ಕರ್ಣಾವತಿಯಲ್ಲಿ ಏರ್ ಇಂಡಿಯಾ ವಿಮಾನ ಪತನ

  • ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಸೇರಿದಂತೆ 204 ಜನರ ಸಾವು

  • ಅಪಘಾತಕ್ಕೆ ಕಾರಣ ಇನ್ನೂ ಅಸ್ಪಷ್ಟ

ಕರ್ಣಾವತಿ (ಗುಜರಾತ) – ಇಲ್ಲಿನ ಸರ್ದಾರ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆ 38 ನಿಮಿಷಕ್ಕೆ ಹಾರಾಟ ಆರಂಭಿಸಿದ ಏರ್ ಇಂಡಿಯಾದ ‘ಬೋಯಿಂಗ್ 787 ಡ್ರೀಮ್‌ಲೈನರ್’ ಈ ವಿಮಾನವು ಕೆಲವೇ ನಿಮಿಷಗಳಲ್ಲಿ 635 ಅಡಿ ಎತ್ತರದಿಂದ ವಿಮಾನ ನಿಲ್ದಾಣದ ಬೇಲಿಯ ಆಚೆಗಿನ ಕಟ್ಟಡದ ಮೇಲೆ ಅಪ್ಪಳಿಸಿದೆ. ಅಪ್ಪಳಿಸಿದ ನಂತರ ವಿಮಾನಕ್ಕೆ ಭಾರಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾಯಿತು. ವಿಮಾನ ಅಪ್ಪಳಿಸಿದ ಕಟ್ಟಡವೂ ಭಾರಿ ಹಾನಿಗೊಳಗಾಗಿದೆ. ವಿಮಾನದ ಕೆಲವು ಭಾಗಗಳು ಈ ಕಟ್ಟಡದಲ್ಲಿ ಸಿಲುಕಿಕೊಂಡಿವೆ. ಈ ವಿಮಾನದಲ್ಲಿ ಒಟ್ಟು 230 ಪ್ರಯಾಣಿಕರು, 2 ಪೈಲಟ್ ಗಳು ಮತ್ತು 10 ಸಿಬ್ಬಂದಿಗಳು ಇದ್ದರು. ಇವರಲ್ಲಿ 169 ಭಾರತೀಯರು, 53 ಬ್ರಿಟಿಷರು, 7 ಪೋರ್ಚುಗೀಸರು ಮತ್ತು 1 ಕೆನಡಾದ ಪ್ರಜೆ ಪ್ರಯಾಣಿಸುತ್ತಿದ್ದರು. ಇದರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಮತ್ತು ಭಾಜಪ ನಾಯಕ ವಿಜಯ ರೂಪಾನಿ ಕೂಡ ಪ್ರಯಾಣಿಸುತ್ತಿದ್ದರು. ಈ ಅಪಘಾತದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಅಪಘಾತದ ಮೊದಲು ಪೈಲಟ್ ಸಹಾಯಕ್ಕಾಗಿ ಸಂದೇಶ ಕಳುಹಿಸಿದ್ದರು; ಆದರೆ ಸಹಾಯ ಸಿಗುವ ಮೊದಲೇ ವಿಮಾನ ಪತನವಾಯಿತು. ಈ ಅಪಘಾತದಲ್ಲಿ ಒಟ್ಟು ಎಷ್ಟು ಜನರು ಮೃತಪಟ್ಟಿದ್ದಾರೆ? ಮತ್ತು ಇದುವರೆಗೆ ಎಷ್ಟು ಜನರು ಬದುಕುಳಿದಿದ್ದಾರೆ? ಎಂಬ ಬಗ್ಗೆ ಸರಕಾರದಿಂದ ಯಾವುದೇ ಅಧಿಕೃತ ಸಂಖ್ಯೆಯನ್ನು ನೀಡಲಾಗಿಲ್ಲ.

ಈ ವಿಮಾನವು ಕರ್ಣಾವತಿಯಿಂದ ಲಂಡನ್‌ಗೆ ಹೊರಟಿತ್ತು. ಈ ವಿಮಾನವು ಯಾವ ಕಟ್ಟಡದ ಮೇಲೆ ಅಪ್ಪಳಿಸಿದೆಯೋ ಅದು ಸರಕಾರಿ ಆಸ್ಪತ್ರೆಯ ವೈದ್ಯರ ವಸತಿಗೃಹದ ಭೋಜನಾಲಯವಾಗಿತ್ತು. ಈ ವೈದ್ಯರಲ್ಲಿ ಎಷ್ಟು ಜನರಿಗೆ ಗಾಯಗಳಾಗಿವೆ ಎಂಬ ಮಾಹಿತಿ ಕೂಡ ಇನ್ನೂ ಲಭ್ಯವಾಗಿಲ್ಲ. ಅಪಘಾತ ಸ್ಥಳದಿಂದ ಇದುವರೆಗೆ 100 ಕ್ಕೂ ಹೆಚ್ಚು ಶವಗಳನ್ನು ಹೊರತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ‘ಗ್ರೀನ್ ಕಾರಿಡಾರ್’ (ತುರ್ತು ಮಾರ್ಗ) ಸಿದ್ಧಪಡಿಸಲಾಗಿದೆ. ಅಪಘಾತದ ತಕ್ಷಣವೇ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಅಗ್ನಿಶಾಮಕ ದಳವು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದವು. ಈ ಅಪಘಾತವು ತಾಂತ್ರಿಕ ದೋಷದಿಂದ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದರೂ, ನಿಖರ ಕಾರಣ ತಿಳಿದಿಲ್ಲ.

ಜ್ಯೋತಿಷ್ಯಶಾಸ್ತ್ರದ ಭವಿಷ್ಯ ನಿಜವಾಯಿತು !

ಪ್ರಸಿದ್ಧ ಜ್ಯೋತಿಷಿ ಶ್ರೀ ಸಿದ್ಧೇಶ್ವರ ಮಾರಟ್ಕರ್ ಅವರು ಕಳೆದ ವರ್ಷ ನುಡಿದ ಭವಿಷ್ಯದಲ್ಲಿ, ಜೂನ್ ತಿಂಗಳಲ್ಲಿ ದೊಡ್ಡ ವಿಮಾನ ಅಪಘಾತಗಳು ಸಂಭವಿಸಬಹುದು ಎಂದು ಹೇಳಿದ್ದರು. ಇದರ ಹಿಂದೆ ಶನಿ ಮತ್ತು ಮಂಗಳ ಗ್ರಹಗಳ ಷಡಾಷ್ಟಕ ಯೋಗವು ಕಾರಣವಾಗಿದೆ ಎಂದು ಅವರು ತಿಳಿಸಿದ್ದರು.

ಕೊನೆಯ ಕ್ಷಣದಲ್ಲಿ ಪೈಲಟ್ ಸಂಪರ್ಕಿಸಿದ್ದ!

ಈ ವಿಮಾನದ ಪೈಲಟ್ ಸುಮಿತ್ ಸಬರ್ವಾಲ್ ಅವರು ಕೊನೆಯ ಕ್ಷಣದಲ್ಲಿ ‘ಮೇಡೇ’ ಸಂಪರ್ಕ ಮಾಡಿದ್ದರು. ಇದು ಅಂತರಾಷ್ಟ್ರೀಯ ತುರ್ತು ಕರೆ ಆಗಿದ್ದು, ವಿಮಾನವು ಗಂಭೀರ ಸಂಕಷ್ಟದಲ್ಲಿರುವಾಗ ಮತ್ತು ತುರ್ತು ಸಹಾಯದ ಅಗತ್ಯವಿದ್ದಾಗ ಪೈಲಟ್ ನಿಯಂತ್ರಣ ಕೊಠಡಿಗೆ ಸಂದೇಶ ಕಳುಹಿಸುತ್ತಾರೆ. ‘ಮೇಡೇ’ ಎಂಬುದು ಫ್ರೆಂಚ್ ಪದವಾಗಿದ್ದು, ಇದರರ್ಥ ‘ನನಗೆ ಸಹಾಯ ಮಾಡಿ’ ಎಂಬುದಾಗಿದೆ. ಸಬರ್ವಾಲ್ ಮೂರು ಬಾರಿ ‘ಮೇಡೇ’ ಎಂದು ಹೇಳಿದ್ದರು.

ಪೈಲಟ್‌ಗೆ ಇತ್ತು 8 ಸಾವಿರದ 200 ಗಂಟೆಗಳ ವಿಮಾನ ಹಾರಾಟದ ಅನುಭವ

ವಿಮಾನದ ಮುಖ್ಯ ಪೈಲಟ್ ಸುಮಿತ್ ಸಬರ್ವಾಲ್ ಆಗಿದ್ದರು, ಸಹ-ಪೈಲಟ್ ಫ್ಲೈವ್ ಕುಂದರ್ ಆಗಿದ್ದರು. ಸುಮಿತ್ ಸಬರ್ವಾಲ್ ಅವರಿಗೆ 8 ಸಾವಿರದ 200 ಗಂಟೆಗಳ ಹಾರಾಟದ ಅನುಭವವಿತ್ತು. ಸಹ-ಪೈಲಟ್ ಕುಂದರ್ ಅವರಿಗೆ 1 ಸಾವಿರದ 100 ಗಂಟೆಗಳ ಹಾರಾಟದ ಅನುಭವವಿತ್ತು. ಅಪಘಾತಕ್ಕೀಡಾದ ವಿಮಾನವು 11 ವರ್ಷ ಹಳೆಯದಾಗಿತ್ತು.

ಏರ್ ಇಂಡಿಯಾ ಸಹಾಯವಾಣಿ ಸಂಖ್ಯೆ ಪ್ರಕಟ

ವಿಮಾನ ಅಪಘಾತದ ನಂತರ ಏರ್ ಇಂಡಿಯಾ 1800-5691-444 ಈ ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಿದೆ. ಈ ಸಂಖ್ಯೆಯನ್ನು ಸಂಪರ್ಕಿಸಿ ಪ್ರಯಾಣಿಕರ ಸಂಬಂಧಿಕರು ಮಾಹಿತಿ ಪಡೆಯಬಹುದಾಗಿದೆ.

ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತ

ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು, ಈ ವಿಮಾನ ಅಪಘಾತದಿಂದಾಗಿ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಮಾನದಲ್ಲಿ ಎಷ್ಟು ಇಂಧನವಿತ್ತು?

ಕರ್ಣಾವತಿಯಿಂದ ಲಂಡನ್‌ಗೆ ಹೋಗಲು 78 ಸಾವಿರ ಲೀಟರ್ ಇಂಧನವನ್ನು ತುಂಬಲಾಗುತ್ತದೆ. ಅಪಘಾತಕ್ಕೀಡಾದ ವಿಮಾನದಲ್ಲಿ ಅಷ್ಟೇ ಇಂಧನ ತುಂಬಲಾಗಿತ್ತು. ಆದ್ದರಿಂದ, ಈ ವಿಮಾನವು ಕಟ್ಟಡದ ಮೇಲೆ ಅಪ್ಪಳಿಸಿದಾಗ, ಇಂಧನ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತು. ಇದರಿಂದಾಗಿ ಆಕಾಶದಲ್ಲಿ ಭಾರಿ ಬೆಂಕಿ ಜ್ವಾಲೆಗಳು ಉಂಟಾದವು. ಈ ಬೆಂಕಿಯಿಂದಾಗಿ ವಿಮಾನ, ಕಟ್ಟಡ ಮತ್ತು ಸುತ್ತಮುತ್ತಲಿನ ಕೆಲವು ಭಾಗಗಳು ಸುಟ್ಟು ಭಸ್ಮವಾದವು. ಇದರಿಂದಾಗಿ ಈ ವಿಮಾನದಲ್ಲಿದ್ದ ಒಬ್ಬ ಪ್ರಯಾಣಿಕರೂ ಮತ್ತು ಸಿಬ್ಬಂದಿ ಜೀವಂತವಾಗಿ ಉಳಿದಿರುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ.

ಈ ದುಃಖವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ! – ಪ್ರಧಾನಿ ಮೋದಿ

ಕರ್ಣಾವತಿಯಲ್ಲಿ ಸಂಭವಿಸಿದ ದುರಂತದಿಂದ ನನಗೆ ಆಘಾತ ಮತ್ತು ತೀವ್ರ ದುಃಖವಾಗಿದೆ. ಈ ದುಃಖವನ್ನು ಶಬ್ದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಈ ದುಃಖದ ಕ್ಷಣದಲ್ಲಿ ಈ ಘಟನೆಯಿಂದ ಬಾಧಿತರಾದ ಪ್ರತಿಯೊಬ್ಬರೊಂದಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಬಾಧಿತರಿಗೆ ಸಹಾಯ ಮಾಡಲು ಕೆಲಸ ಮಾಡುತ್ತಿರುವ ಸಚಿವರು ಮತ್ತು ಅಧಿಕಾರಿಗಳ ಸಂಪರ್ಕದಲ್ಲಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ ನಲ್ಲಿ ಮಾಡಿದ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ. ಪ್ರ

ಧಾನಿ ಮೋದಿ ದೆಹಲಿಯಿಂದ ಕರ್ಣಾವತಿಗೆ ತೆರಳಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಜೆ ತಡವಾಗಿ ಕರ್ಣಾವತಿಗೆ ತಲುಪಿದರು. ಅವರು ಅದಕ್ಕೂ ಮೊದಲು ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರೊಂದಿಗೆ ಚರ್ಚಿಸಿದರು.

ವಿಮಾನ ಅಪಘಾತ ಹೃದಯವಿದ್ರಾವಕ! – ರಾಹುಲ ಗಾಂಧಿ

ಕರ್ಣಾವತಿಯಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ ಹೃದಯ ವಿದ್ರಾವಕವಾಗಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಕುಟುಂಬಗಳು ಅನುಭವಿಸುತ್ತಿರುವ ನೋವು ಮತ್ತು ಅವರ ಚಿಂತೆಯನ್ನು ಊಹಿಸಲು ಸಾಧ್ಯವಿಲ್ಲ. ಆಡಳಿತದಿಂದ ತಕ್ಷಣದ ಸಹಾಯ ಅತ್ಯಗತ್ಯವಾಗಿದೆ. ಪ್ರತಿಯೊಂದು ಜೀವವೂ ಮುಖ್ಯವಾಗಿದ್ದು, ಪ್ರತಿಯೊಂದು ಕ್ಷಣವೂ ಮಹತ್ವದ್ದಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಘಟನಾ ಸ್ಥಳದಲ್ಲಿ ಸಾಧ್ಯವಿರುವ ಸಹಾಯವನ್ನು ಮಾಡಬೇಕು ಎಂದು ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ ಗಾಂಧಿ ಕರೆ ನೀಡಿದರು.

ಪುಟಿನ್ ನಿಂದ ಖೇದ ವ್ಯಕ್ತ

ರಷ್ಯಾದ ಅಧ್ಯಕ್ಷ ಪುಟಿನ್ ಅವರು ಈ ಅಪಘಾತದ ಬಗ್ಗೆ ಪ್ರಧಾನಿ ಮೋದಿಗೆ ಕಳುಹಿಸಿದ ಸಂದೇಶದಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ. ಈ ದುಃಖದಲ್ಲಿ ರಷ್ಯಾ ಭಾಗಿಯಾಗಿದೆ ಎಂದು ಅವರು ಹೇಳಿದ್ದಾರೆ.