‘ಜಾತ್ಯತೀತ’ ಮತ್ತು ‘ಸಮಾಜವಾದ’ ಶಬ್ದಗಳನ್ನು ತೆಗೆದುಹಾಕಿ !

‘ಜಾತ್ಯತೀತ ಮತ್ತು ಸಮಾಜವಾದ’ ಈ ಪದಗಳು ಮೇಲ್ನೋಟಕ್ಕೆ ಸುಂದರ, ಸರಳ ಮತ್ತು ಸೌಮ್ಯವೆನಿಸುತ್ತದೆ. ಆದರೆ, ಇದೇ ಎರಡು ಶಬ್ದಗಳು ಭಾರತೀಯ ಸಮಾಜ, ಸಂಸ್ಕೃತಿ ಮತ್ತು ನಾಗರಿಕತೆಗೆ ಮಾರಕವಾಗಿವೆ. ಕಳೆದ ೫೦ ವರ್ಷಗಳಲ್ಲಿ ಭಾರತೀಯರು ಇದನ್ನು ಅನುಭವಿಸಿದ್ದಾರೆ. ಈ ಶಬ್ದಗಳ ನೆರಳಿನಲ್ಲೇ ಈ ದೇಶದ ಬಹುಸಂಖ್ಯಾತ ಹಿಂದೂ ಸಮಾಜದ ಮೇಲೆ ಪದೇ ಪದೇ ಆಕ್ರಮಣಗಳು ಮತ್ತು ಅನ್ಯಾಯಗಳು ನಡೆದಿವೆ. ಇವೆರಡು ಶಬ್ದಗಳಿಂದಾಗಿ ಭಾರತೀಯ ಜೀವನ ವ್ಯವಸ್ಥೆಯ ಆತ್ಮವೇ ಎಲ್ಲೋ ಕಳೆದು ಹೋಗಿದೆ ಎಂಬಂತಹ ಚಿತ್ರಣವಿದೆ. ಇವೆರಡು ಶಬ್ದಗಳು ಮರಳಿ ನೆನಪಾಗಲು ಕಾರಣವೆಂದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಶ್ರೀ. ದತ್ತಾತ್ರೇಯ ಹೊಸಬಾಳೆ ಅವರು ಭಾರತದ ಸಂವಿಧಾನದಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆದುಹಾಕುವಂತೆ ಮಾಡಿರುವ ಆಗ್ರಹ. ಅನೇಕ ರಾಷ್ಟ್ರಪ್ರೇಮಿಗಳು ಮತ್ತು ಧರ್ಮಪ್ರೇಮಿಗಳು ಈ ಹಿಂದೆ ಹಲವಾರು ಬಾರಿ ಈ ಬೇಡಿಕೆಯನ್ನು ಇಟ್ಟಿದ್ದರೂ, ಈಗ ಸಂಘವು ಈ ಬೇಡಿಕೆ ಇಟ್ಟಿರುವುದರಿಂದ ಅದರ ಮಹತ್ವ ಹೆಚ್ಚಾಗಿದೆ. ಸಂಘವು ಈ ಆಗ್ರಹ ಮಾಡಿರುವುದರಿಂದ ಎಲ್ಲರ ಗಮನವೂ ವಿಶೇಷವಾಗಿ ಅದರತ್ತ ಸೆಳೆಯಲ್ಪಟ್ಟಿದೆ. ಇದೇ ಕಾರಣಕ್ಕೆ ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಅವರು ವಾರಣಾಸಿಯಲ್ಲಿ ಮಾತನಾಡುವಾಗ ಈ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂವಿಧಾನದಲ್ಲಿ ಮಾಡಿದ ಬದಲಾವಣೆಗಳನ್ನು ರದ್ದುಪಡಿಸುವ ಅಗತ್ಯವನ್ನು ಅವರು ಒತ್ತಿಹೇಳಿದ್ದಾರೆ. ಕೇಂದ್ರ ಸಚಿವರೇ ಈ ಬೇಡಿಕೆಯನ್ನು ಇಟ್ಟಿರುವುದರಿಂದ, ಅಂದರೆ ಸರಕಾರದ ಬೇಡಿಕೆಯೇ ಆಗಿರುವುದರಿಂದ, ‘ಈ ಬೇಡಿಕೆಯ ಮೇಲೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು’ ಎಂಬುದು ಭಾರತೀಯ ಜನಮಾನಸದ ಅಪೇಕ್ಷೆಯಾಗಿದೆ. ಸರಕಾರ ಆ ಧೈರ್ಯವನ್ನು ತೋರಿಸಿ, ಸಂವಿಧಾನದಲ್ಲಿ ಈ ಬದಲಾವಣೆಯನ್ನು ಮಾತ್ರವಲ್ಲ, ಇಂತಹ ಅನೇಕ ರಾಷ್ಟ್ರವಿರೋಧಿ ಮತ್ತು ವಿಶೇಷವಾಗಿ ಹಿಂದೂ ವಿರೋಧಿ ಬದಲಾವಣೆಗಳನ್ನು ರದ್ದುಪಡಿಸಬೇಕು ಎಂಬುದು ಜನರ ಆಶಯವಾಗಿದೆ.

ಈ ವರ್ಷವು ತುರ್ತು ಪರಿಸ್ಥಿತಿ ಜಾರಿಗೊಂಡ ನಂತರದ ೫೦ ನೆಯ ವರ್ಷವಾಗಿದೆ. ಕೇಂದ್ರ ಸರಕಾರ ಜೂನ್ ೨೫ ಅನ್ನು ‘ಸಂವಿಧಾನ ಹತ್ಯಾ ದಿನ’ ಎಂದು ಘೋಷಿಸಿದೆ. ಸರಿಯಾಗಿ ೫೦ ವರ್ಷಗಳ ಹಿಂದೆ, ೧೯೭೫ ರ ಜೂನ್ ೨೫ ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶವನ್ನು ಉದ್ದೇಶಿಸಿ ಸಣ್ಣ ಭಾಷಣ ಮಾಡಿದ್ದರು. ಅದರಲ್ಲಿ, ‘ನಾನು ಕೈಗೊಂಡ ಜನಪರ ನಿರ್ಧಾರಗಳ ವಿರುದ್ಧ ದೊಡ್ಡ ಮತ್ತು ವ್ಯಾಪಕವಾದ ಷಡ್ಯಂತ್ರ ನಡೆಯುತ್ತಿದೆ ಮತ್ತು ರಾಷ್ಟ್ರಪತಿಗಳು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ’ ಎಂದು ಹೇಳಿ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ೧೯೭೫ ರಿಂದ ೧೯೭೭ ರವರೆಗಿನ ಎರಡು ವರ್ಷಗಳ ಅವಧಿ ತುರ್ತು ಪರಿಸ್ಥಿತಿಯ ಕಾಲವಾಗಿತ್ತು. ಇದರಲ್ಲಿ ವಿರೋಧ ಪಕ್ಷದ ಅಂದರೆ ಕಾಂಗ್ರೆಸ್ ವಿರೋಧಿ ಅನೇಕ ರಾಜಕೀಯ ನಾಯಕರನ್ನು ಬಂಧಿಸುವುದು, ಯಾವುದೇ ವಿಚಾರಣೆ ಇಲ್ಲದೆ ಅವರನ್ನು ಕಾರಾಗೃಹದಲ್ಲಿ ಇಡುವುದು, ಕಾರಾಗೃಹದಲ್ಲಿ ರಾಷ್ಟ್ರಪ್ರೇಮಿಗಳನ್ನು ದೊಡ್ಡ ಪ್ರಮಾಣದಲ್ಲಿ ಹಿಂಸಿಸುವುದು ಇತ್ಯಾದಿಗಳನ್ನು ಮಾಡ ಲಾಯಿತು. ಈ ಕಾರ್ಯಾಚರಣೆಯಲ್ಲಿ ಅನೇಕರು ಮೃತಪಟ್ಟರು. ಸಂಘದಂತಹ ಸಂಘಟನೆಗಳ ಪದಾಧಿಕಾರಿಗಳನ್ನೂ ಕಾರಾಗೃಹ ದಲ್ಲಿ ಹಾಕಲಾಯಿತು. ಈ ಎರಡು ವರ್ಷಗಳ ಅವಧಿಯಲ್ಲಿ ಇಂದಿರಾ ಗಾಂಧಿ ಮನಸೋ ಇಚ್ಛೆ ಆಡಳಿತ ನಡೆಸಿದರು, ಅನೇಕ ಜನರ ಅಧಿಕಾರಗಳನ್ನು ಮೊಟಕುಗೊಳಿಸಿ ಸರ್ವಾಧಿಕಾರಿ ಆಡಳಿತವನ್ನು ಹೇರಿದರು. ಇದೇ ಸಮಯದಲ್ಲಿ ಅವರು ಮಾಡಿದ ಗಂಭೀರ ಅಪರಾಧವೆಂದರೆ, ಸಂವಿಧಾನದಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಎಂಬ ಎರಡು ಶಬ್ದಗಳನ್ನು ಸೇರಿಸಿ ಭಾರತವನ್ನು ಕೆಲವು ವರ್ಷಗಳಷ್ಟು ಹಿಂದಕ್ಕೆ ತಳ್ಳಿದರು.

ಸಂವಿಧಾನ ತಿದ್ದುಪಡಿ ಸಂಪೂರ್ಣವಾಗಿ ಸಂವಿಧಾನಬಾಹಿರ !

೧೯೪೬ ರ ಡಿಸೆಂಬರ್ ೩ ಮತ್ತು ೧೯೪೭ ರ ಜನವರಿ ೨೨ ರಂದು ಸಂವಿಧಾನದ ಪ್ರಸ್ತಾವನೆಯ ಕುರಿತು ಚರ್ಚೆ ನಡೆದಿತ್ತು. ಆಗ ಅದನ್ನು ಸರ್ವಾನುಮತದಿಂದ ಸ್ವೀಕರಿಸಲಾಗಿತ್ತು. ೧೫ ನವೆಂಬರ್ ೧೯೪೮ ಮತ್ತು ೩ ಡಿಸೆಂಬರ್ ೧೯೪೮ ರ – ಹೀಗೆ ಎರಡು ಬಾರಿ ಪ್ರೊ. ಕೆ.ಟಿ. ಷಾ ಅವರು ಸಂವಿಧಾನ ಸಭೆಯಲ್ಲಿ ಮೂಲ ಪ್ರಸ್ತಾವನೆಯಲ್ಲಿ ‘ಸಮಾಜವಾದಿ’, ‘ಜಾತ್ಯತೀತ’ ಮತ್ತು ‘ಸಂಯುಕ್ತ’ ಎಂಬ ಮೂರು ಶಬ್ದಗಳನ್ನು ಸೇರಿಸುವಂತೆ ಮನವಿ ಮಾಡಿದರು. ‘ಸಂವಿಧಾನ ಸಭೆ’ಯು ಅದನ್ನು ಎರಡೂ ಬಾರಿ ಸರ್ವಾನುಮತದಿಂದ ತಿರಸ್ಕರಿಸಿತ್ತು. ೬ ಡಿಸೆಂಬರ್ ೧೯೪೮ ರಂದು ಮತ್ತೆ ಮೇಲಿನ ವಿಷಯದ ಕುರಿತು ಚರ್ಚೆ ನಡೆಯಿತು. ಆಗ ಸಭೆ ಯಲ್ಲಿದ್ದ ಪಂಡಿತ ಲೋಕನಾಥ ಮಿಶ್ರಾ ಅವರು, ಜಾತ್ಯತೀತತೆಯು ಭಾರತದ ಕಲ್ಪನೆಯಲ್ಲ, ಬದಲಿಗೆ ವಿದೇಶದ್ದಾಗಿದೆ. ಇದನ್ನು ನಾವು ಸಂವಿಧಾನದಲ್ಲಿ ಸೇರಿಸಿದರೆ ಭಾರತೀಯ ಸಂಸ್ಕೃತಿ ರಸಾತಳಕ್ಕೆ ಹೋಗುತ್ತದೆ ಎಂದು ಹೇಳಿದ್ದರು. ಹೀಗಾಗಿ, ಈ ಶಬ್ದಗಳಿಲ್ಲದೆ ಸಂವಿಧಾನ ಅಸ್ತಿತ್ವಕ್ಕೆ ಬಂದಿತ್ತು. ೧೯೭೬ ರ ಮಾರ್ಚ್‌ನಲ್ಲಿ ಲೋಕಸಭೆಯ ಅವಧಿ ಮುಗಿದ ನಂತರ ಇಂದಿರಾ ಗಾಂಧಿ ಅದರ ಅವಧಿಯನ್ನು ಒಂದು ವರ್ಷ ವಿಸ್ತರಿಸಿದರು. ನಂತರ ೧೯೭೬ ರ ಡಿಸೆಂಬರ್‌ನಲ್ಲಿ ಅವರು ಸಂವಿಧಾನಕ್ಕೆ ೪೨ ನೆಯ ತಿದ್ದುಪಡಿ ತಂದು ಮೂಲ ರಚನೆಯಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಎಂಬ ಎರಡು ಶಬ್ದಗಳನ್ನು ಸೇರಿಸಿದರು. ಈ ಕಾಲದಲ್ಲಿ ತಾಂತ್ರಿಕವಾಗಿ ಇಂದಿರಾ ಗಾಂಧಿ ಉಸ್ತುವಾರಿ ಪ್ರಧಾನಿಯಾಗಿದ್ದರು ಮತ್ತು ‘ಸಂವಿಧಾನ ಸಭೆ ಅಸ್ತಿತ್ವದಲ್ಲಿ ಇರಲಿಲ್ಲ ಹಾಗೂ ಲೋಕಸಭೆ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹೀಗಿರುವಾಗ ಮಾಡಿದ ಈ ಸಂವಿಧಾನ ತಿದ್ದುಪಡಿ ಸಂಪೂರ್ಣವಾಗಿ ಸಂವಿಧಾನಬಾಹಿರವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಪ್ರಖರ ಹಿಂದುತ್ವವಾದಿ ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯರು ಹೇಳಿದ್ದರು. ಅದರ ಅರ್ಥ ತಿದ್ದುಪಡಿ ತಪ್ಪಾಗಿದೆ. ಆ ತಪ್ಪನ್ನು ನಾವು ಕಳೆದ ೪ ದಶಕಗಳಿಂದ ಸರಿಪಡಿಸಿಲ್ಲ, ಇದು ಕೂಡ ದೊಡ್ಡ ತಪ್ಪಾಗಿದೆ.

ಹಿಂದೂಗಳ ಮೇಲೆ ಅನ್ಯಾಯ !

ಸಂವಿಧಾನದ ‘ಅನುಚ್ಛೇದ ೨೮’ರಲ್ಲಿ, ಸರಕಾರಿ ಅಥವಾ ಸರಕಾರದಿಂದ ಅನುದಾನಿತ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧರ್ಮದ ಶಿಕ್ಷಣವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಒಂದು ವೇಳೆ ಅಂತಹ ಯಾವುದೇ ಶಿಕ್ಷಣ ಸಂಸ್ಥೆಯು ಧಾರ್ಮಿಕ ಶಿಕ್ಷಣವನ್ನು ನೀಡಿದರೆ, ಅದರ ಶೈಕ್ಷಣಿಕ ಮಾನ್ಯತೆಯನ್ನು ರದ್ದುಪಡಿಸಲಾಗುವುದು. ಆದ್ದರಿಂದಲೇ ಶಾಲೆ-ಕಾಲೇಜುಗಳಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಇತ್ಯಾದಿಗಳನ್ನು ಕಲಿಸಲು ಸಾಧ್ಯವಿಲ್ಲ. ನಾವು ‘ಅನುಚ್ಛೇದ
೩೦’ ಅನ್ನು ಓದಿದಾಗ, ‘ಅನುಚ್ಛೇದ ೨೮’ ಬಹುಸಂಖ್ಯಾತ ಹಿಂದೂಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ತಿಳಿಯುತ್ತದೆ. ‘ಅನುಚ್ಛೇದ ೩೦’ ರಲ್ಲಿ, ಧಾರ್ಮಿಕ ಅಲ್ಪಸಂಖ್ಯಾತರಿಗೆ ಶಾಲೆಗಳನ್ನು ಪ್ರಾರಂಭಿಸುವ, ಅವುಗಳನ್ನು ನಡೆಸುವ ಮತ್ತು ಅದರಲ್ಲಿ ತಮ್ಮ ‘ಮಝಹಬೀ ಶಿಕ್ಷಣ’ ನೀಡುವ ಹಕ್ಕಿದೆ, ಅಲ್ಲದೆ ಅಗತ್ಯಕ್ಕನುಗುಣವಾಗಿ ಸರಕಾರವು ಈ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುತ್ತದೆ ಎಂದು ಹೇಳಲಾಗಿದೆ. ಇದರರ್ಥ ಮದರಸಾ ಇರಬಹುದು, ಅದರಲ್ಲಿ ಕುರಾನ್ ಮತ್ತು ಹದೀಸ್ ಕಲಿಸಬಹುದು. ಚರ್ಚ್‌ನ ‘ಕಾನ್ವೆಂಟ್’ ಶಾಲೆಗಳು ಇರಬಹುದು. ಅಲ್ಲಿ ಬೈಬಲ್ ಕಲಿಸಬಹುದು. ಇದೇ ‘ಸೆಕ್ಯುಲರ್’ ಅಂದರೆ ಧರ್ಮನಿರಪೇಕ್ಷ ವ್ಯವಸ್ಥೆಯಾಗಿದೆ. ‘ಸೆಕ್ಯುಲರಿಸಂ’ ಹೆಸರಿನಲ್ಲಿ ‘ಸಚ್ಚರ್ ಆಯೋಗ’, ‘ಅಲ್ಪಸಂಖ್ಯಾತ ಆಯೋಗ’ ಹಾಗೂ ‘ವಕ್ಫ್ ಆಕ್ಟ್’, ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್’ ನಂತಹ ಹಿಂದೂವಿರೋಧಿ ಕಾನೂನುಗಳನ್ನು ಮಾಡ ಲಾಯಿತು. ಅಂದರೆ, ಸಂವಿಧಾನಶಿಲ್ಪಿ ಭಾರತ ರತ್ನ ಡಾ. ಅಂಬೇಡ್ಕರ ಅವರಿಗೂ ಬೇಡವಾಗಿದ್ದ ಶಬ್ದಗಳನ್ನು ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂವಿಧಾನದಲ್ಲಿ ಸೇರಿಸಲಾಯಿತು. ಇದು ಒಂದು ರೀತಿಯಲ್ಲಿ ಡಾ. ಅಂಬೇಡ್ಕರ್ ಅವರ ಅವಮಾನವೂ ಆಗಿದೆ. ಪ್ರಕಾಶ ಅಂಬೇಡ್ಕರ್ ಸೇರಿದಂತೆ ಅಂಬೇಡ್ಕರ್ ಚಳುವಳಿಯ ನಾಯಕರು ಇದರ ವಿರುದ್ಧ ಏಕೆ ಧ್ವನಿ ಎತ್ತುತ್ತಿಲ್ಲ ? ಒಂದರ್ಥದಲ್ಲಿ ಸದ್ಯದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ‘ತುರ್ತು ಪರಿಸ್ಥಿತಿ ಒಂದು ತಪ್ಪು’ ಎಂದು ಹೇಳುತ್ತಾರೆ. ಆದರೆ ಅವರು ಈ ತಪ್ಪನ್ನು ಸರಿಪಡಿಸಲು ಏಕೆ ಏನನ್ನೂ ಮಾಡುತ್ತಿಲ್ಲ ? ಇದರಿಂದ ಇಂದಿರಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಹಿಂದೂಗಳನ್ನು ದಮನ ಮಾಡಲು ಮತ್ತು ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಮುಸಲ್ಮಾನರನ್ನು ಮೆಚ್ಚಿಸಲು ಬಯಸಿದ್ದರು ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಸ್ವಾತಂತ್ರ್ಯದ ನಂತರದ ೭೭ ವರ್ಷಗಳಿಂದ ಕಾಂಗ್ರೆಸ್ ಇದನ್ನೇ ಮಾಡುತ್ತಿದೆ. ಆದ್ದರಿಂದ, ‘ಜಾತ್ಯತೀತ’ ಮತ್ತು ‘ಸಮಾಜವಾದ’ ಎಂಬ ಶಬ್ದಗಳನ್ನು ಭಾರತೀಯ ಸಂವಿಧಾನದಿಂದ ತೆಗೆದುಹಾಕಲು ಮತ್ತೊಬ್ಬ ತಜ್ಞರ ಅಗತ್ಯವಿಲ್ಲ, ಬದಲಿಗೆ ಧೈರ್ಯ ತೋರಿಸಿ ಈ ಶಬ್ದಗಳನ್ನು ತೆಗೆದು ಸಂವಿಧಾನವನ್ನು ತಿದ್ದುಪಡಿ ಮಾಡುವ ಅಗತ್ಯವಿದೆ. ಕೇಂದ್ರ ಸರಕಾರವು ಸಂವಿಧಾನವನ್ನು ಅನಗತ್ಯ ತಿದ್ದುಪಡಿಗಳಿಂದ ಮುಕ್ತಗೊಳಿಸಬೇಕು ಮತ್ತು ಸಂವಿಧಾನದಲ್ಲಿ ‘ಹಿಂದೂ ರಾಷ್ಟ್ರ’ ಎಂಬ ಪದವನ್ನು ಸೇರಿಸಿ ಬಹುಸಂಖ್ಯಾತ ಹಿಂದೂ ಬಹುಸಂಖ್ಯಾತ ಭಾರತೀಯರಿಗೆ ಆತ್ಮಗೌರವದಿಂದ ಬದುಕುವ ಹಕ್ಕನ್ನು ಒದಗಿಸಬೇಕು ಎಂಬುದೇ ಅಪೇಕ್ಷೆಯಾಗಿದೆ.