Bihar Free Electricity : ಬಿಹಾರ ಸರಕಾರವು ಪ್ರತಿ ಮನೆಗೆ 125 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡಲಿದೆ !

1 ಕೋಟಿ 67 ಲಕ್ಷ ಕುಟುಂಬಗಳಿಗೆ ಲಾಭವಾಗಲಿದೆ !

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಪಾಟಲೀಪುತ್ರ (ಬಿಹಾರ) – ರಾಜ್ಯದ ನಾಗರಿಕರಿಗೆ 125 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡಲಾಗುವುದು. ಇದರೊಂದಿಗೆ, ಮುಂದಿನ 3 ವರ್ಷಗಳಲ್ಲಿ ಗೃಹಬಳಕೆಯ ಗ್ರಾಹಕರಿಗೆ ಸೌರಶಕ್ತಿಯ ಲಾಭವೂ ಸಿಗಲಿದೆ. ಮುಖ್ಯಮಂತ್ರಿ ನಿತೀಶ ಕುಮಾರರವರು ಸ್ವತಃ ಇದನ್ನು ಘೋಷಿಸಿದರು. ಇದರಿಂದ ರಾಜ್ಯದ 1 ಕೋಟಿ 67 ಲಕ್ಷ ಕುಟುಂಬಗಳಿಗೆ ಪ್ರಯೋಜನವಾಗಲಿದೆ ಎಂದು ಅವರು ತಿಳಿಸಿದರು. ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ ನಿತೀಶ ಕುಮಾರರವರು, `ನಾವು ಆರಂಭದಿಂದಲೂ ಎಲ್ಲರಿಗೂ ಕಡಿಮೆ ದರದಲ್ಲಿ ವಿದ್ಯುತ್ತನ್ನು ಒದಗಿಸುತ್ತಿದ್ದೇವೆ. ಆಗಸ್ಟ್ 1 ರಿಂದ, ಅಂದರೆ ಜುಲೈ ತಿಂಗಳ ವಿದ್ಯುತ್ ಬಿಲ್‌ ನಿಂದ, ಎಲ್ಲಾ ಗೃಹಬಳಕೆಯ ಗ್ರಾಹಕರು 125 ಯೂನಿಟ್‌ ವರೆಗಿನ ವಿದ್ಯುತ್‌ ಗೆ ಹಣ ಪಾವತಿಸಬೇಕಾಗಿಲ್ಲ’ ಎಂದು ಹೇಳಿದರು.

ಎಲ್ಲಾ ಮನೆಗಳ ಮೇಲ್ಛಾವಣಿ ಅಥವಾ ಹತ್ತಿರದ ಸಾರ್ವಜನಿಕ ಸ್ಥಳಗಳಲ್ಲಿ ಸೌರಶಕ್ತಿ ಯೋಜನೆಗಳನ್ನು ಅಳವಡಿಸಲಾಗುವುದು ಅತ್ಯಂತ ಬಡ ಕುಟುಂಬಗಳಿಗೆ ಇದನ್ನು ಅಳವಡಿಸುವ ಸಂಪೂರ್ಣ ವೆಚ್ಚವನ್ನು ರಾಜ್ಯ ಸರಕಾರ ಭರಿಸಲಿದೆ. ಇತರರಿಗೂ ಸಾಕಷ್ಟು ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

ಸಂಪಾದಕೀಯ ನಿಲುವು

ದೇಶದ ಮೇಲೆ ದೊಡ್ಡ ಸಾಲವಿರುವಾಗ, ಇಂತಹ ಯೋಜನೆಗಳು ಜನರಿಗೆ ತಾತ್ಕಾಲಿಕವಾಗಿ ಸಹಾಯ ಮಾಡುತ್ತವೆಯಾದರೂ, ಇದು ಒಟ್ಟಾರೆ ದೇಶಕ್ಕಾಗಿ ಸೂಕ್ತವೇ ? ಇಂತಹ ಉಚಿತ ಸೌಲಭ್ಯಗಳನ್ನು ನೀಡುವ ಪ್ರವೃತ್ತಿಯನ್ನು ನಿಲ್ಲಿಸಲು ಕೇಂದ್ರ ಸರಕಾರವು ಮಾರ್ಗಸೂಚಿಗಳನ್ನು ಹೊರಡಿಸಿ ರಾಜ್ಯ ಸರಕಾರಗಳು ಅವುಗಳನ್ನು ಅನುಸರಿಸುವಂತೆ ಪ್ರಯತ್ನಿಸಬೇಕು !