ಸ್ವಾವಲಂಬನೆಯಿಂದ ಸುರಕ್ಷತೆಯ ಕಡೆಗೆ !

ಭಾರತದ ಗಡಿಗಳನ್ನು ರಕ್ಷಿಸಲು ಭೂಸೇನೆ, ವಾಯುಪಡೆ ಮತ್ತು ನೌಕಾಪಡೆ ಸೇರಿದಂತೆ ಎಲ್ಲಾ ಸೇನಾ ಪಡೆಗಳು ಸಮರ್ಥವಾಗಿವೆ. ಅವುಗಳ ಸಮರ್ಥ ಕಾರ್ಯನಿರ್ವಹಣೆಗೆ ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ಯ (ಡಿ.ಆರ್‌.ಡಿ.ಒ.) ಬಲಿಷ್ಠ ಬೆಂಬಲ ಸಿಗುತ್ತಿದೆ. ಇದರಿಂದ ಸೇನಾಪಡೆಗಳ ಕೈಗಳು ಬಲಗೊಂಡಿವೆ. ಪ್ರಸ್ತುತ, ಡಿ.ಆರ್‌.ಡಿ.ಒ. ಮೂಲಕ ಭಾರತ ಕ್ಷಿಪಣಿ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುತ್ತಿದೆ. ಈ ಹಿಂದೆ ಹಲವು ಕ್ಷಿಪಣಿಗಳನ್ನು ನಿರ್ಮಿಸಲಾಗಿತ್ತು; ಆದರೆ ‘ಪ್ರಾಜೆಕ್ಟ್ ವಿಷ್ಣು’ ಅಡಿಯಲ್ಲಿ ಭಾರತ ಇದುವರೆಗೆ ಅತ್ಯಾಧುನಿಕ ೧೨ ‘ಹೈಪರ್ಸಾನಿಕ್’ ಕ್ಷಿಪಣಿ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿದೆ. ಈ ಕ್ಷಿಪಣಿಗಳು ಅತಿ ವೇಗವಾಗಿರಲಿವೆ. ಇದರಿಂದ ಇಡೀ ಏಷ್ಯಾ ಖಂಡದಲ್ಲಿ ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ವಿಶಿಷ್ಟ ಪ್ರಾಬಲ್ಯ ದೊರೆಯಲಿದೆ. ಈ ಕ್ಷಿಪಣಿಗಳ ವೇಗ ೮ ಮ್ಯಾಕ್, ಅಂದರೆ ಗಂಟೆಗೆ ೧೧ ಸಾವಿರ ಕಿಲೋಮೀಟರ್‌ ಇರಲಿದೆ. ಇದರಿಂದ ಭಾರತ ಅಮೆರಿಕಾ, ರಷ್ಯಾ ಮತ್ತು ಚೀನಾ ದೇಶಗಳ ಸಾಲಿನಲ್ಲಿ ನಿಲ್ಲಲಿದೆ. ಡಿ.ಆರ್‌.ಡಿ.ಒ. ಪ್ರಕಾರ, ೨೦೩೦ ರ ವೇಳೆಗೆ ‘ಹೈಪರ್ಸಾನಿಕ್‌ ಗ್ಲೈಡ್‌ ವೆಹಿಕಲ್‌ (ಊಉಗಿ)’ ತಂತ್ರಜ್ಞಾನವನ್ನು ಕಾರ್ಯರೂಪಕ್ಕೆ ತರಲಾಗುವುದು. ಇದರಡಿಯಲ್ಲಿ ಪಾಕಿಸ್ತಾನದ ಯಾವುದೇ ಭಾಗವನ್ನು ಕೆಲವೇ ನಿಮಿಷಗಳಲ್ಲಿ ಗುರಿಪಡಿಸಲು ಸಾಧ್ಯವಾಗಲಿದೆ. ಶತ್ರುಗಳ ರಾಡಾರ್‌ಗೂ ವಂಚಿಸಲು ಸಾಧ್ಯ ವಾಗಲಿದೆ. ‘ಪ್ರಾಜೆಕ್ಟ್ ವಿಷ್ಣು’ ಪೂರ್ಣಗೊಂಡ ನಂತರ, ವಿಶ್ವದ ಅತ್ಯಾಧುನಿಕ ಮತ್ತು ಮಾರಕ ‘ಹೈಪರ್ಸಾನಿಕ್’ ಕ್ಷಿಪಣಿ ಹೊಂದಿರುವ ಶಕ್ತಿಶಾಲಿ ದೇಶವಾಗಿ ಭಾರತ ಗುರುತಿಸಲ್ಪಡಲಿದೆ. ಈ ದಿನಕ್ಕಾಗಿ ಪ್ರತಿಯೊಬ್ಬರೂ ಕಾಯುತ್ತಿದ್ದಾರೆ. ಡಿ.ಆರ್‌.ಡಿ.ಒ. ಅಭಿವೃದ್ಧಿಪಡಿಸಿದ ದೇಶೀಯ ತಂತ್ರಜ್ಞಾನದ ಪ್ರಕಾರ, ಸಮುದ್ರದ ಉಪ್ಪು ನೀರನ್ನು ಈಗ ಸಿಹಿ ಮಾಡಬಹುದು. ಸಂಸ್ಥೆ ಇದನ್ನು ಕೇವಲ ೮ ತಿಂಗಳಲ್ಲಿ ಸಿದ್ಧಪಡಿಸಿದೆ. ಈ ಹಿಂದೆ, ವಾಯು ಸುರಕ್ಷೆ ದೃಷ್ಟಿಯಿಂದ ಭಾರತ ಸ್ವಾವಲಂಬನೆಯ ಹೆಜ್ಜೆಗಳನ್ನು ಇಟ್ಟಿತ್ತು. ಈಗ ಭಾರತ ಜಲಸುರಕ್ಷತೆಯಲ್ಲೂ ಸ್ವಾವಲಂಬಿಯಾಗುತ್ತಿದೆ. ಶಸ್ತ್ರಾಸ್ತ್ರ ಸಜ್ಜುಗೊಳಿಸುವಿಕೆಯಲ್ಲಿ ಸುಧಾರಿತ ಮತ್ತು ಸಾಂಪ್ರದಾಯಿಕ ಎರಡೂ ದೃಷ್ಟಿಯಿಂದ ಸಮತೋಲನ ಸಾಧಿಸಿರುವುದರಿಂದ ಸೇನಾಪಡೆಗಳ ಆತ್ಮವಿಶ್ವಾಸ ಹೆಚ್ಚಾಗಿದೆ. ನಮ್ಮ ಕ್ಷಿಪಣಿಗಳ ಅತಿ ಹೆಚ್ಚು ಸಾಮರ್ಥ್ಯವನ್ನು ನೋಡಿದರೆ, ಪ್ರತಿಯೊಬ್ಬ ಭಾರತೀಯನ ಎದೆ ಹೆಮ್ಮೆಯಿಂದ ಉಬ್ಬುತ್ತದೆ. ಒಂದು ಕಾಲದಲ್ಲಿ ಕೇವಲ ‘ಶಸ್ತ್ರಾಸ್ತ್ರಗಳ ಆಮದುದಾರ’ ಎಂದು ಗುರುತಿಸಲ್ಪಟ್ಟಿದ್ದ ಭಾರತ, ಇಂದು ಈ ಶಸ್ತ್ರಾಸ್ತ್ರಗಳು ಅಥವಾ ಕ್ಷಿಪಣಿಗಳನ್ನು ಸ್ವತಃ ನಿರ್ಮಿಸುತ್ತದೆ ಮತ್ತು ಅವುಗಳನ್ನು ರಫ್ತು ಕೂಡ ಮಾಡುತ್ತದೆ ಎಂಬುದು ಖಂಡಿತವಾಗಿಯೂ ಹೆಮ್ಮೆಯ ವಿಷಯ. ಭಾರತದಿಂದ ತಂತ್ರಜ್ಞಾನದ ವಿನಿಮಯ ಮತ್ತು ಕಾರ್ಯತಂತ್ರದಲ್ಲಿ ಭಾರತ ತಂದ ಸ್ವಾಯತ್ತತೆ ಭಾರತಕ್ಕೆ ಪ್ರಗತಿಪರ ಹೆಜ್ಜೆಯಾಗಿದೆ. ಈ ಮೂಲಕ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಹೆಗ್ಗುರುತನ್ನು ಮೂಡಿಸಿದೆ.

ಭಾರತದ ರಕ್ಷಣಾ ಸನ್ನದ್ಧತೆಯಿಂದ ಶತ್ರು ರಾಷ್ಟ್ರಗಳಿಗೆ ನಡುಕ !

ರಕ್ಷಣಾ ಕ್ಷೇತ್ರದಲ್ಲಿನ ಉತ್ತಮ ಸುಧಾರಣೆಗಳನ್ನು ನೋಡಿ ಶತ್ರು ರಾಷ್ಟ್ರಗಳು ನಡುಗುತ್ತಿರಬಹುದು, ಅದು ಬೇರೆ ವಿಷಯ ! ಭಾರತದ ಯುದ್ಧ ಸನ್ನದ್ಧತೆಯು ಶತ್ರುಗಳಿಗೆ ಪರಿಣಾಮಕಾರಿ ಸಂಕೇತವನ್ನು ನೀಡುತ್ತದೆ. ‘ಅಗ್ನಿ ೫’ ಕ್ಷಿಪಣಿಯ ಸಾಮರ್ಥ್ಯ (ಶ್ರೇಣಿ) ೫ ರಿಂದ ೮ ಸಾವಿರ ಕಿ.ಮೀ.ಗಳಷ್ಟು ದೂರದವರೆಗಿದೆ. ಇದರ ಮೂಲಕ ಚೀನಾದ ದೊಡ್ಡ ನಗರಗಳು ನಮ್ಮ ವ್ಯಾಪ್ತಿಗೆ ಬರಬಹುದು. ಈ ಸಾಧ್ಯತೆಯಿಂದ ಚೀನಾ ಎಚ್ಚರಗೊಂಡಿದೆ. ಮಧ್ಯಂತರದಲ್ಲಿ ಲಡಾಖ್‌ನಲ್ಲಿ ಉದ್ವಿಗ್ನತೆ ಉಂಟಾದಾಗ ಚೀನಾ ಉದ್ದೇಶಪೂರ್ವಕವಾಗಿ ಭಾರತದೊಂದಿಗೆ ಯುದ್ಧವನ್ನು ತಪ್ಪಿಸಿತು. ಕ್ಷಿಪಣಿಗಳ ಭೇದಕತೆಯಿಂದಾಗಿ ಶತ್ರುಗಳು ಈಗ ೧೦ ಬಾರಿ ಯೋಚಿಸಲು ಪ್ರಾರಂಭಿಸಿದ್ದಾರೆ, ಇದು ಭಾರತದ ಯಶಸ್ಸು. ‘ಯಾವುದೇ ರಾಷ್ಟ್ರವು ಭಾರತದ ಕಡೆಗೆ ವಕ್ರದೃಷ್ಟಿಯಿಂದ ನೋಡಲು ಧೈರ್ಯ ಮಾಡಬಾರದು’ ಎಂದು ನಾವು ಹೇಳುತ್ತೇವೆ; ಆದರೆ ಇಂದು ಆ ವಿಚಾರ ಸಾಕಾರಗೊಳ್ಳುತ್ತಿದೆ. ‘ಭಾರತದ ವಿರುದ್ಧ ಹೆಜ್ಜೆ ಇಡುವುದು ಅಪಾಯಕಾರಿ’ ಎಂಬ ದೃಷ್ಟಿಯಿಂದ ಇತರ ರಾಷ್ಟ್ರಗಳು ಯೋಚಿಸಲು ಪ್ರಾರಂಭಿಸಿವೆ. ‘ಭಾರತದ ಮೇಲೆ ಆಕ್ರಮಣ ಮಾಡುವುದು ಅಂದರೆ ತಮ್ಮ ಅಸ್ತಿತ್ವವನ್ನು ನಾಶಪಡಿಸಲು ಹೆಜ್ಜೆ ಇಡುವುದು’ ಎಂಬ ಮನಸ್ಥಿತಿ ಶತ್ರು ರಾಷ್ಟ್ರಗಳಲ್ಲಿ ಮೂಡಿದೆ. ಭಾರತದಂತೆ ಪಾಕಿಸ್ತಾನಕ್ಕೆ ಡಿ.ಆರ್‌.ಡಿ.ಒ.ದಂತಹ ಸಂಸ್ಥೆ ಇಲ್ಲ.

ಆದ್ದರಿಂದ ಅದು ತನ್ನ ಮಿತ್ರರಾಷ್ಟ್ರಗಳಾದ ಚೀನಾದಂತಹ ದೇಶಗಳ ಮುಂದೆ ಶಸ್ತ್ರಾಸ್ತ್ರಗಳಿಗಾಗಿ ಕೈಚಾಚಬೇಕಾಗುತ್ತದೆ, ಇದು ಪಾಕಿಸ್ತಾನದ ದುರದೃಷ್ಟ. ಭಾರತ ನಿರ್ಮಿಸಿದ ‘ಬ್ರಹ್ಮೋಸ್’ ಕ್ಷಿಪಣಿಯಿಂದ ಚೀನಾ ನಡುಗಿತ್ತು. ಇದರಿಂದ ಚೀನಾದ ಮಾಧ್ಯಮಗಳು ‘ಭಾರತ ನಮ್ಮ ವಿರುದ್ಧ ದೀರ್ಘಕಾಲೀನ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುತ್ತಿದೆ’ ಎಂದು ಆರೋಪಿಸಿದ್ದವು. ಭಾರತ ರಕ್ಷಣೆಯ ದೃಷ್ಟಿಯಿಂದ ಇಸ್ರೇಲ್‌ನೊಂದಿಗೆ ಪಾಲುದಾರಿಕೆ ಮಾಡಿ ಕೊಂಡಾಗಲೂ ಚೀನಾ ಮತ್ತು ಪಾಕಿಸ್ತಾನಗಳು ಭಾರತವನ್ನು ಟೀಕಿಸಿದ್ದವು. ಈ ಹಿಂದೆ, ಹಿಮಪ್ರದೇಶದಲ್ಲಿ ರಕ್ಷಣಾ ದೃಷ್ಟಿಯಿಂದ ಭಾರತ ಹಿಂದುಳಿದಿತ್ತು. ಇದರಿಂದ ಚೀನಾ ತನ್ನ ಚಟುವಟಿಕೆಗಳನ್ನು ನಡೆಸಲು ಮುಕ್ತವಾಗಿತ್ತು. ಈ ದುರ್ಬಲ ಭಾಗವನ್ನು ಗುರುತಿಸಿ ಚೀನಾ ಭಾರತದ ಮೇಲೆ ದಾಳಿ ಮಾಡುತ್ತಲೇ ಇತ್ತು. ಈಗ ಆ ಪ್ರದೇಶದಲ್ಲಿಯೂ ಭಾರತ ಶಸ್ತ್ರಾಸ್ತ್ರಗಳ ದೃಷ್ಟಿಯಿಂದ ದೃಢವಾಗಿ ನಿಂತಿದೆ. ಇದರಿಂದ ಭಾರತದ ಮೇಲೆ ಆಕ್ರಮಣ ಮಾಡುವ ಚೀನಾದ ಪ್ರಯತ್ನ ವಿಫಲಗೊಳ್ಳುತ್ತಿದೆ. ಕೆಲವು ವರ್ಷಗಳ ಹಿಂದೆ ಭಾರತ ‘ಕ್ರಯೋಜೆನಿಕ್’ ಎಂಜಿನ್‌ ವ್ಯವಸ್ಥೆಯನ್ನು ರಷ್ಯಾದಿಂದ ಕೇಳಿತ್ತು; ಆದರೆ ಅಮೆರಿಕಾದ ಒತ್ತಡದಿಂದಾಗಿ ರಷ್ಯಾ ಅದನ್ನು ನೀಡಲು ನಿರಾಕರಿಸಿತ್ತು. ಆ ಪರಿಸ್ಥಿತಿಯಲ್ಲಿಯೂ ಹಿಮ್ಮೆಟ್ಟದೆ ಭಾರತೀಯ ವಿಜ್ಞಾನಿಗಳು ತಮ್ಮ ಸಾಮರ್ಥ್ಯದ ಬಲದಲ್ಲಿ ಆ ಎಂಜಿನ್‌ ಅನ್ನು ಸಿದ್ಧಪಡಿಸಿದರು ಮತ್ತು ಇದೇ ರೀತಿ ಹಂತ ಹಂತವಾಗಿ ಬಾಹ್ಯಾಕಾಶ ಸಂಶೋಧನೆಯಲ್ಲಿ ಮೊದಲ ೫ ದೇಶಗಳಲ್ಲಿ ಸ್ಥಾನ ಗಳಿಸಿದರು ! ಭಾರತದ ರಕ್ಷಣಾ ಕ್ಷೇತ್ರದ ಪ್ರಬಲ ಸಾಧನೆಯಿಂದಾಗಿ ಶತ್ರು ರಾಷ್ಟ್ರಗಳು ಭಾರತದ ಮೇಲೆ ಆಕ್ರಮಣ ಮಾಡಲು ಹಿಂಜರಿಯುತ್ತಿವೆ. ಈ ಕ್ಷೇತ್ರದಲ್ಲಿ ಭಾರತದ ಪ್ರಗತಿಯನ್ನು ನೋಡಿದರೆ ಇತರ ರಾಷ್ಟ್ರಗಳ ಗುಪ್ತಚರ ಸಂಸ್ಥೆಗಳ ಮೇಲೆ ಒತ್ತಡ ಬೀಳುತ್ತಿದೆ; ಏಕೆಂದರೆ ಭಾರತಕ್ಕೆ ಸಮನಾಗಬೇಕಾದರೆ, ಅವುಗಳೂ ರಕ್ಷಣಾ ಕ್ಷೇತ್ರದಲ್ಲಿ ಅದೇ ಪ್ರಮಾಣದಲ್ಲಿ ಸ್ವಾವಲಂಬಿಯಾಗುವುದು ಅವಶ್ಯಕ. ಮೇಲ್ನೋಟಕ್ಕೆ ಅವರು ಏನನ್ನೂ ತೋರಿಸದಿದ್ದರೂ, ಭಾರತದ ರಕ್ಷಣಾ ಕ್ಷೇತ್ರದ ಪ್ರಗತಿ ಶತ್ರು ರಾಷ್ಟ್ರಗಳಿಗೆ ಅಸುರಕ್ಷತೆಯ ಅನುಭವ ನೀಡುತ್ತಿದೆ.

ಡಿ.ಆರ್‌.ಡಿ.ಒ. ಮತ್ತು ಭಾರತದ ಭವಿಷ್ಯ !

‘ವಿಶ್ವ ಸಂಸ್ಥೆ’ ಇರಲಿ, ‘ಕ್ವಾಡ್’ (ಆಸ್ಟ್ರೇಲಿಯಾ, ಭಾರತ, ಜಪಾನ್‌ ಮತ್ತು ಅಮೆರಿಕಾ ಒಕ್ಕೂಟ) ಇರಲಿ ಅಥವಾ ‘ಬ್ರಿಕ್ಸ್‌’ ಸಮಾವೇಶ (೨೦೦೬ ರಲ್ಲಿ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ಒಟ್ಟಾಗಿ ‘ಬ್ರಿಕ್ಸ್‌’ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದವು) ಇರಲಿ, ಅಂತಾರಾಷ್ಟ್ರೀಯ ಸಮುದಾಯದಲ್ಲಿ ಭಾರತ ನಿರ್ಮಿಸುತ್ತಿರುವ ಸ್ಥಾನವನ್ನು ನೋಡಿದರೆ ಭಾರತವು ಶಕ್ತಿಶಾಲಿ, ಸಶಕ್ತ ಮತ್ತು ‘ಸ್ವಾವಲಂಬಿ ರಾಷ್ಟ್ರ’ವಾಗಿ ಹೊರಹೊಮ್ಮುತ್ತಿದೆ ಅಥವಾ ಹೊರಹೊಮ್ಮಿದೆ ಎಂದೇ ಹೇಳಬಹುದು. ಪ್ರಸ್ತುತ ಸಮಯ ಯುದ್ಧಕಾಲ. ಯುದ್ಧದಿಂದಾಗಿ ಅನೇಕ ದೇಶಗಳು ಇಂದು ವಿನಾಶದ ಅಂಚಿನಲ್ಲಿವೆ. ಯುದ್ಧದಿಂದ ಉಂಟಾಗುವ ಉದ್ವಿಗ್ನತೆ, ರಾಷ್ಟ್ರಕ್ಕೆ ಆಗುವ ಅಪಾರ ನಷ್ಟ, ನಾಗರಿಕರ ಸಾವು ಇವೇ ಚಿತ್ರಣ ಇಂದು ಹೆಚ್ಚು ಕಡಿಮೆ ಎಲ್ಲಾ ರಾಷ್ಟ್ರಗಳಲ್ಲಿ ಕಂಡುಬರುತ್ತದೆ. ಯುದ್ಧದ ತೂಗು ಕತ್ತಿಯೊಂದಿಗೆ ರಾಷ್ಟ್ರಗಳು ದಿನಗಳನ್ನು ಕಳೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರದ ಅಸ್ತಿತ್ವವನ್ನು ಕಾಪಾಡುವುದು ಸಂಪೂರ್ಣವಾಗಿ ಸೈನಿಕರು ಮತ್ತು ನಾಗರಿಕರ ಕೈಯಲ್ಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ರಕ್ಷಣಾ ಕ್ಷೇತ್ರದ ಮೂಲಕ ರಾಷ್ಟ್ರಕ್ಕಾಗಿ ಕೊಡುಗೆ ನೀಡುವ ಅವಕಾಶ ಯುವಕರಿಗೆ ಲಭ್ಯವಾಗಿದೆ. ಇದರ ಲಾಭ ಪಡೆದು ಭಾರತವನ್ನು ಸ್ವಾವಲಂಬಿ ಮತ್ತು ಸುರಕ್ಷಿತ ರಾಷ್ಟ್ರವನ್ನಾಗಿ ರೂಪಿಸುವ ಜವಾಬ್ದಾರಿ ಹೊಸ ಪೀಳಿಗೆಯ ಮೇಲಿದೆ. ಅವರ ಮಹತ್ವದ ಕೊಡುಗೆಯಿಂದಲೇ ರಕ್ಷಣೆಯ ಹಿನ್ನೆಲೆಯಲ್ಲಿ ಸಾಮರ್ಥ್ಯಶಾಲಿ ಭಾರತ ನಿರ್ಮಾಣವಾಗಲಿದೆ !