ್ಚಿನ ಜನರು ಶುದ್ಧ ಸಸ್ಯಾಹಾರಿ ಡೈರಿ ಉತ್ಪನ್ನಗಳನ್ನು ಬಯಸುತ್ತಾರೆ, ಆದರೆ ಅಮೆರಿಕದಲ್ಲಿ ಕೆಲವು ಡೈರಿ ಉತ್ಪನ್ನಗಳನ್ನು ಪ್ರಾಣಿಗಳ ಮೂಳೆಗಳಿಂದ ತಯಾರಿಸಿದ ‘ಕಿಣ್ವಗಳನ್ನು’ (ಜೈವಿಕ ರಸಾಯನಿಕ) ಬಳಸಿ ತಯಾರಿಸಲಾಗುತ್ತದೆ. ಭಾರತದ ಒಂದು ಷರತ್ತು ಅವುಗಳು ಸಸ್ಯಾಹಾರಿ ಆಗಿರಬೇಕು ಎಂಬುದು ಆಗಿದೆ. ಇದರ ಜೊತೆಗೆ, ಗೋಧಿ, ಅಕ್ಕಿ, ಸೋಯಾಬೀನ್, ಜೋಳ ಸೇರಿದಂತೆ ಸೇಬು, ದ್ರಾಕ್ಷಿ ಮುಂತಾದ ಹಣ್ಣುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಮಾರಾಟ ಮಾಡಲು ಅಮೆರಿಕವು ಬಯಸುತ್ತದೆ. ಭಾರತವು ಆಮದು ಸುಂಕವನ್ನು ಕಡಿಮೆ ಮಾಡಬೇಕು ಎಂಬುದು ಅವರ ಆಸೆ ಇದೆ.