ಅಧ್ಯಾತ್ಮದ ಶಕ್ತಿ ಮತ್ತು ಭಕ್ತರ ಭಕ್ತಿ

ಶ್ರೀ. ವೈಭವ ಆಫಳೆ

ಭಕ್ತರಿಗೆ ಈಶ್ವರ ಮೇಲಿನ ಶ್ರದ್ಧೆ

ಸ್ಥಳ – ಬಿಹಾರದ ಗೋಪಾಲಗಂಜನ್‌ ರಾಮನಗರ.

ಸಂದರ್ಭ – ‘ಬಾಬಾ ಬಾಗೇಶ್ವರ ಧಾಮ’ದ ಪೀಠಾಧೀಶ್ವರ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರೀ ಇವರ ಕಥಾವಾಚನದ ಕಾರ್ಯಕ್ರಮ, ಅಂದರೆ ‘ದಿವ್ಯ ದರಬಾರ’ !

ಈ ನಿಮಿತ್ತ ಲಕ್ಷಾಂತರ ಭಕ್ತರು ಸೇರಿದ್ದರು. ಹೆಚ್ಚುತ್ತಿರುವ ಜನಸಂದಣಿ ಮತ್ತು ಜನರಿಗೆ ಆಗಬಹುದಾದ ತೊಂದರೆಯನ್ನು ಗಮನಿಸಿದ ಪಂಡಿತ ಧೀರೇಂದ್ರ ಶಾಸ್ತ್ರೀ ಇವರು ಆ ದಿನ ಕಥೆಯನ್ನು ನಿಲ್ಲಿಸಿ ‘ಮರುದಿನ ಕೇವಲ ಹತ್ತಿರದಲ್ಲಿ ವಾಸಿಸುವವರು ಕಥೆಗೆ ಬರಬೇಕು ಮತ್ತು ಉಳಿದವರು ಸಂಚಾರವಾಣಿಯಲ್ಲಿಯೇ ಕಥೆಯನ್ನು ಕೇಳಬೇಕು’, ಎಂದು ಮನವಿ ಮಾಡಿದರು; ಆದರೆ ಮರುದಿನ ಮೊದಲ ದಿನಕ್ಕಿಂತಲೂ ಹೆಚ್ಚು ಜನಸಂದಣಿಯಾಯಿತು. ಪೊಲೀಸರ ಭದ್ರತೆಯನ್ನು ಭೇದಿಸಿ ಬ್ಯಾರಿಕ್ಯಾಡ್ಸ್‌ಗಳನ್ನು ಒಡೆದು ಭಕ್ತರು ಮಂಟಪದೊಳಗೆ ಪ್ರವೇಶಿಸಲು ಪ್ರಯತ್ನಿಸಿದರು, ಅನೇಕರ ಉಸಿರು ಕಟ್ಟಿತು, ಅನೇಕರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ಮೇಲಿನ ವಾರ್ತೆಯನ್ನು ಓದಿದಾಗ ಮನಸ್ಸಿನಲ್ಲಿ ಮುಂದಿನ ವಿಚಾರ ಬಂದಿತು, ‘ರಾಜಕೀಯ ನಾಯಕರು ಕರೆದಾಗ ಇಂತಹ ಜನಸಂದಣಿ ಆಗುವುದಿಲ್ಲ, ಅವರಿಗೆ ಅದನ್ನು ಒಟ್ಟುಗೂಡಿಸಬೇಕಾಗುತ್ತದೆ !

ಇಲ್ಲಿ ಸಂತರು ‘ಬರಬೇಡಿ’ ಎಂದು ಹೇಳುತ್ತಿದ್ದರೂ ಭಕ್ತರು ಬರುತ್ತಿದ್ದಾರೆ. ಅದು ಏಕೆ ?’ ಜೀವವನ್ನು ಲೆಕ್ಕಿಸದೇ ಭಕ್ತರು ಕಥಾವಾಚನವನ್ನು ಕೇಳಲು ಹೋಗುತ್ತಾರೆ, ಇದರಿಂದ ಒಂದು ವಿಷಯ ಗಮನಕ್ಕೆ ಬರುತ್ತದೆ, ಅದೆಂದರೆ ಶ್ರದ್ಧೆ ಅಥವಾ ಭಕ್ತಿಯು ಎಷ್ಟು ಶ್ರೇಷ್ಠವಾಗಿದೆ; ಏಕೆಂದರೆ ಇಂತಹ ಜನಸಂದಣಿಯಲ್ಲಿ ಭಕ್ತರಿಗೆ ತೊಂದರೆಯಾಗುತ್ತದೆ ಎಂದು ಕಥಾವಾಚನವನ್ನು ನಿಲ್ಲಿಸಿದ ಪಂಡಿತ ಧೀರೇಂದ್ರ ಶಾಸ್ತ್ರೀ ಇವರ ಗಮನ ನೇಪಾಳದಿಂದ ಬಂದ ಓರ್ವ ಭಕ್ತನ ಕಡೆಗೆ ಹೋಯಿತು ! ಆ ಭಕ್ತನು ನನಗೆ ಸಂತರ ದರ್ಶನವಾಗಬೇಕು, ಅವರ ಮಾರ್ಗದರ್ಶನ ಸಿಗಬೇಕೆಂಬ ತೀವ್ರ ಜಿಜ್ಞಾಸೆಯಿಂದ ಮತ್ತು ತಳಮಳದಿಂದ ದೂರದಿಂದ ಬಂದಿರುವುದನ್ನು ಗಮನಿಸಿ, ಪಂಡಿತ ಧೀರೇಂದ್ರ ಶಾಸ್ತ್ರಿಗಳು ಅವರನ್ನು ಕರೆದುದ್ದರಿಂದ, ಆ ವ್ಯಕ್ತಿ ಸಹಿತ ಅಲ್ಲಿ ನೆರೆದವರಿಗೆಲ್ಲ ಈಶ್ವರನ ಮೇಲಿನ ಶ್ರದ್ಧೆ ಖಂಡಿತವಾಗಿಯೂ ಹೆಚ್ಚಾಗಿರಬಹುದು.’

ಭಕ್ತಿಗೆ ಧರ್ಮಾಚರಣೆ ಜೋಡಿಸುವುದು

ಈ ಘಟನೆಯಿಂದ ಭಗವಂತನು ಇನ್ನೊಂದು ಸಂದೇಶವನ್ನು ನೀಡಿದ್ದಾನೆ, ಅದೆಂದರೆ ಭಕ್ತಿಯ ಜೊತೆಗೆ ಧರ್ಮದ ಬೋಧನೆಯನ್ನು ಆಚರಣೆಯಲ್ಲಿಯೂ ತಂದು ತೋರಿಸಬೇಕು. ಆಜ್ಞಾಪಾಲನೆ, ಶಿಸ್ತು, ಗೌರವ, ಪ್ರೇಮಭಾವ ಈ ಗುಣಗಳನ್ನು ಭಕ್ತರು ಆಚರಣೆಗೆ ತರಬೇಕು; ಇಲ್ಲದಿದ್ದರೆ ಧರ್ಮವಿರೋಧಿಗಳು ಇಂತಹ ಪ್ರಸಂಗಗಳನ್ನು ದುರುಪಯೋಗಪಡಿಸಿಕೊಳ್ಳಲು ಕಾಯುತ್ತಿರುತ್ತಾರೆ. ರಾಜಕೀಯ ಸಭೆ ಮತ್ತು ಸಂತರ ಸತ್ಸಂಗ ಎರಡಲ್ಲೂ ಜನಸಂದಣಿ ಕೇಂದ್ರಬಿಂದು ಆಗಿರುತ್ತವೆ; ಆದರೆ ಸತ್ಸಂಗಕ್ಕೆ ಇಷ್ಟೊಂದು ಜನಸಂದಣಿ ಏಕೆ ಸೇರುತ್ತದೆ ? ಎಂಬುದರ ಬಗ್ಗೆ ವಿಚಾರ ಮಾಡಬೇಕು. ಇಂದು ಸಮಾಜವು ‘ರಜ-ತಮ’ದ ಹಿಡಿತದಲ್ಲಿ ಸಿಲುಕಿದ್ದರೂ ಸಂತರು ಭಕ್ತನಿಗೆ ಸತ್ತ್ವ, ಅಂದರೆ ಸಾತ್ತ್ವಿಕತೆಯ ಪ್ರವಾಹದಲ್ಲಿ ಇರಿಸಲು ಪ್ರಯತ್ನಿಸುತ್ತಾರೆ. ಸಂತರ ಬೋಧನೆ ಸಾತ್ತ್ವಿಕತೆಯಿಂದ ಕೂಡಿರುತ್ತದೆ. ಸಾಧನೆಯ ಮಾರ್ಗವನ್ನು ತೋರಿಸುವ ಸಂತರು ಸ್ವತಃ ಸಾಧನೆಯನ್ನು ಮಾಡುವುದರಿಂದ ಅವರ ನುಡಿಗಳನ್ನು ಕೇಳಲು ಭಕ್ತರು ಕಾತುರರಾಗಿರುತ್ತಾರೆ. ಸಂತರ ವಾಣಿಯಲ್ಲಿನ ಚೈತನ್ಯವು ಭಕ್ತನಿಗೆ ಸದ್ಯದ ರಜ-ತಮದ ವಾತಾವರಣದಲ್ಲಿ ಬದುಕಲು, ದೈನಂದಿನ ಜೀವನದಲ್ಲಿ ಬರುವ ಸಂಕಟಗಳೊಂದಿಗೆ ಹೋರಾಡಲು ಶಕ್ತಿ ನೀಡುತ್ತದೆ ಮತ್ತು ಭಕ್ತನಿಗೆ ಸಾಧನಾಪಥದಲ್ಲಿ ಇರಿಸುತ್ತದೆ. ಇದು ರಾಜಕೀಯ ಸಭೆಯಲ್ಲಿ ಸಿಗುವುದಿಲ್ಲ; ಬದಲಾಗಿ ಅಲ್ಲಿ ಸ್ವಾರ್ಥ, ದುರಾಸೆ, ದ್ವೇಷ ಮುಂತಾದ ದುರ್ಗುಣಗಳು ಬೆಳೆಯುವ ಸಾಧ್ಯತೆ ಇರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ‘ಮನುಷ್ಯ ಜೀವನದ ಕಲ್ಯಾಣವು ಸಾಧನೆ ಮಾಡುವುದರಿಂದ ಆಗುತ್ತದೆ’, ಈ ಬಗೆಗಿನ ಅಮೂಲ್ಯ ಜ್ಞಾನವನ್ನು ಸಂತರು ನೀಡುತ್ತಾರೆ. ಜನ್ಮಜನ್ಮಾಂತರಗಳ ಕರ್ಮಗಳು, ದೋಷಗಳು ಮತ್ತು ಅಹಂಕಾರವನ್ನು ದೂರ ಮಾಡುವ ಗುರುಕೀಲಿಕೈಯನ್ನೇ(ಜ್ಞಾನದ ಭಂಡಾರವನ್ನೇ) ನೀಡುತ್ತಾರೆ. ಇದೇ ‘ಅಧ್ಯಾತ್ಮದ ಶಕ್ತಿ ಮತ್ತು ಭಕ್ತರ ಭಕ್ತಿ’, ಎಂದು ಹೇಳಬಹುದು !

– ಶ್ರೀ. ವೈಭವ ಆಫಳೆ, ಗೋವಾ.