NCERT : ಎನ್.ಸಿ.ಇ.ಆರ್. ಟಿ. ಸಮಾಜಶಾಸ್ತ್ರದ ಪುಸ್ತಕದಲ್ಲಿ ಈಗ ಮರಾಠಾ ಮತ್ತು ಸಿಖ್ ಆಳ್ವಿಕೆಗಳ ವಿಸ್ತೃತ ಮಾಹಿತಿ!

(ಎನ್.ಸಿ.ಇ.ಆರ್. ಟಿ.. ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ)

ನವದೆಹಲಿ – ಎನ್.ಸಿ.ಇ.ಆರ್. ಟಿ. ಯ 8ನೇ ತರಗತಿಯ ಸಮಾಜಶಾಸ್ತ್ರದ ಪುಸ್ತಕದಲ್ಲಿ ಮೊಘಲರ ಕ್ರೌರ್ಯದ ಇತಿಹಾಸವನ್ನು ಅಳವಡಿಸುವುದರೊಂದಿಗೆ, ಮರಾಠಾ ಮತ್ತು ಸಿಖ್ ರಾಜರ ಬಗ್ಗೆಯೂ ವಿಸ್ತೃತ ಮಾಹಿತಿಯನ್ನು ಸೇರಿಸಲಾಗಿದೆ. 8ನೇ ತರಗತಿಯ ‘ಎಕ್ಸ್‌ಪ್ಲೋರಿಂಗ್ ಸೊಸೈಟಿ – ಇಂಡಿಯಾ ಅಂಡ್ ಬಿಯಾಂಡ್’ ಎಂಬ ಪುಸ್ತಕದಲ್ಲಿ ಸಿಖ್ ಮತ್ತು ಮರಾಠಾ ಇತಿಹಾಸಕ್ಕೆ ಸಂಬಂಧಿಸಿದ ವಿಷಯಗಳು ಮೊದಲೂ ಇದ್ದವು; ಆದರೆ ಈಗ ಅವುಗಳಿಗೆ ವಿವರವಾದ ಅಧ್ಯಾಯಗಳನ್ನು ಸೇರಿಸಲಾಗಿದೆ. ಈ ಹೊಸ ಪುಸ್ತಕಗಳನ್ನು 2025-26 ನೇ ಶೈಕ್ಷಣಿಕ ವರ್ಷದಿಂದ ಪಠ್ಯಕ್ರಮದಲ್ಲಿ ಅಳವಡಿಸಲಾಗುವುದು.

1. ಈ ಹೊಸ ಪುಸ್ತಕಗಳಲ್ಲಿ ಒಡಿಶಾದ ಗಜಪತಿ ಆಡಳಿತಗಾರ ನರಸಿಂಹದೇವ, ರಾಣಿ ಅಬ್ಬಕ್ಕ, ಹಾಗೂ ತ್ರಾವಾಂಕೂರಿನ ಮಾರ್ತಾಂಡ ವರ್ಮ ಅವರ ಕುರಿತ ಪಾಠಗಳನ್ನು ಸೇರಿಸಲಾಗಿದೆ.

2. ಗುರು ನಾನಕ್ ಅವರ ಆಧ್ಯಾತ್ಮಿಕ ಪ್ರಯಾಣ ಮತ್ತು ಗುರು ಗೋಬಿಂದ್ ಸಿಂಗ್ ಅವರ ಸೇನಾ ಪ್ರತಿರೋಧದ ಕುರಿತು ಪುಸ್ತಕದಲ್ಲಿ ಅಧ್ಯಾಯಗಳನ್ನು ಸೇರಿಸಲಾಗಿದೆ. ಇದರಲ್ಲಿ ಖಾಲ್ಸಾ ಪಂಥದ ಅಡಿಪಾಯ ಹೇಗೆ ಹಾಕಲಾಯಿತು ಎಂಬುದನ್ನು ವಿವರಿಸಲಾಗಿದೆ. ಗುರು ತೇಗ್ ಬಹದ್ದೂರ್ ಅವರ ಗಲ್ಲು ಶಿಕ್ಷೆಯ ಮಾಹಿತಿಯನ್ನೂ ಸೇರಿಸಲಾಗಿದೆ. 19ನೇ ಶತಮಾನದ ಮಧ್ಯಭಾಗದವರೆಗೆ ಸಿಖ್ ಸಾಮ್ರಾಜ್ಯವು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೇಗೆ ದೃಢವಾಗಿ ನಿಂತಿತ್ತು ಎಂಬುದನ್ನೂ ಇದರಲ್ಲಿ ತಿಳಿಸಲಾಗಿದೆ.

ಮರಾಠರ ಇತಿಹಾಸಕ್ಕೆ ಈಗ 22 ಪುಟಗಳು!

ಈ ಮೊದಲು 8ನೇ ತರಗತಿಯ ಪುಸ್ತಕದಲ್ಲಿ ಮರಾಠರ ಬಗ್ಗೆ ಕೇವಲ ಒಂದೂವರೆ ಪುಟ ಮಾತ್ರ ಇತ್ತು. ಈಗ ಈ ಪಠ್ಯಕ್ರಮದಲ್ಲಿ 22 ಪುಟಗಳ ದೀರ್ಘ ಇತಿಹಾಸವನ್ನು ಸೇರಿಸಲಾಗಿದೆ. ಇದರಲ್ಲಿ 17ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಉದಯ, ರಾಯಗಡದಲ್ಲಿ ಅವರ ಪಟ್ಟಾಭಿಷೇಕ, ಅವರ ಗೆರಿಲ್ಲಾ ಶೈಲಿ, ಶಿವಾಜಿ ಮಹಾರಾಜರ ರಣತಂತ್ರಗಳು, ಆಡಳಿತ ಮತ್ತು ಸ್ವರಾಜ್ಯಕ್ಕೆ ನೀಡಿದ ಒತ್ತು ಇವುಗಳನ್ನು ಒಳಗೊಂಡಿದೆ. ಶಿವಾಜಿ ಮಹಾರಾಜರಲ್ಲದೆ, ಅವರ ವಂಶಸ್ಥರಾದ ಛತ್ರಪತಿ ಸಂಭಾಜಿ ಮಹಾರಾಜ್, ರಾಜಾರಾಮ, ಶಾಹೂಜಿ, ತಾರಾಬಾಯಿ, ಹಾಗೆಯೇ ಬಾಜಿರಾವ್ ಪೇಶ್ವೆ ಪ್ರಥಮ, ಮಹಾದಜಿ ಶಿಂದೆ ಮತ್ತು ನಾನಾ ಫಡ್ನವೀಸ್ ಅವರ ಕಥೆಗಳನ್ನೂ ಸೇರಿಸಲಾಗಿದೆ. ಹಿಂದೆ ಛತ್ರಪತಿ ಶಿವಾಜಿ ಮಹಾರಾಜರಿಗೆ ಕೇವಲ 4 ಸಾಲುಗಳನ್ನು ಮಾತ್ರ ನೀಡಲಾಗಿತ್ತು.