
ನಿಮಿಷಾ ಪ್ರಿಯಾ ಎಂಬ ಕೇರಳದ ಸಾಮಾನ್ಯ ಕುಟುಂಬದ ಯುವತಿಯೊಬ್ಬಳು ನರ್ಸಿಂಗ್ ಶಿಕ್ಷಣ ಪಡೆದು, ದೊಡ್ಡ ಕನಸುಗಳನ್ನು ಹೊತ್ತು ಯೆಮೆನ್‌ನಂತಹ ಇಸ್ಲಾಮಿಕ್ ದೇಶಕ್ಕೆ ಹೋಗಿದ್ದಳು. ಅಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿ, ಭಾರತಕ್ಕೆ ಮರಳಿದಳು. ಅನಂತರ ಮದುವೆಯಾಗಿ, ಪುನಃ ಯೆಮೆನ್‌ಗೆ ಹೋಗಿ ಸ್ವಂತ ಉದ್ಯೋಗ ಪ್ರಾರಂಭಿಸಿದಳು. ಯೆಮೆನ್ ಕಾನೂನಿನ ಪ್ರಕಾರ, ಸ್ಥಳೀಯ ವ್ಯಕ್ತಿಯೊಬ್ಬರನ್ನು ಪಾಲುದಾರನನ್ನಾಗಿ ಮಾಡಿಕೊಂಡೇ ವ್ಯಾಪಾರ ಅಥವಾ ಉದ್ಯಮವನ್ನು ಪ್ರಾರಂಭಿಸಬೇಕು, ಆದ್ದರಿಂದ ಆ ಯುವತಿ ಸ್ಥಳೀಯ ವ್ಯಕ್ತಿ ಅಬ್ದೋ ಮಹದಿ ಎಂಬವನನ್ನು ತನ್ನೊಂದಿಗೆ ಸೇರಿಸಿಕೊಂಡಳು. ಮಹದಿ ಪ್ರಾರಂಭದಲ್ಲಿ ಆಕೆಗೆ ಸಹಕರಿಸಿದನು; ಆದರೆ ಅವಳ ಉದ್ಯಮ ಬೆಳೆದಂತೆ, ಮೊದಲಿಗೆ ಆಕೆಯ ಹಣದ ಮೇಲೆ, ನಂತರ ಆಕೆಯ ಸ್ತ್ರೀತ್ವದ ಮೇಲೆ ಕಣ್ಣು ಹಾಕತೊಡಗಿದನು. ನಂತರ, ಮಹದಿ ನಿಮಿಷಾಳ ಹಣವನ್ನು ಕಸಿದುಕೊಳ್ಳುವುದು, ಆಕೆಯನ್ನು ಥಳಿಸುವುದು, ಆಕೆಯ ಮಾನಭಂಗ ಮಾಡುವುದು, ತನ್ನ ಸ್ನೇಹಿತರಿಂದಲೂ ಮಾನಭಂಗ ಮಾಡಿಸುವುದು ಹೀಗೆ ಹಲವು ರೀತಿಯಲ್ಲಿ ಆಕೆಗೆ ಕಿರುಕುಳ ನೀಡಿ, ದೌರ್ಜನ್ಯ ಎಸಗಲು ಪ್ರಾರಂಭಿಸಿದನು. ಆಕೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಹದಿ ನಿಮಿಷಾಳ ಪಾಸ್‌ಪೋರ್ಟ್ ಅನ್ನು ಕಸಿದುಕೊಂಡನು. ದೌರ್ಜನ್ಯ ಸಹಿಸಲಾಗದೆ, ಮೆಹದಿಯನ್ನು ಅರೆನಿದ್ರಾವಸ್ಥೆಗೆ ದೂಡಲು ನೀಡಿದ ಔಷಧಿಯ ಪ್ರಮಾಣ ಹೆಚ್ಚಾಗಿ ಆತ ಸಾಯುತ್ತಾನೆ ಮತ್ತು ಆಕೆ ಆತನ ಶವವನ್ನು ವಿಲೇವಾರಿ ಮಾಡುತ್ತಾಳೆ. ಇದರಿಂದ ಅಲ್ಲಿನ ನ್ಯಾಯಾಲಯ ಆಕೆಗೆ ಮರಣದಂಡನೆ ವಿಧಿಸುತ್ತದೆ. ಜುಲೈ ೧೬ ರಂದು ಶಿಕ್ಷೆ ಜಾರಿಯಾಗಬೇಕಿತ್ತು; ಆದರೆ ಭಾರತೀಯ ಅಧಿಕಾರಿಗಳು ಸೇರಿದಂತೆ ಹಲವರು ಆಕೆಗಾಗಿ ಆಡಳಿತಾತ್ಮಕ ಮಟ್ಟದಲ್ಲಿ ಪ್ರಯತ್ನಿಸಿದ್ದರಿಂದ ಆಕೆಯ ಗಲ್ಲುಶಿಕ್ಷೆಯನ್ನು ಮುಂದೂಡಲಾಗಿದೆ. ಅಲ್ಲಿ ಪ್ರಸ್ತುತ ವಾಸವಾಗಿರುವ ಓರ್ವ ಭಾರತೀಯನು ಈ ಪ್ರಕರಣವನ್ನು ಜಗತ್ತಿನ ಮುಂದೆ ತಂದನು. ‘ನಿಮಿಷಾಗೆ ನ್ಯಾಯ ಸಿಗಬೇಕು, ಆಕೆಯ ಗಲ್ಲುಶಿಕ್ಷೆ ರದ್ದುಗೊಳಿಸಬೇಕು’ ಎಂದು ಅವರು ಪ್ರಯತ್ನಿಸುತ್ತಿದ್ದಾರೆ. ಈಗ, ಆಕೆಯ ಬಿಡುಗಡೆಗೆ ನಿಧಿ ಸಂಗ್ರಹಿಸಲು ನ್ಯಾಯವಾದಿಗಳು ಮತ್ತು ಕೆಲವು ಭಾರತೀಯರನ್ನು ಒಳಗೊಂಡ ಒಂದು ಗುಂಪನ್ನು ರಚಿಸಲಾಗಿದೆ.

ಈ ಗುಂಪು ನಿಮಿಷಾಳ ಬಿಡುಗಡೆಗೆ ಅಗತ್ಯವಿರುವ ನಿಧಿಯನ್ನು ಸಂಗ್ರಹಿಸಿದೆ. ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿಟ್ಟುಕೊಂಡು ಈ ಪ್ರಕರಣದಲ್ಲಿ ಅಗತ್ಯವಿರುವ ಕಾನೂನು ನೆರವು ಪಡೆಯಲು ಶ್ರಮಿಸಲಾಗುತ್ತಿದೆ. ಇಲ್ಲಿ ಒಂದು ಪ್ರಮುಖ ಪ್ರಶ್ನೆ ಉದ್ಭವಿಸುವುದೇನೆಂದರೆ, ‘ಒಂದು ಇಸ್ಲಾಮಿಕ್ ದೇಶದಲ್ಲಿ ಭಾರತದ ಮಹಿಳೆಯೊಬ್ಬಳು ಕೆಲಸದ ನಿಮಿತ್ತ ಹೋಗಿ, ಅಲ್ಲಿ ಹಲವು ರೀತಿಯ ದೌರ್ಜನ್ಯಗಳನ್ನು ಎದುರಿಸಬೇಕಾದರೆ, ಆಕೆಯ ಸುರಕ್ಷತೆಗಾಗಿ ಯಾವ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ ?’ ನಿಮಿಷಾಳ ಪ್ರಕರಣವು ಆಕೆ ಧೈರ್ಯಶಾಲಿ ಆಗಿದ್ದರಿಂದ ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳಲು ಅನಿರೀಕ್ಷಿತವಾಗಿ ಮಾಡಿದ ಕ್ರಿಯೆಯಪರಿಣಾಮವಾಗಿ ಬೆಳಕಿಗೆ ಬಂದಿತು. ‘ಸುಂದರ ಭವಿಷ್ಯದ ಕನಸು ಕಂಡು ಕೊಲ್ಲಿ ಅಥವಾ ಇಸ್ಲಾಮಿಕ್ ದೇಶಗಳಿಗೆ ಹೋದ ಇಂತಹ ಎಷ್ಟು ‘ನಿಮಿಷಾ’ಗಳು ಬಾಯಿಮುಚ್ಚಿ ಎಲ್ಲ ಕಿರುಕುಳವನ್ನು ಸಹಿಸಿಕೊಳ್ಳುತ್ತಿರಬಹುದು ಎಂದು ಊಹಿಸಲು ಸಾಧ್ಯವೇ ? ಹೊಟ್ಟೆ ತುಂಬಿಸಿಕೊಳ್ಳಲು ನರಕಯಾತನೆಯಂತಹ ಜೀವನವನ್ನು ನಡೆಸುವುದನ್ನು ಬಿಟ್ಟು ಅವರಿಗೆ ಬೇರೆ ದಾರಿಯೇ ಇಲ್ಲವೇ ? ಭಾರತ ಸರಕಾರ ವಿದೇಶಗಳಲ್ಲಿ ಕೆಲಸ ಮಾಡುವ, ವಿದೇಶಗಳಲ್ಲಿ ಕೆಲಸದ ನಿಮಿತ್ತ ನೆಲೆಸಿರುವವರಿಂದ ವಿದೇಶಿ ವಿನಿಮಯ ಸಿಗುತ್ತದೆ ಎಂದು ಸಂತೋಷಪಡುತ್ತದೆ. ಸರಕಾರದಿಂದಲೇ ಈ ಕುರಿತು ಮಾತನಾಡಲಾಗಿತ್ತು; ಆದರೆ ಈ ನಾಗರಿಕರ, ವಿಶೇಷವಾಗಿ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಯ ಬಗ್ಗೆ ಏನು ? ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಉದ್ಭವಿಸಿದರೆ ಅವರಿಗೆ ತಕ್ಷಣದ ನೆರವು ಹೇಗೆ ನೀಡಲಾಗುವುದು ?
ಇಸ್ಲಾಮಿಕ್ ದೇಶಗಳಲ್ಲಿ ಶರಿಯತ್ ಕಾನೂನುಗಳು ಹೆಚ್ಚಾಗಿ ಅನ್ವಯವಾಗುತ್ತವೆ, ಅದರಿಂದ ಭಾರತೀಯ ನಾಗರಿಕರ ಸುರಕ್ಷತೆಯನ್ನು ಹೇಗೆ ಖಾತ್ರಿಪಡಿಸಲಾಗುವುದು ? ಇಂತಹ ಭಾರತೀಯರಿಗಾಗಿ ಒಂದು ಮಂಡಳಿಯನ್ನು ಸ್ಥಾಪಿಸಿ, ಇಂತಹ ಪ್ರಕರಣಗಳಲ್ಲಿ ಅವರಿಗೆ ಅಗತ್ಯವಿರುವ ಕಾನೂನು ನೆರವನ್ನು ತಕ್ಷಣವೇ ನೀಡಲಾಗುವುದೇ ?’ ಹೀಗೆ ಹಲವು ಪ್ರಶ್ನೆಗಳು ನಿಮಿಷಾಪ್ರಿಯಾ ಅವರ ಈ ಪ್ರಕರಣದ ನಿಮಿತ್ತ ಉದ್ಭವಿಸುತ್ತವೆ. ೨೦೨೩ ರಲ್ಲಿ, ಭಾರತೀಯ ನೌಕಾಪಡೆಯ ೮ ಮಾಜಿ ಅಧಿಕಾರಿಗಳ ಮೇಲೆ ಕತಾರ್ ಆರೋಪಗಳನ್ನು ಹೊರಿಸಿ ಮರಣದಂಡನೆ ವಿಧಿಸಿತ್ತು; ಆದರೆ ಭಾರತ ಸರಕಾರದ ಮಧ್ಯಸ್ಥಿಕೆಯ ನಂತರ ಅದನ್ನು ರದ್ದುಗೊಳಿಸಲಾಯಿತು. ಕುಲಭೂಷಣ್ ಜಾಧವ್ ಅವರು ನೌಕಾಪಡೆಯ ಮಾಜಿ ಅಧಿಕಾರಿ, ಸುಳ್ಳು ಪ್ರಕರಣದಡಿಯಲ್ಲಿ ಪಾಕಿಸ್ತಾನದಲ್ಲಿ ೯ ವರ್ಷಗಳಿಗಿಂತ ಹೆಚ್ಚು ಕಾಲ ಸೆರೆಮನೆಯಲ್ಲಿದ್ದಾರೆ. ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಪ್ರಭಾವವನ್ನು ಬಳಸಿ ಇಂತಹ ಪ್ರಕರಣ ಗಳಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಿ ಭಾರತೀಯ ನಾಗರಿಕರನ್ನು ಬಿಡುಗಡೆ ಮಾಡಿಸಬೇಕೆಂದು ಜನತೆ ನಿರೀಕ್ಷಿಸುತ್ತದೆ !
ಆರ್ಥಿಕ ಶಿಸ್ತು
ಸಂಪಾದಕೀಯ : ಜಿರಳೆ ಮತ್ತು ಬೋಧನೆ
ಬಂಗಾಳದಲ್ಲಿ ಅನಿವಾರ್ಯ ಸಂಘರ್ಷ !
ಬಹಿರಂಗ ಸತ್ಯ: ಭೋಜಶಾಲೆ ಮುಕ್ತ!
ಗೋಹತ್ಯೆ ಮತ್ತು ಸರ್ವೋಚ್ಚ ನ್ಯಾಯಾಲಯ !
ಥಾಪರ್ ಅವರ ‘ವೋಕಿಸಂ’ !