ದೇವಸ್ಥಾನ ಮತ್ತು ದೇವತೆಗಳ ಹಿತಾಸಕ್ತಿಗಳನ್ನು ರಕ್ಷಿಸುವುದು ನ್ಯಾಯಾಲಯದ ಕರ್ತವ್ಯ! – ಮದ್ರಾಸ ಉಚ್ಚ ನ್ಯಾಯಾಲಯ : Madras HC Order

ದೇವಸ್ಥಾನದ ಭೂಮಿಯ ಮೇಲೆ ಹಕ್ಕು ಸಾಧಿಸಿದ ಫಾತಿಮಾ ನಾಚಿಯಾ ಅವರ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ

ಚೆನ್ನೈ (ತಮಿಳುನಾಡು) – ದೇವಸ್ಥಾನದ ಕಾರ್ಯಗಳಲ್ಲಿ ಅಥವಾ ಧರ್ಮಕಾರ್ಯಗಳಲ್ಲಿ ಆಸಕ್ತಿ ಹೊಂದಿರುವ ಯಾವುದೇ ವ್ಯಕ್ತಿ ಕಾನೂನಿನ ಆಧಾರದ ಮೇಲೆ ನ್ಯಾಯಾಲಯವನ್ನು ಸಂಪರ್ಕಿಸಬಹುದು ಮತ್ತು ನ್ಯಾಯಾಲಯವು ಸ್ವತಃ ದೇವಸ್ಥಾನ ಹಾಗೂ ದೇವತೆಗಳ ಹಿತಾಸಕ್ತಿಗಳನ್ನು ರಕ್ಷಿಸಲು ಬದ್ಧವಾಗಿದೆ ಎಂದು ಮದ್ರಾಸ ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಎ.ಎ. ಫಾತಿಮಾ ನಾಚಿಯಾ ಸಲ್ಲಿಸಿದ್ದ ಅರ್ಜಿಯನ್ನು ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಫಾತಿಮಾ ನಾಚಿಯಾ ಅವರು ಚೆನ್ನೈನಲ್ಲಿರುವ ಚನ್ನಮಲ್ಲೇಶ್ವರ ಮತ್ತು ಚನ್ನಕೇಶವ ಪೆರುಮಾಳ್ ದೇವಸ್ಥಾನಂ ನ ಆಸ್ತಿಯ ಮೇಲೆ ಹಕ್ಕು ಸಾಧಿಸಿ, ಅದನ್ನು ಪಡೆಯಲು ಕೋರಿದ್ದರು.

ಯಾವ ಪ್ರಕರಣ?

ದೇವಸ್ಥಾನದ ಒಂದು ಭೂಮಿಯನ್ನು ಫಾತಿಮಾ ನಾಚಿಯಾ ಅವರ ಪತಿ ಮಹಮ್ಮದ್ ಇಕ್ಬಾಲ್ ಅವರಿಗೆ ಗುತ್ತಿಗೆಗೆ ನೀಡಲಾಗಿತ್ತು; ಆದರೆ ದೇವಸ್ಥಾನದ ಆಡಳಿತ ಸಮಿತಿಯು 1994 ರಲ್ಲಿ ಇಕ್ಬಾಲ್ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು 2000 ಇಸವಿಯಲ್ಲಿ ಇಕ್ಬಾಲ್ ಅವರಿಂದ ಭೂಮಿಯನ್ನು ಹಿಂಪಡೆಯಲು ಆದೇಶಿಸಿತು. ತದನಂತರ ಇಕ್ಬಾಲ್ ಈ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಇಕ್ಬಾಲ್ ಅವರ ಮರಣದ ನಂತರ ಅವರ ಪತ್ನಿ ಫಾತಿಮಾ ಈ ಪ್ರಕರಣವನ್ನು ಮುಂದುವರಿಸಿದರು.

ದೇವಸ್ಥಾನದ ಐತಿಹಾಸಿಕ ಹಿನ್ನೆಲೆ

ಚನ್ನಾ ಮಲ್ಲೇಶ್ವರಂ ಮತ್ತು ಚನ್ನಾಕೇಶವ ದೇವಸ್ಥಾನಗಳನ್ನು ಒಟ್ಟಾಗಿ ಪೆರುಮಾಳ್ ದೇವಸ್ಥಾನಂ ಎಂದು ಕರೆಯಲಾಗುತ್ತದೆ. ಚೆನ್ನೈನ ಈ ಎರಡೂ ದೇವಸ್ಥಾನಗಳನ್ನು ಅವಳಿ ದೇವಸ್ಥಾನಗಳೆಂದು ಪರಿಗಣಿಸಲಾಗುತ್ತದೆ. ಚನ್ನಕೇಶವ ದೇವಸ್ಥಾನವು ಭಗವಾನ್ ವಿಷ್ಣುವಿಗೆ ಮತ್ತು ಚನ್ನಮಲ್ಲೇಶ್ವರ ದೇವಸ್ಥಾನವು ಭಗವಾನ್ ಶಿವನಿಗೆ ಅರ್ಪಿತವಾಗಿದೆ. ಈ ದೇವಸ್ಥಾನಗಳು ಚೆನ್ನೈ ನಗರದ ಇತಿಹಾಸದೊಂದಿಗೆ ನಿಕಟ ಸಂಬಂಧ ಹೊಂದಿವೆ. ‘ಚೆನ್ನಾ’ ಎಂಬ ಪದದಿಂದಲೇ ‘ಚೆನ್ನೈ’ ಎಂಬ ನಗರದ ಹೆಸರು ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಆದ್ದರಿಂದ, ಈ ಪ್ರಾಚೀನ ದೇವಸ್ಥಾನಗಳನ್ನು ಹಿಂದೂಗಳಿಗೆ ಸಾಂಸ್ಕೃತಿಕ ಮತ್ತು ಧಾರ್ಮಿಕ ದೃಷ್ಟಿಕೋನದಿಂದ ಅತ್ಯಂತ ಮಹತ್ವದವೆಂದು ಪರಿಗಣಿಸಲಾಗುತ್ತದೆ.