ಮೂರನೆಯ ಮಹಾಯುದ್ಧದ ಕ್ಷಣಗಣನೆ !

ರಷ್ಯಾ ಮತ್ತು ಉಕ್ರೇನ್‌ ನಡುವೆ ೨೦೨೩ ರಲ್ಲಿ ಪ್ರಾರಂಭವಾದ ಯುದ್ಧವು ಇನ್ನೂ ಮುಂದುವರೆಯುತ್ತಿದೆ. ಈಗ, ಇಸ್ರೇಲ್‌-ಇರಾನ್‌ ಸಂಘμರ್À ಪ್ರಾರಂಭವಾಗಿದೆ. ಈ ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ಮಾತ್ರವಲ್ಲ, ವಿಶ್ವದ ಶಾಂತಿಗೂ ಗಂಭೀರ ಅಪಾಯವನ್ನುಂಟು ಮಾಡಿದೆ. ಬಾಂಬ್‌ ದಾಳಿಗಳು ಮತ್ತು ಕ್ಷಿಪಣಿಗಳಿಂದ ಮೃತ್ಯುವಿನ ತಾಂಡವ ಆರಂಭವಾಗಿದ್ದು, ಈಗಾಗಲೇ ಭೀಕರ ಸ್ಥಿತಿಯಲ್ಲಿರುವ ಪಶ್ಚಿಮ ಏಷ್ಯಾ ಮತ್ತಷ್ಟು ಅಶಾಂತವಾಗಿದೆ. ಯುದ್ಧದ ತೀವ್ರತೆ ಹೆಚ್ಚಿದ ನಂತರ, ಅಮೆರಿಕಾ ಇರಾನ್‌ಗೆ ತನ್ನ ಪರಮಾಣು ಯೋಜನೆಯನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿತ್ತು; ಆದರೆ ಇದನ್ನು ನಿರ್ಲಕ್ಷಿಸಿ ಇರಾನ್‌ ಇಸ್ರೇಲ್‌ನೊಂದಿಗೆ ಯುದ್ಧವನ್ನು ಮುಂದುವರೆಸಿದೆ. ಇದರಿಂದ ಇಸ್ರೇಲ್‌ ಮತ್ತು ಇರಾನ್‌ ಎರಡಕ್ಕೂ ಭಾರಿ ನಷ್ಟವಾಗುತ್ತಿದೆ. ಈಗ ಇರಾನ್‌ ಅಮೆರಿಕಕ್ಕೂ ತಲೆನೋವಾಗಿದೆ. ಇಸ್ರೇಲ್‌ ಒಂದು ಚಿಕ್ಕ ದೇಶವಾಗಿದ್ದು, ಅದನ್ನು ನಾಲ್ಕು ಕಡೆಗಳಿಂದ ಅರಬ್‌ ರಾಷ್ಟ್ರಗಳು ಸುತ್ತುವರೆದಿವೆ. ಇಸ್ರೇಲ್‌ಗೆ ಇಲ್ಲಿಯವರೆಗೆ ಅಮೆರಿಕಾ ಶಸ್ತ್ರಾಸ್ತ್ರಗಳು, ಯುದ್ಧಸಾಮಗ್ರಿ, ಯುದ್ಧ ವಿಮಾನಗಳು ಮತ್ತು ಕ್ಷಿಪಣಿಗಳನ್ನು ಒದಗಿಸುವ ಮೂಲಕ ನಿರಂತರವಾಗಿ ಸಹಾಯ ಮಾಡಿದೆ. ಇದರಿಂದ ಯುದ್ಧದಲ್ಲಿ ಇಸ್ರೇಲ್‌ಗೆ ಆಗುವ ನಷ್ಟವನ್ನು ಅಮೆರಿಕಾ ಒಪ್ಪುವುದಿಲ್ಲ. ಜೂನ್‌ ೨೨ ರಂದು ಅಮೆರಿಕಾ ಇರಾನಿನ ೩ ಪರಮಾಣು ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಯುದ್ಧಕ್ಕೆ ಪ್ರವೇಶಿಸಿದೆ. ವಾಸ್ತವವಾಗಿ, ಇಸ್ರೇಲ್‌ ಇರಾನ್‌ ಮೇಲೆ ದಾಳಿ ಮಾಡಿದ ನಂತರ, ರಷ್ಯಾದ ಸರ್ವೋಚ್ಚ ಸೇನಾ ಜನರಲ್‌ ಅಲೌಡಿನೋವ್, ಇಸ್ರೇಲ್‌ ಇರಾನ್‌ ಮೇಲೆ ದಾಳಿ ಮಾಡುವುದರೊಂದಿಗೆ ಮೂರನೇ ಮಹಾಯುದ್ಧ ಪ್ರಾರಂಭವಾಗಿದೆ, ೧೦ ಲಕ್ಷ ಸೈನಿಕರು ಯುದ್ಧಕ್ಕೆ ಸಿದ್ಧರಾಗಿರಬೇಕು ಎಂದಿದ್ದರು. ಇಂತಹ ಪರಿಸ್ಥಿತಿಯಲ್ಲಿ, ವಿಶ್ವದ ಅತ್ಯಂತ ಬಲಿಷ್ಠ ದೇಶಗಳಾದ ಅಮೆರಿಕಾ, ರಷ್ಯಾ ಮತ್ತು ಚೀನಾ ಕೂಡ ಇರಾನ್‌ ಮತ್ತು ಇಸ್ರೇಲ್‌ ನಡುವಿನ ಯುದ್ಧಕ್ಕೆ ಇಳಿಯಬಹುದು ಎಂಬ ಊಹಾಪೋಹಗಳಿವೆ. ಅಮೆರಿಕಾದ ದಾಳಿಯಿಂದ ಇರಾನಿನ ಪರಮಾಣು ಯೋಜನೆಗಳಿಗೆ ಭಾರಿ ನಷ್ಟವಾಗಿದೆ. ಅದರ ನಂತರ, ಇರಾನ್‌ ತನ್ನ ಪರಮಾಣು ನೆಲೆಗಳ ಮೇಲೆ ಅಮೆರಿಕಾ ನಡೆಸಿದ ವಾಯುದಾಳಿಗಳಿಗೆ ಪ್ರತಿಕ್ರಿಯೆ ನೀಡುವ ಎಚ್ಚರಿಕೆ ನೀಡಿದೆ. ಅಮೆರಿಕಾ ನಡೆಸಿದ ದಾಳಿಯನ್ನು ರಷ್ಯಾ, ಚೀನಾ, ಉತ್ತರ ಕೊರಿಯಾ ಮತ್ತು ಪಾಕಿಸ್ತಾನ ಖಂಡಿಸಿವೆ.

ಚೀನಾ ಮತ್ತು ರಷ್ಯಾ ಅಮೆರಿಕಾದ ವಿರುದ್ಧ !

ಇರಾನ್‌-ಇಸ್ರೇಲ್‌ ಸಂಘರ್ಷದ ಸಮಯದಲ್ಲಿ, ಭಾರತವು ‘ಆಪರೇಷನ್ ಸಿಂಧೂರ’ ಅಡಿಯಲ್ಲಿ ಇರಾನ್‌ ಮತ್ತು ಇಸ್ರೇಲ್‌ನಿಂದ ಇಲ್ಲಿಯವರೆಗೆ ಒಟ್ಟು ೧ ಸಾವಿರದ ೭೧೩ ಭಾರತೀಯರನ್ನು ಸ್ಥಳಾಂತರಿಸಿದೆ. ಅಮೆರಿಕಾ ತನ್ನ ನಾಗರಿಕರಿಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದೆ. ಅಮೆರಿಕಾ ನಡೆಸಿದ ದಾಳಿಯಿಂದ ಅಮೆರಿಕಾದ ಅಂತಾರಾಷ್ಟ್ರೀಯ ವಿಶ್ವಾಸಾರ್ಹತೆ ಹಾಳಾಗಿದೆ. ‘ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು’ ಎಂದು ಚೀನಾ ಎಚ್ಚರಿಕೆ ನೀಡಿದೆ. ಅಮೆರಿಕಾ ನೇರವಾಗಿ ಇರಾನಿನ ಪರಮಾಣು ಶಸ್ತ್ರಾಸ್ತ್ರ ನೆಲೆಗಳ ಮೇಲೆ ದಾಳಿ ಮಾಡಿದ ನಂತರ, ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷ ಮತ್ತು ಮಾಜಿ ಅಧ್ಯಕ್ಷ ದಿಮಿತ್ರಿ ಮೆದವೆದೆವ್‌ ಅಮೆರಿಕಾಗೆ ಎಚ್ಚರಿಕೆ ನೀಡಿದ್ದು, ಈಗ ಅನೇಕ ದೇಶಗಳು ತಮ್ಮ ಪರಮಾಣು ಶಸ್ತ್ರಾಸ್ತ್ರ

ಗಳನ್ನು ನೇರವಾಗಿ ಇರಾನ್‌ ಗೆ ನೀಡಲು ಸಿದ್ಧವಾಗಿವೆ. ಉಕ್ರೇನನೊಂದಿಗೆ ನಡೆಯುತ್ತಿರುವ ಯುದ್ಧದಲ್ಲಿ ಇರಾನ್‌ ರಷ್ಯಾಕ್ಕೆ ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಒದಗಿಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡಿತ್ತು.

ಇರಾನ್‌ ಮೇಲಿನ ದಾಳಿಗೆ ಅಮೆರಿಕಾದಲ್ಲೇ ವಿರೋಧ !

ಅಮೆರಿಕಾದ ಮಿಲಿಟರಿ ಮತ್ತು ರಾಜತಾಂತ್ರಿಕ ತಂತ್ರವು ವಿಫಲವಾಗಿದೆ ಎಂದು ಡೆಮಾಕ್ರಟಿಕ್‌ ಪಕ್ಷದ ಸಂಸದ ರೋ ಖನ್ನಾ ಹೇಳಿದ್ದಾರೆ. ಇರಾನ್‌ ಮೇಲೆ ಅಮೆರಿಕಾ ದಾಳಿ ಮಾಡಿದ ನಂತರ, ಟ್ರಂಪ್‌ಗೆ ಅವರದೇ ದೇಶದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಅಮೆರಿಕಾದ ಡೆಮಾಕ್ರಟಿಕ್‌ ಪಕ್ಷದ ಪ್ರಮುಖ ನಾಯಕರು ಬಹಿರಂಗವಾಗಿ ಡೊನಾಲ್ಡ್ ಟ್ರಂಪ್‌ ರನ್ನು ಗುರಿಯಾಗಿಸಿಕೊಂಡು, ಅವರು ಯಾವ ಉದ್ದೇಶದಿಂದ ಯುದ್ಧಕ್ಕೆ ಇಳಿದರು ಎಂಬುದಕ್ಕೆ ಸ್ಪಷ್ಟೀಕರಣ ಕೇಳಿದ್ದಾರೆ. ಡೆಮಾಕ್ರಟಿಕ್‌ ಪಕ್ಷದ ಸಂಸದ ರೋ ಖನ್ನಾ ಅಲ್ಲಿನ ಕಾಂಗ್ರೆಸ್‌ ಸದಸ್ಯರಿಗೆ ತಕ್ಷಣ ವಾಷಿಂಗ್ಟನ್‌ ಬಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಮಿಲಿಟರಿ ಅಧಿಕಾರದ ಮೇಲೆ ನಿಯಂತ್ರಣ ತರುವ ತಮ್ಮ ಪ್ರಸ್ತಾಪಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಇರಾನ್‌ ಮೇಲಿನ ದಾಳಿಯ ನಂತರ, ಅರಬ್‌ ದೇಶಗಳಲ್ಲಿಯೂ ಉದ್ವಿಗ್ನತೆ ಹೆಚ್ಚಾಗಿದೆ. ಸೌದಿ ಅರೇಬಿಯಾ, ಕುವೈತ್, ಬಹರೇನ ಮತ್ತು ಕತಾರ್‌ ದೇಶಗಳು ಭದ್ರತಾ ಎಚ್ಚರಿಕೆಯನ್ನು ಹೆಚ್ಚಿಸಿವೆ. ಸೌದಿ ಅರೇಬಿಯಾ ಮತ್ತು ಕುವೈತ್‌ ದೇಶಗಳಲ್ಲಿ ಅಮೆರಿಕಾದ ಮಿಲಿಟರಿ ನೆಲೆಗಳಿದ್ದು, ಆದ್ದರಿಂದ ಅವರು ಭದ್ರತಾ ಕಾವಲನ್ನು ಹೆಚ್ಚಿಸಿದ್ದಾರೆ. ಆಶ್ರಯಸ್ಥಾನಗಳು ಮತ್ತು ಬಂಕರಗಳನ್ನು ನಿರ್ಮಿಸಲು ಸೂಚಿಸಲಾಗಿದೆ. ಬಹರೇನನಲ್ಲಿ ಜನರಿಗೆ ಮುಖ್ಯ ರಸ್ತೆಗಳಿಂದ ದೂರವಿರಲು ಮತ್ತು  ಶೇ. ೭೦ ರಷ್ಟು ಸರಕಾರಿ ನೌಕರರಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಲಾಗಿದೆ.

ಮೂರನೇ ಮಹಾಯುದ್ಧ ಅನಿವಾರ್ಯ ?

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೆನಿ ಅವರನ್ನು ಕೊಲ್ಲುವ ಮತ್ತು ಇರಾನ್‌ ಅನ್ನು ನಾಶಪಡಿಸುವ ಎಚ್ಚರಿಕೆ ನೀಡಿದ್ದಾರೆ. ಖಮೆನಿ ಅವರನ್ನು ಕೊನೆಗಾಣಿಸದೆ ಈ ಸಂಘರ್ಷ ನಿಲ್ಲುವುದಿಲ್ಲ ಎಂದೂ ನೆತನ್ಯಾಹು ಎಚ್ಚರಿಸಿದ್ದಾರೆ. ಅಮೆರಿಕಾದ ಸಕ್ರಿಯ ಸಹಾಯವಿಲ್ಲದೆ ಖಮೆನಿ ಅವರನ್ನು ಕೊನೆಗಾಣಿಸಲು ಇಸ್ರೇಲ್‌ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬುದು ವಾಸ್ತವ. ‘ಖಮೆನಿ ಶರಣಾಗಬೇಕು’ ಎಂದು ಅಮೆರಿಕಾ ಎಚ್ಚರಿಕೆ ನೀಡಿದಾಗ, ಖಮೆನಿ ಇದಕ್ಕೆ

ಪ್ರತಿಯಾಗಿ ಅಮೆರಿಕಾಗೆ ಪಾಠ ಕಲಿಸುವ ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ಅಮೆರಿಕಾ ಅತ್ಯಂತ ಬಲಿಷ್ಠ ದೇಶವಾಗಿದ್ದು, ಅದು ರಷ್ಯಾ ಮತ್ತು ಚೀನಾವನ್ನು ತನ್ನ ಪ್ರತಿಸ್ಪರ್ಧಿ ಗಳೆಂದು ಪರಿಗಣಿಸುತ್ತದೆ. ಅಮೆರಿಕಾದ ಜೊತೆಗೆ ಯುರೋಪಿಯನ್‌ ದೇಶಗಳು ಕೂಡ ಈ ಯುದ್ಧದಲ್ಲಿ ಭಾಗವಹಿಸಬಹುದು. ಅದೇ ಸಮಯದಲ್ಲಿ, ‘ನ್ಯಾಟೋ’ (ಯುರೋಪಿಯನ್‌ ದೇಶಗಳ ಸಂಘಟನೆ) ದೇಶಗಳು ಕೂಡ ಅಮೆರಿಕಾಗೆ ಬೆಂಬಲ ನೀಡಬಹುದು. ಅಮೆರಿಕಾ ಇಸ್ರೇಲ್‌ ಪರವಾಗಿ ಯುದ್ಧಕ್ಕೆ ಇಳಿದರೆ, ರಷ್ಯಾ, ಚೀನಾ ಮತ್ತು ಉತ್ತರ ಕೊರಿಯಾ ಈ ಮೂರು ದೇಶಗಳು ಇರಾನ್‌ಗೆ ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಚೀನಾ ಮತ್ತು ರಷ್ಯಾ ಈ ಎರಡು ಕಮ್ಯುನಿಸ್ಟ್ ರಾಷ್ಟ್ರಗಳು ಇರಾನಿನ ಮಿತ್ರರು. ಅವರು ಇರಾನ್‌ಗೆ ಸಹಾಯ ಮಾಡಿದರೆ, ಈ ಯುದ್ಧವು ದೊಡ್ಡ ಮಟ್ಟಕ್ಕೆ ಹೋಗಬಹುದು. ಅಮೆರಿಕಾವು ಇರಾನ್‌ನೊಂದಿಗೆ ಯುದ್ಧದ ತೀವ್ರತೆಯನ್ನು ಹೆಚ್ಚಿಸಿದರೆ, ನಾಳೆ ಚೀನಾ, ರಷ್ಯಾ ಮತ್ತು ಉತ್ತರ ಕೊರಿಯಾ ಇರಾನ್‌ ಪರವಾಗಿ ಯುದ್ಧಕ್ಕೆ ಇಳಿಯಬೇಕಾದರೆ, ಮೂರನೇ ಮಹಾಯುದ್ಧ ಅನಿವಾರ್ಯ ಎಂದು ಹೇಳಬೇಕು. ಯುದ್ಧದಿಂದ ಇರಾನಿನ ತೈಲ ನಿಕ್ಷೇಪಗಳು ಅಪಾಯಕ್ಕೆ ಸಿಲುಕಿವೆ. ಇದರಿಂದ ಭಾರತ ಸೇರಿದಂತೆ ಇತರ ದೇಶಗಳಿಗೂ ಇದರ ಪರಿಣಾಮ ಬೀರಬಹುದು; ಏಕೆಂದರೆ ಇರಾನ್‌ ಅನೇಕ ದೇಶಗಳಿಗೆ ಹೇರಳವಾಗಿ ತೈಲವನ್ನು ಪೂರೈಸುತ್ತಿದೆ.

ಯುದ್ಧ ನಿಲ್ಲಿಸುವುದು ಎಲ್ಲರ ಜವಾಬ್ದಾರಿ !

ಜಗತ್ತಿನ ದೇಶಗಳು ಪರಸ್ಪರ ನಿರ್ಬಂಧಗಳನ್ನು ವಿಧಿಸಲು ಪ್ರಾರಂಭಿಸಿದಾಗ ಮತ್ತು ನೀವು ಸಾಮಾನ್ಯ ಜೀವನದಿಂದ ನೇರವಾಗಿ ತುರ್ತು ಪರಿಸ್ಥಿತಿಗೆ ಹೋದಾಗ, ಮೂರನೇ ಮಹಾಯುದ್ಧದ ‘ಶಂಖನಾದ’ ಪ್ರಾರಂಭವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು. ಮೂರನೇ ಮಹಾಯುದ್ಧವು ಜಾಗತಿಕ ವ್ಯಾಪಾರವನ್ನು ಸ್ಥಗಿತಗೊಳಿಸುತ್ತದೆ. ಪೆಟ್ರೋಲಿಯಂ ಮತ್ತು ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತವೆ. ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ, ತೈವಾನ್‌ ಮೇಲೆ ಚೀನಾದ ದೃಷ್ಟಿ, ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆಗಳು, ಇಸ್ರೇಲ್‌ ಮತ್ತು ಇರಾನ್‌ ನಡುವಿನ ಉದ್ವಿಗ್ನತೆ ಇವೆಲ್ಲವೂ ಜಗತ್ತನ್ನು ಮೂರನೇ ಮಹಾಯುದ್ಧದ ಅಂಚಿಗೆ ತಂದಿವೆ. ತಜ್ಞರ ಪ್ರಕಾರ, ೭೨ ಗಂಟೆಗಳಲ್ಲಿ ಈ ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ, ಮಹಾಯುದ್ಧದ ಸಾಧ್ಯತೆ ಶೇ. ೩೦ ರಿಂದ ೪೦ ರಷ್ಟು ಹೆಚ್ಚಾಗುತ್ತದೆ. ಮೂರನೇ ಮಹಾಯುದ್ಧ ಪ್ರಾರಂಭವಾದರೆ, ಈ ಯುದ್ಧದೊಂದಿಗೆ ದೂರ ದೂರದ ವರೆಗೆ ಸಂಬಂಧವನ್ನು ಹೊಂದಿರದ ಎಲ್ಲಾ ದೇಶಗಳಿಗೂ ಯುದ್ಧದ ಬಿಸಿ ತಟ್ಟುತ್ತದೆ. ಅನೇಕ ದೇಶಗಳು ಅನಿವಾರ್ಯವಾಗಿ ಯುದ್ಧಕ್ಕೆ ಇಳಿಯಬೇಕಾಗುತ್ತದೆ. ಯುದ್ಧ ನಿಲ್ಲಿಸುವ ಸಮಯ ಇನ್ನೂ ಮುಗಿದಿಲ್ಲ. ಜಗತ್ತನ್ನು ಮೂರನೇ ಮಹಾಯುದ್ಧದಿಂದ ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ.