ಹಸು ಹಸುವೇ ಆಗಿರುತ್ತದೆ! – ಸುಪ್ರೀಂ ಕೋರ್ಟ್ : Tirumala Prasad Desi Cow Milk

ತಿರುಪತಿ ಬಾಲಾಜಿಯ ಪೂಜೆ ಮತ್ತು ಪ್ರಸಾದದಲ್ಲಿ ದೇಸಿ ಹಸುವಿನ ಹಾಲು ಮಾತ್ರ ಬಳಸಬೇಕು ಎಂದು ಸಲ್ಲಿಸಿದ್ದ ಅರ್ಜಿಯ ಪ್ರಕರಣ

ನವದೆಹಲಿ – ಹಸು ಹಸುವೇ ಆಗಿರುತ್ತದೆ, ದೇವರ ಮೇಲಿನ ನಿಜವಾದ ಪ್ರೀತಿ ಎಂದರೆ ಇಂತಹ ವಿಷಯಗಳಿಗೆ ಅಂಟಿಕೊಳ್ಳದೆ ಇತರ ಪ್ರಾಣಿಗಳಿಗೆ ಸೇವೆ ಮಾಡುವುದು. ಸಮಾಜದಲ್ಲಿ ಇದಕ್ಕಿಂತಲೂ ಹೆಚ್ಚು ಮುಖ್ಯವಾದ ವಿಷಯಗಳಿವೆ ಎಂದು ನ್ಯಾಯಾಲಯ ಗಮನಿಸಿದೆ.

ವಿಭಾಗೀಯ ಪೀಠವು, “ನಾವು ಈ ಟಿಪ್ಪಣಿಗಳನ್ನು ಪೂರ್ಣ ಗೌರವದಿಂದ ಮಾಡುತ್ತಿದ್ದೇವೆ” ಎಂದು ಹೇಳಿದೆ. ಜಗತ್ಪ್ರಸಿದ್ಧ ತಿರುಪತಿ ಬಾಲಾಜಿ ದೇವಾಲಯವನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗೆ, “ಭಗವಾನ್ ವೆಂಕಟೇಶನ ಪೂಜೆ ಮತ್ತು ಪ್ರಸಾದದಲ್ಲಿ ಕೇವಲ ದೇಸಿ ಹಸುವಿನ ಹಾಲು ಮಾತ್ರ ಬಳಸಬೇಕು” ಎಂದು ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಮೇಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ನ್ಯಾಯಪೀಠವು ಅರ್ಜಿದಾರರಿಗೆ ತಮ್ಮ ಅರ್ಜಿಯನ್ನು ಹಿಂಪಡೆಯಲು ಮತ್ತು ಉಚ್ಚ ನ್ಯಾಯಾಲಯಕ್ಕೆ ಹೋಗಲು ಅನುಮತಿ ನೀಡಿದೆ.

ಅರ್ಜಿದಾರರ ಯುಕ್ತಿವಾದ!

ಅರ್ಜಿದಾರರು, ಆಗಮ ಶಾಸ್ತ್ರಗಳ ಪ್ರಕಾರ, ಪೂಜೆಯಲ್ಲಿ ದೇಸಿ ಹಸುವಿನ ಹಾಲನ್ನು ಬಳಸುವುದು ಒಂದು ಅಗತ್ಯ ಸಂಪ್ರದಾಯವಾಗಿದೆ ಎಂದು ವಾದಿಸಿದರು. ವಿಧಿಶಾಸ್ತ್ರಗಳನ್ನು ಪಾಲಿಸಲು ಒತ್ತಾಯಿಸಬೇಕು ಮತ್ತು ಟಿಟಿಡಿ ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಸ್ತಾವನೆ ಮತ್ತು ಆದೇಶವನ್ನು ಹೊಂದಿದೆ, ಅದನ್ನು ಜಾರಿಗೆ ತರಲು ಅರ್ಜಿದಾರರು ಕೋರುತ್ತಿದ್ದಾರೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್‌ನ ಟಿಪ್ಪಣಿಗಳು

ನ್ಯಾಯಮೂರ್ತಿ ಸುಂದರೇಶ ಈ ವಾದಕ್ಕೆ ಪ್ರತಿಕ್ರಿಯಿಸಿ, “ಇಂತಹ ವರ್ಗೀಕರಣ ಮಾನವ ನಿರ್ಮಿತವಾಗಿದೆ. ಇದು ಭಾಷೆ, ಜಾತಿ, ಸಮುದಾಯ ಅಥವಾ ರಾಜ್ಯಗಳ ಆಧಾರಿತವಾಗಿದೆ. ದೇವರು ಅದನ್ನು ನಿರ್ಧರಿಸಿಲ್ಲ. ದೇವರು ಎಲ್ಲರಿಗೂ ಸಮಾನ. ಅವನು ಇತರ ಪ್ರಾಣಿಗಳಿಗೂ ದಯೆ ಮತ್ತು ನ್ಯಾಯಯುತವಾಗಿದ್ದಾನೆ. ದೇವರಿಗೆ ಕೇವಲ ದೇಸಿ ಹಸುವಿನ ಹಾಲು ಬೇಕು ಎಂದು ನೀವು ಹೇಳಲು ಸಾಧ್ಯವಿಲ್ಲ. ಈ ಅರ್ಜಿಯನ್ನು ಪರಿಗಣಿಸಲು ನಾವು ಇಚ್ಛಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು.