ಒಟ್ಟಾವಾ (ಕೆನಡಾ) – ಜನವರಿ ತಿಂಗಳಲ್ಲಿ ಜಸ್ಟಿನ್ ಟ್ರುಡೊ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಅವರ ಸ್ಥಾನದಲ್ಲಿ ಮಾರ್ಕ್ ಕಾರ್ನಿ ಪ್ರಧಾನಿ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಆಡಳಿತಾರೂಢ ಲಿಬರಲ್ ಪಕ್ಷದ ಚುನಾವಣೆಯಲ್ಲಿ ಸುಮಾರು 1 ಲಕ್ಷದ 52 ಸಾವಿರ, ಸದಸ್ಯರು ಮತ ಚಲಾಯಿಸಿದರು. ಇದರಲ್ಲಿ ಕಾರ್ನಿ ಅವರಿಗೆ ಶೇಕಡಾ 86 ರಷ್ಟು ಮತಗಳು ಸಿಕ್ಕವು. ಕಾರ್ನಿ ಪ್ರಧಾನಿಯಾಗಿ ನೇಮಕಗೊಂಡ ನಂತರ ಕೆನಡಾದಲ್ಲಿ ಜಸ್ಟಿನ್ ಟ್ರುಡೊ ಅವರ 9 ವರ್ಷಗಳ ಆಡಳಿತ ಕೊನೆಗೊಳ್ಳಲಿದೆ. ಭಾರತದೊಂದಿಗೆ ಕೆನಡಾದ ಸಂಬಂಧ ಕಳೆದ ಕೆಲವು ತಿಂಗಳುಗಳಿಂದ ಹದಗೆಟ್ಟಿತ್ತು. ಆದ್ದರಿಂದ, ಮುಂದಿನ ದಿನಗಳಲ್ಲಿ ಅಧಿಕಾರ ವಹಿಸಿಕೊಂಡ ನಂತರ ಕಾರ್ನಿ ಅವರ ಪಾತ್ರ ಏನಿರುವುದು? ಈ ಬಗ್ಗೆ ಎಲ್ಲರ ಗಮನ ನೆಟ್ಟಿದೆ.
ಮಾರ್ಕ್ ಕಾರ್ನಿ ಯಾರು?59 ವಯಸ್ಸಿನ ಮಾರ್ಕ್ ಕಾರ್ನಿ, ಮಾರ್ಚ್ 16, 1965 ರಂದು ಜನಿಸಿದರು. ಮಾರ್ಕ್ ಕಾರ್ನಿ ಅವರು 1988 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದ ಪದವಿ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಕಾರ್ನಿ ಅವರು ವರ್ಷ 2008 ರಿಂದ 2013 ರ ಅವಧಿಯವರೆಗೆ ‘ಬ್ಯಾಂಕ್ ಆಫ್ ಕೆನಡಾ’ ಮತ್ತು 2013 ರಿಂದ 2020 ರ ಅವಧಿಯವರೆಗೆ ‘ಬ್ಯಾಂಕ್ ಆಫ್ ಇಂಗ್ಲೆಂಡ್’ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. 2008 ರಲ್ಲಿ, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಕೆನಡಾವನ್ನು ರಕ್ಷಿಸಲು ಸಹಾಯ ಮಾಡಿದ ನಂತರ 1694 ರಲ್ಲಿ ಸ್ಥಾಪಿಸಲಾದ ‘ಬ್ಯಾಂಕ್ ಆಫ್ ಇಂಗ್ಲೆಂಡ್’ ನ ನಿರ್ದೇಶಕರಾಗಿ ನೇಮಕಗೊಂಡ ಮೊದಲ ಬ್ರಿಟಿಷರಲ್ಲದ ವ್ಯಕ್ತಿ ಎನ್ನಿಸಿಕೊಂಡರು. ಕಾರ್ನಿ ಅವರಿಗೆ ರಾಜಕೀಯದ ಅನುಭವವಿಲ್ಲ. ಅವರ ಪತ್ನಿ ಡಯಾನಾ ಬ್ರಿಟಿಷ್ ಮೂಲದವರಾಗಿದ್ದು ಅವರಿಗೆ 4 ಹೆಣ್ಣು ಮಕ್ಕಳಿದ್ದಾರೆ. |