Jaishankar On Kashmir Issue : ಕಾಶ್ಮೀರದ ವಿಚಾರದಲ್ಲಿ ಭಾರತವು ವಿಶ್ವಸಂಸ್ಥೆಯನ್ನು ಮೊರೆ ಹೋದಾಗ, ಪಾಶ್ಚಿಮಾತ್ಯ ದೇಶಗಳು ಈ ವಿಷಯಕ್ಕೆ ಅನಗತ್ಯ ವಿವಾದದ ಸ್ವರೂಪ ನೀಡಿದವು ! – ಡಾ. ಎಸ್. ಜೈಶಂಕರ್

  • ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರಿಂದ ತೀವ್ರ ವಾಗ್ದಾಳಿ !

  • ಆಸ್ಟ್ರೇಲಿಯಾ, ಕೆನಡಾ, ಬೆಲ್ಜಿಯಂ, ಬ್ರಿಟನ್ ಮತ್ತು ಅಮೆರಿಕ ದೇಶಗಳ ಹೆಸರುಗಳು ಹೇಳಿ ತೀವ್ರ ವಾಗ್ದಾಳಿ !

ನವದೆಹಲಿ: ಭಾರತದ ಜಮ್ಮು ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳು ದೀರ್ಘಕಾಲದಿಂದ ವಿದೇಶಿ ಶಕ್ತಿಗಳ ಅಕ್ರಮವಾಗಿ ಹಿಡಿತದಲ್ಲಿವೆ. ಎರಡನೇ ಮಹಾಯುದ್ಧದ ನಂತರ, ಅತಿ ಹೆಚ್ಚು ಕಾಲ ಬೇರೆ ದೇಶಗಳ ಹಿಡಿತದಲ್ಲಿರುವ ಪ್ರದೇಶವೆಂದರೆ ಕಾಶ್ಮೀರ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಕೇವಲ ಎರಡು ತಿಂಗಳಲ್ಲಿ ಪಾಕಿಸ್ತಾನವು ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಕೆಲವು ಭಾಗಗಳ ಮೇಲೆ ದಾಳಿ ನಡೆಸಿ ಅವುಗಳನ್ನು ವಶಪಡಿಸಿಕೊಂಡಿತು. ಅದೇ ರೀತಿ, 1950 ಮತ್ತು 1960ರ ದಶಕಗಳಲ್ಲಿ ಚೀನಾ ಈ ಪ್ರದೇಶದ ಮೇಲೆ ಹಿಡಿತ ಸಾಧಿಸಿತು. ಈ ದಾಳಿಗಳ ಪೈಕಿ ಒಂದು ದಾಳಿಯ ಬಗ್ಗೆ ನಾವು ವಿಶ್ವಸಂಸ್ಥೆಗೆ ದೂರು ನೀಡಿದ್ದೆವು. ಆದರೆ, ಈ ವಿಷಯವನ್ನು ವಿವಾದವನ್ನಾಗಿ ಪರಿವರ್ತಿಸಲಾಯಿತು. ದಾಳಿಕೋರರು ಮತ್ತು ಸಂತ್ರಸ್ತರನ್ನು ಒಂದೇ ರೀತಿ ನೋಡಲಾಯಿತು. ಆಸ್ಟ್ರೇಲಿಯಾ, ಕೆನಡಾ, ಬೆಲ್ಜಿಯಂ, ಬ್ರಿಟನ್ ಮತ್ತು ಅಮೆರಿಕ ದೇಶಗಳು ಈ ದಾಳಿಯ ಸಂದರ್ಭದಲ್ಲಿ ತಪ್ಪು ಮಾಹಿತಿಯನ್ನು ಹರಡುವಲ್ಲಿ ಸಹ ಭಾಗಿಯಾಗಿದ್ದವು. ನಿಜವಾದ ದಾಳಿಕೋರ ಪಾಕಿಸ್ತಾನವಾಗಿದ್ದರೂ, ಭಾರತವು ವಿಶ್ವಸಂಸ್ಥೆಯಲ್ಲಿ ಸಲ್ಲಿಸಿದ ಮನವಿಯನ್ನೇ ದೋಷಪೂರಿತ ಎಂದು ತೀರ್ಮಾನಿಸಲಾಯಿತು, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ವಿಶ್ವಸಂಸ್ಥೆ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅವರು ಇಲ್ಲಿ ಆಯೋಜಿಸಲಾದ ‘ರಾಯಸೀನ ಡೈಲಾಗ್ಸ್’ ಎಂಬ ಅಂತರರಾಷ್ಟ್ರೀಯ ಸಭೆಯಲ್ಲಿ ಮಾತನಾಡುತ್ತಿದ್ದರು.

ಅಫ್ಘಾನಿಸ್ತಾನದ ಕುರಿತು ಮಾತನಾಡಿದ ಜೈಶಂಕರ್, ಪಾಶ್ಚಿಮಾತ್ಯ ದೇಶಗಳ ವಿರೋಧಾಭಾಸದ ಧೋರಣೆಯನ್ನು ಟೀಕಿಸಿದರು. ಅವರು, ದೋಹಾ (ಕತಾರ್) ಮತ್ತು ಓಸ್ಲೋ (ನಾರ್ವೆ) ಸಭೆಗಳಲ್ಲಿ ಯಾವ ತಾಲಿಬಾನ್ ನಾಯಕರಿಗೆ ಸ್ವಾಗತ ಕೋರಲಾಗಿತ್ತೋ, ಈಗ ಅವರನ್ನೇ ಅಫ್ಘಾನಿಸ್ತಾನದ ಹದಗೆಟ್ಟ ಪರಿಸ್ಥಿತಿಗೆ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಒಂದು ಕಾಲದಲ್ಲಿ ಭಯೋತ್ಪಾದಕರೆಂದು ಪರಿಗಣಿಸಲ್ಪಟ್ಟ ತಾಲಿಬಾನ್ ಈಗ ‘ಸೂಟು’ ಮತ್ತು ‘ಟೈ’ ಧರಿಸಿದೆ. ಆದರೂ, ಅವರನ್ನು ಗಂಭೀರ ಅಂತರರಾಷ್ಟ್ರೀಯ ಆತಂಕವೆಂದು ಪರಿಗಣಿಸಲಾಗುತ್ತಿದೆ, ಎಂದು ಜೈಶಂಕರ ಅವರು ಹೇಳಿದರು.

ಸಂಪಾದಕೀಯ ನಿಲುವು

ಭಾರತವು ಈಗ ನೇರ ಕ್ರಮ ಕೈಗೊಂಡು ಕಾಶ್ಮೀರವನ್ನು ಮುಕ್ತಗೊಳಿಸುವುದು ಅವಶ್ಯಕ ಎಂದು ಜೈಶಂಕರ್ ಇವರು ಹೇಳಲು ಬಯಸಿದ್ದಾರೆ !