ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಮತಾಂತರ ಮಾಡಿದ ಮತಾಂಧನ ಜಾಮೀನು ನ್ಯಾಯಾಲಯದಿಂದ ತಿರಸ್ಕಾರ!

ಕ್ಷಿಪ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಆದೇಶ!

ಮುಂಬಯಿ – ಸ್ವತಃ ‘ಸೂಫಿ ಸಂತ’ ಎಂದು ಕರೆದುಕೊಳ್ಳುವ ಅಬ್ದುಲ್ ಅಜೀಜ್ ಬಾಬಾ ಅಲಿಯಾಸ್ ಅಜೀಜ್ ರಝಾಕ್ ಶೇಖ್ ಎಂಬಾತನು ನಾಶಿಕ್ ಜಿಲ್ಲೆಯ ಯೇವಲಾದಲ್ಲಿ 2019 ರಲ್ಲಿ ಒಂದು ಹಿಂದೂ ಕುಟುಂಬದ 4 ಮಹಿಳೆಯರಿಗೆ ಭಯ ಹುಟ್ಟಿಸಿ, ಮಂಪರು ಸ್ಥಿತಿಯಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅವರನ್ನು ಬಲವಂತವಾಗಿ ಮತಾಂತರ ಮಾಡಿದನು. ಈ ಪ್ರಕರಣದಲ್ಲಿ ಅಬ್ದುಲ್‌ನ ಸಹೋದರ ವಕೀಲ ಜಬ್ಬಾರ್ ಶೇಖ್ ಸಹಕರಿಸಿದನು. ಈ ಪ್ರಕರಣದಲ್ಲಿ ಮುಂಬಯಿ ಉಚ್ಚ ನ್ಯಾಯಾಲಯವು ಆರೋಪಿಗಳ ಜಾಮೀನನ್ನು ಮೂರನೇ ಬಾರಿಗೆ ತಿರಸ್ಕರಿಸಿತು. ಮಾರ್ಚ್ 5 ರಂದು ನ್ಯಾಯಮೂರ್ತಿ ಎನ್.ಆರ್. ಬೋರ್ಕರ್ ಅವರ ಪೀಠದ ಮುಂದೆ ಈ ವಿಚಾರಣೆ ನಡೆಯಿತು. ಸಂತ್ರಸ್ತೆಯರ ಪರವಾಗಿ ವಕೀಲ ಪ್ರಥಮೇಶ ಗಾಯಕ್ವಾಡ್ ವಾದ ಮಂಡಿಸಿದರು.

ಈ ಪ್ರಕರಣದ ಮುಖ್ಯ ಆರೋಪಿ ಅಬ್ದುಲ್ ಶೇಖ್ ಮತ್ತು ಆತನ ಸಹೋದರ ವಕೀಲ ಜಬ್ಬಾರ್ ಶೇಖ್ ಇಬ್ಬರೂ ಪ್ರಸ್ತುತ ಜೈಲಿನಲ್ಲಿದ್ದಾರೆ. ಫೆಬ್ರವರಿ 8, 2023 ಮತ್ತು ಮಾರ್ಚ್ 2, 2024 ರಂದು ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದ್ದರು; ಆದರೆ ನ್ಯಾಯಾಲಯವು ಅದನ್ನು ತಿರಸ್ಕರಿಸಿತು. ವಕೀಲ ಜಬ್ಬಾರ್ ಶೇಖ್ ಸಂತ್ರಸ್ತ ಮಹಿಳೆಯರಿಗೆ ಬೆದರಿಕೆ ಹಾಕಿ ಅವರಿಂದ 8 ಲಕ್ಷ ರೂಪಾಯಿ ಪಡೆದ ಘಟನೆಯನ್ನು ವಕೀಲ ಪ್ರಥಮೇಶ್ ನ್ಯಾಯಾಲಯದ ಗಮನಕ್ಕೆ ತಂದರು. ವಕೀಲ ಪ್ರಥಮೇಶ್ ಗಾಯಕ್ವಾಡ್ ಬಲವಾಗಿ ವಾದ ಮಂಡಿಸಿ ಆರೋಪಿಗಳ ಮತಾಂತರದ ಪಿತೂರಿಯನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸಿದರು.

ಇದಕ್ಕೆ ನ್ಯಾಯಾಲಯವು ‘ಆರೋಪಿಗಳ ಜಾಮೀನು ಮಂಜೂರು ಮಾಡಿದರೆ ಅವರು ಸಾಕ್ಷಿಗಳ ಮೇಲೆ ಒತ್ತಡ ಹೇರಬಹುದು ಮತ್ತು ನ್ಯಾಯ ಪ್ರಕ್ರಿಯೆಗೆ ಅಡ್ಡಿಪಡಿಸಬಹುದು. ದೌರ್ಜನ್ಯದ ಗಂಭೀರ ಸ್ವರೂಪದಿಂದಾಗಿ ಆರೋಪಿಗಳಿಗೆ ಯಾವುದೇ ವಿನಾಯಿತಿ ನೀಡಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಈ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ನ್ಯಾಯ ಪ್ರಕ್ರಿಯೆ ಶೀಘ್ರವಾಗಿ ನಡೆಯಲು ನ್ಯಾಯಾಲಯವು ಈ ಪ್ರಕರಣವನ್ನು ಕ್ಷಿಪ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಆದೇಶಿಸಿದೆ.